ಕಲಬುರಗಿ ಜಿಲ್ಲಾ ಘಟಕ – ಅಕ್ಟೋಬರ್ 2022




ಈ ದಿನ (02-Oct-2022) ಗಾಂಧಿ ವಿಚಾರ ವೇದಿಕೆ, ಕಲಬುರಗಿ ಘಟಕ ದ ವತಿಯಿಂದ ಮಹಾತ್ಮ ಗಾಂಧೀಜಿಯವರ ಜಯಂತಿ ಯನ್ನು ಜನರಂಗದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಕು. ಮಹ್ಮದ್ ಅಯಾನ್ ಮತ್ತು ಕು. ಮಹ್ಮದ್ ಅಮನ್ ಇವರಿಂದ ರಘುಪತಿ ರಾಘವ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಜಿವಿವಿ ಕಾರ್ಯದರ್ಶಿಗಳಾದ ಶ್ರೀ ಗಿರೀಶ ಪಾಟೀಲರು ಎಲ್ಲರನ್ನು ಸ್ವಾಗತಿಸಿ, ಜಿವಿವಿ ಪ್ರಾರಂಭದ ಹಿನ್ನೆಲೆ ಹಾಗೂ ಮುಂದಿನ ನಡೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಂವಾದಕರಾಗಿ ಆಗಮಿಸಿದ್ದ ಡಾ.ವೀರಶೆಟ್ಟಿ ಗಾರಂಪಳ್ಳಿಯವರು ಜಗತ್ತಿಗೇ ಮಾದರಿಯಾದ ರಾಷ್ಟ್ರಪಿತ ಗಾಂಧೀಜಿ, ಭಾರತದಲ್ಲಿ ಏಕೆ ಸಾರ್ವತ್ರಿಕ ಸತ್ಯದಿಂದ ಅಪಮೌಲ್ಯಕ್ಕೊಳಗಾಗುತ್ತಿದ್ದಾರೆ ? ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಮಾತನಾಡಿ, ಸಭಿಕರಿಂದ ಬಂದಂತಹ ಪ್ರಶ್ನೆಗಳಿಗೆ ಅಷ್ಟೇ ಸ್ಪಷ್ಟವಾಗಿ ಉತ್ತರಿಸಿದರು.
ಸಂವಾದಕರ ಕೆಲವು ಮಾತುಗಳು ಇಂತಿವೆ,
-ಗಾಂಧೀಜಿಯವರನ್ನು ಇಂದು ಕೇವಲ ಬಾಹ್ಯವಾಗಿ ಹೊತ್ತುಕೊಂಡಿದ್ದೇವೆ, ಆಂತರಿಕವಾಗಿ ಅಲ್ಲ.
-ಗಾಂಧೀಜಿಯವರ ಬಗ್ಗೆ ಅಪಪ್ರಚಾರಕ್ಕೆ ಪ್ರಭುತ್ವವೇ ಕಾರಣ.
-ಗಾಂಧೀಜಿಯವರು ರಾಮನನ್ನು ಆರಾಧಿಸಿದ್ದು, ಅವರಿಗಿದ್ದ ರಾಮರಾಜ್ಯದ ಕಲ್ಪನೆಯು ಒಂದು ರೀತಿಯದ್ದಾಗಿತ್ತು, ಆದರೆ ಇಂದಿನ ರಾಮನ ಆರಾಧನೆಯೇ ಬೇರೆಯದ್ದಾಗಿದೆ.
-ಗಾಂಧೀಜಿಯವರು ತಮ್ಮ ನಿರ್ಧಾರಗಳಿಗೆ ಎಷ್ಟು ಬದ್ಧರಾಗಿರುತ್ತಿದ್ದರೋ, ಕೆಲವು ಸಂದರ್ಭಗಳಲ್ಲಿ ಅಷ್ಟೇ ಬೌದ್ಧಿಕ ಪ್ರಜ್ಞೆಯಿಂದ ನಿರ್ಧಾರಗಳನ್ನು ಬದಲಿಸಿದ್ದುದಿದೆ. ಉದಾಹರಣೆಗೆ ಅಸಹಕಾರ ಚಳುವಳಿ.
ಕಾರ್ಯಕ್ರಮದ ಅಧ್ಯಕ್ಷರಾಗಿ ಪ್ರೊ. ಶಿವಗಂಗಾ ರುಮ್ಮಾರವರು ಭಾಗವಹಿಸಿದ್ದರು.
ಜಿವಿವಿ ಕಲಬುರಗಿ ಘಟಕದ ಅಧ್ಯಕ್ಷರಾದ ಶ್ರೀ ಶಂಕರಯ್ಯ ಆರ್ ಘಂಟಿಯವರು ವೇದಿಕೆಯಲ್ಲಿ ಉಪಸ್ಥಿತರಾಗಿದ್ದು, ನಮ್ಮ ವೇದಿಕೆಯನ್ನು ಮುಂದೆ ಕೊಂಡೊಯ್ಯುವ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಜಿವಿವಿ ಸಲಹೆಗಾರರಾದ ಶ್ರೀ ಎಚ್ .ಎಸ್ ಬಸವಪ್ರಭು ವಹಿಸಿಕೊಂಡಿದ್ದರು. ಜಿವಿವಿ ಸಂಯೋಜಕರಾದ ಶ್ರೀ ಅಜೀಂ ಪಾಷಾರವರು ವಂದನಾರ್ಪಣೆಯನ್ನು ಮಾಡಿದರು. ಜಿವಿವಿ ಪದಾಧಿಕಾರಿಗಳು, ಸದಸ್ಯರಲ್ಲದೇ, ವಿಶ್ವವಿದ್ಯಾನಿಲಯಗಳಿಂದ, ಇತರೆ ಸಂಘಟನೆಗಳಿಂದ ಅನೇಕ ಸ್ನೇಹಿತರು ಭಾಗವಹಿಸಿದ್ದರು.
ಒಟ್ಟಾರೆ ಈ ದಿನದ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಇದಕ್ಕಾಗಿ ಶ್ರಮಿಸಿದ ನಮ್ಮ ಜಿವಿವಿಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.
-ಗಿರೀಶ ಪಾಟೀಲ