– 15 ಜನವರಿ 2023 :
ಎಂ. ಜಿ. ಹೆಗಡೆಯವರ ‘ ಮಿನುಗು ನೋಟ’ ಕೃತಿಯನ್ನು ಬಿಡುಗಡೆ ಮಾಡಿದ ನಂತರ ಸುಧೀಂದ್ರ ಕುಲಕರ್ಣಿ ಅವರು ಗಾಂಧಿ ವಿಚಾರ ವೇದಿಕೆಯಲ್ಲಿ ಆಡಿದ ಮಾತುಗಳು.


‘ಮಿನುಗು ನೋಟ’
ಗಾಂಧೀಜಿಯವರ ಮಾತಿನಂತೆ, ‘ಕೃತಿ’ಯಲ್ಲಿ ಸತ್ಯಾನ್ವೇಷಣೆಯ ಮಾಡಿ, ಅನಾವರಣಗೊಳ್ಳುವ ಈ ದಿನ (15 January 2023) ನಿಜವಾಗಿಯೂ ಸುದಿನ.
ಸಂಯುಕ್ತ ಕರ್ನಾಟಕ Mangalore Edition
Jan 16, 2023 Page No. 2
ಗಾಂಧೀಜಿಯವರ ಕುರಿತ ದುರಾಗ್ರಹದ ಪ್ರಶ್ನೆಗಳಿಗೆ ಉತ್ತರ ರೂಪಿಯಾಗಿ ಎಂ. ಜಿ.‌ಹೆಗಡೆಯವರು ಬರೆದಿರುವ ಪುಸ್ತಕ ' ಮಿನುಗು ನೋಟ' (128 ಪುಟ) ದ ಮುಖ ಬೆಲೆ:₹130/-.
ಒಂದು ಪುಸ್ತಕವನ್ನು ಅಂಚೆಯಲ್ಲಿ ತರಿಸಿಕೊಳ್ಳುವುದಾದರೆ:₹ 120/-

ಕನಿಷ್ಠ 25 ಪುಸ್ತಕಗಳನ್ನು ತರಿಸಿಕೊಳ್ಳುವುದಾದರೆ 1 ಪುಸ್ತಕಕ್ಕೆ ₹ 75+ ಸಾಗಾಣಿಕಾ ವೆಚ್ಚದಂತೆ ಕಳಿಸಿಕೊಡಲಾಗುವುದು.
50 ಮತ್ತು ಅದಕ್ಕಿಂತ ಹೆಚ್ಚು ಪುಸ್ತಕಗಳನ್ನು ತರಿಸಿಕೊಳ್ಳುವುದಾದರೆ ಒಂದು ಪುಸ್ತಕಕ್ಕೆ ₹ 75( ಸಾಗಾಣಿಕ ವೆಚ್ಚ ರಹಿತ) ರಂತೆ ಕಳಿಸಲಾಗುವುದು.

ಈ ಬಗ್ಗೆ ಗೂಗಲ್ ಪೇ ಮತ್ತು ಸಂಪರ್ಕಕ್ಕಾಗಿ: 
ಮಹೇಶ್ ಯು. ಎಸ್. [Roopa Publishers]
9342274331

ವರದಿ:

ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ ವಿರೋಧಿಯಲ್ಲದ ಹಿಂದುತ್ವದ ಅಗತ್ಯವಿದೆ: ಸುಧೀಂದ್ರ ಕುಲಕರ್ಣಿ

