ನೆಹರೂ ವಿಚಾರ ವೇದಿಕೆ ಪುತ್ತೂರು ಇವರು 14/11/2022 ರಂದು ನಡೆಸಿದ ಕಾರ್ಯಕ್ರಮದಲ್ಲಿ ‘ಜವಾಹರ ಲಾಲ್ ನೆಹರೂ: ನವ ಭಾರತದ ದೃಷ್ಟಿಕೋನ’ ದ ಬಗ್ಗೆ ಮಾಡಿದ ಪ್ರಧಾನ ಉಪನ್ಯಾಸ:

By: Aravinda Chokkadi


ಮಾನ್ಯರೆ,

ಇವತ್ತು ಮಕ್ಕಳ ದಿನಾಚರಣೆಯೂ ಹೌದಾಗಿರುವುದರಿಂದ, ಜವಾಹರ ಲಾಲ್ ನೆಹರೂ ಅವರು 1949 ರಲ್ಲಿ ಮಕ್ಕಳಿಗೆ ಬರೆದ ಪತ್ರದ ವಿಷಯವನ್ನು ಆಧರಿಸಿ ಐದು ವರ್ಷಗಳ ಹಿಂದೆ ನಾನು ಬರೆದ ಕವಿತೆಯನ್ನು ನನ್ನ ಹಿರಿಯ ವಿದ್ಯಾರ್ಥಿಗಳು ಹಾಡಿರುವುದನ್ನು ಕೇಳಿಸಿದ್ದೇನೆ.

ಎರಡನೆಯದಾಗಿ, ವರ್ತಮಾನದಲ್ಲಿ ಉಸಿರಾಟ ಕ್ರಿಯೆಯನ್ನೂ ಯಾವ ರಾಜಕೀಯದ ಪರ ಎಂದು ಅರ್ಥೈಸುವ ಪರಿಸ್ಥಿತಿ ಇರುವುದರಿಂದ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ಮೊನ್ನೆಯ ದಿನ ತಾತ್ವಿಕವಾಗಿ ನೆಹರೂ ಅವರನ್ನು ಒಪ್ಪದವರ ವೇದಿಕೆಯಲ್ಲಿಯೂ ಇದನ್ನು ಹೇಳಿದ್ದೇನೆ. ಇವತ್ತು ತಾತ್ವಿಕವಾಗಿ ನೆಹರೂ ಅವರನ್ನು ಒಪ್ಪುವವರ ವೇದಿಕೆಯಲ್ಲೂ ಇದನ್ನು ಹೇಳುತ್ತಿದ್ದೇನೆ. ನಾನು ಅಧ್ಯಾಪಕ. ನನ್ನೆದುರಿಗಿರುವ ವಿದ್ಯಾರ್ಥಿಗಳು ಯಾವ ಜಾತಿ ಧರ್ಮ ಪಕ್ಷದವರೇ ಇದ್ದರೂ ಅವರೆಲ್ಲರೂ ನನಗೆ ಸಮಾನರು. ಆ ನೆಲೆಯಲ್ಲೆ ನನ್ನ ಮಾತುಗಳು ಇರುತ್ತವೆ. ನೆಹರೂ ಅವರ ಕುರಿತ ನನ್ನ ಮೆಚ್ಚುಗೆ ಮತ್ತು ಟೀಕೆಗಳೆರಡೂ ಶುದ್ಧ ವೈಚಾರಿಕ ನೆಲೆಗಟ್ಟಿನದ್ದಾಗಿರುತ್ತದೆ.‌ ಅದನ್ನು ರಾಜಕೀಯ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಾರದೆಂದು ವಿನಂತಿಸುತ್ತಿದ್ದೇನೆ.

ರಮಾನಾಥ ರೈ ಅವರು ಕ್ಯಾಬಿನೆಟ್ ಸಚಿವರಾಗಿದ್ದವರು. ಇಬ್ರಾಹಿಂ ಅವರು ಜಿಲ್ಲಾಧಿಕಾರಿಗಳಾಗಿದ್ದವರು. ಶಕುಂತಲಾ ಶೆಟ್ರು ಶಾಸಕರಾಗಿದ್ದವರು. ನಾನು ಹೈಸ್ಕೂಲ್ ಅಧ್ಯಾಪಕ. ಆದರೆ ನಾವೆಲ್ಲರೂ ಒಂದೇ ವೇದಿಕೆಯಲ್ಲಿ ಕೂತಿದ್ದೇವೆ. ಇದೇ ಪ್ರಜಾಪ್ರಭುತ್ವದ ಶ್ರೇಷ್ಠತೆ. ಮತ್ತು ಇದು ಪ್ರಜಾಪ್ರಭುತ್ವದಲ್ಲಿ ಮಾತ್ರವೇ ಸಾಧ್ಯವಾಗುವುದು. ಜವಾಹರ ಲಾಲ್ ನೆಹರೂ ಅವರಿಗೆ ಸಂಬಂಧಿಸಿ ಒಂದು ದಂತ ಕಥೆ ಇದೆ. ಒಮ್ಮೆ ನೆಹರೂ ಕೊಳೆಗೇರಿಗೆ ಹೋಗಿ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡಿ ಬರುವಾಗ ಒಬ್ಬ ಅಜ್ಜಿ ಕಾರಿಗೆ ಅಡ್ಡ ನಿಂತು,” ನಿಮ್ಮ ಪ್ರಜಾಪ್ರಭುತ್ವ ನಮ್ಮಂಥವರಿಗೆ ಏನನ್ನು ಕೊಟ್ಟಿದೆ?” ಎಂದು ಕೇಳಿದರಂತೆ. ಆಗ ನೆಹರೂ,” ನಿಮ್ಮ‌ ಸ್ಥಿತಿಯನ್ನು ಪ್ರಜಾಪ್ರಭುತ್ವ ಉತ್ತಮೀಕರಿಸಲಿಲ್ಲ ಎಂದು ಒಪ್ಪುತ್ತೇನೆ. ಆದರೆ ಕೊಳೆಗೇರಿಯ ಒಬ್ಬ ಅಜ್ಜಿಗೆ ಈ ದೇಶದ ಪ್ರಧಾನ ಮಂತ್ರಿಯ ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಪ್ರಧಾನಿಯನ್ನು ಕಾರಿನಿಂದ ಇಳಿಸಿ ಹೀಗೆ ಕೇಳುವ ಶಕ್ತಿಯನ್ನು ಪ್ರಜಾಪ್ರಭುತ್ವ ಕೊಟ್ಟಿದೆ” ಎಂದರಂತೆ. ” ನೆಹರೂ ಅವರಲ್ಲಿಯೂ ಸರ್ವಾಧಿಕಾರಿ ಗುಣಗಳಿದ್ದವು. ಆದರೆ ತಕ್ಷಣ ಅವರು ತಿದ್ದಿಕೊಂಡು ಡೆಮಾಕ್ರಟಿಕ್ ಆಗುತ್ತಿದ್ದರು” ಎಂದು ನೆಹರೂ ಅವರ ಒಡನಾಡಿ ರಾಮಧಾರಿ ಸಿಂಹ ಬರೆದಿದ್ದಾರೆ. ” ಚೇಂಬರ್ಲಿನ್ ಮತ್ತು ಚರ್ಚಿಲ್ ಇಬ್ಬರೂ ನಿಮ್ಮೊಬ್ಬರ ಒಳಗೇ ಇದ್ದಾರೆ ಎಂದು ನೆಹರೂ ಅವರಿಗೆ ಹೇಳಿದ್ದೆ. ಅವರು ನಗುನಗುತ್ತಾ ಹೋದರು” ಎಂದು ವಾಜಪೇಯಿ ಅವರೂ ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ಆಗಿಂದಾಗ್ಗೆ ಮಿಲಿಟರಿ ಆಡಳಿತ ಬಂದರೂ ಭಾರತ ಪ್ರಜಾಪ್ರಭುತ್ವದಲ್ಲೆ ಸ್ಥಿರವಾಗಿ ಇಂದಿಗೂ ಉಳಿದಿರುವುದರಲ್ಲಿ ನೆಹರೂ ಅವರು ರೂಪಿಸಿದ ಸಶಕ್ತ ವ್ಯವಸ್ಥೆಯ ಕೊಡುಗೆಯೂ ಖಂಡಿತವಾಗಿ ಇದೆ. ಬಹುಶಃ ಆನಂದ ಭವನ ಎಸ್ಟೇಟ್‌ನ ಅರಮನೆಯಂಥ ಮನೆಯಲ್ಲಿ ಬೆಳೆದ ಆಗರ್ಭ ಶ್ರೀಮಂತ ಬಾಲಕ, ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸಿ ಲಾಠಿ ಏಟು ತಿಂದು ಮೂರ್ಛೆ ತಪ್ಪಿ ಬಿದ್ದ ಸ್ಥಿತಿಯ ಸ್ವಾನುಭವದ ಯಾನ, 9 ವರ್ಷಗಳ ದೀರ್ಘ ಸೆರೆವಾಸ ಮತ್ತು ಆಳವಾದ ಅಧ್ಯಯನಗಳು ನೆಹರೂ ಅವರ ಈ ದೃಷ್ಟಿಕೋನವನ್ನು ರೂಪಿಸಿತ್ತು ಎಂದು ನಾನು ಭಾವಿಸುತ್ತೇನೆ.

ನೆಹರೂ ಅವರ ವಿಷಯದಲ್ಲಿ ನನ್ನ ತಂದೆ ಸ್ವಲ್ಪ ಭಾವುಕರಾಗಿದ್ದರು. ನನ್ನ ತಂದೆ ಶಾಲೆಗೆ ಹೋಗುತ್ತಿದ್ದಾಗ ನೆಹರೂ ಅವರು ಮೈಸೂರಿನಿಂದ ಮಂಗಳೂರಿಗೆ ಜೀಪ್‌ನಲ್ಲಿ ಬರುವವರನ್ನು ಅರ್ಧ ದಾರಿಯಲ್ಲಿ ಸ್ವಾಗತಿಸಲು ಮಕ್ಕಳನ್ನು ಸಾಲಾಗಿ ನಿಲ್ಲಿಸಿದ್ದರಂತೆ. “ನಾನು ಇದೇ ಕೈಯಲ್ಲಿ ನೆಹರೂ ಅವರಿಗೆ ಹೂವು ಕೊಟ್ಟಿದ್ದೇನೆ. ಅವರು ನನ್ನ ಕೆನ್ನೆ ತಟ್ಟಿದ್ದಾರೆ” ಎಂದು ನನ್ನ ತಂದೆ ಬದುಕಿರುವ ವರೆಗೂ ಆಗಾಗ ಹೇಳುತ್ತಿದ್ದರು. ಭಾಷಣಕ್ಕೆ ನೀವು ನನ್ನನ್ನು ಕರೆದಾಗ ನನಗೆ ಮೊದಲು ನೆನಪಾದದ್ದು ನನ್ನ ತಂದೆ ಹೂವು ಕೊಟ್ಟ ಪ್ರಕರಣವೇ. ಇದನ್ನು ಯಾಕೆ ಹೇಳಿದೆ ಎಂದರೆ ಜನರ ಮನದಲ್ಲಿ ನಿಲ್ಲುವ ಹಾಗೆ ಸ್ಪಂದಿಸುವ ಶಕ್ತಿ ನೆಹರೂ ಅವರಿಗೆ ಇತ್ತು. ರಾಮಧಾರಿ ಸಿಂಹ ಅವರು ಭಾರತದ ಜನರು ವ್ಯಾಪಕವಾಗಿ ಆದರಿಸಿದ್ದು ಗಾಂಧಿ, ರಾಮಕೃಷ್ಣ ಪರಮಹಂಸರಂತಹ ಧಾರ್ಮಿಕ ನೆಲೆಗಟ್ಟಿನವರನ್ನೆ. ಧಾರ್ಮಿಕ ನೆಲೆಗಟ್ಟನ್ನು ಕೈಬಿಟ್ಟ ಒಬ್ಬ ವ್ಯಕ್ತಿಯನ್ನು ಭಾರತೀಯರು ವ್ಯಾಪಕವಾಗಿ ಆದರಿಸಿದ್ದರೆ ಅದು ನೆಹರೂ ಒಬ್ಬರೇ ಎಂದು ಬರೆದಿದ್ದಾರೆ.

ನೆಹರೂ ಅವರ ಪೂರ್ವೀಕರಾದ ರಾಜ್ ಕೌಲ್ ಎಂಬವರು ಬದುಕಿನ ಭವಿಷ್ಯವನ್ನು ಅರಸುತ್ತಾ ಕಾಶ್ಮೀರ ಕಣಿವೆಯಿಂದ ಬಯಲು ಪ್ರದೇಶಕ್ಕೆ ಬಂದವರು. ಆಗ ಕಾಶ್ಮೀರಕ್ಕೆ ಹೋಗಿದ್ದ ಮೊಘಲ್ ಬಾದ್‌ಶಹ ಫರೂಕ್ ಶಿಯಾರ್, ರಾಜ್ ಕೌಲ್ ಅವರಿಗೆ ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಯ ಮೇಲಿದ್ದ ಅಪಾರ ಪಾಂಡಿತ್ಯವನ್ನು ಗೌರವಿಸಿ ಇಡೀ ಕುಟುಂಬವನ್ನು 1716 ರಲ್ಲಿ ದೆಹಲಿಗೆ ಕರೆತಂದು ‘ ನಹರ್’ ನಲ್ಲಿ ಜಹಗೀರು ಕೊಟ್ಟಿದ್ದರು. ಆದರೆ ಆ ಜಹಗೀರು ಶಾಶ್ವತವಾಗಿ ಉಳಿಯಲಿಲ್ಲ.‌ ಜವಾಹರರ ಮುತ್ತಜ್ಜ ಲಕ್ಷ್ಮೀನಾರಾಯಣ ನೆಹರೂ ‘ಕಂಪನಿ ಸರಕಾರ’ ದಲ್ಲಿ ವಕೀಲರಾಗಿದ್ದರು. 1857 ರ ಕ್ರಾಂತಿಯಲ್ಲಿ ನೆಹರೂ ಕುಟುಂಬದ ಸರ್ವಸ್ವವೂ ನಾಶವಾಗಿ, ಆಸ್ತಿಯ ದಾಖಲೆ- ಪತ್ರಗಳೂ ಕಳೆದುಹೋಗಿ ಕುಟುಂಬ ಆಗ್ರಾಕ್ಕೆ ಹೋಗಿ ನೆಲೆಯಾಯಿತು. ಜವಾಹರರ ಅಜ್ಜ ಗಂಗಾಧರ ನೆಹರೂ ಕೋತ್ವಾಲರಾಗಿದ್ದರು. ಆದರೆ 34 ನೆಯ ವಯಸ್ಸಿನಲ್ಲೆ ಅವರು ತೀರಿಕೊಂಡರು. ಜವಾಹರರ ತಂದೆ ಮೋತೀಲಾಲ್ ನೆಹರೂ ಅವರು ತಮ್ಮ ಇಬ್ಬರು ಅಣ್ಣಂದಿರಾದ ಬನ್ಸಿಧರ್ ನೆಹರೂ ಮತ್ತು ನಂದ ಲಾಲ್ ನೆಹರೂ ಅವರಿಗಿಂತ ತೀರಾ ಕಿರಿಯರು. ಒಮ್ಮೆ ಜವಾಹರರ ದೊಡ್ಡಪ್ಪಂದಿರು ತಂಗಿಯೊಂದಿಗೆ ಡೆಲ್ಲಿಯಿಂದ ಆಗ್ರಾಕ್ಕೆ ಹೋಗುವ ದಾರಿಯಲ್ಲಿ ಇಂಗ್ಲಿಷ್ ಸೈನಿಕರಿಗೆ ಸಿಕ್ಕಿ ಅವರ ತಂಗಿಯನ್ನು ಇಂಗ್ಲಿಷರ ಹುಡುಗಿ ಎಂದು ಭಾವಿಸಿ ಆಕೆಯನ್ನು ಇವರು ಅಪಹರಣ ಮಾಡಿದ್ದಾರೆ ಎಂದು ಜವಾಹರರ ದೊಡ್ಡಪ್ಪಂದಿರನ್ನು ಗಲ್ಲಿಗೇರಿಸಲು ಹೊರಟಿದ್ದರಂತೆ. ಆಗ ಯಾರೋ ಪರಿಚಯದವರು ಸಿಕ್ಕಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರಿಂದ ಬಚಾವಾದರು. ಜವಾಹರರ ಎಲ್ಲ ಶ್ರೀಮಂತಿಕೆಯೂ ಅವರ ತಂದೆ ಮೋತೀಲಾಲ್ ನೆಹರೂ ವಕೀಲರಾಗಿ ಸಂಪಾದಿಸಿದ್ದಾಗಿತ್ತು.‌ ಜವಾಹರರು ಬಾಲಕರಾಗಿದ್ದಾಗಲೇ ಅವರ ಬಟ್ಟೆಗಳು ಫ್ರಾನ್ಸಿಗೆ ಹೋಗಿ ಇಸ್ತ್ರೀ ಆಗಿ ಬರುತ್ತಿದ್ದವಂತೆ!

ಇಷ್ಟೊಂದು ಶ್ರೀಮಂತರಾಗಿದ್ದ ನೆಹರೂ ತಾರುಣ್ಯದಲ್ಲಿಯೇ ಅನ್ನಿಬೆಸೆಂಟ್ ಅವರ ಥಿಯೋಸೊಫಿಕಲ್ ಸೊಸೈಟಿಯ ಪ್ರಭಾವಕ್ಕೆ ಒಳಗಾದರು.‌ ಹೋಂರೂಲ್ ಚಳವಳಿಗೂ ಅವರು ಹೋಗಿದ್ದರು. ಆದರೆ ಅದು ನೆಹರೂ ಅವರ ಬೆಳವಣಿಗೆಯ ಮೆಟ್ಟಿಲಾಯಿತೆ ಹೊರತು ಥಿಯೋಸೊಫಿಗೇ ಅವರು ಸ್ಥಿರವಾಗಲಿಲ್ಲ. ಆದರೆ ಥಿಯೊಸೊಫಿಕಲ್ ಸೊಸೈಟಿಯ ಸಂಪರ್ಕದಿಂದಾಗಿ ನೆಹರೂ ಅವರು ಹಿಂದೂ ಮತ್ತು ಬೌದ್ಧ ಧಾರ್ಮಿಕ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದರು. 16 ನೆಯ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಹ್ಯಾರೋ ಸ್ಕೂಲ್‌ನ ವಿದ್ಯಾರ್ಥಿಯಾದರು. ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ನಡೆಸಿದ ಅಪಾರ ಓದಿನ ಪರಿಣಾಮ ಅವರು ಫೇಬಿಯನ್ ಸಮಾಜವಾದಿಯಾಗಲು ಕಾರಣವಾಯಿತು. ಸಮಾಜವಾದ ಎಂದ ಕೂಡಲೇ ಮಾರ್ಕ್ಸ್ವಾದ ಎಂದುಕೊಳ್ಳಬಾರದು. ಹಲವು ಸಮಾಜ ವಾದಗಳಿವೆ. ಫೇಬಿಯನ್ ಸಮಾಜ ವಾದ, ಹೆಗೆಲಿಯನ್ ಸಮಾಜ ವಾದ, ಲೋಹಿಯಾ ವಾದ, ಅಂಬೇಡ್ಕರ್‌ವಾದ, ವೈದಿಕ ಸಮಾಜ ವಾದ- ಹೀಗೆ ಹಲವು ರೂಪಗಳ ಸಮಾಜ ವಾದಗಳಿವೆ.

ಭಾರತಕ್ಕೆ ಹಿಂದಿರುಗಿದ ನಂತರ 1912 ರಲ್ಲಿ ಅವರು ಪಾಟ್ಣಾದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ ಅಧಿವೇಷನದಲ್ಲಿ ಭಾಗವಹಿಸಿದ್ದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗುವ ಮೊದಲೇ ನೆಹರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾವಹಿಸಿದ್ದರು. ಮಂದ ಗಾಮಿಗಳು ಅವರಿಗೆ ಆಗಿಬರಲಿಲ್ಲ. ತೀವ್ರಗಾಮಿಗಳ ನಾಯಕ ಬಾಲಗಂಗಾಧರ ತಿಲಕರೇ ನೆಹರೂ ಅವರ ನಾಯಕ.

ನೆಹರೂ ಅವರು ಗಾಂಧೀಜಿಯವರೊಂದಿಗೆ ಸೇರಿದ ಮೇಲೆ ಅವರಲ್ಲಿ ಎರಡು ನಡೆಯನ್ನು ಗುರುತಿಸಬಹುದು. ಒಂದು ಗಾಂಧಿಯವರನ್ನು ಅನುಸರಿಸುವವನಾಗಿ ಮಾಂಸಾಹಾರವನ್ನು ಬಿಡುವುದು, ಸಿಗರೇಟು ಸೇದುವುದನ್ನು ಬಿಡುವುದು ಇತ್ಯಾದಿ. ಆದರೆ ಹೆಚ್ಚು ಕಾಲ ಬಿಡಲು ಆಗದೆ ಪುನಃ ಶುರು ಮಾಡಿದರು. ನಂತರದ ದಿನಗಳಲ್ಲಿ ಯಾವತ್ತಾದರೂ ಚಿಕನ್ ತಿಂದರೆ ಆಯಿತು ಎನ್ನುವಷ್ಟು ಮಾಂಸಾಹಾರವನ್ನು ಕಡಿಮೆ ಮಾಡಿದ್ದರು.‌ ಒಂದು ಸಿಗರೇಟನ್ನು ಎರಡು ತುಂಡು ಮಾಡಿ ಸೇದಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ವರೆಗೆ ತಲುಪಿದರು. ಅಂದರೆ ಗಾಂಧೀಜಿಯವರನ್ನು ಅನುಸರಿಸಿ ನೆಹರೂ ಅವರು ನಿಗ್ರಹ ಮಾಡಿಕೊಂಡ ಪ್ರಯತ್ನಗಳು ಹೀಗಿದ್ದವು.‌ ಎರಡನೆಯದು ಗಾಂಧೀಜಿಯವರಿಗೆ ವಿರುದ್ಧವಾದ ನಡೆಗಳು. ಚೌರಿ ಚೌರದಲ್ಲಿ ಸತ್ಯಾಗ್ರಹಿಗಳು ಹಿಂಸೆಗೆ ಇಳಿದರೆಂದು ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂತೆಗೆದುಕೊಂಡಾಗ ನೆಹರೂ ಗಾಂಧೀಜಿಯನ್ನು ಖಂಡಿಸಿದ್ದರು. ಆಗಿನ ಸ್ವಾತಂತ್ರ್ಯ ಹೋರಾಟವೆಂದರೆ ಪೂರ್ಣ ಸ್ವರಾಜ್ಯದ ಹೋರಾಟವಾಗಿರಲಿಲ್ಲ. ಡೊಮಿನಿಯನ್ ಸ್ಥಾನಮಾನಕ್ಕಾಗಿನ ಹೋರಾಟವಾಗಿತ್ತು.

ಡೊಮಿನಿಯನ್ ಸ್ಥಾನಮಾನ ಎಂದರೆ ಭಾರತವನ್ನು ಭಾರತೀಯರೇ ಆಳುತ್ತಾರೆ. ಆದರೆ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಒಳಗೆಯೇ ಇರುತ್ತದೆ. ಹೀಗಿರುವ ವ್ಯವಸ್ಥೆ ಅದು. 1947 ಆಗಸ್ಟ್ 15 ರಿಂದ 1950 ಜನವರಿ 25 ರ ವರೆಗೆ ಇದ್ದ ಮಾದರಿಯದ್ದು. ಈ ಅವಧಿಯಲ್ಲಿ ನೆಹರೂ ಅವರು ಆರನೆಯ ಆರ್ಥರ್ ಲೂಯಿಸ್ ಫ್ರೆಡ್ರಿಕ್ ಜಾರ್ಜ್ ಅವರ ಭಾರತ ಡೊಮಿನಿಯನ್‌ನ ಪ್ರಧಾನ ಮಂತ್ರಿ ಎಂದು ಅಫೀಶಿಯಲ್ ಡೆಸಿಗ್ನೇಷನ್ ಹೊಂದಿದ್ದರು. ಭಾರತ ಸಂವಿಧಾನ ಜಾರಿಗೆ ಬಂದ ಮೇಲೆಯೇ ಬ್ರಿಟನ್ ನೊಂದಿಗಿನ ಎಲ್ಲ ಸಂಬಂಧಗಳು ತುಂಡಾದದ್ದು.

ಗಾಂಧೀಜಿಯವರ ವರೆಗೆ ಡೊಮಿನಿಯನ್ ಸ್ಥಾನ ಮಾನದ ಹೋರಾಟವೇ ಇತ್ತು. ಗಾಂಧೀಜಿಯವರ ಇಚ್ಛೆಗೆ ವಿರುದ್ಧವಾಗಿ ನೆಹರೂ ಅವರು ಕಾಂಗ್ರೆಸ್ಸಿನ ಮದ್ರಾಸ್ ಅಧಿವೇಷನದಲ್ಲಿ ಪೂರ್ಣ ಸ್ವರಾಜ್ಯದ ನಡವಳಿಯನ್ನು ಮಂಡಿಸಿದ್ದರು. ಕಡೆಗೂ ಅದು ಪೂರ್ಣ ಸ್ವರಾಜ್ಯದ ಹೋರಾಟವಾಗಿ ಅಧಿಕೃತ ಸ್ವರೂಪವನ್ನು ಪಡೆದದ್ದು ನೆಹರೂ ಅವರೇ ಅಧ್ಯಕ್ಷರಾಗಿದ್ದ 1929 ರ ಲಾಹೋರ್ ಕಾಂಗ್ರೆಸ್ ಅಧಿವೇಷನಲ್ಲಿ. ಜನವರಿ 26ನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಯಿತು. ಅದರ ನೆನಪಿಗಾಗಿ 1950 ರಲ್ಲಿ ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರಲಾಯಿತು. ಆಗ ಕಾಂಗ್ರೆಸ್‌ನಲ್ಲಿ ಜವಾಹರ ಲಾಲ್ ನೆಹರೂ ಮತ್ತು ಸುಭಾಸ್ ಚಂದ್ರಭೋಸರು ಆಪ್ತ ಮಿತ್ರರಾಗಿದ್ದು ಒಂದೇ ಸಮಾಜವಾದಿ ಧೋರಣೆಯನ್ನು ಹೊಂದಿದ್ದರು. ಹಲವು ಬಾರಿ ಭೋಸ್- ಗಾಂಧಿ ಜಗಳಗಳನ್ನು ಪರಿಹರಿಸಿದವರೂ ನೆಹರೂ ಅವರೇ. ಆದರೆ ನೆಹರೂ ಅವರಲ್ಲಿ ಸ್ವಲ್ಪ ಹೊಂದಾಣಿಕೆಯ ಧೋರಣೆ ಇದ್ದುದರಿಂದ ಗಾಂಧೀಜಿಯವರನ್ನು ಬಿಟ್ಟು ಹೋಗಲಿಲ್ಲ. ಈ ಸಂಕೀರ್ಣ ದೇಶದ ನಿರ್ವಹಣೆಗೆ ಬೇಕಾದ ಹೊಂದಾಣಿಕೆಯ ಪ್ರವೃತ್ತಿ ನೆಹರೂ ಅವರಲ್ಲಿ ಹೇಗೆ ಇತ್ತು ಎನ್ನುವುದಕ್ಕೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ. ಮೊದಲನೆಯದು ನೆಹರೂ ಅವರು ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಬಗ್ಗೆ ಬಹಳ ಗೌರವ ಇರಿಸಿಕೊಂಡಿದ್ದವರು. ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಬೇಕೆಂದು ಅವರು ಪ್ರಯತ್ನಿಸಿದ್ದರು. ಆದರೆ ಹಿಂದಿ ಭಾಷಿಕರಲ್ಲದ ರಾಜ್ಯಗಳವರು ಅದನ್ನು ವಿರೋಧಿಸಿದಾಗ ಹಿಂದಿಯನ್ನು ಭಾರತ ಸರಕಾರದ ಅಧಿಕೃತ ಭಾಷೆಯಾಗಿ ಮಾಡಿ 15 ವರ್ಷಗಳ ವರೆಗೆ ಇಂಗ್ಲಿಷ್ ಅನ್ನೆ ಸಂಪರ್ಕ ಭಾಷೆಯಾಗಿ ಘೋಷಿಸಿದರು. 1963 ರ ಅಧಿಕೃತ ಭಾಷಾ ಕಾಯ್ದೆಯ ಪ್ರಕಾರ ಇಂಗ್ಲಿಷನ್ನು ಮತ್ತೆಯೂ ಸಂಪರ್ಕ ಭಾಷೆಯಾಗಿ ಮುಂದುವರಿಸಿದರು.

