3- 11- 2022 ರಂದು ಉಡುಪಿಯಲ್ಲಿ ನಡೆದ ‘ಅಟಾರ್ನಿ ಗಾಂಧಿ’ ಪುಸ್ತಕ ಬಿಡುಗಡೆಯಲ್ಲಿ ಆಡಿದ ಮಾತುಗಳು
- ಅರವಿಂದ ಚೊಕ್ಕಾಡಿ
ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಿತ್ರ ಓ. ಆರ್. ಪ್ರಕಾಶ್ ಅವರು ಬರೆದಿರುವ ‘ ಅಟಾರ್ನಿ ಗಾಂಧಿ’ ಪುಸ್ತಕವು ಮಹಾತ್ಮಾ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ಜೀವನದ ವಿಸ್ತಾರವಾದ ವಿವರಗಳನ್ನು ಹೊಂದಿದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಿನ ಘಟನೆಗಳ ಬಗ್ಗೆ ಹೆಚ್ಚು ಚರ್ಚೆಗಳು ಇಲ್ಲದಿರುವುದರಿಂದ ಈ ಕೃತಿ ವರ್ತಮಾನದಲ್ಲಿ ಬಹಳ ಮಹತ್ವವನ್ನು ಪಡೆದಿದೆ.
ಅದಕ್ಕಿಂತ ಮುಖ್ಯವಾಗಿ ವರ್ತಮಾನದ ಕಲುಷಿತ ಸಮಾಜದಲ್ಲಿ ಈ ಕೃತಿಯ ಪ್ರವೇಶಕ್ಕೆ ರೂಪಕಾತ್ಮಕವಾದ ಒಂದು ಮಹತ್ವ ಇದೆ. ಓ. ಆರ್.ಪ್ರಕಾಶ್ ಅವರು ಈ ಹಿಂದೆ ವಿ. ಡಿ.ಸಾವರ್ಕರ್ ಅವರ ಅಂಡಮಾನ್ ಜೈಲಿನ ಜೀವನದ ಹಿನ್ನೆಲೆಯಲ್ಲಿ ಒಂದು ಪುಸ್ತಕವನ್ನು ಬರೆದಿದ್ದರು. ಇವತ್ತಿನ ದಿನಗಳು ಹೇಗಿವೆ ಎಂದರೆ ಗಾಂಧೀಜಿಯ ಮೂಲ ತತ್ವವನ್ನು ಒಪ್ಪದ ಒಂದು ಗುಂಪು ಗಾಂಧೀಜಿಯ ಪರವಾಗಿ ನಿಂತ ಹಾಗೆ ನಟಿಸುತ್ತಾ, ಸಾವರ್ಕರ್ ಮೇಲೆ ವಾಗ್ದಾಳಿ ನಡೆಸುತ್ತಿದೆ. ಗಾಂಧೀಜಿಗೆ ಭಗವದ್ಗೀತೆ ತಾಯಿ. ಇವರಿಗೆ ಭಗವದ್ಗೀತೆಯನ್ನು ಕಂಡರೆ ಅಸಹನೆ. ಗಾಂಧೀಜಿಗೆ ರಾಮ ದೇವರು. ಇವರಿಗೆ ರಾಮನನ್ನು ಆಗುವುದಿಲ್ಲ. ಸಾಲದಕ್ಕೆ ಗಾಂಧೀಜಿಯ ರಾಮ ಬೇರೆ ಎಂದು ವ್ಯಾಖ್ಯಾನವಿದೆ. ” ರಘುಪತಿ ರಾಘವ ರಾಜಾರಾಮ್” ಎಂದು ಗಾಂಧೀಜಿಯೇ ಹೇಳಿದ್ದು. ರಘು, ಮಾಂಧಾತ, ಅನರಣ್ಯ, ಅಜ, ದಶರಥರ ವಂಶದಲ್ಲೆ ಜನಿಸಿದ ರಘುಕುಲದ ಅಧಿಪತಿ ರಾಮ ಗಾಂಧೀಜಿಯ ರಾಮ. ಇವನು ರಾಮಾಯಣದ ರಾಮನಲ್ಲದೆ ಬೇರಾರು? ಇನ್ನೊಂದು ಗುಂಪು ಇದೆ. ಅವರು ಸಾವರ್ಕರ್ ಪರವಾಗಿ ನಿಂತು ಗಾಂಧೀಜಿಯ ಮೇಲೆ ವಾಗ್ದಾಳಿ ನಡೆಸುವವರು. ಇವರೂ ಕೂಡ ಸಾವರ್ಕರ್ ಅವರ ಹಿಂದೂ ಮಹಾಸಭಾದವರಲ್ಲ. ಇಬ್ಬರು ರಾಷ್ಟ್ರ ನಾಯಕರನ್ನು ಪರಸ್ಪರ ಶತ್ರುಗಳ ಹಾಗೆ ಕಾದಾಟಕ್ಕಿಳಿಸಿ ತಮ್ಮ ಕಾಯಿಯನ್ನು ನಡೆಸುತ್ತಿರುವ ಈ ಎರಡು ಗುಂಪುಗಳ ನಡುವೆ,” ಇಬ್ಬರೂ ನಮ್ಮ ರಾಷ್ಟ್ರೀಯ ನಾಯಕರೇ” ಎಂದು ಗಟ್ಟಿಯಾಗಿ ಹೇಳುವ ಮೂರನೆಯ ಗುಂಪಿನ ಸಾಂಕೇತಿಕ ಪ್ರತಿನಿಧಿತ್ವವಾಗಿ ಓ. ಆರ್.