ಮಂಗಳೂರು, ಜ. 15: ಹಿಂದೂ ವಿರೋಧಿಯಲ್ಲದ ಜಾತ್ಯತೀತತೆ, ಮುಸ್ಲಿಂ ವಿರೋಧಿಯಲ್ಲದ ಹಿಂದುತ್ವ ಎಂದು ಸೂತ್ರ ರೂಪದಲ್ಲಿ ಅರವಿಂದ ಚೊಕ್ಕಾಡಿಯವರು ಹೇಳಿದ ಗಾಂಧಿ ವಿಚಾರ ವೇದಿಕೆಯ ಧ್ಯೇಯ ವರ್ತಮಾನದ ಅಗತ್ಯವಾಗಿದೆ. ಗಾಂಧೀಜಿಯವರ ಮೇಲಿನ ಅಪಪ್ರಚಾರಕ್ಕೆ ಉತ್ತರಿಸುವುದು ಅವಶ್ಯವಿದೆ. ಈ ನಿಟ್ಟಿನಲ್ಲಿ ಎಂ. ಜಿ. ಹೆಗಡೆಯವರು ಬರೆದಿರುವ, ‘ ಮಿನುಗು ನೋಟ’ ಅಗತ್ಯವಾದ ಕೃತಿಯಾಗಿದೆ ಎಂದು ತನ್ನ ಪಕ್ಷದ ಧ್ಯೇಯವನ್ನು ‘ ಗಾಂಧಿ ಪ್ರಣೀತ ಸಮಾಜವಾದ’ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆದಾರರಾಗುದ್ದ, ಪ್ರಸಿದ್ಧ ಅಂಕಣಕಾರ ಸುಧೀಂದ್ರ ಕುಲಕರ್ಣಿ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಪರಿಕಲ್ಪನೆಯಾದ ಗಾಂಧೀಜಿಯವರ ಮೇಲಿನ ಅಪಪ್ರಚಾರಗಳಿಗೆ ಉತ್ತರ ರೂಪವಾಗಿ ಎಂ. ಜಿ. ಹೆಗಡೆಯವರು ಬರೆದಿರುವ, ರೂಪ ಪ್ರಕಾಶನದವರು ಪ್ರಕಟಿಸಿರುವ ‘ ಮಿನುಗು ನೋಟ’ ಪುಸ್ತಕವನ್ನು ಇಂದು ಇಲ್ಲಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಮಹಾತ್ಮಾ ಗಾಂಧಿಯವರು ಮಹಾ ನಾಯಕ. ಆದರೆ ಅವರೂ ವಿಮರ್ಶೆಗೆ ಅರ್ಹರೇ. ಆದರೆ ವಿಮರ್ಶೆ ಎಂದರೆ ಅಪಪ್ರಚಾರವಲ್ಲ. ಆರ್.‌ಎಸ್. ಎಸ್. ನ ಮೋಹನ್ ಭಾಗ್ವತ್ ಅವರು ಗಾಂಧೀಜಿಯನ್ನು ಹೊಗಳುತ್ತಾರೆ. ಆದರೆ ಅವರ ಸ್ವಯಂಸೇವಕರು ಗಾಂಧೀಜಿಯನ್ನು ನಿಂದಿಸುತ್ತಾರೆ.‌ ಆಗ ನೀವು ನಿಮ್ಮ ಸ್ವಯಂ ಸೇವಕರಿಗೆ ಗಾಂಧೀಜಿಯ ಮೇಲೆ ಅಪಪ್ರಚಾರ ಮಾಡಬಾರದು ಎಂದು ಹೇಳಬೇಕು. ಅಥವಾ ನಿಮ್ಮ ನಿಜವಾದ ನಿಲುವು ಏನು ಎಂದು ಹೇಳಬೇಕು. ದೇಶ ವಿಭಜನೆಗೆ ಗಾಂಧಿ ಕಾರಣರಲ್ಲ. ಮುಸ್ಲಿಂ ಲೀಗ್ ಮತ್ತು ಬ್ರಿಟಿಷರು ಕಾರಣ. ಮುಸ್ಲಿಂ ಲೀಗಿನ ದೇಶ ವಿಭಜನೆಯ ಪ್ರಸ್ತಾವನೆಯನ್ನು ಸಾವರ್ಕರ್ ಒಪ್ಪಿದ್ದರು. ಆದರೆ ಗಾಂಧಿ ಒಪ್ಪಿರಲಿಲ್ಲ. ಆದರೂ ಆರೋಪ ಗಾಂಧಿಯ ಮೇಲೆ ಮಾಡುವುದು ಸಮಂಜಸವಲ್ಲ. ಖಿಲಾಫಟ್ ಚಳವಳಿಯಲ್ಲಿ ಗಾಂಧೀಜಿಯೊಂದಿಗಿದ್ದ ಆಲಿ ಸಹೋದರರು 1924 ರಲ್ಲಿ ಕಹುಟದಲ್ಲಿ ನಡೆದ ಕೋಮುಗಲಭೆಗೆ ಮುಸ್ಲಿಂ ಕೋಮುವಾದಿಗಳು ಕಾರಣ ಎಂದು ಗಾಂಧೀಜಿ ಹೇಳಿದ್ದಕ್ಕಾಗಿ ಗಾಂಧೀಜಿಯಿಂದ ದೂರವಾದರು.