ಎರಡನೆಯದು ಸ್ವಾರಸ್ಯದ ವಿಷಯ. ಆಗಸ್ಟ್ 14 ರ ಮಧ್ಯ ರಾತ್ರಿ ಸ್ವಾತಂತ್ರ್ಯ ಯಾಕೆ ಬಂತು ಎಂದು ಹಲವರಿಗೆ ಗೊತ್ತಿಲ್ಲ. ಭಾರತಕ್ಕೆ ಬರುವ ಮೊದಲು ಜಪಾನ್ ನಲ್ಲಿ ಕಮಾಂಡರ್ ಆಗಿದ್ದ ಮೌಂಟ್ ಬ್ಯಾಟನ್ ಅವರಿಗೆ ಜಪಾನ್ ಶರಣಾದದ್ದು ಆಗಸ್ಟ್ 15ರಂದು. ಆದ್ದರಿಂದ ತನ್ನ ‘ಲಕ್ಕಿ ಡೇ ‘ ಆದ ಆಗಸ್ಟ್ 15 ರಂದೇ ಅಧಿಕಾರ ಹಸ್ತಾಂತರ ಮಾಡುತ್ತೇನೆ ಎಂದು ಮೌಂಟ್ ಬ್ಯಾಟನ್ ಅವರ ನಿರ್ಧಾರವಾಗಿತ್ತು. ಆಗಸ್ಟ್ 15 ರಂದು ಒಳ್ಳೆಯ ಮುಹೂರ್ತವೇ ಇಲ್ಲ; ಆ ದಿವಸ ಬೇಡವೇ ಬೇಡ ಎಂದು ಭಾರತದ ಜ್ಯೋತಿಷಿಗಳ ಒತ್ತಾಯವಾಗಿತ್ತು. ನೆಹರೂ ಅವರು ಈ ಜ್ಯೋತಿಷ್ಯವನ್ನಾಗಲಿ, ಲಕ್ಕಿ ಡೇಯನ್ನಾಗಲಿ ನಂಬುವವರಲ್ಲ. ಆದರೆ ಸನ್ನಿವೇಶಕ್ಕೆ ಅವರು ಎರಡೂ ತಂಡಗಳಿಗೆ ಸ್ಪಂದಿಸಿದರು. ಆಗಸ್ಟ್ 14 ರಾತ್ರಿ 12 ಗಂಟೆಯಾದರೆ ಮೌಂಟ್ ಬ್ಯಾಟನ್ ಅವರಿಗೆ 15 ನೆಯ ತಾರೀಕು ಬಂದಾಯಿತು. ಜ್ಯೋತಿಷಿಗಳಿಗೆ 15 ರ ಸೂರ್ಯೋದಯ ಆಗುವ ವರೆಗೂ ಹದಿನಾಲ್ಕೇ. ಈ ಸೂತ್ರದಲ್ಲಿ ಮುಹೂರ್ತ ಹುಡುಕಿದಾಗ 14 ರ ಮಧ್ಯ ರಾತ್ರಿ 11.51 ರಿಂದ 12.39 ರ ನಡುವೆ ಒಳ್ಳೆಯ ಮುಹೂರ್ತ ಇದೆ ಎಂದಾಯಿತು. ಆಗಲೂ ಕೂಡ ಅಧಿಕಾರ ಹಸ್ತಾಂತರ ಆಗಿ ನೆಹರೂ ಅವರ ಭಾಷಣವನ್ನು 3 ನಿಮಿಷ ನಿಲ್ಲಿಸಬೇಕು; ನಮಗೆ ಶಂಖ ಊದಲಿಕ್ಕಿದೆ ಎಂದಾಯಿತು. ಅದಕ್ಕೂ ನೆಹರೂ ಅವರು ಒಪ್ಪಿಕೊಂಡರು.

ನೆಹರೂ ಅವರ ಬಗ್ಗೆ ಅವರು ಮುಸ್ಲಿಂ‌ ಓಲೈಕೆ ಮಾಡಿದರು ಎಂಬ ಆರೋಪ ಇದೆ. ವಾಸ್ತವಿಕವಾಗಿ ಅದು ಹಾಗಲ್ಲ.‌ ಗಾಂಧೀಜಿಯಾಗಲಿ, ನೆಹರೂ ಆಗಲಿ ಮನುಷ್ಯರನ್ನು ಹಿಂದೂ, ಮುಸ್ಲಿಂ ಎಂದು ಪ್ರತ್ಯೇಕಿಸಲಿಲ್ಲ. ಅವರನ್ನು ಮನುಷ್ಯರನ್ನಾಗಿಯೇ ನೋಡಿದರು. ಸಮಾನ ನಾಗರಿಕ ಸಂಹಿತೆಯನ್ನು ಸಂವಿಧಾನಕ್ಕೆ ಸೇರಿಸಲು ಹೊರಟವರೇ ನೆಹರೂ ಮತ್ತು 15 ಮಂದಿ ಮಹಿಳಾ ಸದಸ್ಯರು. ಅದಕ್ಕೆ ಮುಸ್ಲಿಮರ ಕಡೆಯಿಂದ ತೀವ್ರ ಪ್ರತಿಭಟನೆ ಬಂದಾಗ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಹುಟ್ಟುವುದು ಬೇಡ ಎನ್ನುವ ಕಾರಣಕ್ಕಾಗಿ ಸಮಾನ ನಾಗರಿಕ ಸಂಹಿತೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಅದನ್ನು ರಾಜ್ಯ ನಿರ್ದೇಶಕ ತತ್ವಗಳಿಗೆ ಅಳವಡಿಸಲಾಯಿತು. ಆದರೆ ಮುಸ್ಲಿಂ ಲೀಗಿನ ರಾಜಕೀಯವನ್ನು ಎದುರಿಸುವುದರಲ್ಲಿ ನೆಹರೂ ಅವರು ಯಾವ ಮೃದು ಧೋರಣೆಯನ್ನೂ ಅನುಸರಿಸಲಿಲ್ಲ.‌ ಇದು ಅರ್ಥವಾಗಬೇಕಾದರೆ ಕ್ಯಾಬಿನೆಟ್ ನಿಯೋಗದ ಯೋಜನೆಯನ್ನು ಅರ್ಥ ಮಾಡಿಕೊಳ್ಳಬೇಕು.

ಸಂವಿಧಾನ ರಚನಾ ಸಭೆಯನ್ನು ರೂಪಿಸಿದ, ಪೆಥಿಕ್ ಲಾರೆನ್ಸ್, ಸ್ಟಾಫರ್ಡ್ ಕ್ರಿಪ್ಸ್, ಎ. ವಿ. ಅಲೆಕ್ಸಾಂಡರ್ ಸದಸ್ಯರಾಗಿದ್ದ ಕ್ಯಾಬಿನೆಟ್ ನಿಯೋಗವು, ದೇಶ ವಿಭಜನೆಯನ್ನು ಮಾಡದೆಯೇ ಮುಸ್ಲಿಮ್ ಲೀಗ್ ಬಯಸಿದ್ದನ್ನು ಕೊಡುವ ಯೋಜನೆಯನ್ನು ಹೇಳಿತ್ತು. ಅದರ ಪ್ರಕಾರ ಭಾರತವನ್ನು ಮೂರು ಘಟಕಗಳಾಗಿ ಮಾಡಿ ಸ್ವಾತಂತ್ರ್ಯ ಕೊಡುವುದು. ಈಗಿನ ಪಂಜಾಬ್ ಮತ್ತು ಪಾಕಿಸ್ಥಾನ ಒಂದು ಘಟಕ. ಈಗಿನ ಬಾಂಗ್ಲಾ ದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಎಲ್ಲ ಇನ್ನೊಂದು ಘಟಕ. ಇವು ಮುಸ್ಲಿಮ್ ಲೀಗಿಗೆ. ಉಳಿದ ದೆಹಲಿ ಕೇಂದ್ರಿತ ಪ್ರಧಾನ ಭಾಗಗಳು ಒಂದು ಘಟಕ. ಇದು ಕಾಂಗ್ರೆಸ್ ಕೈಗೆ ಕೊಡುವ ಭಾಗ. ಆದರೆ ಕಾಂಗ್ರೆಸ್ ನ ಕೈಗೆ ಕೊಡುವ ಪ್ರಧಾನ ಭಾಗದ ಆಡಳಿತಕ್ಕೆ ಮುಸ್ಲಿಂ‌ ಲೀಗಿನ ಕೈಗೆ ಕೊಡುವ ಭಾಗದಲ್ಲಿ ಸಂಚರಿಸುವ ಸ್ವಾತಂತ್ರ್ಯ, ವಿದೇಶಾಂಗ ನೀತಿ ಮತ್ತು ರಕ್ಷಣೆಯನ್ನು ಬಿಟ್ಟರೆ ಬೇರೆ ಯಾವ ಅಧಿಕಾರವೂ ಇಲ್ಲ. ಈ ನೀತಿಯನ್ನು ಒಪ್ಪಿಕೊಂಡೇ ಮೊದಲು ಮುಸ್ಲಿಂ ಲೀಗ್ ಸದಸ್ಯರೂ ಸೇರಿದ್ದ ಸಂವಿಧಾನ ರಚನಾ ಸಭೆ ನಡೆದದ್ದಾಗಿತ್ತು. ಆದರೆ ಕೇಂದ್ರ ಸರಕಾರಕ್ಕೆ ಯಾವ ಅಧಿಕಾರವೂ ಇಲ್ಲದ ಈ ಮಾದರಿಯಿಂದ ಭಾರತ ಹೊರಗಿನಿಂದ ಒಂದೇ ದೇಶವಾಗಿಯೂ ಒಳಗಿನಿಂದ ವಿಭಜಿತವಾಗಿ ಪ್ರತಿನಿತ್ಯ ಬಡಿದಾಟದ ಕೇಂದ್ರವೂ ಆಗುವ ರಾಷ್ಟ್ರವಾಗಲಿದೆ ಎಂದು ವಿಶ್ಲೇಷಿಸಿದ ನೆಹರೂ ಅವರು,” ಮುಂದೆ ಇದನ್ನು ಪರಿಷ್ಕರಿಸುವ ಅಧಿಕಾರ ಕಾಂಗ್ರೆಸ್ಸಿಗಿದೆ” ಎಂದು ಹೇಳಿಕೆ ಕೊಟ್ಟರು. ತಕ್ಷಣ ಮುಸ್ಲಿಂ‌ ಲೀಗ್ ದೇಶ ವಿಭಜನೆ ಆಗಲೇ ಬೇಕು ಎಂದು ಗಲಾಟೆ ಶುರು ಮಾಡಿತು.‌ ಆಗ ಎಷ್ಟು ಮಾತ್ರಕ್ಕೂ ದೇಶ ವಿಭಜನೆ ಆಗಬಾರದು ಎನ್ನುವ ಗಾಂಧೀಜಿಗೆ ಕಿರಿಕಿರಿ ಶುರುವಾಯಿತು. ಆದರೆ ಬೇಡಿಕೆಯಲ್ಲಿ ಹಿಂದಕ್ಕೆ ಬರಲು ಮುಸ್ಲಿಂ ಲೀಗ್ ತಯಾರಿಲ್ಲ. ಆಗ ವೈಸರಾಯ್ ವವೆಲ್ ಒಂದು ಸೂತ್ರವನ್ನು ಮಂಡಿಸಿದರು. ವವೆಲ್ ಎಂದರೆ ಮುಸ್ಲಿಂ ಲೀಗ್ ಹೇಳಿದ ಹಾಗೆ ಕೇಳುವವರಾಗಿದ್ದರು. ನೇರ ಕಾರ್ಯಾಚರಣೆ ಘೋಷಣೆಯಾದಾಗ ನಡೆದ ಹತ್ಯೆಗಳನ್ನು ಪೊಲೀಸರು ಕಂಡೂ ಕಾಣದ ಹಾಗೆ ವರ್ತಿಸುವಂತೆ ಮಾಡಿದವರು ವವೆಲ್. ವವೆಲ್ ಅವರು ಗಾಂಧೀಜಿ ಮತ್ತು ನೆಹರೂ ಇಬ್ಬರನ್ನೂ ಕರೆಸಿ ಮಂಡಿಸಿದ ಸೂತ್ರ ಏನು ಎಂದರೆ, ಮೂರು ಘಟಕಗಳು ಮೊದಲಿನ ಹಾಗೆಯೇ. ಆದರೆ ಕೇಂದ್ರ ಶಾಸನ ಸಭೆಯಲ್ಲಿ ಮುಸ್ಲಿಂ ಲೀಗಿಗೆ ವಿಟೋ ಅಧಿಕಾರ ಇರುತ್ತದೆ.‌ ಸಂಸತ್ತು ಸರ್ವಾನುಮತದಿಂದ ಮಾಡಿದ ತೀರ್ಮಾನವನ್ನು ಕೂಡ ಮುಸ್ಲಿಂ ಲೀಗ್ ಒಂದು ಓಟ್ ನಿಂದ ರದ್ದುಪಡಿಸಬಹುದು. ಈ ಪ್ರಸ್ತಾವನೆಯನ್ನು ಗಾಂಧೀಜಿ ಮತ್ತು ನೆಹರೂ ಇಬ್ಬರೂ ತಿರಸ್ಕರಿಸಿದರು. ಗಾಂಧೀಜಿ ಬ್ರಿಟಿಷ್ ಸರಕಾರಕ್ಕೆ,” ವೈಸರಾಯ್ ಅವರ ಬುದ್ಧಿ ಸರಿಯಾಗಿಲ್ಲ. ಬಂಗಾಳದ ಘಟನೆಗಳಿಂದಾಗಿ ಅವರ ಪ್ರಜ್ಞಾಶಕ್ತಿ ಮಾಯವಾಗಿದೆ. ವವೆಲ್‌ರಿಗಿಂತ ಯೋಗ್ಯರಾದ ಕಾನೂನು ಸಲಹೆದಾರರ ಅಗತ್ಯ ಅವರಿಗಿದೆ” ಎಂದು ಪತ್ರ ಬರೆದರು. ಆಮೇಲೆ ಈ ವವೆಲ್ ಇದ್ದರೆ ಆಗಲಿಕ್ಕಿಲ್ಲ ಎಂದು ಸ್ವತಃ ನೆಹರೂ ಅವರೇ ಇಂಗ್ಲೆಂಡಿಗೆ ಹೋಗಿ ವವೆಲ್ ಅವರನ್ನು ಹಿಂದಕ್ಕೆ ಕರೆಯಿಸಿಕೊಂಡು ಮೌಂಟ್ ಬ್ಯಾಟನ್ ಅವರನ್ನು ವೈಸರಾಯ್ ಆಗಿ ಮಾಡಿಸಿಕೊಂಡು ಬಂದರು. ಅದೇ ಸಮಯಕ್ಕೆ ಜಿನ್ನಾ ಮತ್ತು ಲಿಯಾಕತ್ ಅಲಿಖಾನ್ ಕೂಡ ಇಂಗ್ಲೆಂಡಿಗೆ ಹೋಗಿ ಅವರಿಗೆ ಬೇಕಾದ್ದನ್ನು ಮಾಡಿದ್ದಾರೆ. ನಿಜವಾಗಿ ಬ್ರಿಟಿಷ್ ಸರಕಾರ ಬಯಸಿದ್ದರೆ ದೇಶ ವಿಭಜನೆಯನ್ನು ತಡೆಯಬಹುದಿತ್ತು.ಆದರೆ ಮೌಂಟ್ ಬ್ಯಾಟನ್ ಜಿನ್ನಾ ಬಯಸಿದ ಉತ್ತರ ಭಾರತದ ಹಲವು ಭಾಗಗಳನ್ನೊಳಗೊಂಡ ಪಾಕಿಸ್ಥಾನದ ಬೇಡಿಕೆಯನ್ನು ಒಪ್ಪಲಿಲ್ಲ. ಕಡೆಗೆ,” ಇಷ್ಟನ್ನು ಪಾಕಿಸ್ಥಾನವಾಗಿ ಕೊಡುತ್ತೇವೆ. ಬೇಕಾದರೆ ತಗೊಳ್ಳಿ. ಬೇಡದಿದ್ದರೆ ಬಿಡಿ” ಎಂದು ಮೌಂಟ್ ಬ್ಯಾಟನ್ ಹೇಳಿದ ಮೇಲೆ,” ಹನ್ಸ್ತೇ ಲೇಂಗೆ ಪಾಕಿಸ್ಥಾನ್, ಲಡ್ತೆ ಲೇಂಗೆ ಹಿಂದೂ ಸ್ಥಾನ್” ಘೋಷಣೆಯೊಂದಿಗೆ ಮುಸ್ಲಿಂ‌ ಲೀಗ್ ಒಪ್ಪಿಕೊಂಡಿತು. ಆಮೇಲೆ ಪಾಕಿಸ್ಥಾನದಲ್ಲಿರುವ ಹಿಂದೂಗಳಿಗೆ ಕಿರುಕುಳ ಕೊಟ್ಟಾಗ, ಭಾರತದಲ್ಲಿ ಹಿಂದೂಗಳು ಮುಸ್ಲಿಮರಿಗೆ ಕಿರುಕುಳ ಕೊಡಬೇಕು, ಆಗ ಭಾರತದ ಮುಸ್ಲಿಮರನ್ನು ಎತ್ತಿ ಕಟ್ಟಿ ಹಂತ ಹಂತವಾಗಿ ಭಾರತದ ಭಾಗಗಳನ್ನು ಕಬಳಿಸಬೇಕು ಎಂಬ ಯೋಜನೆ ಮುಸ್ಲಿಮ್ ಲೀಗಿನದ್ದಾಗಿತ್ತು. ಇದರ ಒಂದು ಕಾರ್ಯ ತಂತ್ರವಾಗಿ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದಾಗ 5000 ಜನರನ್ನು ಒಟ್ಟು ಸೇರಿಸಿ ನೆಹರೂ ಅವರ ವಿರುದ್ಧ ಪ್ರತಿಭಟನೆಯನ್ನೂ ಪಾಕಿಸ್ಥಾನ ಮಾಡಿಸಿತ್ತು. ಈ ಕಾಶ್ಮೀರದ ವಿಷಯದಲ್ಲಿ ಮೌಂಟ್ ಬ್ಯಾಟನ್ ಪಾಕಿಸ್ಥಾನದ ಪರವೇ ಇದ್ದರು. ಮೌಂಟ್ ಬ್ಯಾಟನ್ ಕಾಶ್ಮೀರಕ್ಕೆ ಹೋಗಿ ರಾಜ ಹರಿಸಿಂಗ್ ಬಳಿ,” ಸರ್ದಾರ್ ಪಟೇಲರೂ ಒಪ್ಪಿದ್ದಾರೆ. ನೀವು ಪಾಕಿಸ್ಥಾನಕ್ಕೆ ಸೇರಿ” ಎಂದಿದ್ದರು. ಹಾಗಿದ್ದರೂ ಕಾಶ್ಮೀರ ಭಾರತಕ್ಕೆ ಸೇರಲು ಕಾರಣಗಳು ಎರಡು.‌ ಮೊದಲನೆಯದು ನೆಹರೂ ಅವರ ಪ್ರಯತ್ನ‌ ಮತ್ತು ಅದಕ್ಕೆ ಶೇಕ್ ಅಬ್ದುಲ್ಲಾ ನೀಡಿದ ಬೆಂಬಲ. ಎರಡನೆಯದು ತಾಳ್ಮೆ ಇಲ್ಲದ ಪಾಕಿಸ್ಥಾನ ಕಾಶ್ಮೀರದ ಮೇಲೆ ದಾಳಿಗಿಳಿದು ರಾಜ ಹರಿಸಿಂಗ್ ಅನ್ನು ಎದುರು ಹಾಕಿಕೊಂಡದ್ದು. ಹಾಗಾಗಿ ಕಾಶ್ಮೀರ ಭಾರತಕ್ಕೆ ಸೇರಲು ಮುಖ್ಯ ಕಾರಣ ನೆಹರೂ ಅವರೇ.