ಪ್ರಕಾಶ್ ಅವರೂ, ಈ ಪುಸ್ತಕವೂ ಭಾಸವಾಗುತ್ತಿದೆ. ಈ ಮೂರನೆಯ ಗುಂಪೇ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವವರು. ಬದುಕು ಸಿದ್ಧಾಂತದ ಒಳಗೆ ಇರುವುದಿಲ್ಲ. ಅದು ಸಿದ್ಧಾಂತವನ್ನು ದಾಟಿ ನಿಂತಿರುತ್ತದೆ. ಸಿದ್ಧಾಂತಗಳು ಬದುಕನ್ನು ತಮ್ಮೊಳಗೆ ಸೇರಿಸಿಕೊಳ್ಳದೆ ಬದುಕನ್ನೆ ಸಿದ್ಧಾಂತದ ಒಳಗೆ ಸೇರಿಸಲು ಹೊರಟಾಗ ಸಹಜ ಮನುಷ್ಯರು ಅನಾಥರಾಗುತ್ತಾರೆ. ಗಾಂಧಿಯನ್ನು ಬೆಂಬಲಿಸಿದವರು ಎಡಪಂಥೀಯರೂ ಅಲ್ಲ. ಬಲಪಂಥೀಯರೂ ಅಲ್ಲ. ಕೋಮುವಾದಿಗಳೂ ಅಲ್ಲ. ಧರ್ಮನಿರಪೇಕ್ಷಿತರೂ ಅಲ್ಲ. ಸಮಾಜವಾದಿಗಳೂ ಅಲ್ಲ. ಬಂಡವಾಳವಾದಿಗಳೂ ಅಲ್ಲ. ಗಾಂಧಿಯನ್ನು ಬೆಂಬಲಿಸಿದವರು ಸಹಜ ಮನುಷ್ಯರು. ಸಿದ್ಧಾಂತಿಗಳಲ್ಲದ ಸಹಜ ಮನುಷ್ಯರನ್ನು ವಿಶಾಲ ವ್ಯಾಪ್ತಿಯ ತಾತ್ವಿಕತೆಯ ಒಳಗೆ ಸೇರಿಸಿಕೊಳ್ಳುವವರು ಬಂದಾಗ ಮೂರನೆಯ ಗುಂಪಿನ ಶಕ್ತಿ ಏನು ಎಂದು ಗೊತ್ತಾಗುತ್ತದೆ. ಈ ಮೂರನೆಯ ಗುಂಪನ್ನು ತನ್ನೊಂದಿಗೆ ಕರೆದೊಯ್ಯುವ ಶಕ್ತಿಯ ಬರವಿಗಾಗಿ ಇವರು ಕಾದಿದ್ದಾರೆ ಅಷ್ಟೆ. ಗಾಂಧೀಜಿಯ ಕಾಲದಲ್ಲೂ ಹೀಗೆಯೇ. ಹಿಂದೂಗಳ ಪರವಾಗಿ ಹಿಂದೂ ಮಹಾ ಸಭಾ, ಮುಸ್ಲಿಮರ ಪರವಾಗಿ ಮುಸ್ಲಿಮ್ ಲೀಗ್ ಮತ್ತು ಒಂದು ಸಣ್ಣ ಸಂಸ್ಥೆಯಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇತ್ತು. ಹಿಂದೂ ಮಹಾ ಸಭಾ, ಮುಸ್ಲಿಂ ಲೀಗ್ ಎರಡೂ ಕಡೆಗೂ ಸೇರಲು ಬಯಸದ ಬಹು ಸಂಖ್ಯೆಯ ಮೂರನೆಯ ಗುಂಪನ್ನು ತನ್ನ ಜೊತೆ ಕರೆದೊಯ್ಯಲು ಗಾಂಧಿ ಬಂದಾಗ ಅದರ ವರ್ಚಸ್ಸಿಗೆ ಎರಡೂ ಶಕ್ತಿಗಳೂ ಕಳಾಹೀನವಾದವು. ಇವತ್ತಿನ ಭಾರತದ ರಾಷ್ಟ್ರೀಯತೆ ಗಾಂಧೀಜಿ ರೂಪಿಸಿದ್ದು. ಗಾಂಧೀಜಿಯ ಸ್ಪಿರಿಟ್ ಇರುವ ವರೆಗೆ ಮಾತ್ರ ಈ ರಾಷ್ಟ್ರೀಯತೆ ಇರುತ್ತದೆ. ಭಾರತದೊಂದಿಗೆ ಸ್ವಾತಂತ್ರ್ಯ ಪಡೆದ ಪಾಕಿಸ್ಥಾನ, ಬಾಂಗ್ಲಾ ದೇಶಗಳಿಗೆ ಅಲ್ಲಿನ ಅಲ್ಪ ಸಂಖ್ಯಾತರನ್ನು ತನ್ನೊಂದಿಗೆ ಒಯ್ಯಲು ಸಾಧ್ಯವಾಗಲಿಲ್ಲ. ಆದರೆ ನೂರು ಕೋಟಿ ಇರುವ ಭಾರತದ ಹಿಂದೂಗಳಿಗೆ ಕೇವಲ ಎಪ್ಪತ್ತು ಸಾವಿರ ಇರುವ ಪಾರ್ಸಿಗಳನ್ನೂ ತಮಗೆ ಸಮ ಸಮವಾಗಿ ಒಯ್ಯಲು ಸಾಧ್ಯವಾಗುವುದು ಗಾಂಧೀಜಿ ರೂಪಿಸಿದ ರಾಷ್ಟ್ರೀಯತೆಯಲ್ಲಿ. ” ನಾನೊಬ್ಬ ಸನಾತನಿ ಹಿಂದೂ. ಆದ್ದರಿಂದಲೇ ಮುಸ್ಲಿಮನೂ ಆಗಬಲ್ಲೆ, ಕ್ರೈಸ್ತನೂ ಆಗಬಲ್ಲೆ” ಎನ್ನುವ ಗಾಂಧೀಜಿಯ ಮಾತುಗಳು ‘ ವಸುಧೈವ ಕುಟುಂಬ’ ದ ಪರಿಕಲ್ಪನೆಯಲ್ಲೆ ಬಂದಿರುವಂತಾದ್ದು. ಅವಶ್ಯವಾಗಿ ಗಾಂಧೀಜಿ ಹಿಂದೂಗಳ ನಾಯಕ ಹೌದು. ಆದರೆ ಮಹಮ್ಮದಾಲಿ ಜಿನ್ನಾ ಹೇಳಿದ ಹಾಗೆ ಕೇವಲ ಹಿಂದೂಗಳ ನಾಯಕ ಅಲ್ಲ. ಅವರು ಕೇವಲ ಹಿಂದೂಗಳ ನಾಯಕನಾಗಿದ್ದರೆ ಕ್ರೈಸ್ತ ರಾಷ್ಟ್ರಗಳೇ ಬಹುಸಂಖ್ಯೆಯಲ್ಲಿರುವ ವಿಶ್ವ ಸಂಸ್ಥೆಯಲ್ಲಿ ಈ ತಿಂಗಳು ಹದಿನಾಲ್ಕರಂದು ಗಾಂಧೀಜಿಯ ಮೂರ್ತಿ ಏಕೆ ಸ್ಥಾಪನೆಯಾಗುತ್ತಿದೆ? ಈ ನೆಲೆಯಲ್ಲಿ,” ಹಿಂದೂಗಳಿಗೆ ನಾವು ಮರೆತೆವು ಎಂದು ಹೇಳಿಕೊಳ್ಳಲಿಕ್ಕಾದರೂ ಒಬ್ಬ ಗಾಂಧಿ ಇದ್ದಾರೆ. ನಮಗೆ ಅಂತಹವನು ಒಬ್ಬನೂ ಇಲ್ಲ” ಎನ್ನುವ ಹಮೀದ್ ದಲವಾಯಿ ಅವರ ಮಾತುಗಳು ಹೆಚ್ಚು ಮಹತ್ವ ಪಡೆಯುತ್ತದೆ. ಅಂತಹ ಶಕ್ತಿ ಇದ್ದ ಗಾಂಧೀಜಿ ಮೂರನೆಯ ಗುಂಪನ್ನು ತನ್ನೊಂದಿಗೆ ಒಯ್ದಾಗ, ಗಾಂಧಿ ಕಾಂಗ್ರೆಸ್ಸಿನ ಸದಸ್ಯತ್ವವನ್ನು ತ್ಯಜಿಸಿದ ಮೇಲೂ ಕಾಂಗ್ರೆಸ್ ಗಾಂಧಿ ಹೇಳಿದ್ದನ್ನೆ ಕೇಳಬೇಕಾಯಿತು. ಪರಸ್ಪರ ದೂಷಣೆಯಲ್ಲಿರುವ ಎರಡು ಗುಂಪುಗಳನ್ನು ಕ್ರಾಸ್ ಮಾಡಿ ಮೂರನೆಯ ಗುಂಪು ಎಮರ್ಜ್ ಆಗಬೇಕಾದರೆ ಅದಕ್ಕೆ ರಂಗಸ್ಥಳ ಸಿದ್ಧವಾಗಬೇಕಾಗುತ್ತದೆ. ಅಂತಹ ವೈಚಾರಿಕ ಸಂವಿಧಾನವನ್ನು ಹಾಕಿಕೊಡುವ ಕಾರ್ಯವನ್ನು ಮಾಡಲು ಹೊರಟಿರುವ ಕೃತಿ ಇದು. ಆದ್ದರಿಂದ ಇದಕ್ಕೆ ಕೇವಲ ಸಾಹಿತ್ಯಕವಾಗಿಯಲ್ಲ; ಸಾಮಾಜಿಕವಾಗಿಯೂ ಈ ಕೃತಿ ಮಹತ್ವದ್ದಾಗಿದೆ.