ಹಾಗೆ ನೋಡಿದರೆ ಗಾಂಧೀಜಿಯ ಮೇಲೆ ಮೊದಲು ಅಪಪ್ರಚಾರ ಪ್ರಾರಂಭಿಸಿದ್ದು ಕಮ್ಯುನಿಸ್ಟರು. ಕೆಲವೊಮ್ಮೆ ಅಂಬೇಡ್ಕರ್‌ವಾದಿಗಳೂ ಗಾಂಧೀಜಿಯ ಮೇಲೆ ಅಪಪ್ರಚಾರ ನಡೆಸಿದ್ದಾರೆ.‌ ಇತ್ತೀಚೆಗೆ ಆಫ್ರಿಕಾದಲ್ಲಿ ಗಾಂಧೀಜಿ ಕರಿಯರ ವಿರುದ್ದ ಇದ್ದರು ಎಂದು ಅಪಪ್ರಚಾರ ನಡೆದಿತ್ತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕರಿಯರ ಅಭ್ಯುದಯಕ್ಕಾಗಿ ಎಷ್ಟು ಕೆಲಸ ಮಾಡಿದ್ದಾರೆ, ಇಲ್ಲಿ ದಲಿತ ಅಭಿವೃದ್ಧಿಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂದು ಗೊತ್ತಿಲ್ಲದವರು ಆಡುವ ಮಾತುಗಳಿವೆ. ಗಾಂಧೀಜಿಯನ್ನು ಹಿಂದೂ ವಿರೋಧಿ ಎನ್ನುವುದು ಮತ್ತೊಂದು ಅಪಪ್ರಚಾರ. ಜೀವನದುದ್ದಕ್ಕೂ ರಾಮನಾಮವನ್ನು ಜಪಿಸಿದ ಗಾಂಧೀಜಿ ಒಬ್ಬ ಶ್ರೇಷ್ಠ ಹಿಂದೂ ಆಗಿದ್ದರು. ಅವರು ನಮ್ಮ ಋಗ್ವೇದ ಹೇಳುವ,”ಅನೌ ಭದ್ರಾ ಕೃತವೋ ಯಂತು ವಿಶ್ವತಃ” ಎನ್ನುವ ಮಾತನ್ನು ಅಳವಡಿಸಿಕೊಂಡಿದ್ದರು. ಅವರ ಸತ್ಯಾಗ್ರಹದ ಪರಿಕಲ್ಪನೆಯ ಹಿಂದೆ ಇಸ್ಲಾಮಿನ ಪ್ರೇರಣೆಯೂ ಇದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ನಾಯಕರುಗಳಿದ್ದರು. ಸಾವರ್ಕರ್ ಅವರೂ ಸ್ವಾತಂತ್ರ್ಯ ಹೋರಾಟ ಮಾಡಿ ಕಠಿಣ ಶಿಕ್ಷೆಯನ್ನು ಅನುಭವಿಸಿದ್ದರು. ಇವತ್ತು ನಮ್ಮ‌ ನಾಯಕನಿಗೆ ಏನೂ ಹೇಳಬಾರದು. ಗಾಂಧೀಜಿಯನ್ನು ಹೇಗೆ ಬೇಕಾದರೂ ನಿಂದಿಸಬಹುದು ಎಂದಾಗಿದೆ. ಇದನ್ನು ಪ್ರಶ್ನಿಸಬೇಕು. ಆದರೆ ಪ್ರಶ್ನಿಸುವುದು ಮಾತ್ರ ಗಾಂಧಿ ವಿಚಾರ ವೇದಿಕೆಯ ಕೆಲಸವಾಗಬಾರದು. ರಚನಾತ್ಮಕ ಕಾರ್ಯಗಳಿಗೆ ತೊಡಗಬೇಕು. ಆರ್.‌ಎಸ್.‌ಎಸ್. ನವರೊಂದಿಗೂ ಗಾಂಧಿ ವಿಚಾರ ವೇದಿಕೆ ಸಂವಾದ ನಡೆಸಬೇಕು.‌ ರಚನಾತ್ಮಕ ಕಾರ್ಯಗಳಿಗೆ ಗಾಂಧೀಜಿಯೇ ಮುಖ್ಯರಾಗಿದ್ದಾರೆ.‌ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಪರಿಕಲ್ಪನೆಗೆ ಚಾಲನೆ ಕೊಡುವಾಗ ಗಾಂಧೀಜಿಯನ್ನೆ ರಾಯಭಾರಿಯಾಗಿ ತೆಗೆದುಕೊಂಡರು. ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಛತೆ ಮುಖ್ಯ ಎನ್ನುವಷ್ಟು ಸ್ವಚ್ಛತೆಯ ಬಗ್ಗೆ ಕಾಳಜಿ ಇದ್ದವರು ಗಾಂಧೀಜಿ.‌