ಆದರೆ ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಕಾಯ್ದೆಗಳೆಲ್ಲ ಬರುತ್ತವೆ. ಇದು ಹೀಗಾಗಲು ಬೇರೆ ಕಾರಣವಿದೆ. ಅವಿಭಜಿತ ಭಾರತದಲ್ಲಿ 632 ರಾಜರುಗಳ ಸಂಸ್ಥಾನಗಳಿದ್ದವು.‌ 1798 ರ ಸಹಾಯಕ ಸೈನ್ಯ ಪದ್ಧತಿಯ ಅನುಸಾರ ಅವರೆಲ್ಲ ಬ್ರಿಟಿಷರ ಪರಮಾಧಿಕಾರವನ್ನು ಒಪ್ಪಿಕೊಂಡಿದ್ದರು.‌ ಆದರೆ ಒಳಾಡಳಿತದಲ್ಲಿ ಸ್ವತಂತ್ರರಾಗಿಯೇ ಇದ್ದರು. 1935 ರ ಕಾಯ್ದೆಯು ಬ್ರಿಟಿಷರ ನೇರ ಅಧೀನದಲ್ಲಿದ್ದ ಪ್ರಾಂತ್ಯಗಳು ಮತ್ತು ರಾಜರುಗಳ ಸಂಸ್ಥಾನಗಳನ್ನೊಳಗೊಂಡ ಅಖಿಲ ಭಾರತ ಫೆಡರೇಷನ್ ಅನ್ನು ರೂಪಿಸಿತು. ಆಗಲೂ ಒಳಾಡಳಿತದಲ್ಲಿ ರಾಜರುಗಳು ಸ್ವತಂತ್ರರೇ ಇದ್ದರು. ಬ್ರಿಟಿಷ್ ಸರಕಾರವು ಈ ವ್ಯವಸ್ಥೆಯಲ್ಲಿ ತನಗೆ ಇದ್ದ ಸ್ಥಾನವನ್ನಷ್ಟೆ ನೆಹರೂ ಸರಕಾರಕ್ಕೆ ವರ್ಗಾಯಿಸಲು ಸಾಧ್ಯವಿತ್ತು. ಅದಕ್ಕಾಗಿ ಬ್ರಿಟಿಷರ ನೇರ ಆಡಳಿತದ ಪ್ರದೇಶಗಳನ್ನು ನೆಹರೂ ಸರಕಾರಕ್ಕೆ ಸಂಪೂರ್ಣವಾಗಿ ಒಪ್ಪಿಸಿದ ಮೇಲೆ, ರಾಜರುಗಳು ನೆಹರೂ ಸರಕಾರದ ಪರಮಾಧಿಕಾರಕ್ಕೆ ಒಳಪಡಲು ಒಪ್ಪುವ ಒಪ್ಪಂದಕ್ಕೆ ರೂಪಿಸಿದ ನಿಯಮಗಳಲ್ಲಿ ವಿದೇಶಾಂಗ, ರಕ್ಷಣೆ, ಸಂಪರ್ಕ, ಕರೆನ್ಸಿ ನೋಟು ಹೀಗೆ ಕೆಲವು ವಿಷಯಗಳನ್ನು ರಾಜರುಗಳು ನೆಹರೂ ಸರಕಾರಕ್ಕೆ ಬಿಟ್ಟು ಕೊಟ್ಟ
ನಂತರ ತಮ್ಮ‌ ಒಳಾಡಳಿತಕ್ಕಾಗಿ ಒಂದು ಸಂವಿಧಾನವನ್ನು ತಾವೇ ರೂಪಿಸಿಕೊಳ್ಳಲು ಸಂವಿಧಾನ ರಚನಾ ಸಭೆಯನ್ನು ಮಾಡಿಕೊಳ್ಳಬಹುದು ಎಂದು ಅವಕಾಶವನ್ನು ಕೊಡಲಾಗಿತ್ತು. ಮೈಸೂರು, ತಿರುವಾಂಕೂರು, ಸೌರಾಷ್ಟ್ರ ಸಂಸ್ಥಾನಗಳು ಸಂವಿಧಾನ ಸಭೆಯನ್ನು ರಚಿಸಿದ್ದವು. ಆದರೆ ಉಳಿದ ಸಂಸ್ಥಾನಗಳು ಸಂವಿಧಾನ ರಚನಾ ಸಭೆಯನ್ನು ಮಾಡಿರಲಿಲ್ಲ. ಈ ಮೂವರನ್ನೂ ಮನ ಒಲಿಸಿಕೊಂಡು ಪ್ರಧಾನ ಸಂವಿಧಾನ ರಚನಾ ಸಭೆಯೇ ಈ ಸಂಸ್ಥಾನಗಳಿಗೂ ಅನ್ವಯವಾಗುವಂತೆ ಶಾಸನ ಮಾಡುವುದಾಗಿ ತೀರ್ಮಾನಿಸಲಾಯಿತು. ಆದರೆ ಕಾಶ್ಮೀರದ ರಾಜ ತಾನು ವಿಲೀನಗೊಳ್ಳಬೇಕಾದರೆ ಕ್ಯಾಬಿನೆಟ್ ನಿಯೋಗದ ಈ ಅವಕಾಶವನ್ನೆ ಕೊಡಬೇಕೆಂದು ಕೇಳಿದ್ದರು. ಆಗ ಕಾಶ್ಮೀರವನ್ನು ಭಾರತಕ್ಕೆ ತರುವುದಕ್ಕಾಗಿ ಆ ಬೇಡಿಕೆಯನ್ನು ಒಪ್ಪುವುದು ಅನಿವಾರ್ಯವಾಗಿತ್ತು.‌ ಆದರೆ ಪ್ರತ್ಯೇಕ ಸ್ಥಾನ ಮಾನ ಬಹುಕಾಲ ಸಾಧ್ಯವಿಲ್ಲವೆಂದೂ, ಕಾಶ್ಮೀರದ ಸಂವಿಧಾನ ರಚನಾ ಸಭೆಯು ಈ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಕಾಶ್ಮೀರದ ಸಂವಿಧಾನ ರಚನಾ ಸಭೆ ಈ ಬಗ್ಗೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳದೆ ತನ್ನನ್ನು ತಾನು ವಿಸರ್ಜನೆಗೊಳಿಸಿಕೊಂಡಿತ್ತು. ಆದರೆ ಕ್ಯಾಬಿನೆಟ್ ನಿಯೋಗದ ಪ್ರಸ್ತಾವನೆಯಲ್ಲಿ ಇಲ್ಲದ 23 ಒಳಾಡಳಿತದ ವಿಷಯಗಳಲ್ಲಿ ಭಾರತ ಸರಕಾರ ನಿರ್ಧಾರ ತೆಗೆದುಕೊಳ್ಳಲು ಹಂತ ಹಂತವಾಗಿ ಕಾಶ್ಮೀರವನ್ನು ನೆಹರೂ ಒಪ್ಪಿಸಿದ್ದರು. ಹರಿಸಿಂಗ್ ಭಾರತಕ್ಕೆ ಸೇರಿದಾಗ ಪಾಕಿಸ್ಥಾನ ಮಧ್ಯ ಪ್ರವೇಶಕ್ಕೆ ಅವಕಾಶವಾದ ಪ್ರಮುಖ ವಿಚಾರ , ಹರಿಸಿಂಗ್ ಅವರು ಮೊದಲೇ ಜಿನ್ನಾ ಸರಕಾರದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದ.‌ ಕಾಶ್ಮೀರ ನೆಹರೂ ಸರಕಾರದ ಪರಮಾಧಿಕಾರವನ್ನು ಒಪ್ಪಿದ ಕೂಡಲೇ ಕಾಶ್ಮೀರದ ವಿದೇಶಾಂಗ ನೀತಿ ನೆಹರೂ ಸರಕಾರಕ್ಕೆ ಹೋಗುತ್ತದೆ. ಆಗ ಜಿನ್ನಾ ಸರಕಾರದೊಂದಿಗೆ ಹರಿಸಿಂಗ್ ಮಾಡಿದ ಒಪ್ಪಂದಕ್ಕೆ ಮಹತ್ವ ಇರುವುದಿಲ್ಲ. ಪಾಕಿಸ್ಥಾನ ಕೊಕ್ಕೆ ಹಾಕಲು ಇದೊಂದು ಅವಕಾಶವಾಯಿತು. ಆದ್ದರಿಂದ ಕಾಶ್ಮೀರ ವಿಚಾರದಲ್ಲಿ ನೆಹರೂ ಅವರ ನಡೆ ಸಮಂಜಸವೇ ಇತ್ತು. ಅಲ್ಲಿ ಆಗಿರುವ ಎಡವಟ್ಟು ” ಪಾಕ್ ಆಕ್ರಮಿತ ಕಾಶ್ಮೀರ”ದ್ದು. ಜನರಲ್ ಕಾರ್ಯಪ್ಪ ಬೇಡ ಬೇಡವೆಂದರೂ ಕೇಳದೆ ಪಾಕಿಸ್ಥಾನದ ಸೈನ್ಯ ಹಿಂದಕ್ಕೆ ಹೋಗುವ ಮೊದಲೇ ಭಾರತದ ಸೇನೆ ಆಕ್ರಮಿಸಿದ್ದ ಪಾಕಿಸ್ಥಾನದ ಭಾಗಗಳನ್ನು ಬಿಟ್ಟು ಬರುವಂತೆ ಹಿಂದಕ್ಕೆ ಕರೆಸಿಕೊಂಡದ್ದು ನೆಹರೂ ಅವರ ವೈಫಲ್ಯವೇ ಆಗಿದೆ. ಜಯಪ್ರಕಾಶ ನಾರಾಯಣರೊಂದಿಗೆ ನೆಹರೂ ಅವರು,” ನನ್ನಿಂದ ಆಗಿರುವ ತಪ್ಪಿಗೆ ನನಗೂ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿ ಅನುಭವ ಇಲ್ಲದಿರುವುದೇ ಕಾರಣವಾಗಿದೆ” ಎಂದು ಹೇಳಿದ್ದಾರೆ ನಿಜ.‌ ಆದರೂ ಪಿ.‌ಒ.ಕೆ.‌ಸಮಸ್ಯೆ ನೆಹರೂ ಅವರೊಂದಿಗೇ ಇದೆ.

ಇತ್ತೀಚಿನ ದಿನಗಳಲ್ಲಿ ನೆಹರೂ ಅವರ ಸೆಕ್ಯುಲರಿಸಂ ಪರಿಕಲ್ಪನೆಯ ಬಗ್ಗೆ ನೆಹರೂ ಅವರ ವಿರೋಧಿಗಳೂ, ಪರ ಇರುವವರೂ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.‌ ಮಧ್ಯ ಯುಗೀನ ಲ್ಯಾಟಿನ್ ಭಾಷೆಯ ಸೆಕ್ಯುಲಸ್ ಎಂಬ ಪದದಿಂದ ಹುಟ್ಟಿಕೊಂಡ ಸೆಕ್ಯೂಲರ್ ಪದವನ್ನು ಜಾರ್ಜ್ ಹಾಯ್ಲಾಕ್ ಎಂಬ ಬ್ರಿಟಿಷ್ ವಿದ್ವಾಂಸ ಒಂದು ಚಿಂತನಾ ಧಾರೆಯಾಗಿ ಬೆಳಸಿದರು. ಸೆಕ್ಯುಲರಿಸಂ ಎಂದರೆ, ಅಂತಿಮ ಸತ್ಯವನ್ನು ಒಪ್ಪದೆ ಬದುಕಿನ ಅನುಭವಗಳಿಂದ ಶೋಧನೆಯನ್ನು ನಡೆಸುವ ಪ್ರಕ್ರಿಯೆಯಾಗಿದೆ ಎಂದು ಅರ್ಥವೆ ಹೊರತು ಇದು ಕ್ಯಾಥೋಲಿಕ್ ಮತದ ವಿರೋಧಿಯಲ್ಲ ಎಂದು ಹಾಯ್ಲಾಕ್ ವಿವರಿಸಿದ್ದಾರೆ. ಭಾರತದಲ್ಲಿ ನಿಜವಾಗಿ ಹಾಯ್ಲಾಕ್ ಹೇಳುವ ಮಾದರಿಯ ಸೆಕ್ಯುಲರಿಸಂ ಸನಾತನ ಧರ್ಮದ ತತ್ವಜ್ಞಾನದಲ್ಲೆ ಇದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಜನಕ ರಾಜನ ಸಭೆಯಲ್ಲಿ ಗಾರ್ಗಿ ವಾಚಕ್ನವಿಯ ಆರನೆಯ ಪ್ರಶ್ನೆಗೆ ಉತ್ತರಿಸುವ ಯಾಜ್ಞವಲ್ಕ್ಯ ” ಈ ಅನಂತ ಅಂತರಿಕ್ಷವೇ ಬ್ರಹ್ಮ. ಅದನ್ನು ಅರಿತವರು ಯಾರೂ ಇಲ್ಲ” ಎಂದು ಉತ್ತರಿಸುವಲ್ಲಿ ಸ್ವತಃ ಧರ್ಮವೇ ಅಂತಿಮ ಸತ್ಯದ ಶೋಧಕವಾಗುತ್ತದೆ. ಆದರೆ ಭಾರತದಲ್ಲಿ ಬೆಳೆದುದ್ದ ಅಪಾರ ಮೂಢನಂಬಿಕೆಗಳನ್ನು ನಿವಾರಿಸಲು ಸೆಕ್ಯುಲರಿಸಂ ಕೆಲಸ ಮಾಡಿದೆ. ಕಾಂಗ್ರೆಸ್ಸಿಗರಿಗಿಂತ ಜಾಸ್ತಿ ಈ ಕೆಲಸವನ್ನು ಮಾಡಿದವರು ಎಡಪಂಥೀಯರು. ಈಗಲೂ ನೋಡಿ, ತುಳುನಾಡು ಪರಶುರಾಮ ಸೃಷ್ಟಿಯೋ, ಬೆರ್ಮೆರೆ ಸೃಷ್ಟಿಯೋ ಎಂದು ಚರ್ಚೆ ಆಗುತ್ತಾ ಇದೆ. ನಿಜವಾಗಿ ತುಳುನಾಡು ಕಾಂಟಿನೆಂಟಲ್ ಡ್ರಿಫ್ಟಿನ ಸೃಷ್ಟಿ. ಜನರಲ್ಲಿ ಒಂದು ವೈಜ್ಞಾನಿಕ ದೃಷ್ಟಿಯನ್ನು ಬೆಳೆಯಿಸುವುದರಲ್ಲಿ ಸೆಕ್ಯುಲರಿಸಂನ ಪಾತ್ರ ಇದೆ. ನೆಹರೂ ಅವರು,” ಸೆಕ್ಯುಲರಿಸಂ ಎಂದರೆ ಸರ್ವ ಧರ್ಮ ಸಮ ಭಾವ” ಎಂದು ವಿವರಿಸಿದ್ದಾರೆ. ಸರ್ವ ಧರ್ಮ ಸಮಭಾವ ಎಂದರೆ ಮುಸ್ಲಿಂ ಓಲೈಕೆ ಎಂದು ಅರ್ಥವಲ್ಲ ಎಂಬುದನ್ನು ನೆಹರೂ ವಿರೋಧಿಗಳೂ, ಸರ್ವ ಧರ್ಮ ಸಮಭಾವ ಎಂದರೆ ಬೀದಿಯಲ್ಲಿ ಹೋಗುವ ಜೀವಿಯೂ ಹಿಂದೂಗಳ ದೇವರು, ನಂಬಿಕೆ, ಆಚರಣೆಗಳನ್ನು ಪ್ರತಿ ನಿತ್ಯ ” ಛೀ ಥೂ” ಎಂದು ನಿಂದಿಸುತ್ತಾ ಇರುವುದಲ್ಲ ಎಂಬುದನ್ನು ನೆಹರೂ ಅವರ ಪರ ಇರುವವರೂ ಅರ್ಥ ಮಾಡಿಕೊಳ್ಳಬೇಕು. ನೆಹರೂ ಅವರು ಜ್ಯೋತಿಷ್ಯ, ಪೂಜೆ, ಸಂಪ್ರದಾಯಶರಣತೆ, ಮೂಢ ನಂಬಿಕೆಗಳನ್ನೆಲ್ಲ ಒಪ್ಪಲಿಲ್ಲ.‌ ಆದರೆ ಭಗವದ್ಗೀತೆಯ ಎರಡನೆಯ ಅಧ್ಯಾಯ ನೆಹರೂ ಅವರಿಗೆ ಬಾಯಿ ಪಾಠ ಬರ್ತಾ ಇತ್ತು. ವೇದಗಳ ಬಗ್ಗೆ ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರೂ ಅವರು ಹೀಗೆ ಹೇಳಿದ್ದಾರೆ:”… ವಿದ್= ತಿಳಿ ಎಂಬ ಧಾತುವಿನಿಂದ ಹೊರಟ ವೇದಗಳಲ್ಲಿರುವುದು ಆಗ ಮಾನವನಿಗೆ ನಿಲುಕಿದ ಜ್ಞಾನ ಭಂಡಾರ…..ಅವುಗಳ ಆದ್ಯಂತ ಪಸರಿಸುವ ಜೀವನ ಶಕ್ತಿ, ಜೀವನ ಶ್ರದ್ಧೆ ನಮ್ಮನ್ನು ಬೆರಗು ಮಾಡುತ್ತದೆ”. ಉಪನಿಷತ್ತುಗಳ ಬಗ್ಗೆ ನೆಹರೂ ಹೀಗೆ ಹೇಳಿದ್ದಾರೆ:”ಉಪನಿಷತ್ತುಗಳ ಮುಖ್ಯ ಗುಣ ಸತ್ಯಾವಲಂಬನೆ. ….ಈ ಅನ್ವೇಷಣೆಯಲ್ಲಿ ಸಾಮಾನ್ಯವಾಗಿ ಎಲ್ಲ‌ ಮತಗಳಲ್ಲೂ ಕಾಣಬಹುದಾದ ಸರ್ವಶಕ್ತ ದೇವರ ಎದುರಿನಲ್ಲಿ ತೋರುವ ದೈನ್ಯತೆ ಇಲ್ಲ. ಸುತ್ತಲಿನ ಸನ್ನಿವೇಶಗಳನ್ನು ಜಯಿಸುವ ಮನಸ್ಸನ್ನು ಕಾಣುತ್ರೇವೆ…..ಉಪನಿಷತ್ತುಗಳಲ್ಲಿ ಅಂತಃಪ್ರೇರಣೆಯ ವಿಚಾರದೃಷ್ಟಿ ಇದೆ. ಮನೋ ಸಾಹಸ ಮತ್ತು ವಿಷಯ ಸತ್ಯಾನ್ವೇಷಣೆಯ ಮನೋವೇಗವಿದೆ”. ಇದರ ಜೊತೆಗೆ ” ಮಹಾಭಾರತವು ಯಾರಿಗೆ ಯಾವ ರತ್ನವನ್ನು ಬೇಕಾದರೂ ದೊರಕಿಸುವಂಥ ರತ್ನಾಕರ” ಎಂದೂ ನೆಹರು ಹೇಳುತ್ತಾರೆ. ಸ್ವತಂತ್ರ ಭಾರತದ ಮೊದಲ ಸಂಸ್ಕೃತ ವಿಶ್ವ ವಿದ್ಯಾನಿಲಯವನ್ನೂ ನೆಹರೂ ಅವರೇ ಸ್ಥಾಪಿಸಿದ್ದರು. ದೆಹಲಿ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಭಾಷಣದಲ್ಲಿ ನೆಹರೂ,” ವಿಜ್ಞಾನಕ್ಕೂ ಮಿತಿ ಇದೆ. ಆದ್ದರಿಂದ ಧರ್ಮಗಳ ಬಗ್ಗೆ ವಿನಮ್ರತೆ ಇರಬೇಕು” ಎಂದು ಹೇಳಿದ್ದರು. ಈ ಎಲ್ಲದರೊಂದಿಗೆ ಹಿಂದೂ- ಮುಸ್ಲಿಂ ಏಕತೆಯನ್ನು ಕಂಡವರವರು. ಪ್ರತಿಯೊಬ್ಬ ಹಿಂದೂವೂ ಮುಸ್ಲಿಮರ ಪರ ಇರಬೇಕು, ಪ್ರತಿಯೊಬ್ಬ ಮುಸ್ಲಿಮನೂ ಹಿಂದೂಗಳ ಪರ ಇರಬೇಕು ಎಂದು ಗಾಂಧೀಜಿ ಹೇಳಿದ್ದನ್ನೆ ನೆಹರೂ ಮಾಡಲು ಹೊರಟದ್ದು. ದೇಶ ವಿಭಜನೆಯಲ್ಲಿ ಸುಮಾರು ಆರು ಲಕ್ಷ ಹಿಂದೂ ಮತ್ತು ಮುಸ್ಲಿಮರು ಕೊಲ್ಲಲ್ಪಟ್ಟರು. ರಾತ್ರಿ ಮಲಗಿದರೆ ಎಲ್ಲಿ ಬಂದು ನಮ್ಮನ್ನು ಕೊಲ್ಲುತ್ತಾರೋ ಎನ್ನುವ ಭಯದಲ್ಲಿ ನಿದ್ದೆ ಇಲ್ಲದೆ ಹತಾಶವಾಗಿ ಕುಸಿದೇ ಹೋಗಿದ್ದ ಒಂದು ದೇಶಕ್ಕೆ,” ಇಲ್ಲ, ನಾವು ಒಟ್ಟಾಗಿ ನವ ಭಾರತವನ್ನು ನಿರ್ಮಿಸಲು ಸಾಧ್ಯ” ಎನ್ನುವ ಕನಸನ್ನು, ಆತ್ಮವಿಶ್ವಾಸವನ್ನು ಭಾರತೀಯರಲ್ಲಿ ಬಿತ್ತಿದ್ದು ನೆಹರೂ ಅವರ ಬಹಳ ದೊಡ್ಡ ಸಾಧನೆಯಾಗಿದೆ. ಎರಡು ಸಮುದಾಯಗಳ ನಡುವಿನ ಪರಸ್ಪರ ಅಪನಂಬಿಕೆ, ಅಲ್ಪಸಂಖ್ಯಾತರಲ್ಲಿ ಸಹಜವಾಗಿ ಇದ್ದ ಭಯವನ್ನು ನಿವಾರಿಸಲು ನೆಹರೂ ಅವರು ತೆಗೆದುಕೊಂಡ ಕ್ರಮಗಳು ತುಂಬ ಸರಿಯಾಗಿಯೇ ಇದ್ದವು. ಸಮುದಾಯಗಳಲ್ಲಿ ವಿಶ್ವಾಸವನ್ನು ಮೂಡಿಸದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ.

ಇವತ್ತು ಸಂವಿಧಾನ ದಿನ ಎಲ್ಲರೂ ಸಂವಿಧಾನದ ಪ್ರಸ್ತಾವನಾ ಬರೆಹವನ್ನು ಓದುತ್ತೇವೆ. ಈ ಪ್ರಸ್ತಾವನಾ ಬರೆಹವು ಭಾರತದ ಭವಿಷ್ಯದ ಕಾಳಜಿ ಮತ್ತು ಆದ್ಯತೆಗಳನ್ನು ಹೇಳುತ್ತದೆ. ನೆಹರೂ ಅವರು ಸಂವಿಧಾನ ಸಭೆಯಲ್ಲಿ ಮಂಡಿಸಿದ ‘ಆಬ್ಜೆಕ್ಟಿವ್ ರೆಸಲ್ಯೂಷನ್’ ನಿಂದ ಈ ಪ್ರಸ್ತಾವನೆಯನ್ನು ತೆಗೆದುಕೊಳ್ಳಲಾಗಿದೆ. 1931 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಷನದಲ್ಲಿ ಕಾರ್ಮಿಕ ಹಿತರಕ್ಷಣೆ, ಜಾತೀಯತೆಯ ನಿವಾರಣೆ, ರೈತರ ಕಲ್ಯಾಣ, ಅಸ್ಪೃಶ್ಯತಾ ನಿಷೇಧಗಳ ಠರಾವನ್ನು ನೆಹರೂ ಮಂಡಿಸಿದರು. ಆ ಠರಾವಿನ ಆಸಕ್ತಿಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುತ್ತಾ ಬಂದರು.‌ ಸ್ವಾತಂತ್ರ್ಯದ ದಿನ ಯಾರೂ ಸಂತೋಷದಲ್ಲಿರಲಿಲ್ಲ.‌ ಗಾಂಧೀಜಿ ಕೋಲ್ಕತ್ತಾ ಮತ್ತು ನೌಖಾಲಿಯಲ್ಲಿ ನಡೆದ ಮತೀಯ ಗಲಭೆಗಳನ್ನು ನಿಯಂತ್ರಿಸಲು ಏಕಾಂಗಿಯಾಗಿ ಅಡ್ಡಾಡುತ್ತಿದ್ದರು. ನೆಹರೂ ಅವರು ಅಧಿಕಾರ ಹಸ್ತಾಂತರಕ್ಕಾಗಿ ಸಂಸತ್ ಭವನಕ್ಕೆ ಹೋಗಲು ಊಟ ಮಾಡಿ ಭಾಷಣದ ಟಿಪ್ಪಣಿ ಮಾಡಿಕೊಳ್ಳಬೇಕೆಂದು ಮನೆಯವರೊಂದಿಗೆ ಊಟಕ್ಕೆ ಕುಳಿತಿದ್ದಾಗ ಅವರಿಗೆ ಲಾಹೋರ್ ನಿಂದ ಒಂದು ಫೋನ್ ಬರುತ್ತದೆ. ವಿಚಾರ ಲಾಹೋರ್‌ನಲ್ಲಿ ನಡೆದ ಜನಾಂಗೀಯ ಹತ್ಯೆಗೆ ಸಂಬಂಧಿಸಿರುತ್ತದೆ. ಅದನ್ನು ಕೇಳಿ ಅರ್ಧದಲ್ಲೆ ಊಟವನ್ನು ಬಿಟ್ಟು ಎದ್ದ ನೆಹರೂ ಯಾವ ಸಿದ್ಧತೆಯನ್ನೂ ಮಾಡದೆ ಸಂಸತ್ ಭವನಕ್ಕೆ ಹೋಗುತ್ತಾರೆ. ಅವತ್ತು ಅವರು ಮಾಡಿದ ‘ಟ್ರಿಸ್ಟ್ ವಿದ್ ಡೆಸ್ಟಿನಿ’ ಎಂಬ ಭಾಷಣವನ್ನು ‘ಗಾರ್ಡಿಯನ್’ ಪತ್ರಿಕೆ 20 ನೆಯ ಶತಮಾನದ ಹತ್ತು ಶ್ರೇಷ್ಠ ಭಾಷಣಗಳಲ್ಲಿ ಒಂದು ಎಂದು ಗುರುತಿಸಿದೆ.

ಸಂಪದ್ಭರಿತವಾಗಿದ್ದ ಭಾರತವನ್ನು ಸಂಪೂರ್ಣ ಲೂಟಿ ಹೊಡೆದು ಇನ್ನಿಲ್ಲಿ ಏನೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿದ್ದರು. ನೆಹರೂ ಅವರು ಶೂನ್ಯದಿಂದಲೇ ಶುರು ಮಾಡಬೇಕಾಗಿತ್ತು. ಇಡೀ ದೇಶದ ಬಜೆಟ್ಟೇ 154 ಕೋಟಿ ರೂಪಾಯಿ ಇದ್ದ ಕಾಲದಲ್ಲಿ ತಮ್ಮ ಖಾಸಗಿ ಆಸ್ತಿಯಲ್ಲಿ ಬಹುಭಾಗವನ್ನು ನೆಹರೂ ಅವರು ರಾಷ್ಟ್ರಕ್ಕಾಗಿ ಕೊಟ್ಟಿದ್ದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದವರಿಗೆ ನಡೆದ ಅನೇಕ ರೈತ ಬಂಡಾಯಗಳ ಬಗ್ಗೆ ಗೊತ್ತಿರುತ್ತದೆ. ಈ ರೈತರ ಮೇಲೆ ಬ್ರಿಟಿಷ್ ಸರಕಾರ ಶೇ 60 ರಷ್ಟು ತೆರಿಗೆ ಹಾಕಿತ್ತು. ಅಂದರೆ ಹತ್ತು ಕ್ವಿಂಟಾಲ್ ಅಡಿಕೆ ಬೆಳೆದರೆ ಆರು ಕ್ವಿಂಟಾಲ್ ಅಡಿಕೆ ಸರಕಾರಕ್ಕೆ. ಉಳಿದ ನಾಲ್ಕು ಕ್ವಿಂಟಾಲ್ ಗಳಲ್ಲಿ ಕುಟುಂಬ ನಿರ್ವಹಣೆ ಮತ್ತು ಮತ್ತು ಕೃಷಿ ಎರಡೂ ಆಗಬೇಕು. ಎಫ್.‌ಸಿ. ಬ್ರೌನ್ ಎಂಬ ಬ್ರಿಟಿಷ್ ಅಧಿಕಾರಿ ಒಂದು ಊಟಕ್ಕೆ ತನ್ನ ನವಜಾತ ಶಿಶುವನ್ನು ಮಾರಾಟ ಮಾಡುತ್ತಿದ್ದ ತಾಯಿ ಇದ್ದಳು ಎಂದು ಬರೆದಿದ್ದಾರೆ. ರೈತರ ಮೇಲಿದ್ದ ಈ ತೆರಿಗೆಯ ಹೊರೆಯನ್ನು ನೆಹರೂ ಅವರ ಸರಕಾರ ಇಳಿಸಲು ಪ್ರಾರಂಭ ಮಾಡಿದ್ದು ಕೊನೆಗೆ ಮನಮೋಹನ್ ಸಿಂಗ್ ಅವರ ಮೊದಲ ಅವಧಿಯ ಸರಕಾರ ಅಧಿಕಾರಕ್ಕೆ ಬಂದಾಗ ಕೃಷಿ ರಂಗದ ಮೇಲಿನ ಎಲ್ಲ ತೆರಿಗೆಗಳೂ ತೆರವಾದವು. ನೆಹರೂ ಸರಕಾರ ಜಾರಿಗೊಳಿಸಿದ ಮೊದಲ ಪಂಚ ವಾರ್ಷಿಕ ಯೋಜನೆ ಕೃಷಿಯನ್ನೆ ಆದ್ಯತೆಯಾಗಿ ತೆಗೆದುಕೊಂಡಿತ್ತು. ಬೃಹತ್ ನೀರಾವರಿ ಯೋಜನೆಗಳು, ಅಣೆಕಟ್ಟೆಗಳು, ಕೃಷಿಗೆ ಯಂತ್ರೋಪಕರಣಗಳ ಬಳಕೆಗಳೆಲ್ಲ ನೆಹರೂ ಅವರ ಅವಧಿಯಲ್ಲಿ ಜಾರಿಗೊಂಡು ನಂತರದ ದಿನಗಳಲ್ಲಿ ಭಾರತದ ಆಹಾರದ ಸ್ವಾವಲಂಬನೆಗೆ ಕಾರಣವಾಯಿತು.

ಸ್ವಾತಂತ್ರ್ಯ ಬರುವ ಕಾಲಕ್ಕೆ ಭಾರತದ ಜನಸಂಖ್ಯೆ 44 ಕೋಟಿ ಇತ್ತು. ಆಗ ಶೇ 12 ರಷ್ಟು ಭಾರತೀಯರು ಸಾಕ್ಷರರಾಗಿದ್ದರು. 2011 ಕ್ಕೆ ಶೇ 72 ಆಗಿದೆ. ನೆಹರೂ ಅವರ ಸರಕಾರ ಶಿಕ್ಷಣವನ್ನು ಆದ್ಯತೆಯ ವಿಷಯವಾಗಿ ತೆಗೆದುಕೊಂಡಿತ್ತು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಂತಹ ಶಿಕ್ಷಣ ಸಂಸ್ಥೆಗಳನ್ನು ನೆಹರೂ ಸರಕಾರವೇ ಸ್ಥಾಪಿಸಿತ್ತು.

ನೆಹರೂ ಅವರು ಸಮಾಜವಾದಿ ಆರ್ಥಿಕ ನೀತಿಯನ್ನು ಜಾರಿಗೆ ತಂದರು ಎಂದು ಹಲವರು ಭಾವಿಸಿದ್ದಾರೆ. ಅದು ತಪ್ಪು.‌ ನೆಹರೂ ಸಮಾಜವಾದಿ ಹೌದು. ಆದರೆ ಅವರು ಜಾರಿಗೆ ತಂದದ್ದು ಕೆನೇಶಿಯನ್ ಆರ್ಥಿಕತೆಯ ಮಾದರಿಯ ಆರ್ಥಿಕತೆಯನ್ನು.‌ ಮಿಶ್ರ ಅರ್ಥ ವ್ಯವಸ್ಥೆಯು ಸರಕಾರದ ಒಡೆತನದ ಮೂಲಕ ರಾಷ್ಟ್ರ ಮತ್ತು ದುರ್ಬಲ ವರ್ಗಗಳೆರಡರ ಹಿತ ಕಾಯುವ ಕೆಲಸವನ್ನು ಮಾಡಿದರೆ, ಖಾಸಗಿ ಬಂಡವಾಳದ ಆರ್ಥಿಕತೆ ತ್ವರಿತ ಅಭಿವೃದ್ಧಿಗೆ ಪೂರಕವಾಗಿತ್ತು.‌ ಇವೆರಡನ್ನೂ ಒಟ್ಟಾಗಿ ಕೊಂಡೊಯ್ಯುವ ಜವಾಬ್ದಾರಿ ಸರಕಾರದ್ದಾಗಿದ್ದ ಆರ್ಥಿಕತೆ ಅದು.

ದೇಶದ ಭದ್ರತೆಯ ಆತಂಕದಲ್ಲೆ ಅಧಿಕಾರ ಹಿಡಿದವರು ನೆಹರೂ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು 1949 ರಲ್ಲಿ ‘ನ್ಯಾಷನಲ್ ಡಿಫೆನ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿದರು.
ಭಾರತಕ್ಕೆ ಅಣುಶಕ್ತಿಯ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು 1948 ರಲ್ಲಿ ಬಾಬಾ ಪರಮಾಣು ಆಯೋಗವನ್ನು ರಚಿಸಿದರು. ಹೋಮಿ ಬಾಬಾ ಅವರೊಂದಿಗೆ ನೆಹರೂ ಅವರಿಗಿದ್ದ ವೈಯಕ್ತಿಕ ಸ್ನೇಹವನ್ನು ಬಳಸಿ ಹೋಮಿ ಬಾಬಾ ಅವರನ್ನು ಕರೆತಂದಿದ್ದರು. 1962 ರಲ್ಲಿ ಸ್ಥಾಪಿಸಿದ್ದ ‘ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್’ ನಂತರ ‘ಇಸ್ರೋ’ ಆಯಿತು. ಭಾರತದ ಮೊದಲ ಕೃತಕ ಉಪಗ್ರಹವನ್ನು ಸೋವಿಯತ್ ರಷ್ಯಾಕ್ಕೆ ಕೊಂಡೊಯ್ದು ಉಡಾವಣೆ ಮಾಡಬೇಕಿತ್ತು. ಇವತ್ತು ಇಸ್ರೋವೇ ರಷ್ಯಾ, ಅಮೆರಿಕ, ಇಂಗ್ಲೆಂಡ್, ಪ್ರಾನ್ಸ್‌ಗಳ ಕೃತಕ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡುತ್ತಿದೆ ಎನ್ನುವುದು ನೆಹರೂ ಅವರ ದೂರ ದೃಷ್ಟಿಯ ಫಲವಾಗಿದೆ. ಕೈಗಾರಿಕೀಕರಣ ನೆಹರೂ ಅವರ ಆಸಕ್ತಿಯ ವಿಷಯವಾಗಿತ್ತು. ಭಿಲಾಯ್, ಬೊಕಾರೊ, ದುರ್ಗಾಪುರ, ರೂರ್ಕೆಲಗಳಲ್ಲಿ ಅವರು ಸ್ಥಾಪಿಸಿದ್ದ ಬೃಹತ್ ಕೈಗಾರಿಕೆಗಳು ವಿಸ್ತರಿಸುತ್ತಾ ಸಾಗಿ ಭಾರತವು ಜಗತ್ತಿನ ಏಳನೆಯ ಅತಿ ದೊಡ್ಡ ಕೈಗಾರಿಕಾ ದೇಶವಾಗಿದೆ.

ನೆಹರೂ ಅವರ ವೈಚಾರಿಕ ಸಮತೋಲನ ಎಷ್ಟು ಸ್ಪಷ್ಟ ಇತ್ತು ಎಂದರೆ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನೂ ಜಾರಿಗೆ ತಂದರು. ಆದರೆ ಪ್ರತಿಭೆಯನ್ನು ಉಳಿಸಿಕೊಳ್ಳುವುದಕ್ಕಾಗಿ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಚಿಂತನೆಯನ್ನು ಕೊಟ್ಟರು.‌ ಇಂದಿಗೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ನಡೆಯುತ್ತಲೇ ಇದೆ. 1961 ರಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಮೀಸಲಾತಿಯು ಪ್ರತಿಭಾವಂತರನ್ನು ದ್ವಿತೀಯ ಅಥವಾ ತೃತೀಯ ದರ್ಜೆಯವರನ್ನಾಗಿ ಮಾಡಬಾರದು ಎಂದು ಬರೆದಿದ್ದರು. ಪ್ರತೀ 15 ದಿನಗಳಿಗೊಮ್ಮೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವ ಪದ್ಧತಿಯನ್ನಿರಿಸಿಕೊಂಡ ಪ್ರಧಾನಿ ನೆಹರೂ ಒಬ್ಬರೇ. ಅದೇ ಒಂದು ಸಾಹಿತ್ಯವಾಗಿದೆ.

ಎಲ್ಲವೂ ಅಸ್ತವ್ಯಸ್ಥವಾಗಿದ್ದ ದೇಶದಲ್ಲಿ ರಾಜರುಗಳ ಸಂಸ್ಥಾನ, ಬ್ರಿಟಿಷರ ಪ್ರಾಂತ್ಯ, ಗೋವಾದಲ್ಲಿನ ಪೋರ್ಚುಗೀಸರ ಹೊರದಬ್ಬುವಿಕೆ, ಪಾಂಡಿಚೇರಿಯಲ್ಲಿ ಫ್ರೆಂಚರ ಸಮಸ್ಯೆ ಇದನ್ನೆಲ್ಲ ನಿವಾರಿಸಿ ಎ,ಬಿ,ಸಿ,ಡಿ ಗುಂಪುಗಳ ರಾಜ್ಯಗಳಾಗಿ ಮೊದಲು ಮಾಡಿ, ನಂತರ ಭಾಷೆಯ ಆಧಾರದಲ್ಲಿ ರಾಜ್ಯಗಳಾಗಿ ಮಾಡಿ ದೇಶಕ್ಕೆ ಒಂದು ರೂಪವನ್ನು ಕೊಟ್ಟವರು ನೆಹರೂ. ಸಾಮಾನ್ಯವಾಗಿ ರಾತ್ರಿ ಒಂದು ಗಂಟೆಯ ವರೆಗೆ ನೆಹರೂ ಕೆಲಸ ಮಾಡುತ್ತಿದ್ದರು.

ನೆಹರೂ ಅವರಿಗೆ ಸಾವಿರ ಸಾವಿರ ಕಾರಣಗಳಿಗಾಗಿ ನಾವು ಕೃತಜ್ಞರಿದ್ದೇವೆ. ಆದರೆ ಒಂದೆರಡು ವಿಷಯಗಳಲ್ಲಿ ಅವರು ಗಾಂಧೀಜಿಯನ್ನು ಅನುಸರಿಸಬೇಕಿತ್ತೊ ಏನೊ ಎಂದು ನನಗನಿಸುತ್ತಿದೆ.‌ ಮೊದಲನೆಯದು ನೆಹರೂ ಅವರ ಜಾತ್ಯತೀತತೆಯ ಪರಿಕಲ್ಪನೆ ದೂರಗಾಮಿಯಾಗಿ ಬಹಳ ಒಳ್ಳೆಯ ಪರಿಣಾಮ ಬೀರಿದ ಹಾಗಿಲ್ಲ. ಅವರು ದಾರ್ಮಿಕ ಕೇಂದ್ರಗಳಿಂದ ದೂರ ನಿಂತರು. ಜೈನರ ಸಮ್ಮೇಳನಕ್ಕೆ ಆಹ್ವಾನಿಸಿದಾಗಲೂ ಅವರು ಹೋಗಲಿಲ್ಲ. ಮುಸ್ಲಿಂ ರಾಷ್ಟ್ರೀಯ ಸಮ್ಮೇಳನದ ಬಗ್ಗೆಯೂ ಅಸಮಧಾನವನ್ನೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಹಿಂದೂ ದೇವಸ್ಥಾನಗಳ ಮರು ನಿರ್ಮಾಣದಂತಹ ವಿಷಯಗಳಲ್ಲಿ ಸರಕಾರದ ಹಣವನ್ನು ಕೊಡಲು ಆಗುವುದಿಲ್ಲ ಎಂದೇ ನಿರ್ಧಾರಕ್ಕೆ ಬಂದಿದ್ದರು. ನೆಹರೂ ಅವರಿಗೆ ಇದು ಸಾಧ್ಯ ಆಗುತ್ತದೆ. ದೇವರನ್ನೂ ಅವರು ನಂಬಲಿಲ್ಲ. ಒಮ್ಮೆ ಸಾಬರ್ಮತಿ ಆಶ್ರಮದಿಂದ ಹೊರಡುವಾಗ ನೆಹರೂ ಕಸ್ತೂರ್ಬಾ ಗಾಂಧಿಯವರ ಕಾಲಿಗೆ ನಮಸ್ಕಾರ ಮಾಡಿದರಂತೆ. ಆಗ ಕಸ್ತೂರ್ಬಾ ” ದೇವರು ನಿನಗೆ ಮಂಗಳವನ್ನು ಮಾಡಲಿ” ಎಂದರಂತೆ‌ ತಕ್ಷಣ ನೆಹರೂ,” ಹಾಗಿರುವವನೊಬ್ಬ ಇದ್ದಾನಾ ತಾಯಿ?” ಎಂದು ಕೇಳಿದರಂತೆ. ಇದು ನೆಹರೂ ಅವರಿಗೆ ಸಾಧ್ಯವಿದೆ. ಆದರೆ ರಾಜಕಾರಣಿಗಳಿಗೆಲ್ಲರಿಗೂ ಅಲ್ಲ. ರಾಜಕಾರಣಿಯೂ ಮನುಷ್ಯನೇ. ಆತನ ಅಥವಾ ಆಕೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನಡೆವಳಿಕೆಗಳು ಸಾರ್ವಜನಿಕವಾಗಿ ಕಾಣದೆ ಇರಿಸಿಕೊಳ್ಳುವುದು ಕಷ್ಟ. ಐದು ಸಾವಿರ ವರ್ಷಗಳ ಪರಂಪರೆಯ ದೇಶ ಅದರ ಹೆಜ್ಜೆ ಗುರುತುಗಳಿಂದ ಹೊರ ಬಂದು ಪೂರ್ತಿಯಾಗಿ ಹೊಸದನ್ನೆ ರೂಢಿಸಿಕೊಳ್ಳುವುದು ಅಸಹಜ.‌ ಬಹುಶಃ ಈ ವಿಷಯದಲ್ಲಿ ಗಾಂಧೀಜಿಯವರೇ ಕ್ರಿಸ್ಟಲ್ ಕ್ಲೀಯರ್ ಇದ್ದರು.‌ ” ನಾನೊಬ್ಬ ಸನಾತನಿ ಹಿಂದೂ.‌ ನಾನೊಬ್ಬ ಗೋಪೂಜಕ. ಗೋಪೂಜೆಯನ್ನು ಇಡೀ ವಿಶ್ವದ ಮುಂದೆ ನಾನು ಸಮರ್ಥಿಸಿಕೊಳ್ಳುತ್ತೇನೆ” ಎಂದಿದ್ದರು ಅವರು. ಎಲ್ಲ ಧರ್ಮೀಯರೂ ಅವರವರ ರೀತಿಯಲ್ಲಿ ಬದುಕುವುದನ್ನು ಎತ್ತಿ ಹಿಡಿಯುವ ಗಾಂಧೀಜಿಯವರ ಚಿಂತನೆಗಳೇ ಹೆಚ್ಚು ಸೂಕ್ತ ಎನಿಸುತ್ತದೆ. ಏಕೆಂದರೆ ಧರ್ಮದ ವಿಚಾರದಲ್ಲಿ ತೀರಾ ದೂರ ನಿಂತವರನ್ನು ಜನರು ಸ್ವೀಕರಿಸುವುದು ಕಷ್ಟ. ಹಿಂದೂಗಳಲ್ಲಿ ಮಾತ್ರ ಅಲ್ಲ; ಹಮೀದ್ ದಲವಾಯಿ ಅವರನ್ನು ಮುಸ್ಲಿಮರ ನೆಹರೂ ಎನ್ನಬಹುದು. ಅವರನ್ನು ಮುಸ್ಲಿಮರೂ ಸ್ವೀಕರಿಸಲಿಲ್ಲ. ಗೋವಾ ವಿಮೋಚನಾ ಚಳವಳಿಯ ನಾಯಕ ತ್ರಿಸ್ಟಾವೋ ಬ್ರಗಾನ್ಝ ದೆ ಕುನ್ಝ ಅವರನ್ನು ಕ್ರೈಸ್ತರ ನೆಹರೂ ಎಂದು ಕರೆಯಬಹುದು. ಹಾಗಿದ್ದವರು ಅವರು. ಅವರ ದೇಹದ ಅಂತ್ಯ ಸಂಸ್ಕಾರಕ್ಕೆ ಚರ್ಚ್‌ನಲ್ಲಿ ಬಿಡಲಿಲ್ಲ. ಆದ್ದರಿಂದ ಧರ್ಮದ ಒಳಗೆ ಇದ್ದೇ ಸುಧಾರಣೆಯನ್ನು ತರುವ ಗಾಂಧೀಜಿಯವರ ಮಾದರಿಯೇ ಹೆಚ್ಚು ಸರಿ ಎಂದು ಅನಿಸುತ್ತದೆ. ನೆಹರೂ ಅವರ ಕಾಲದಲ್ಲೆ ಸೆಕ್ಯುಲರಿಸಂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಲಿಲ್ಲ. ಏಕೆಂದರೆ ಅವರ ಪಕ್ಷದಲ್ಲಿ ಗಾಂಧಿವಾದಿಗಳ ಮಾರ್ಗದರ್ಶನ ಇತ್ತು. ಗಾಂಧಿ ವಾದಿಗಳು ಹೊರಟು ಹೋಗಿ ಎಡಪಂಥೀಯರೇ ಅವರ ಪಕ್ಷದ ವೈಚಾರಿಕ ಮಾರ್ಗದರ್ಶಕರಾದಾಗ ಸೆಕ್ಯುಲರಿಸಂ ನೆಗೆಟಿವ್ ಇಫೆಕ್ಟನ್ನು ದೇಶದ ಮೇಲೆ ಮಾಡಿದೆ.

ಎರಡನೆಯದು ನೆಹರೂ ಅವರ ಕೈಗಾರಿಕೀಕರಣ ಉತ್ಪಾದನೆಯನ್ನು ಹೆಚ್ಚಿಸಿ ಭಾರತವನ್ನು ಮುಂಚೂಣಿಯ ರಾಷ್ಟ್ರವಾಗಿ ಮಾಡಿತು ಎನ್ನುವುದು ನಿರ್ವಿವಾದ. ಆದರೆ ಅದು ಹಳ್ಳಿಗಳನ್ನು ಪರಾವಲಂಬಿಯಾಗಿಸಿ ದುರ್ಬಲಗೊಳಿಸಿತು.‌ ಗುಪ್ತರ ಕಾಲದಿಂದಲೂ ಭಾರತಕ್ಕೆ ವ್ಯಾಪಾರಕ್ಕಾಗಿ ಅರಬ್ ಮತ್ತು ಯುರೋಪಿನಿಂದ ಬರುತ್ತಿದ್ದುದು ಇಲ್ಲಿನ ಗ್ರಾಮೀಣ ಉದ್ದಿಮೆಗಳ ಉತ್ಪಾದನೆಗಳಿಗಾಗಿ. ಬ್ರಿಟಿಷರು ಬಂದದ್ದೂ ಅದಕ್ಕಾಗಿಯೇ. ಆದರೆ ಇಂಗ್ಲೆಂಡ್‌ನಲ್ಲಿ ಕೈಗಾರಿಕಾ ಕ್ರಾಂತಿ ನಡೆದದ್ದರ ಪರಿಣಾಮವಾಗಿ ಸಿದ್ಧ ವಸ್ತುಗಳನ್ನು ಬ್ರಿಟಿಷರು ಭಾರತದಲ್ಲಿ ಮಾರಲು ಹೊರಟು ಗ್ರಾಮೀಣ ಕೈಗಾರಿಕೆಗಳು ಮುಚ್ಚಲ್ಪಟ್ಟವು. ಋಗ್ವೇದದಲ್ಲಿಯೇ ಚರಕದಿಂದ ನೂಲು ತೆಗೆಯುವ ವಿಷಯವಿದೆ.‌ ಗಾಂಧೀಜಿಯ ಚರಕದಿಂದ ನೂಲು ತೆಗೆದು ಬಟ್ಟೆ ಮಾಡಿ ಜನ ತಮಗೆ ತಾವೇ ಸ್ವಾವಲಂಬಿಗಳಾದದ್ದು ಬ್ರಿಟಿಷರ ಜವುಳಿ ಉದ್ಯಮವನ್ನು ನೆಲ ಕಚ್ಚಿಸಿ ಆರ್ಥಿಕವಾಗಿ ಬ್ರಿಟಿಷರನ್ನು ದುರ್ಬಲಗೊಳಿಸಿತು.‌ ಈ ಗ್ರಾಮೀಣ ಉದ್ಯಮಗಳು ಇದ್ದರೆ ಕೃಷಿ ಸ್ವಾವಲಂಬಿಯಾಗಿರುತ್ತದೆ. ಗ್ರಾಮೀಣ ಉದ್ಯಮಗಳು ಹೊರಟು ಹೋದಾಗ ಕೃಷಿಕರು ಎಲ್ಲದಕ್ಕೂ ನಗರವನ್ನೆ ಅವಲಂಬಿಸಬೇಕು, ಮತ್ತು ಕೃಷಿ ಕೈಕೊಟ್ಟಾಗ ಕೃಷಿಕರಿಗೆ ಸಹಾಯಕವಾಗುವ ಉದ್ಯೋಗಗಳಿಲ್ಲದ ಪರಿಸ್ಥಿತಿ ಬರುತ್ತದೆ.‌ ನಾಶವಾದ ಭಾರತದ ಗ್ರಾಮೀಣ ಉದ್ದಿಮೆಗಳನ್ನು ಬೆಳೆಯಿಸಬೇಕೆಂದು ಗಾಂಧೀಜಿಗೆ ಇತ್ತು.‌ ಅದಕ್ಕಾಗಿ 20 ಅಂಶಗಳ ಪತ್ರವನ್ನೂ ಅವರು ನೆಹರೂ ಅವರಿಗೆ ಕಳಿಸಿದ್ದರು. ಆದರೆ ನೆಹರೂ ಅವರು ಗಾಂಧೀಜಿಯ ಈ ಪತ್ರವನ್ನು ತಿರಸ್ಕರಿಸಿದ್ದರು.‌ ಈ ವಿಷಯದಲ್ಲಿ ನೆಹರೂ ಗಾಂಧೀಜಿಯವರ ಮಾತನ್ನು ಕೇಳಿದ್ದರೆ ದೇಶಕ್ಕೆ ಅನುಕೂಲವಿತ್ತು.

ನೆಹರೂ ಅವರ ವ್ಯಕ್ತಿತ್ವದ ಬಗ್ಗೆ ಕೆಲವು ವಿಚಾರಗಳಿವೆ. ನಮ್ಮ‌ಕಾರ್ನಾಡ್ ಸದಾಶಿವ ರಾಯರೂ ನೆಹರೂ ಅವರೂ ಒಳ್ಳೆಯ ಮಿತ್ರರಾಗಿದ್ದರು. ನೆಹರೂ ತಮ್ಮ ಪತ್ನಿಯ ಅನಾರೋಗ್ಯದ ಬಗ್ಗೆ ವಿವರಿಸಿ ಜರ್ಮನಿಯಿಂದ ಸದಾಶಿವ ರಾಯರಿಗೆ ಬರೆದ ಪತ್ರಗಳೆಲ್ಲ ಇವೆ.

ನೆಹರೂ ಅವರ ಮೇಲೆ ನಾಲ್ಕು ಬಾರಿ ಹತ್ಯಾ ಯತ್ನಗಳು ನಡೆದವು. ಆದರೂ ಅವರು ಧೈರ್ಯಶಾಲಿಯೇ ಆಗಿದ್ದರು.‌ ಒಮ್ಮೆ ದೆಹಲಿಯಲ್ಲಿ ಗಲಭೆ ನಡೆದಾಗ ಸ್ವತಃ ಪ್ರಧಾನ ಮಂತ್ರಿಯೇ ಜೀಪ್ ಚಲಾಯಿಸಿಕೊಂಡು ಬಂದು ಜೀಪ್‌ನ ಮೇಲೆ ಹತ್ತಿ ನಿಂತು,” ಧೈರ್ಯವಿದ್ದರೆ ಬಂದು ನನ್ನನ್ನು ಹೊಡೆಯಿರೊ” ಎಂದು ಆವಾಝ್ ಹಾಕಿದಾಗ ಗಲಭೆಕೋರರು ಓಡಿ ಹೋದ ಘಟನೆ ನಡೆದಿದೆ. ನೆಹರೂ ಅವರಿಗಾಗಿ ಒಮ್ಮೆ ಪುರುಷೋತ್ತಮ ದಾಸ್ ಟಂಡನ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಗಲಾಟೆ ಆದಾಗ ನೆಹರೂ ಜಗಳವಾಡುತ್ತಿದ್ದವರ ನಡುವೆ ನುಗ್ಗಿ ದೈಹಿಕ ಶಕ್ತಿ ಪ್ರದರ್ಶನ ಮಾಡಿಯೇ ಬಿಟ್ಟರು. ನೆಹರೂ ಅವರ ರಕ್ಷಣೆಗೆ ಮುನ್ನುಗ್ಗಿದ ಅವರ ಅಂಗ ರಕ್ಷಕನಿಗೂ ಬಿತ್ತು. ಈ ಫೈಟಿಂಗ್ ಮುಗಿಸಿ ಬಂದು ಪುರುಷೋತ್ತಮ‌ದಾಸ್ ಟಂಡನ್ ಬಳಿ ನೆಹರೂ,” ಹೇಗಿತ್ತು ಕುಸ್ತಿ?” ಎಂದು ಕೇಳಿದ್ದರು.

ನೆಹರೂ ಅವರಲ್ಲಿ ಯಾರ ಮಾತನ್ನೂ ಕೇಳದೆ ಇರುವ ಒಂದು ಪ್ರವೃತ್ತಿಯೂ ಇತ್ತು. ಅದಕ್ಕೇ ನೋಡಿ ಸರ್ದಾರ್ ಪಟೇಲರೊಂದಿಗಿನ ಭಿನ್ನಾಭಿಪ್ರಾಯ ಎಂದೂ ಅವರಿಗೆ ಸರಿಯಾಗಲಿಲ್ಲ. ಗಾಂಧಿ ಹತ್ಯೆಯಾದ ದಿವಸ ಮೌಂಟ್ ಬ್ಯಾಟನ್ ನೆಹರೂ ಮತ್ತು ಪಟೇಲರನ್ನು ಕರೆದು,” ನಿಮ್ಮಿಬ್ಬರನ್ನು ಒಂದು ಮಾಡಬೇಕೆಂದು ಗಾಂಧಿ ನನ್ನ ಬಳಿ ಹೇಳಿದ್ದರು. ಮಹಾತ್ಮನ ಕೊನೆಯ ಆಸೆಯನ್ನು ಸಾಧ್ಯವಾದರೆ ಈಡೇರಿಸಿ” ಎಂದಿದ್ದರು. ಮರುದಿನ ಪಟೇಲರು ಮಾತನಾಡಿದ ಸಭೆಯಲ್ಲಿ,” ನನ್ನ ಪ್ರಿಯ ಸಹೋದರ ನೆಹರೂ” ಎಂದೇ ಸಂಬೋಧಿಸಿದ್ದರು. ನೆಹರೂ ಅವರು ಪಟೇಲರು ಕಳಿಸಿದ ಯಾವುದೇ ಕಡತವನ್ನು ಪರಿಶೀಲಿಸಲಿಕ್ಕೆ ಇಲ್ಲ. ನೇರವಾಗಿ ಸಹಿಗೆ ಇಡಿ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯಕ್ಕೆ ಸೂಚಿಸಿದ್ದರು. ಆದರೆ ಕೊನೆಗೂ ಅವರ ಭಿನ್ನಾಭಿಪ್ರಾಯ ಸರಿ ಹೋಗಲಿಲ್ಲ. ಗಾಂಧೀಜಿ ಇರುವ ತನಕ ಜೊತೆಯಾಗಿದ್ದ ಆಚಾರ್ಯ ಕೃಪಲಾನಿ, ರಾಜಗೋಪಾಲಾಚಾರಿ ಎಲ್ಲರೂ ನೆಹರೂ ಅವರಿಂದ ಬೇರೆಯಾಗಿ ಅವರು ಒಂಟಿಯಾಗುತ್ತಾ ಹೋದರು. ಗಾಂಧೀಜಿಯವರ ಪ್ರಬಲ ಟೀಕಾಕಾರರಾಗಿದ್ದ ಅಂಬೇಡ್ಕರ್ ಅವರನ್ನು ಸಂವಿಧಾನ ಸಭೆಗೆ ಕರೆತರಲು ಗಾಂಧಿ ಸಫಲರಾದರು. ಆದರೆ ವೈಜ್ಞಾನಿಕ ದೃಷ್ಟಿಕೋನದಲ್ಲಿ ಗಾಂಧೀಜಿಗಿಂತ ಹೆಚ್ಚು ನೆಹರೂ ಅವರಿಗೆ ಹತ್ತಿರವಾಗಿದ್ದ ಅಂಬೇಡ್ಕರ್ ನೆಹರೂ ಅವರೊಂದಿಗೆ ಉಳಿಯಲಿಲ್ಲ. ಮಿಲಿಟರಿ ವಿಚಾರದಲ್ಲಿ ಕ್ಷೇತ್ರ ಪರಿಣಿತರಾದ ಜನರಲ್ ತಿಮ್ಮಯ್ಯ, ಜನರಲ್ ಕಾರಿಯಪ್ಪರ ಮಾತನ್ನು ನೆಹರೂ ಕೇಳಲಿಲ್ಲ. ನಷ್ಟವಾಯಿತು. ಇಂದಿರಾ ಗಾಂಧಿಯವರು ಜನರಲ್ ಮಣಿಕ್ ಷಾ ಅವರ ಮಾತನ್ನು ಕೇಳಿದರು. ಭಾರತಕ್ಕೆ ಲಾಭವಾಗಿತ್ತು. ಹಾಗೆಂದು ಇದೇ ನೆಹರೂ ಅವರ ವ್ಯಕ್ತಿತ್ವ ಎಂದಲ್ಲ. ನೆಹರೂ ಅವರು ರಷ್ಯಾ ಮಾದರಿಯಲ್ಲಿ ಕೃಷಿ ಶುರು ಮಾಡಲು ಹೊರಟಾಗ ಭೂ ಒಡೆತನವನ್ನು ರೈತರಿಂದ ಬೇರೆ ಯಾರಿಗೂ ವಹಿಸಬೇಡಿ. ಭೂ ಒಡೆತನ ಹೊರಟು ಹೋದರೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಶ್ರೀಪ್ರಕಾಶ್ ಹೇಳಿದಾಗ ಆ ಮಾತನ್ನು ಕೇಳಿದರು. ನೆಹರೂ ಅವರ ಪ್ರಬಲ ಟೀಕಾಕಾರರಾಗಿದ್ದ ಲೋಹಿಯಾ ಅವರ ಮಾತುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಆಚಾರ್ಯ ಕೃಪಲಾನಿ ಸದನದಿಂದ ಸಭಾತ್ಯಾಗಕ್ಕೆ ಹೊರಟಾಗ,” ನನ್ನ ಸರಕಾರಕ್ಕೆ ಇನ್ನೂ ಬೈಯ್ಯಿರಿ. ಆದರೆ ಸಭಾತ್ಯಾಗದ ಅವಮಾನವನ್ನು ಮಾತ್ರ ನನ್ನ ಸರಕಾರಕ್ಕೆ ಮಾಡಬೇಡಿ” ಎಂದು ನೆಹರೂ ಕೇಳಿಕೊಂಡಿದ್ದರು. ನೆಹರೂ ಅವರು,’ ಮಾಡರ್ನ್ ರಿವ್ಯೂ’ ಪತ್ರಿಕೆಗೆ,’ ಚಾಣಕ್ಯ’ ಎಂಬ ಹೆಸರಿನಲ್ಲಿ ತಮ್ಮ ಬಗ್ಗೆ ತಾವೇ ವಿಮರ್ಶೆ ಬರೆದಿದ್ದರು. ಅದರಲ್ಲಿ,” ಜವಾಹರ ಲಾಲ್ ನೆಹರೂ ಬಗ್ಗೆ ಜಾಗ್ರತೆಯಾಗಿರಿ. ಆತ ಜೊತೆಗಿರುವವರನ್ನು ಪ್ರೀತಿಸುತ್ತಾನಾದರೂ ಬಹಳ ಅಸಹನೆಯ ಪ್ರವೃತ್ತಿಯವನು” ಎಂದು ಬರೆದಿದ್ದಾರೆ. ಬಹುಶಃ ಅವರ ಬಗ್ಗೆ ನಾನಾಡಿದ ಮಾತುಗಳು ಅವರದೇ ಈ ಮಾತಿನೊಂದಿಗೆ ಹೊಂದಿಕೊಳ್ಳುತ್ತದೆ.

ಜನರಲ್ಲಿ ನೆಹರೂ ಅರಿವು ಹುಟ್ಟಿಸುವ ಒಂದು ವಿಧಾನವಿತ್ತು. ಒಮ್ಮೆ ನೆಹರೂ ಕಾರಿನಿಂದ ಇಳಿದ ಕೂಡಲೇ ಜನರು,” ಭಾರತ್ ಮಾತಾ ಕಿ ಜೈ” ಎಂದರಂತೆ. ನೆಹರೂ ನಗುತ್ತಾ,” ಸರಿ, ಈ ಭಾರತ ಮಾತೆ ಎಂದರೆ ಯಾರು?” ಎಂದು ಕೇಳಿದರು. ಆಗ ಜನರಲ್ಲಿ ಗುಜುಗುಜು ಶುರುವಾಯಿತು.‌ ಕಡೆಗೆ ನೆಹರೂ,” ನೀವೆಲ್ಲರೂ ಭಾರತ ಮಾತೆಯ ಅಂಗಗಳೇ. ನಿಜವಾಗಿ ಭಾರತ ಮಾತೆ ಎಂದರೆ ನೀವೇ” ಎಂದರಂತೆ.‌

ನೆಹರೂ ಅವರಲ್ಲಿ ಡೆಮಾಕ್ರಟಿಕ್ ಸ್ಪಿರಿಟ್ ಹೇಗೆ ಇತ್ತು ಎಂದರೆ ನೆಹರೂ ರೋಂ ನಗರದಲ್ಲಿದ್ದಾಗ
ಮುಸೋಲಿನಿ ಕರೆ ಕಳುಹಿಸಿದರೂ ಫ್ಯಾಸಿಸ್ಟನನ್ನು ತಾನು ಭೇಟಿಯಾಗುವುದಿಲ್ಲ ಎಂದು ಹೋಗಲಿಲ್ಲ. ಆದರೆ ಇದು ದೃಢ ನಿರ್ಧಾರವಾಗಿತ್ತೆ ಹೊರತು ಒರಟುತನವಲ್ಲ. ನೆಹರೂ ಅವರ ಸೌಜನ್ಯ ಅಪಾರವಾದದ್ದು.‌ ಕೇಂದ್ರ ಸಾಹಿತ್ಯ ಅಕಾಡೆಮಿ ರಚನೆಯ ವೇಳೆಗೆ ನೆಹರೂ ಸಭೆ ನಡೆಸುತ್ತಾ ಇದ್ದರಂತೆ. ಆಗ ಡಿ. ವಿ. ಗುಂಡಪ್ಪ ಹೋದರು.‌
ಡಿ.ವಿ. ಜಿಯನ್ನು ಕಂಡ ತಕ್ಷಣ ” ಇನ್ನು ನೀವು ನಡೆಸಿ” ಎಂದು ನೆಹರೂ ಕೆಳಗೆ ಬಂದು ಕೂತರಂತೆ.‌ ಆದರೆ ಸೌಜನ್ಯ ಇದ್ದರೂ ನೆಹರೂ ಶೀಘ್ರ ಕೋಪಿಷ್ಠನೂ ಆಗಿದ್ದರು. ಆದರೆ ಅವರಲ್ಲಿ ಸೆನ್ಸ್ ಆಫ್ ಹ್ಯೂಮರ್ ಬಹಳ ಚೆನ್ನಾಗಿತ್ತು. ನೆಹರೂ ಅವರು ಮಹಾವೀರ ತ್ಯಾಗಿಯವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ‘ ಮಂತ್ರಿಯಾಗಿ ಬನ್ನಿ’ ಎಂದು ಕರೆದರಂತೆ. ಮಹಾವೀರ ತ್ಯಾಗಿಯವರಿಗೆ ಪಕ್ಷದ ನಾಯಕನಾಗಿರಲು ಆಸಕ್ತಿ. ಮಂತ್ರಿಯಾಗಲು ಆಸಕ್ತಿ ಇಲ್ಲ. ಆಗ ಮಹಾವೀರ ತ್ಯಾಗಿ,” ನಾನೂ ನೀವೂ ಜೈಲಿನಲ್ಲಿದ್ದಾಗ, ನೀವು ನನಗೆ ಫ್ರೆಂಚ್ ಕಲಿಸುತ್ತಿದ್ದಿರಿ. ಆಗ ಕತ್ತೆ, ಕುದುರೆ, ಕೋಣ ಎಂದೆಲ್ಲ ನನಗೆ ಬೈತಾ ಇದ್ರಿ. ಈಗ ನನ್ನ ಮೇಲೆ ನಿಮಗೆ ವಿಶ್ವಾಸವಿಲ್ಲ. ನನ್ನನ್ನು “ನೀನು” ಎನ್ನುವುದಿಲ್ಲ. ಕತ್ತೆ ಕುದುರೆ ಎಂದು ಬೈಯ್ಯುವುದಿಲ್ಲ. ನನ್ನ ಬಗ್ಗೆ ನಿಮಗೆ ಸ್ನೇಹ ಕಡಿಮೆಯಾಗಿರುವುದರಿಂದ ನಾನು ಮಂತ್ರಿ ಆಗುವುದಿಲ್ಲ” ಎಂದು ನೆಹರೂ ಅವರಿಗೆ ಹೇಳಿದರಂತೆ.

ಅದಕ್ಕೆ ನೆಹರೂ,” ಇಂಗ್ಲಿಷ್‌ನಲ್ಲಿ, ಯಾವುದು ಸತ್ಯವೇ ಆಗಿರುತ್ತದೊ ಅಂತಾದ್ದರ ಬಗ್ಗೆ ಹಾಸ್ಯ ಮಾಡಬಾರದು ಎಂದು ಒಂದು ಗಾದೆ ಇದೆ. ಆದ್ದರಿಂದ ನಾನೀಗ ನಿಮ್ಮನ್ನು ಕತ್ತೆ, ಕುದುರೆ, ಕೋಣ ಎಂದೆಲ್ಲ ಕರೆಯಲು ಆಗುವುದಿಲ್ಲ” ಎಂದರಂತೆ.

ಹೀಗೆ, ನೆಹರೂ ಅವರ ಬಗ್ಗೆ ಇನ್ನೊಂದು ಎರಡು ಗಂಟೆ ಬೇಕಾದರೂ ಮಾತನಾಡಬಹುದು.‌ ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸುತ್ತೇನೆ.‌ ಕೇಳಿದ ಎಲ್ಲರಿಗೂ ನಮಸ್ಕಾರ.

ಆಧಾರ:

  1. ಲೋಕದೇವ ನೆಹರೂ- ರಾಮಧಾರಿ ಸಿಂಹ
  2. ಭಾರತ ದರ್ಶನ- ಜವಾಹರ ಲಾಲ್ ನೆಹರೂ
  3. An auto biography- Jawaharlal Nehru
  4. ನವ ಭಾರತದ ನಿರ್ಮಾಪಕರು- ರಾಮಚಂದ್ರ ಗುಹ
Puttur-14-11-2022 ಜವಾಹರ ಲಾಲ್ ನೆಹರೂ ಬಗ್ಗೆ ಅರವಿಂದ ಚೊಕ್ಕಾಡಿ-ಯವರಿಂದ ಪ್ರಧಾನ ಉಪನ್ಯಾಸ.

Leave a Reply

Your email address will not be published. Required fields are marked *