ಸಂಪ್ರದಾಯವಾದಿ ಸನಾತನಿ ಹಿಂದೂ ಆಗಿ ತನ್ನ ವೈಯಕ್ತಿಕ ಜೀವನದ ಭವಿಷ್ಯವನ್ನು ಅರಸುತ್ತಾ ಆಫ್ರಿಕಾಕ್ಕೆ ಹೊರಟ ಗಾಂಧಿ ಸಾಮಾಜಿಕವಾಗಿ, ರಾಜಕೀಯಾತ್ಮಕವಾಗಿ, ಪಕ್ವ ಮನಸ್ಸಿನ ‘ ಸತ್ಯಾಗ್ರಹ’ ತತ್ವದ ಆವಿಷ್ಕಾರ ಮಾಡಿದ ಹೋರಾಟಗಾರನಾಗಿ ಭಾರತಕ್ಕೆ ಹಿಂದಿರುಗಲು ಕಾರಣವಾದ ಸಂಗತಿಗಳನ್ನು ಈ ಕೃತಿಯು ವಿವರಿಸುತ್ತದೆ. ಅಫ್ಕೋರ್ಸ್, ಆಪ್ರಿಕಾದಿಂದ ಭಾರತಕ್ಕೆ ಹಿಂದಿರುಗುವಾಗಲೂ ಗಾಂಧೀಜಿ ಸಂಪ್ರದಾಯವಾದಿ ಸನಾತನಿ ಹಿಂದೂವೇ ಆಗಿದ್ದರು. ಸಂಪ್ರದಾಯ ಶರಣತೆಯನ್ನು ತಿರಸ್ಕರಿಸಿ ಸನಾತನ ಧರ್ಮದ ಉದಾತ್ತ ಆದರ್ಶಗಳನ್ನು ಅನುಷ್ಠಾನಕ್ಕೆ ತಂದ ಮೇರು ವ್ಯಕ್ತಿತ್ವವಾಗಿ ಗಾಂಧಿ ರೂಪುಗೊಂಡದ್ದು ಭಾರತದಲ್ಲೆ. ಹಾಗೆ ರೂಪುಗೊಂಡ ಗಾಂಧೀಜಿಯ ಪ್ರಭಾವ ಇಂದಿಗೂ ಇಡೀ ವಿಶ್ವದ ಮೇಲೆ ಇದೆ. ಬಹುಶಃ ಕಳೆದ ನೂರು ವರ್ಷಗಳಲ್ಲಿ ಪ್ರತೀದಿನ ವಿಶ್ವದ ಯಾವುದೊ ಮೂಲೆಯಲ್ಲಾದರೂ ದಿನಕ್ಕೆ ನೂರು ಸಲ ಗಾಂಧಿಯ ಹೆಸರನ್ನು ಮಾನವ ಜನಾಂಗ ಸ್ಮರಿಸದ ಒಂದು ದಿನವೂ ಇರಲು ಸಾಧ್ಯವಿಲ್ಲ. ಇದು ವಿಕಾಸದಿಂದ ರೂಪುಗೊಂಡ ವ್ಯಕ್ತಿತ್ವದ ಶಕ್ತಿ ಎಂಬುದನ್ನು ಈ ಕೃತಿಯು ಹೇಳುತ್ತದೆ.
A great man is not born; but born out of situations ಎನ್ನುವುದು ಈ ಪುಸ್ತಕವನ್ನು ಓದಿದಾಗ ಅರ್ಥವಾಗುತ್ತದೆ. ಈ ಕೃತಿಯ ವ್ಯಾಪ್ತಿ ಗಾಂಧಿ ಆಫ್ರಿಕಾಕ್ಕೆ ಹೋಗುವಲ್ಲಿಂದ ಶುರುವಾಗಿ ಆಫ್ರಿಕಾದಿಂದ ಹಿಂದಿರುಗುವಲ್ಲಿಗೆ ಮುಗಿಯುತ್ತದೆ. ಅದರ ನಡುವೆ ನಡೆಯುವ ಒಂದೊಂದು ಘಟನೆಗಳೂ ಗಾಂಧಿಯನ್ನು ಹೇಗೆ ಒಂದು ಅನುಭವ ಶಿಲ್ಪವಾಗಿ ರೂಪಿಸಿತು ಎಂದು ಕೃತಿಯು ಹೇಳುತ್ತದೆ. ಆಫ್ರಿಕಾ ಖಂಡವನ್ನು ಪರಿಚಯಿಸುತ್ತಾ ಪ್ರಕಾಶ್ ಅವರು,” ಆಫ್ರಿಕಾವು ಮನುಕುಲದ ತಾಯ್ನಾಡಲ್ಲವೆ” ಎಂದು ಕೇಳುತ್ತಾರೆ. ಎಲ್ಲ ಮನುಷ್ಯರ ಮೂಲ ನಿವಾಸ ಆಫ್ರಿಕಾ. ಗಾಂಧಿಯ ವ್ಯಕ್ತಿತ್ವದ ರೂಪಿಸುವಿಕೆಯೂ ಮೂಲ ನಿವಾಸದಲ್ಲೆ ಆಯಿತು.
ಅಂದಿನ ಆಫ್ರಿಕಾದ ಕಥನವು ವರ್ತಮಾನದ ಬಹು ಮುಖ್ಯ ಸಂಗತಿಯೊಂದನ್ನು ನಮ್ಮ ಮುಂದಿಡುತ್ತದೆ. ಬ್ರಿಟಿಷರಿಂದ ಭಾರತೀಯರಿಗೆ ದಕ್ಷಿಣ ಆಫ್ರಿಕಾದಲ್ಲಿ ಆದಷ್ಟು ಅವಮಾನಗಳು( ಅವಮಾನ; ದೌರ್ಜನ್ಯ ಅಲ್ಲ. ದೌರ್ಜನ್ಯ ಆಫ್ರಿಕಾಕ್ಕಿಂತ ಜಾಸ್ತಿಯೇ ಭಾರತದಲ್ಲಿ ಆಗಿದೆ) ಭಾರತದಲ್ಲಿ ಆಗಿಲ್ಲ. ಭಾರತೀಯರು ಯಾರೇ ಇದ್ದರೂ ಆಫ್ರಿಕಾದ ಬಿಳಿಯರ ಆಡಳಿತದ ಪ್ರಕಾರ ಅವರಿಗೆ,’ ಕೂಲಿ’ ಎಂದು ಹೆಸರು. ಎಲ್ಲದರಲ್ಲೂ ಅವರು ನಿಕೃಷ್ಟರು. ಅದರ ವಿರುದ್ಧ ಗಾಂಧಿ ಮಾತ್ರ ಅಲ್ಲ; ಆಫ್ರಿಕಾದಲ್ಲಿದ್ದ ಮುಸ್ಲಿಮರು, ವಿವಿಧ ಜಾತಿಗಳವರು ಎಲ್ಲ ಒಟ್ಟಾಗಿ ಸಿಡಿದೆದ್ದರು. ಆದರೆ ಮನುಷ್ಯರನ್ನು ಅಸ್ಪೃಶ್ಯರೆಂದು ಭಾರತದಲ್ಲೆ ಸಾವಿರಾರು ವರ್ಷ ನಿಕೃಷ್ಟ ಮಾಡಲಿಲ್ಲವೆ, ಈವತ್ತೂ ಮಾಡುತ್ತಿಲ್ಲವೆ? ಇಲ್ಲಿ ಯಾರು ದಲಿತರನ್ನು ಅಸ್ಪೃಶ್ಯರೆಂದು ನಿಕೃಷ್ಟವಾಗಿಸಿದರೋ ಅವರೆಲ್ಲ ಸೇರಿ ಆಪ್ರಿಕಾದಲ್ಲಿ ಬಿಳಿಯರ ವಿರುದ್ಧ ಹೋರಾಡುವುದು ಒಂದು ವಿಡಂಬನೆಯಲ್ವ. ಅವತ್ತು ನಾವ್ಯಾರೂ ಬದುಕಿರಲಿಲ್ಲ ಸರಿ. ನಾವದಕ್ಕೆ ಜವಾಬ್ದಾರರಲ್ಲ. ಆದರೆ ಇವತ್ತಿಗೂ ಅಸ್ಪೃಶ್ಯತೆಯ ಆಚರಣೆ ಇದೆಯಲ್ಲವೆ. ಅದರ ಬಗ್ಗೆ ಸಂವೇದನಾಶೀಲವಾಗಿ ಇವತ್ತಾದರೂ ಎಲ್ಲರೂ ಯೋಚಿಸಲು ಸಾಧ್ಯವಾಗುತ್ತಿದೆಯೆ? ದೇವಸ್ಥಾನದಲ್ಲಿ ಸಹ ಪಂಕ್ತಿ ಭೋಜನವೆ ಆಗಬೇಕು ಎಂದು ನಾನು ಹೇಳಿದ ತಕ್ಷಣ ನನ್ನನ್ನು ಆಕ್ಷೇಪಿಸಲು ನೂರು ಜನ ಇವತ್ತಿಗೂ ಬರುತ್ತಾರೆ! ಇದು ಸರಿ ಎಂದಾದರೆ, ಭಾರತೀಯರನ್ನು ಬ್ರಿಟಿಷರು ನಿಕೃಷ್ಠವಾಗಿ ಕಂಡದ್ದು ಹೇಗೆ ತಪ್ಪಾಗುತ್ತದೆ? ಮೇಲಿನವನು ಕೆಳಗಿನವನನ್ನು ನಿಕೃಷ್ಠವಾಗಿ ಕಾಣುವ ಪದ್ಧತಿ ಇವತ್ತಿಗೂ ಇದೆ, ದಲಿತರಲ್ಲಿಗೆ ಹೋದರೆ ಅಲ್ಲಿ ಕೂಡ ಬಲಗೈಯವನಿಗೆ ಎಡಗೈವನು ಕೀಳು ಎನಿಸುತ್ತದೆ. ಈ ಮನೋಭಾವನೆಯನ್ನು ಬೇರೆಯವರಿಗೆ ಕಾಣಿಸಿಕೊಳ್ಳಲಿಕ್ಕಾಗಿ ಅಲ್ಲ; ಅಂತಃಕರಣ ಪೂರ್ವಕವಾಗಿಯೇ ತೊಡೆದು ಹಾಕಿಕೊಳ್ಳದ ಯಾರಿಗೂ ಬ್ರಿಟಿಷರನ್ನು ಆಕ್ಷೇಪಿಸುವ ನೈತಿಕ ಅರ್ಹತೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ಮೇಲಿನವರು ಮೇಲರಿಮೆಯನ್ನು ಕೆಳಗಿನವರು ಕೀಳರಿಮೆಯನ್ನು ತೊಡೆದು ಹಾಕಿಕೊಂಡಾಗ ಮಾತ್ರ ಬ್ರಿಟಿಷರನ್ನು ಆಕ್ಷೇಪಿಸಲು ನಾವು ಅರ್ಹರಾಗುತ್ತೇವೆ. ಈ ಆತ್ಮಾವಲೋಕನದ ಪ್ರಶ್ನೆಯನ್ನು ಕೃತಿಯು ಎತ್ತಿ ಹಿಡಿಯುತ್ತದೆ. ಕೃತಿಯು ಪ್ರಸ್ತಾಪಿಸುವ ಪ್ರತಿಯೊಂದು ವಿಚಾರದಲ್ಲೂ ಈ ಪ್ರಶ್ನೆಯು ಮತ್ತೆ ಮತ್ತೆ ಕಾಡುತ್ತಾ ಹೋಗುತ್ತದೆ.
ಗಾಂಧೀಜಿ ಭಾರತದಿಂದ ದಾದಾ ಅಬ್ದುಲ್ಲಾ&ಕಂಪನಿಯ ವಕೀಲರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದದ್ದು. ದಾದಾ ಅಬ್ದುಲ್ಲಾ ಅವರ ವ್ಯಾಜ್ಯವು ತ್ಯಾಬ್ಜಿ ಸೇಠ್ ಅವರೊಂದಿಗಿತ್ತು. ಇವರಿಬ್ಬರೂ ಸಂಬಂಧಿಗಳು. ಇವರ ವ್ಯಾಜ್ಯವನ್ನು ಗಾಂಧಿ ಕೋರ್ಟಿನ ಹೊರಗೆ ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿದರು. ಈ ಅಂಶ ಯಾಕೆ ಮಹತ್ವದ್ದೆಂದರೆ, ಗಾಂಧೀಜಿಯವರ ನಂತರದ ದಿನಗಳ ವರ್ತನೆಗಳಲ್ಲಿ ಅಥವಾ ಇವತ್ತು ಗಾಂಧಿ ಚಿಂತನೆಗಳೆಂದು ಏನನ್ನು ಹೇಳುತ್ತೇವೆಯೋ ಅದರಲ್ಲಾಗಲಿ ಕಾಣಿಸುವುದು ಕಾನೂನಿನ ಆಚೆಗೆ ಇರುವ ನೈತಿಕ ನೆಲೆಗಟ್ಟಿನ ಪರಿಹಾರ ಮಾರ್ಗಗಳೇ ಆಗಿವೆ. ಕಾನೂನು ಒಬ್ಬನನ್ನು ಗೆಲ್ಲಿಸುತ್ತದೆ. ಮತ್ತೊಬ್ಬನನ್ನು ಸೋಲಿಸುತ್ತದೆ. ಸೋತವನು ಮತ್ತು ಗೆದ್ದವನ ಸಂಬಂಧಗಳು ಎಂದೂ ಸುಧಾರಿಸುವುದಿಲ್ಲ. ಆದರೆ ನೈತಿಕತೆ ಮಾತ್ರ ಇಬ್ಬರನ್ನೂ ಗೆಲ್ಲಿಸುತ್ತದೆ. ಈ ಆಯ್ಕೆ ಗಾಂಧೀಜಿಯವರ ಸಹಜ ಸ್ವಭಾವವೇ ಆಗಿತ್ತು ಎಂಬುದನ್ನು ಮೇಲಿನ ಘಟನೆಯು ಹೇಳುತ್ತದೆ.
ಗಾಂಧೀಜಿಯನ್ನು ಡರ್ಬಾನ್ನಲ್ಲಿ ರೈಲಿನಿಂದ ತಳ್ಳಿದ ಘಟನೆ ಬಹಳ ಪ್ರಸಿದ್ಧವಾದದ್ದು ಮತ್ತು ಆ ಘಟನೆಯೇ ಗಾಂಧೀಜಿಯ ಎಲ್ಲ ಅತ್ಯುತ್ತಮಗಳ ಹುಟ್ಟಿಗೆ ಮೂಲ ಎಂದು ಹಲವರು ಗುರುತಿಸುತ್ತಾರೆ. ಆದರೆ ಒಂದು ಘಟನೆಯ ಮೂಲಕ ಹಠಾತ್ತಾಗಿ ಗಾಂಧೀಜಿಯವರ ವ್ಯಕ್ತಿತ್ವವು ರೂಪುಗೊಂಡದ್ದಲ್ಲ ಎಂಬುದನ್ನು ಈ ಕೃತಿಯು ಹೇಳುತ್ತದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಒಂದು ಬಾರಿ ಭಾರತಕ್ಕೆ ಬಂದಾಗ ಅಲ್ಲಿ ಭಾರತೀಯರ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ‘ಹಸಿರು ಪುಸ್ತಕ’ ದ ಮೂಲಕ ಪ್ರಕಟಿಸಿ ಸಾರ್ವಜನಿಕರ ಗಮನ ಸೆಳೆಯುತ್ತಾರೆ. ಈ ವಿಷಯ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಬ್ರಿಟಿಷರು ಗಾಂಧಿ ತಮಗೆ ಸಾರ್ವಜನಿಕ ಅವಮಾನ ಮಾಡಿದರೆಂದು ಭಾವಿಸುತ್ತಾರೆ. ಮತ್ತೆ ಗಾಂಧಿ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಉದ್ರಿಕ್ತ ಬಿಳಿಯರು ಸುಮಾರು ನೂರು ಜನ ಸೇರಿ ಒಂಟಿಯಾಗಿ ಸಿಕ್ಕಿದ ಗಾಂಧಿಗೆ ಕೈಯಿಂದ, ಕುದುರೆಯ ಚಾಟಿಯಿಂದ, ಕಲ್ಲು, ದೊಣ್ಣೆ, ಕೊಳೆತ ಮೊಟ್ಟೆಗಳಿಂದ ಹೊಡೆದು, ಉಗುಳಿ, ತಲೆಗೆ ಚೂಪಾದ ಕಲ್ಲಿನಲ್ಲಿ ಕುಟ್ಟಿ ರಕ್ತ ಬರಿಸಿ ಹಿಂಸಿಸುತ್ತಾರೆ. ಈ ಉದ್ರಿಕ್ತ ಜನರಲ್ಲಿ ಗುರುತು ಹಿಡಿಯಬಹುದಾದವರ ಮೇಲೆ ಮೊಕದ್ದಮೆ ಹೂಡಲು ಪೊಲೀಸ್ ಅಧಿಕಾರಿ ತಿಳಿಸಿದಾಗಲೂ ಗಾಂಧಿ ಮೊಕದ್ದಮೆ ಹೂಡುವುದಿಲ್ಲ. ” ಅವರದ್ದೇನೂ ತಪ್ಪಿಲ್ಲ. ಅವರು ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ” ಎಂದು ಉತ್ತರಿಸುತ್ತಾರೆ. ಈ ರೀತಿಯ ಮನಸ್ಥಿತಿಯನ್ನು ತಂದುಕೊಳ್ಳುವುದು ಕಷ್ಟ. ಗಾಂಧಿ ಉಳಿದೆಲ್ಲರಿಗಿಂತ ಭಿನ್ನವಾಗಿ ರೂಪುಗೊಳ್ಳುತ್ತಾ ಹೋದುದರ ಮೂಲ ರಚನೆಯೇ ಹೀಗಿದೆ.