ಗಾಂಧಿ ವಿಚಾರ ವೇದಿಕೆ ಮಂಗಳೂರಿನ ವ್ಯಾಸ ಪೀಠ ಇರಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ಗುಲ್ಬರ್ಗ, ಬೆಂಗಳೂರು, ಕೊಪ್ಪಳ, ತೀರ್ಥಹಳ್ಳಿ, ವಿಜಾಪುರದಿಂದೆಲ್ಲ ಬಂದವರನ್ನು ನೋಡಿದಾಗ ಇದು ಇಡೀ ರಾಜ್ಯದ ವೇದಿಕೆ ಎಂದು ಗೊತ್ತಾಯಿತು. ಅಥಣಿಯಲ್ಲಿ ಇದರ ಒಂದು ಘಟಕವನ್ನು ಮಾಡಲು ನಾನು ಬದ್ಧನಿದ್ದೇನೆ. ದಕ್ಷಿಣ ಕನ್ನಡದಲ್ಲಿ ಇದು ಹೆಚ್ಚು ಕ್ರಿಯಾಶೀಲವಿರಬೇಕಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ದಕ್ಷಿಣ ಕನ್ನಡ ಅಪಾರ ಕೊಡುಗೆ ಕೊಟ್ಟಿದೆ. ಇಲ್ಲಿಯೇ ಕೋಮುಗಲಭೆಗಳು ನಡೆಯುವುದು ಬೇಸರದ ಸಂಗತಿ. ಕೋಮುವಾದಕ್ಕೆ ಆಸ್ಪದ ಕೊಡಬೇಡಿ ಎಂದು ನಾನು ನನ್ನ ಹಿಂದೂ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಅದೇ ರೀತಿ ಮುಸ್ಲಿಮರಲ್ಲೂ ಕೋಮುವಾದ ಇದೆ. ಮುಸ್ಲಿಮರೂ ತಮ್ಮಲ್ಲಿನ ಕೋಮುವಾದವನ್ನು ವಿರೋಧಿಸಬೇಕು ಎಂದು ಮುಸ್ಲಿಂ ಬಾಂಧವರಲ್ಲೂ ಮನವಿ ಮಾಡುತ್ತಿದ್ದೇನೆ.

ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆಯವರು ಅವರ ಗಾಂಧಿವಾದಿ ಅಜ್ಜನ ಬಗ್ಗೆ ಬರೆಯುತ್ತಾ ಹೇಳಿದ ಮಾತುಗಳು ಎಂಥ ಉದಾತ್ತ ಚಿಂತನೆ ಉಳ್ಳವರು ನಾರಾಯಣ ಭಿಡೆಯವರಾಗಿದ್ದರು ಎಂದು ಸೂಚಿಸುತ್ತದೆ. ಎಂ. ಜಿ. ಹೆಗಡೆಯವರು ಇಂದಿನ ಅಗತ್ಯವೊಂದನ್ನು ಪೂರೈಸಿಕೊಟ್ಟಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಸುಧೀಂದ್ರ ಕುಲಕರ್ಣಿ ನುಡಿದರು.

ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರೀಧರ ಭಿಡೆ ಅಧ್ಯಕ್ಷತೆ ವಹಿಸಿದ್ದರು.‌ಆಡಳಿತಾಧಿಕಾರಿ ಭಾಗ್ಯೇಶ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಮಾತನಾಡಿದರು. ಗಾಂಧಿ ವಿಚಾರ ವೇದಿಕೆಯ ಮಂಗಳೂರು ಘಟಕದ ಗೌರವಾಧ್ಯಕ್ಷೆ ಬಿ.‌ಎಂ.‌ರೋಹಿಣಿ ವಂದಿಸಿದರು. ಈ ಸಂದರ್ಭದಲ್ಲಿ ಕೃತಿಯ ಲೇಖಕ ಎಂ.‌ಜಿ.‌ಹೆಗಡೆ, ಮತ್ತು ಅವರ ಪತ್ನಿ ಲಕ್ಷ್ಮೀ ಹಾಗೂ ಗಾಂಧಿ ವಿಚಾರ ವೇದಿಕೆಗೆ ಹಲವು ಬಾರಿ ಹಣದ ನೆರವು ನೀಡಿದ ಎಂ. ಕೆ. ಸುಬ್ರಹ್ಮಣ್ಯ ಅವರನ್ನು ಸಂಮ್ಮಾನಿಸಲಾಯಿತು.‌ ಹಣಕಾಸು ನೆರವು ನೀಡುದ ವಿಜಯೇಂದ್ರ ಪಾಟೀಲ್, ಗುರುರಾಜ್ ಎನ್ ಅವರನ್ನು ಗುರುತಿಸಲಾಯಿತು. ವೇದಾ ಅಠವಳೆ ಅವರು ರಚಿಸಿದ ಗಾಂಧಿ ವಂದನ ಗೀತೆಯನ್ನು ಕು| ಚಿರಶ್ರೀ ಹಾಡಿದರು.

ಈ ಸಂದರ್ಭದಲ್ಲಿ ಸುಧೀಂದ್ರ ಕುಲಕರ್ಣಿ ಅವರೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.‌ ಜೋಸೆಫ್ ಎನ್. ಎಂ, ಸಾಮಾಜಿಕ ಕಾರ್ಯಕರ್ತೆ ಸ್ವರ್ಣ ಭಟ್, ಕವಿ ಸುಬ್ರಾಯ ಚೊಕ್ಕಾಡಿ, ಸಂಶೋಧಕ ಡಾ.‌ಕೆ. ಚಿನ್ನಪ್ಪ ಗೌಡ, ವೈದ್ಯರಾದ ಡಾ.‌ಮುರಳೀಮೋಹನ, ಡಾ.‌ಕುಶ್ವಂತ್ ಕೋಳಿಬೈಲು, ಪ್ರೊ. . ಬಾಲಚಂದ್ರ ಗೌಡ, ಡಾ. ಶಿವಪ್ರಕಾಶ್ ಎನ್, ವಿದ್ಯಾ ನಾಯಕ್, ವಿವೇಕಾನಂದ ಕಾಮತ್, ಎ.‌ಕೆ.‌ಕುಕ್ಕಿಲ, ಅಬ್ದುಲ್ ಮುನೀರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ. ಆರ್.‌ಲೋಬೋ, ಡಾ.‌ಸುರೇಶ ನೆಗಳಗುಳಿ, ರೇಮಂಡ್ ತಾಕೊಡೆ, ನೀಲಾವರ ಸುರೇಂದ್ರ ಅಡಿಗ, ಸೋಮಪ್ರಕಾಶ್ ಬೆಂಗಳೂರು, ನೇತಾಜಿ ಗಾಂಧಿ ವಿಜಾಪುರ, ಗಿರೀಶ್ ಪಾಟೀಲ್ ಗುಲ್ಬರ್ಗ, ಹರಿಪ್ರಸಾದ್ ಅಡ್ಪಂಗಾಯ, ಬಸವರಾಜ ಸವಡಿ ಕೊಪ್ಪಳ, ರಮೇಶ್ ಶೆಟ್ಟಿ ಮತ್ತು ಮಂಜುನಾಥ್ ತೀರ್ಥಹಳ್ಳಿ, ರೇಮಂಡ್ ಡಿಕೂನ ತಾಕೊಡೆ, ಡಾ. ಉದಯ ಕುಮಾರ್ ಇರ್ವತ್ತೂರು, ಒ.‌ಆರ್. ಪ್ರಕಾಶ್, ಡಾ. ಪೂವಪ್ಪ‌ ಕಣಿಯೂರು, ಲಕ್ಷ್ಮೀಶ ಗಬಲಡ್ಕ, ಝೇವಿಯರ್ ಡಿಸೋಜಾ, ಪೃಥ್ವೀರಾಜ ಶೆಟ್ಟಿ, ನವೀನ್ ರೈ, ಉಮ್ಮರ್ ಬ್ಯಾರಿ ಸಾಲೆತ್ತೂರು ಮುಂತಾದವರು ಭಾಗವಹಿಸಿದ್ದರು.

ಮಿನುಗು ನೋಟ – ಗಾಂಧೀಜಿ ಕುರಿತ [ಪ್ರಶ್ನೆ – ಉತ್ತರ] ಪುಸ್ತಕ ಅನಾವರಣ.

2 thoughts on “ಮಿನುಗು ನೋಟ – ಗಾಂಧೀಜಿ ಕುರಿತ [ಪ್ರಶ್ನೆ – ಉತ್ತರ] ಪುಸ್ತಕ ಅನಾವರಣ.

 • January 26, 2023 at 07:51 PM
  Permalink

  ‘ ಮಿನುಗು ನೋಟ’ ದ ಬಗ್ಗೆ ಬಾಲಸುಬ್ರಹ್ಮಣ್ಯಂ ಎನ್. ಆರ್. ಅವರ ಮಾತುಗಳು:

  ಶ್ರೀಯುತ ಅರವಿಂದ ಚೊಕ್ಕಾಡಿಯವರ ಫೇಸ್ ಬುಕ್ ಬರಹಗಳ ಮೂಲಕ ಈ ಪುಸ್ತಕದ ಬಗ್ಗೆ ಓದಿದ್ದ ನಾನು ಬಿಡುಗಡೆಯಾದ ತಕ್ಷಣವೇ ಅಂಚೆ ಮೂಲಕ ತರಿಸಿ ಕುತೂಹಲದಿಂದ ಓದಿದೆ.

  ಪುಸ್ತಕದ ಮೂಲ ಉದ್ದೇಶ ಗಾಂಧಿ ಕುರಿತ ತಪ್ಪು ಆರೋಪ, ಕಲ್ಪನೆಗಳನ್ನು ಸಾಧ್ಯವಾದಷ್ಟು ದಾಖಲೆ ಪುರಾವೆಗಳ ಹಾಗೂ ಅವರ ಚಿಂತನೆಗಳನ್ನು ಬೇರೆ ಬೇರೆ ಅಯಾಮಗಳಿಂದ ಪುನರ್ವಿಮರ್ಶಿಸುವ ಮೂಲಕ ಅವರ ವಿರೋಧಿಗಳಿಗೂ ಅರಿವು ಮೂಡಿಸುವ ಪ್ರಯತ್ನವೇ ಆಗಿದೆ.

  ಅರವಿಂದ ಚೊಕ್ಕಾಡಿಯವರ ಪ್ರಸ್ತಾವನೆ ಅವರ ಪರಿಕಲ್ಪನೆಗನುಗುಣವಾಗಿದ್ದು ಅಲ್ಲಿಯೇ ಓದುಗರಿಗೆ ಒಂದು ಉತ್ತಮ ಪ್ರವೇಶಿಕೆ ಒದಗಿಸುತ್ತದೆ. ಇಲ್ಲಿನ ಬಹುತೇಕ ಲೇಖನಗಳು ಸಾಮಾನ್ಯ ಓದುಗರ ಮನಸ್ಸಿನಲ್ಲಿ ಇರಬಹುದಾದ, ಬಂದು ಹೋಗಿರುವ ಸಂದೇಹಗಳಿಗೆ ಅತ್ಯಂತ ಸಮಂಜಸವಾಗಿ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ನಿಜವಾಗಿ ಗಾಂಧಿಯವರನ್ನು ವಿರೋಧಿಸುವವರು ಯಾವುದೇ ಪೂರ್ವಾಗ್ರಹಗಳಿಲ್ಲದೆ ಮುಕ್ತ ಮನಸ್ಸಿನಿಂದ ಓದಬೇಕಷ್ಟೇ. ಇದೇ ನಿಜವಾದ ಸವಾಲು. ಇದೇನೇ ಇರಲಿ ಗಾಂಧಿಯವರನ್ನು ಓದಿ ಅರ್ಥ ಮಾಡಿಕೊಳ್ಳಲು ಒಂದು ಪ್ರಬುದ್ದ ಮನಸ್ಸಿರಬೇಕು. ಆಗ ಈ ಪುಸ್ತಕಕ್ಕೆ ಪೂರಕವಾಗಿ ಇನ್ನೂ ಹಲವು ಗಾಂಧಿ ಕುರಿತ ಸಾಹಿತ್ಯ ಓದಬೇಕನಿಸುತ್ತದೆ. ಇತ್ತೀಚಿಗೆ ಇಪ್ಪತ್ತೈದನೆ ಮುದ್ರಣ ಕಂಡ ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ ಗಾಂಧಿಯವರ ಕುರಿತ ಅನೇಕ ಪುಸ್ತಕಗಳನ್ನು ಆಧರಿಸಿ ಬರೆದಿರುವ ಅಪರೂಪದ ಎಲ್ಲರೂ ಓದಲೇ ಬೇಕಾದ ಕೃತಿ.

  Reply
 • January 26, 2023 at 07:52 PM
  Permalink

  ಮಂಜು ಮಾಸ್ತರ್ ಅವರು ‘ ಮಿನುಗು ನೋಟ’ ದ ಬಗ್ಗೆ ಬರೆದ ರಿವ್ಯೂ:

  ಅಹಿಂಸೆಯ ಪಥದಲ್ಲಿ ಸತ್ಯಾಗ್ರಹದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟವನ್ನು ವಿನೂತನವಾಗಿ ಮುನ್ನಡೆಸಿದವರು ಮಹಾತ್ಮ ಗಾಂಧಿ , ಅವರಲ್ಲಿ ಸದಾಕಾಲ ಇದ್ದುದು ಶುದ್ಧ ಪ್ರೀತಿ , ಸಕಲರಲ್ಲೂ ದೈವಿಕತೆ ಕಾಣುತ್ತಿದ್ದ ಅವರು ಎಂದೂ ಹಿಂಸೆಯತ್ತ ಮನಮಾಡಲಿಲ್ಲ , ಯಾರೊಬ್ಬರ ಕುರಿತಾಗಿಯೂ ಅಸಹನೆ ತೋರಲಿಲ್ಲ . ಸತ್ಯಶೋಧನೆ , ನ್ಯಾಯಪಾಲನೆ ಅವರಲ್ಲಿ ರಕ್ತಗತವಾಗಿದ್ದವು . ಸದಾಚಾರ ಮಾರ್ಗದಲ್ಲಿ ಚಲಿಸುವುದೇ ಅವರ ಗಟ್ಟಿ ನಿಷ್ಠೆಯಾಗಿತ್ತು . ಹೀಗೆಂದೇ ನೊಬೆಲ್ ಪುರಸ್ಕೃತ ಮಹಾನ್ ಕವಿ ರವೀಂದ್ರನಾಥ ಠಾಗೂರರು ಗಾಂಧೀಜಿಯವರನ್ನು ‘ ಮಹಾತ್ಮ ಗಾಂಧಿ ‘ ಎಂದು ