ಡಾರ್ವಿನನ ವಿಕಾಸವಾದದ ಸಿದ್ದಾಂತವು ‘ಉಳಿವಿಗಾಗಿ ಹೋರಾಟ ಮತ್ತು ಬಲಿಷ್ಟವಾಗಿರುವವುಗಳ ಉಳಿವು’ ಎಂಬ ಅಂಶವನ್ನೊಳಗೊಂಡ ತತ್ವವನ್ನು ಪ್ರತಿಪಾದಿಸಿತ್ತು. ಈ ಸಿದ್ಧಾಂತವನ್ನು ಮಾನದಂಡವಾಗಿಟ್ಟುಕೊಂಡು ಈ ವಿಚಾರವು ಇಲ್ಲಿ ತನ್ನ ಅಸ್ತಿತ್ವವನ್ನು ಕಾಣದಿದ್ದರೂ, ತುಲನಾತ್ಮಕ ಹೋಲಿಕೆಗಾಗಿ ಪ್ರಸ್ತಾವಿಸಬೇಕಾಯ್ತು. ಡಾರ್ವಿನನವಿಕಾಸವಾದದ ಅನ್ವಯ, ಸಸ್ಯ ಪ್ರಾಣಿವರ್ಗ ಮಾತ್ರವಲ್ಲ, ಮಾನವನನ್ನೂ ಸೇರಿಸಿ, ಸಕಲ ಜೀವಿಗಳಲ್ಲಿಯೂ ಸ್ಪರ್ಧೆಗಳು ಮತ್ತು ಪೈಪೋಟಿಗಳು ತಮ್ಮ ಅಳಿವು – ಉಳಿವನ್ನು ಒಂದು ಹಂತದಲ್ಲಿ ನಿರ್ಧರಿಸುತ್ತವೆ ಎನ್ನಲಾಗಿದೆ.
ಸಾಮಾಜಿಕವಾಗಿ ವಿಕಾಸಗೊಂಡ ಮಾನವನೂ ಜೀವಿಸುವ ಎಲ್ಲಾ ಘಟ್ಟಗಳು ಇದೇ ನಿಯಮಕ್ಕೆ ಒಳಪಟ್ಟಂತೆ ಭಾಸವಾಗುವುದು ಮೇಲ್ನೋಟಕ್ಕೆನೋ ಸರಿ. ಅದಾಗ್ಯೂ ಹಾಗೇನಾದರೂ ಎಲ್ಲವೂ ಸ್ಪರ್ಧಾತ್ಮಕತೆಯೇ ಆಗಿಬಿಟ್ಟರೆ, ಒಂದೊಮ್ಮೆ, ಹಿಂದೊಮ್ಮೆ ಬಲಿಷ್ಠರಾಗಿ ಜಗದಲ್ಲಿ ಉಳಿದವರು ಶಾಶ್ವತವಾಗಿ ತಮ್ಮ ಸ್ಥಾನ ಉಳಿಸುವರೇ /ಉಳಿಸಿದ್ದಾರೆಯೆ? ಎಂಬ ಪ್ರಶ್ನೆಗೆ ಮಾನವ ಜೀವನದ ಇತಿಹಾಸವು ಹಲವು ಏಳು ಬೀಳುಗಳ ಉದಾಹರಣೆಗಳನ್ನು ಕೊಡುತ್ತದೆ. ಜೀವನದ ಅಗತ್ಯತೆಗಳನ್ನು ಪೂರೈಸುವುದು, ಸಮಸ್ಯೆಗಳ ವಿರುದ್ಧ ಹೋರಾಟ, ಗುರಿ ಸಾಧನೆಯ ಪರದಾಟ ಅಥವಾ ಸಾಮಾನ್ಯ ಸವಾಲುಗಳನ್ನು ಮೀರುವ ಶ್ರಮ – ಇತ್ಯಾದಿಗಳ ಧ್ಯೇಯಗಳು ಕೇವಲ ಅಳಿವು-ಉಳಿವು, ಸೋಲು-ಗೆಲುವನ್ನು ನಿರ್ಧರಿಸುವುದು ಮಾತ್ರವೇ ಆಗಿಬಿಟ್ಟರೆ, ಸುಧಾರಣಾತ್ಮಕ ವಿಕಾಸದ ಮೂಲ ಚಿಂತನೆಗಳಿಗೆ ಉತ್ತರ ಸಿಗದಾಗುತ್ತದೆ. ಸುಧಾರಣೆಯ ವಿವೇಕಯುತ ವಿಚಾರಗಳನ್ನು ಅಣಕಿಸುತ್ತ ಋಣಾತ್ಮಕ ಪೈಪೋಟಿಯ ಜಾಯಮಾನವು ತನ್ನ ನಿಕೃಷ್ಟ ಇರುವನ್ನೇ ಸಾಧಿಸ ಹೊರಟಂತಿದೆ.
ಉಚಿತ ಶಿಕ್ಷಣವೋ, ಇಲ್ಲ ಬೆಲೆ ನೀಡಿ ಖರೀದಿಸಿದ ಸರಕು ಶಿಕ್ಷಣವೋ? ಸ್ಪಷ್ಟವಿಲ್ಲದಿದ್ದರೂ,… ಶಿಕ್ಷಣವಾಹಿನಿಯಿಂದ ಸಮಾಜದ ಆರ್ಥಿಕ ನೆಲೆಗಟ್ಟಿಗೆ ಬಂದು ಧುಮುಕುತ್ತಿರುವ ನಮ್ಮ ಯುವ ಜನಾಂಗ ಉದ್ಯೋಗ ಕ್ಷೇತ್ರದಲ್ಲಿ, ಅರ್ಥಾತ್ “ಹಣ ಗಳಿಸುವ ರೇಸಿಂಗ್” (!?) ನಲ್ಲಿ ತಾ ಮುಂದು, ನಾ ಮುಂದು ಎಂದು ಸ್ಪರ್ಧೆಯಲ್ಲಿ ತೊಡಗಿರುವಾಗ, ಅರಿವನ್ನೇ ಹೊಂದಿರದ ಜೀವನಾನುಭವಕ್ಕೆ, ಮೌಲ್ಯ- ಸಾರ್ಥಕತೆಯನ್ನೂ, ನಿಸರ್ಗದ ಪ್ರೀತಿಯನ್ನೂ ಕಡೆಗಣಿಸಿದ ಲೌಕಿಕ ಸಾಧನೆಗೆ ತಮ್ಮನ್ನು ಅನಿವಾರ್ಯವಾಗಿ ಒಗ್ಗಿಸಿಕೊಳ್ಳಬೇಕಾದ ಸನ್ನಿವೇಶವನ್ನು ತಂದಿಟ್ಟಿದೆ.
ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಸಿಗುತ್ತಿರುವ ಜ್ಞಾನ ಮತ್ತು ತರಬೇತಿಗಳು ಆಧುನಿಕತೆಯಲ್ಲಿ ಕೇವಲ ಉದ್ಯೋಗಿಗಳನ್ನು ಸೃಷ್ಟಿಸುತ್ತಿವೆ. ಆದರೆ, ಚಿಂತನಶೀಲ ಪ್ರಜೆಗಳಾಗಿ, ದೇಶಪ್ರೇಮಿಗಳಾಗಿ, ಬಹುಪಾಲು ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ನಮ್ಮ ಸಾಮಾಜಿಕ ವ್ಯವಸ್ಥೆ ಇತಿಮಿತಿಗಳನ್ನು ಹೇರುತ್ತಿದೆ. ಇಂತಹ ಸಮಾಜದಲ್ಲಿ ಆಳುವವರು ಈ ಹಿಂದೆ ಯಾವುದೇ ಕಳಕಳಿ ಹೊಂದಿರಲಿಲ್ಲ ಎಂದರೆ ಅದೂ ಸಹ ತಪ್ಪಾದ ಗ್ರಹಿಕೆಯೇ.
ಬಹಳಷ್ಟು ತಂತ್ರಜ್ಞಾನದ ಅಳವಡಿಕೆಗಳು, ಎಲೆಕ್ಟ್ರಾನಿಕ್ ಸಾಧನಗಳು ಇಂದಿನ ಯುವಜನತೆಗೆ ಮಗ್ನತೆಯನ್ನು ಒದಗಿಸಿವೆ. ಈ ಪ್ರಕ್ರಿಯೆಯು ಕೆಲವೊಂದು ರಾಷ್ಟ್ರಗಳಲ್ಲಿ ಜನಾಂಗದ ಸೃಜನಶೀಲತೆಯನ್ನು ಕುಗ್ಗಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ಉತ್ಪಾದಕತೆಯನ್ನು ಕುಗ್ಗಿಸಿ, ವಹಿವಾಟಿನ ಸ್ಪರ್ಧೆಯಲ್ಲಿ ಇಳಿತಕ್ಕೂ ಕಾರಣವಾಗಿವೆ. ಈ ನಡುವೆ ಕೆಲವು ಕಾರ್ಪೋರೇಟ್ ಕ್ಷೇತ್ರಗಳು ಇದರ ಮುಖಾಂತರ ಗಮನಾರ್ಹವಾದ ಲಾಭವನ್ನೂ ಮಾಡಿಕೊಂಡಿವೆ. ಇಂತಹ ಏಳು-ಬೀಳುಗಳ ನಡುವೆ ಯುವ ಜನಾಂಗಕ್ಕೆ ಯಾವುದು ಸೂಕ್ತ ಎಂದು ನಿರ್ಧರಿಸುವಲ್ಲಿ ’policy makers’ ಗಳಿಂದ ಹಲವು ಸಲ ಎಡವಟ್ಟುಗಳಾಗಿವೆ. ಹಿಂದೊಮ್ಮೆ ಅಮೇರಿಕಾದಲ್ಲಿ ಮಿರಿಜುವಾನ, ಎಲ್ ಎಸ್ ಡಿ ನಂತಹ ಭಯಾನಕ ಮಾದಕ ವಸ್ತುಗಳ ಬಳಕೆಯನ್ನು ಯುವಜನತೆಗೆ ಕಾನೂನಿನ್ವಯ ಊರ್ಜಿತ ಗೊಳಿಸಲಾಗಿತ್ತು. ನಂತರ ಅದರ ಭೀಕರ ಪರಿಣಾಮಗಳ ಅರಿವು ಉಂಟಾದ ನಂತರ ಬಳಕೆಯನ್ನು ಕೈಬಿಡಲಾಗಿತ್ತು. ಇಂದಿಗೂ ಕೆಲವು ರಾಷ್ಟ್ರಗಳಲ್ಲಿ ಯೋಗ್ಯ ಯುವಜನತೆಯಿಲ್ಲದೆ, ಪರಿಸ್ಥಿತಿ ಕೈಮೀರಿ ಹೋಗಿರುವ ಕಾರಣ, ಅಪಾಯಕಾರಿ ಮಟ್ಟಕ್ಕೆ ಹಿನ್ನಡೆಯಾಗುವ ಪರಿಸ್ಥಿತಿ ಎದುರಾಗಿದೆ.
ರಾಷ್ಟ್ರವನ್ನು ಬಲಪಡಿಸಬೇಕಾದರೆ, ಯುವ ಜನತೆಯನ್ನು ಸರಿಯಾದ ದಿಕ್ಕಿನಲ್ಲಿ ಬಲಪಡಿಸುವುದು ಅನಿವಾರ್ಯ. ಪ್ರಜಾ ಪ್ರಭುತ್ವದ ನಮ್ಮ ದೇಶದಲ್ಲಿ ಯಾಂತ್ರಿಕವಲ್ಲದ ಪ್ರಜ್ಞಾವಂತ ಪ್ರಜೆಗಳ ನಿರ್ಮಾಣ ಅತ್ಯಗತ್ಯ. ಇದಕ್ಕೆ ಕೇವಲ ಶಿಕ್ಷಣ ಕ್ಷೇತ್ರವು ಮಾತ್ರ ನೇರ ಹೊಣೆ ಎನ್ನುವುದು ಬಹಳ ಸಂಕುಚಿತವಾದ ನಿಲುವಾಗುತ್ತದೆ. ಆಳುವವರಿಗೆ ಬಲ ನೀಡುವ ಬುದ್ದಿ ಜೀವಿಗಳು ಈ ನಿಟ್ಟಿನಲ್ಲಿ, ಶಿಕ್ಷಣ ಕ್ಷೇತ್ರವು ಒಂದು ಸಾಧನ ಮಾತ್ರ ವೆಂದು ಅರಿತರೆ, ಈ ಸಾಧನವನ್ನು ಸರಿಯಾಗಿ ಬಳಸಬಲ್ಲ ಸಮರ್ಥರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು, ಮತ್ತು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಅವಕಾಶ ನೀಡಿದಂತಾಗುತ್ತದೆ. ಆದರೆ, ಈ ವ್ಯಾಪ್ತಿಯನ್ನು ಮೀರಿ ಯುವಜನತೆಯನ್ನು ಮುನ್ನಡೆಸುವ ಆಧುನಿಕತೆಯ ಉಳಿದ ಹಲವು ಆಯಾಮಗಳನ್ನು ಪರಿಗಣಿಸದೇ ಇರುವುದು ಸರಿಯಲ್ಲ. ಇಂದು ಜನಾಂಗಗಳನ್ನು ರೂಪಿಸುತ್ತಿರುವುದು ಔಪಚಾರಿಕ (so-called) ಶಿಕ್ಷಣ ಕ್ಷೇತ್ರವಲ್ಲ. ಶಿಕ್ಷಣ ಏಕಮಾತ್ರವೇ ಜನಾಂಗಗಳನ್ನು ನಿರ್ಮಿಸುತ್ತಿದೆ ಎಂಬ ಭ್ರಮೆಯೇನಾದರೂ ಇದ್ದರೆ, ಅದರಿಂದ ಯಾವ ನಿರೀಕ್ಷಿತ ಫಲವೇನನ್ನೂ ಅಪೇಕ್ಷಿಸುವಂತಿಲ್ಲ. ಸಮಾಜವನ್ನು ಕಳಕಳಿಯಿಂದ ಆಳುವವರು ನಿಜ ಸ್ಥಿತಿಯನ್ನು ಆಳವಾಗಿ ಅಭ್ಯಸಿಸದೇ ಹೋದಲ್ಲಿ, ಕೇವಲ ಅನಿಶ್ಚಿತತೆಯನ್ನು ಗುರಿಯಾಗಿಟ್ಟುಕೊಂಡು ಭವಿಷ್ಯಾಕಾಂಕ್ಷಿಗಳನ್ನು ಮುನ್ನಡೆಸಿದಂತೆ ಆಗುತ್ತದೆ. ಶಿಕ್ಷಣ ಕ್ಷೇತ್ರವನ್ನು ಸಮಾಜ ನಿರ್ಮಾತೃರು ಹೇಗೆ ರೂಪಿಸುತ್ತಾರೆ ಎನ್ನುವುದು ಉತ್ತಮ ಜನಾಂಗವನ್ನು ರೂಪಿಸುವಲ್ಲಿ ಒಂದು ಸಹಾಯಕ ಸಾಧನವಾಗಬಲ್ಲದು. ಶಿಕ್ಷಣ ಕ್ಷೇತ್ರ, ಮಾದ್ಯಮ ಕ್ಷೇತ್ರ ಮತ್ತು ಸಾಮಾಜಿಕ ವ್ಯವಸ್ಥೆಗಳು ಯಾವ ರೀತಿ ಮುನ್ನಡೆಯಬೇಕು ಮತ್ತು ಯಾವ ಮಟ್ಟದಲ್ಲಿ ಫಲಪ್ರದವಾಗಬೇಕೆಂದು ತೀರ್ಮಾನಿಸುವ ನಿಯಂತ್ರಕ ಶಕ್ತಿಯೇ ಆಡಳಿತ ಮಾಡುವ ಸರಕಾರಗಳು. ಅವುಗಳು ಹೇಗೆ ಕಾರ್ಯ ನಿರ್ವಹಿಸಬೇಕೆಂದು ತಳಪಾಯ ಹಾಕುವವರು ಬುದ್ಧಿಜೀವಿಗಳು.
ಶಿಕ್ಷಣ ಕ್ಷೇತ್ರ ಎಂದಿಗೂ ಸ್ವಯಂ ಆಗಿ ಈ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ರೂಪಿತವಾಗಿಲ್ಲ. ಹೀಗಾಗಿ, ಸಮಾಜ ನಿರ್ಮಾಣದ ಹೊಣೆ ಶಿಕ್ಷಣ ಕ್ಷೇತ್ರದ್ದು ಎನ್ನುವುದು ಕೇವಲ ಲಭ್ಯವಾಗುತ್ತಿರುವ ಫಲಿತಾಂಶಗಳಿಂದಾಗಲೀ, ಅಂಕಿ ಅಂಶಗಳಿಂದಾಗಲೀ, ಅಥವಾ ಕೇವಲ ತಾತ್ವಿಕವಾದ ಶಿಕ್ಷಣ ಕ್ಷೇತ್ರದ ಪಾತ್ರ ವಿಮರ್ಶೆಯಿಂದಾಗಲೀ ದೃಢಪಡುವುದಿಲ್ಲ. ಆದರೂ, ಇಂದಿನ ಕೆಲವೊಂದು ಅನಿವಾರ್ಯ ಶೈಕ್ಷಣಿಕ ಪ್ರಯತ್ನಗಳು ಬಹಳ ಕಷ್ಟದಲ್ಲಿ ಫಲಗೂಡುತಿದ್ದು, ಇಂದಿನ ಕೆಲ ದಾರಿತಪ್ಪಿದ (not generalized) ಯುವ ಪೀಳಿಗೆಯನ್ನು ಕಳ್ಳು ಕುಡಿದಿರುವ ಕೋತಿಗೆ ಬುದ್ಧಿ ಕಲಿಸ ಹೋಗುವ ಪರಿಯಲ್ಲಿ ಸರಿದಾರಿಗೆ ತರ ಹೊರಟಿರುವಂತಿವೆ.
ಮಾನವತೆ ಮತ್ತು ಸ್ವದೇಶಿಯತೆಯನ್ನು ಉಳಿಸಿ, ನಮ್ಮ ಅಸ್ತಿವಾರವನ್ನು ಬಲಪಡಿಸಬೇಕಾದರೆ, ಜನರ ತ್ಯಾಗವೂ ತಕ್ಕ ಮಟ್ಟಿಗೆ ಅನಿವಾರ್ಯ. ತ್ಯಾಗವೆಂದರೆ, ಸ್ವಂತ ಬಲಿದಾನವೇ ಆಗಬೆಕಿಲ್ಲವಲ್ಲ. ಅದು ಅನ್ಯರ ಹೇರಿಕೆಗಾಗಿಯೂ ಖಂಡಿತ ಅಲ್ಲ. ಆದರೆ, ಸ್ವಂತ ವಾಣಿಜ್ಯ ಲಾಭ ಕಾಣುವ ಸಲುವಾಗಿ ಮಾಡುವ ಕುಟಿಲ ಹೊಂದಾಣಿಕೆಗಳ ಅರಾಜಕತೆಯನ್ನಾದರೂ ರಾಷ್ಟ್ರದ ಅಭ್ಯುದಯಕ್ಕಾಗಿ ತ್ಯಾಗ ಮಾಡಲೇಬೇಕಾಗಿದೆ.
ಯಾವುದೇ ಒಂದು ಉದ್ದಿಮೆಯಲ್ಲಿ, ಕೇವಲ ಲಾಭದ ವಿಚಾರವಾಗಿ ನಡೆಯುವ ಮೋಸವು ಅದರ ಫಲವಾಗಿ ಉಂಟುಮಾಡಬಹುದಾದ ರಾಷ್ಟ್ರೀಯ ನಷ್ಟದ ಪರಿಣಾಮಗಳನ್ನು ಮೇಲ್ನೋಟಕ್ಕೆ ಸುಮ್ಮನೆ ಅಂದಾಜು ಮಾಡಲಾಗದು. ಕೆಲವು ಕೈಗಾರಿಕೆಗಳು, ಔಷಧಿ, ಗೊಬ್ಬರ, ರಾಸಾಯನಿಕಗಳ ಕಾರ್ಖಾನೆಗಳು, ಯಾವುದೇ ಹೊಂದಾಣಿಕೆಯ ನೆಪದಲ್ಲಿ ಗುಣಮಟ್ಟದ ಲೋಪಗಳನ್ನು ಸರಿಪಡಿಸದೇ ಹೋದಲ್ಲಿ, ಆ ಉತ್ಪನ್ನಗಳನ್ನು ಬಳಸಿಕೊಳ್ಳುವ ಜನತೆ ಸಾರ್ವತ್ರಿಕವಾಗಿ ಆರೋಗ್ಯ, ಮನಸ್ಥಿತಿ ಮತ್ತು ಜೀವನಾನುಭವದಲ್ಲಿ ಎದುರಿಸಬೇಕಾದ ಗಂಭೀರ ಪರಿಣಾಮಗಳನ್ನು ಅನುಭವಿಸುವಂತಾಗುತ್ತದೆ. ಇಂದಿನ ಕಾಲದ ಕಾರ್ಪೋರೇಟ್ ವ್ಯವಹಾರದಲ್ಲಿರುವಂತಹ ದೋಷಗಳನ್ನು ಸಾಮಾನ್ಯ ನಿಗಮ ಮಂಡಳಿಗಳಿಂದ ಹದ್ದುಬಸ್ತಿನಲ್ಲಿಡುವುದು ಸಾಧ್ಯವಿಲ್ಲದ ಮಾತು. ಇಂತಹ ಔದ್ಯೋಗಿಕ ಕ್ಷೇತ್ರಗಳಲ್ಲಿ ಸ್ಥಾನ ಪಡೆಯಲು ಪೈಪೋಟಿ ನೀಡುತ್ತಿರುವ ಯುವಜನತೆ ಯಾವ ರೀತಿಯ ನಿದರ್ಶನ ಪಡೆಯುತ್ತಿದೆ ಎಂಬುವುದನ್ನು ನೀವೇ ಊಹಿಸಬಹುದು. ನಿಯಂತ್ರಣಕ್ಕೆ ಒಳಪಡದ ಅರಾಜಕತೆಯ ಫಲವಾಗಿ ನಿರ್ಮಾಣಗೊಂಡ ನಾಗರಿಕ (so called) ಸಮಾಜದಲ್ಲಿ ಇಂತಹ ಮನಸ್ಥಿತಿಯ ಒಂದು ತಲೆಮಾರು ಬೆಳೆದು ನಿಂತರೆ, ಅದು ಮುಂದಿನ ಜನಾಂಗಕ್ಕೆ ಎಂತಹ ಜಟಿಲ ಸಮಸ್ಯೆಯಾಗಿಬಿಡಬಹುದು ಎಂಬುವುದು ಯೋಚಿಸಬೇಕಾದ ಅಂಶ.
ವಾಣಿಜ್ಯ ಕ್ಷೇತ್ರವು ಪೈಪೋಟಿಯ ಯುದ್ಧಕಣವಾದರೂ ಅದು ಅವಲಂಬಿಸಿರುವುದು ಕೃಷಿ, ಮಾನವ ಸಂಪನ್ಮೂಲ ಮತ್ತು ಇತರ ಕಚ್ಚಾ ವಸ್ತುಗಳ ಲಭ್ಯತೆಯನ್ನು ಮತ್ತು ಅವುಗಳ ಲಭ್ಯತೆಯನ್ನು ನಿರ್ಧರಿಸುವ ಕ್ಷೇತ್ರಗಳನ್ನು. ಕೇವಲ ಗಿರಾಕಿಗಳನ್ನು ಹುಡುಕುವ, ಲಾಭ ಮತ್ತು ವ್ಯವಹಾರಿಕ ಸಾರ್ವಭೌಮತ್ವ ಗಳಿಸಲು ಪೈಪೋಟಿ ನೀಡುವ ಮತ್ತು ಅದಕ್ಕಾಗಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅರಾಜಕತೆಯನ್ನುಂಟುಮಾಡಲೂ ಹೇಸದ ಹೋರಾಟವನ್ನು ‘ಉಳಿವಿಗಾಗಿ ಹೋರಾಟ’ ಎನ್ನಲಾಗದು. ಏಕೆಂದರೆ, ಅದರಿಂದ ಸಾರ್ವತ್ರಿಕ ಅಳಿವು ನಿಶ್ಚಿತ. ಆಗ ಗೆದ್ದದ್ದು ವ್ಯರ್ಥವಾಗಲಿಲ್ಲವೇ?
ಕೇವಲ ಅಂಕಿ ಅಂಶಗಳನ್ನಷ್ಟೇ ಕಂಡು, ಆತಂಕಿತರಾಗಿ, ತನ್ನ ಆಲೋಚನೆಗನುಗುಣವಾಗಿ ಸರಿಪಡಿಸಲು ಹೋಗಿ (ಅಂಕಿ ಅಂಶಗಳನ್ನಷ್ಟೇ ಗುರಿಯಾಗಿಟ್ಟುಕೊಂಡು) ಜನತೆಯ ಮೇಲೆ ಪ್ರಯೋಗ ಮಾಡ ಹೊರಟಂತಿವೆ ಇಂದಿನ ಕೆಲವು ಯೋಜನೆಗಳು. ಆ ರೀತಿ ಮುಂದುವರೆದರೆ, ಮೊದಲಿಗೆ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅಂಕಿ ಅಂಶಗಳು, ಕೊನೆಗೆ ಹಸ್ತಕ್ಷೇಪದಿಂದ ಬದಲಾಗಿ, ಪರಿಣಾಮಗಳು ವಾಸ್ತವಾಂಶದಿಂದ ದೂರವಾಗಿ ಬಿಟ್ಟು, ಈಗಿನ ವಿದೇಶೀಯರಂತೆ ನಾವೂ ಕೂಡಾ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಕೃತಕತೆಯ ಜೊತೆಜೊತೆಯಲ್ಲೇ, ನಿಯಂತ್ರಣವನ್ನೂ ಮಾಡಲು ಕೇವಲ ತಂತ್ರಜ್ಞಾನವನ್ನೇ ಅವಲಂಭಿಸಿದ ವಿಧಾನಗಳಿಗೆ ಮಾರುಹೋಗಬೇಕಾದೀತು. ಆಡಳಿತಾತ್ಮಕ ದೃಷ್ಟಿಯಿಂದ ನೋಡಿದರೆ ಇದು ನೈಪುಣ್ಯತೆಯೂ ಅಲ್ಲ, ನ್ಯಾಯಯುತವೂ ಅಲ್ಲ. ಪರಿಣಾಮಕಾರಿಯೆಂದಿದ್ದರೂ ವಿವೇಕಪೂರ್ಣವಲ್ಲ. ಏಕೆಂದರೆ, ವ್ಯಾವಹಾರಿಕ ಪ್ರಗತಿಗೆ ತಂತ್ರಜ್ಞಾನದ ಜೊತೆ ಜೊತೆಯಲ್ಲಿ ಇಚ್ಛಾ ಶಕ್ತಿಯ ಅಗತ್ಯವೂ ಬಹಳಷ್ಟಿದೆ. ಇಂತಹ ಇಚ್ಛಾ ಶಕ್ತಿಯನ್ನು ಗಳಿಸಿಕೊಳ್ಳಲು ತಮ್ಮ ತಮ್ಮೊಳಗೇ ಒಡಕನ್ನುಂಟುಮಾಡಬಲ್ಲ ಪೈಪೋಟಿ ನೀಡುವ ಜನಾಂಗಕ್ಕಿಂತ ಮಿಗಿಲಾಗಿ, ಬಾಹ್ಯ ಸವಾಲುಗಳಿಗೆ ಪ್ರತಿಯಾಗಿ ಎದುರಿಸಿ ನಿಲ್ಲಬಲ್ಲ, ಆಂತರಿಕವಾಗಿ ಸಡೃಢವಾದ ಮಾನವ ಶಕ್ತಿಯ ಅವಶ್ಯಕತೆಯಿದೆ.
ಹೀಗಾಗಿ, ಯುವಜನತೆಯನ್ನು ಪರೋಕ್ಷವಾಗಿ ಶಿಕ್ಷಿತಗೊಳಿಸುತ್ತಿರುವ ಮಾದ್ಯಮ ದೃಶ್ಯಾವಳಿಗಳು, ತಂತ್ರಜ್ಞಾನದಿಂದ ಪಡೆದ ಗ್ಯಾಜೆಟ್‌ಗಳಲ್ಲಿನ ಮಾರ್ಕೆಟಿಂಗ್ ಮರ್ಮಗಳು, ಶಾಪಿಂಗ್ ವ್ಯವಹಾರ ಹೆಚ್ಚಿಸಿಕೊಳ್ಳಲು ಬಳಕೆಯಾಗುವ ತಂತ್ರಗಳ ಒಳಗುಟ್ಟುಗಳು, ಜೀವನ ಶೈಲಿಯನ್ನೇ ಮಾರುಕಟ್ಟೆ ಮಾಡಹೊರಟ ಫ್ಯಾಷನ್ ಲೋಕದ ಪ್ರಚೋದನೆ ನೀಡುವ ನಾವಿನ್ಯ ಆವಿಷ್ಕಾರಗಳು, ಮನಸ್ಥಿತಿ ಮತ್ತು ಸಾಮರ್ಥ್ಯಗಳ ಮೇಲೆ ಪ್ರಭಾವ ಬೀರುವ ಆಹಾರ ಮತ್ತು ಔಷಧ ಉತ್ಪನ್ನಗಳೂ ಸಹ ವಿಶ್ಲೇಷಣೆಗೆ (ಆಡಳಿತ ಮತ್ತು ನಿಯಂತ್ರಣದ ಹೊಣೆ ಹೊತ್ತವರ / ಬುದ್ಧಿಜೀವಿಗಳ ಉಸ್ತುವಾರಿಯಲ್ಲಿ) ಒಳಪಡಬೇಕು. ವಾಣಿಜ್ಯ ಹಿತಾಸಕ್ತಿಗಳು ಅಂಕೆಗೊಳಪಡಬೇಕು. ಕೈಗಾರಿಕಾ ಕ್ಷೇತ್ರ ಮತ್ತು ಸೇವಾ ಕ್ಷೇತ್ರಗಳಲ್ಲಿ ಪಳಗಿ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಮನೋವಿಜ್ಞಾನದ ಚಿಂತಕರು ದೇಶವನ್ನು ಉಳಿಸುವ ಈ ಕಾರ್ಯದಲ್ಲೂ ಚಿಂತಿಸಬಲ್ಲವರಾಗಿ, ಕಗ್ಗಂಟಿನ ಭವಿಷ್ಯದ ಸವಾಲುಗಳ ಮೀರಲು ನೆರವಾದಲ್ಲಿ ಭರವಸೆಯಿನ್ನೂ ಜೀವಂತವಾಗಿರಲು ಸಾಧ್ಯ. ಗಾಂಧೀವಾದದ ದೃಷ್ಟಿಕೋನದಲ್ಲಿ ಈ ವಿಚಾರವನ್ನೊಮ್ಮೆ ವಿಮರ್ಷಿಸಿ.
ಡಾರ್ವಿನನ ಸಿದ್ಧಾಂತದಂತೆ ಬಲಿಷ್ಠವಾಗಿರುವವರ ಉಳಿಕೆಯನ್ನು ಪ್ರತಿಪಾದಿಸುವ ಜೊತೆಜೊತೆಯಲ್ಲಿ, ಎಲ್ಲರನ್ನೂ ಬಲಪಡಿಸುವ ಜಾಣ್ಮೆಯಿರುವ ಮಾನವನು, ಪ್ರಾಣಿ ಲೋಕದ ಸೀಮಿತವಾದ ಇತಿ ಮಿತಿಗಳನ್ನು ಮೀರಿ, ಶ್ರೇಷ್ಟನಾಗಿರಬೇಕು. ಆಗ ಮಾತ್ರ ಉಳಿವಿನ ಕನಸು ಮುಂದಿನ ಜನಾಂಗಕ್ಕೆ ಆಶಾಕಿರಣವಾಗುತ್ತದೆ. ಈ ಹೊಣೆಯ ಸಾಧನ ಶಿಕ್ಷಣ ಕ್ಷೇತ್ರವಾದರೂ, ಇದರ ಸೂತ್ರವನ್ನು ತಿಳಿದು ಹಿಡಿದವರು ಇಂತಹ ಕಾರ್ಯ ಸಿದ್ಧಿಸುವಂತಹ ಯುಕ್ತಿಗಳನ್ನು ರೂಪಿಸಿ, ಪೋಷಿಸಿ, ನಡೆಸಲಿ. ಸರ್ವಶಕ್ತ ದೇವನ ಪ್ರೇರಣೆಯಿರಲಿ ಎಂಬ ಸದಾಶಯದ ಎದುರು ನೋಟದಲ್ಲಿ ಕಾದಿರುವುದು ಭವಿಷ್ಯ.
Johnson Dcunha [Rajesh]
https://ict.net.in