ಒಬ್ಬ ನಾಯಕನ ಜವಾಬ್ದಾರಿ ಏನು ಎಂಬುದನ್ನು ಗಾಂಧಿಯಲ್ಲಿ ಗುರುತಿಸಬಹುದು. ಜೊಹಾನ್ಸ್ ಬರ್ಗನ ಎಂಪೈರ್ ಥಿಯೇಟರ್ನಲ್ಲಿ ಸಭೆ ಸೇರಿದ ಜನರು ಪ್ರತಿಭಟನೆಗೆ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದಾಗ ಗಾಂಧಿ,” ಮುನ್ನುಗ್ಗಿ ನಾನಿದ್ದೇನೆ” ಎಂದು ಹೇಳುವುದಿಲ್ಲ. ಬದಲು ಈ ಹೋರಾಟದಿಂದ ಹಣ, ಆಸ್ತಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಬಹುದು, ಶಾಶ್ವತವಾಗಿ ಜೈಲು ಪಾಲಾಗಬೇಕಾಗಬಹುದು ಎಂದು ಸತ್ಯದರ್ಶನವನ್ನು ಮಾಡಿಸಿ ಅದೆಲ್ಲಕ್ಕೂ ಜನರು ಮಾನಸಿಕವಾಗಿ ಸಿದ್ಧರಾದ ಮೇಲೆ ಹೋರಾಟಕ್ಕೆ ಇಳಿಯುತ್ತಾರೆ. ಪ್ರತಿಕೂಲ ಪರಿಸ್ಥಿತಿಗೆ ಮಾನಸಿಕವಾಗಿ ಹದಗೊಳ್ಳದ ಹೊರತು ಹೋರಾಟದಿಂದ ಯಶಸ್ಸು ಸಾಧ್ಯವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಗಾಂಧೀಜಿಯ ಮಕ್ಕಳು, ಕಸ್ತೂರ್ಬಾ ಅವರೆಲ್ಲ ಹೋರಾಟಕ್ಕಿಳಿದಿದ್ದರು. ಕಸ್ತೂರ್ಬಾ, ಜೈಲಿನಲ್ಲಿ ಕೃಶರಾಗಿದ್ದರು. ಬಹುತೇಕವಾಗಿ ಜನರು ಸಾಂಸಾರಿಕರು. ಒಬ್ಬ ಹೋರಾಟಗಾರನಾಗಿ ಸಂಸಾರದ ಇತರರು ಅವರ ಪಾಡಿಗೆ ಇರುವವರಾಗಿ ಹಲವರು ಸಿಗುತ್ತಾರೆ. ಅಲ್ಲಿ ಹೋರಾಟಗಾರನ ತತ್ವ ಮತ್ತು ಕುಟುಂಬದ ತತ್ವಗಳು ಬೇರೆಬೇರೆಯಾಗಿ ಕೆಲವೊಮ್ಮೆ ಆಭಾಸವೂ ಸೃಷ್ಟಿಯಾಗುತ್ತದೆ. ಗಾಂಧೀಜಿಯ ವಿಷಯದಲ್ಲಿ ಹಾಗಲ್ಲ. ತತ್ವಗಳು ಇಡೀ ಕುಟುಂಬಕ್ಕೇ ಅನ್ವಯವಾಗಿದ್ದವು. ವಿವಿಧ ಪ್ರಮಾಣದಲ್ಲಿ ಇಡೀ ಕುಟುಂಬವೇ ಹೋರಾಟದಲ್ಲಿ ಭಾಗಿಯಾಗಿತ್ತು. ಮತ್ತು ಗಾಂಧೀಜಿಯ ಹೋರಾಟದ ಮಾದರಿಯು ಯಾರು ಯಾವಾಗ ಬೇಕಾದರೂ ಅವರವರ ಶಕ್ತ್ಯಾನುಸಾರ ಯಾವ ಹಂತದ ವರೆಗೆ ತೆಗೆದುಕೊಂಡು ಹೋಗಬಹುದಾದ ಹೋರಾಟದ ಮಾದರಿಯಾಗಿದೆ. ಅಹಿಂಸೆ ಇವತ್ತು ಸಾಧ್ಯ ಇದೆಯೇ? ಎಂದು ಹಲವರ ಪ್ರಶ್ನೆ ಇದೆ. ಸಾಧ್ಯ ಇದೆಯೇ? ಎಂದರೆ ಸಾಧ್ಯ ಇಲ್ಲ ಎಂದು ಅವನ ಅರ್ಥ. ಮಾಡಿ ನೋಡಿದ್ದೀರಾ? ಅಹಿಂಸೆಯ ಹೋರಾಟಕ್ಕಿಳಿದು ಮಾಡಿ ನೋಡಿ ವಿಫಲವಾದ ಅನುಭವದಿಂದ ಸಾಧ್ಯ ಇಲ್ಲ ಎಂದು ಹೇಳಬೇಕಲ್ಲವೆ? ಏನನ್ನೂ ಮಾಡದೆ ಸಾಧ್ಯ ಇಲ್ಲ ಎಂದರೆ? ಸ್ವಾರಸ್ಯವೆಂದರೆ ಅಹಿಂಸೆ ಎಂದ ಕೂಡಲೇ ಕೆರಳಿ ಕೆಂಡಾಮಂಡಲ ಆಗುವವರೆಲ್ಲರೂ ಇಂದಿಗೂ ಹೋರಾಟ ಎಂದರೆ ಜಾಥಾ ಹೋಗುವುದು, ಧರಣಿ ಕೂತುಕೊಳ್ಳುವುದೇ ಹೊರತು ಬಿಲ್ಲು ಬಾಣ ಹಿಡಿದು ಶಂಖ ಊದಿ ಯುದ್ಧಕ್ಕೆ ಆಹ್ವಾನಿಸುವುದಿಲ್ಲ.ಅಹಿಂಸೆಯಿಂದ ಏನೂ ಸಾಧ್ಯ ಇಲ್ಲ ಎನ್ನುವವರು ಮತ್ತೆ ಧರಣಿ ಯಾಕೆ ಕೂತುಕೊಳ್ಳುತ್ತೀರಿ? ಹೋರಾಟವನ್ನು ತಾರ್ಕಿಕ ಅಂತ್ಯದ ತನಕ ಕೊಂಡೊಯ್ಯದಿರುವುದರಿಂದ ಅಹಿಂಸೆ ಉಪಯೋಗಕ್ಕಿಲ್ಲ ಎನಿಸುವುದು. ಏಕೆಂದರೆ ಜಗತ್ತು ಅಹಿಂಸೆಯ ಹೋರಾಟದೊಂದಿಗೆ ಬದುಕಿದ ದೀರ್ಘ ಅನುಭವ ಹೊಂದಿಲ್ಲ. ಅಹಿಂಸೆಯ ಬೋಧನೆಯನ್ನು ಹಲವರು ಮಾಡಿದ್ದಾರೆ. ಆದರೆ ಅದನ್ನು ಪ್ರಯೋಗಕ್ಕಿಳಿಸಿದವರು ಗಾಂಧೀಜಿ ಒಬ್ಬರೇ.
ಹೀಗೆ ಈ ಕೃತಿಯ ಮೂಲಕ ಓ.ಆರ್. ಪ್ರಕಾಶ್ ಅವರು ಹಲವು ಮಗ್ಗುಲಿನ ಚಿಂತನೆಯನ್ನು ಬೆಳೆಯಿಸುತ್ತಾರೆ. ನಮಗೆ ಪರಿಚಯವಿರದ ದಕ್ಷಿಣ ಆಫ್ರಿಕಾದಲ್ಲಿನ ನೂರಿಪ್ಪತ್ತು ವರ್ಷಗಳ ಹಿಂದಿನ ಕಾಲಮಾನಕ್ಕೆ ಕಾಲ್ಪನಿಕವಾಗಿ ನಮ್ಮನ್ನು ಒಯ್ದು ನಮ್ಮ ಮನೋಚಿತ್ರದಲ್ಲಿ ಸ್ಥಾಪನೆಯಾಗಿರುವ ತುಂಡು ವಸ್ತ್ರಧಾರಿಯಾದ ಅಜ್ಜ ಗಾಂಧಿಯ ಜಾಗಕ್ಕೆ ಸೂಟು-ಬೂಟು ಧಾರಿಯಾದ ಯುವಕ ಗಾಂಧಿಯನ್ನು ಸ್ಥಾಪಿಸುತ್ತಾರೆ. ಈ ಕೃತಿಯ ಓದು ಗಾಢವಾದ ಒಂದು ಅಂತರಂಗದ ಅನುಭವವನ್ನು ಉಂಟು ಮಾಡುತ್ತದೆ. ಆ ಕಾರಣಕ್ಕಾಗಿಯೇ ಈ ಕೃತಿ ಹೆಚ್ಚು ಮಹತ್ವವನ್ನು ಪಡೆದಿದೆ. ಈ ಪುಸ್ತಕಕ್ಕಾಗಿ ಓ. ಆರ್. ಪ್ರಕಾಶ್ ಅವರನ್ನು ಅಭಿನಂದಿಸುತ್ತಾ ನನ್ನ ಮಾತುಗಳನ್ನು ಕೇಳಿದ ಎಲ್ಲರಿಗೂ ವಂದಿಸುತ್ತೇನೆ. ನಮಸ್ಕಾರ.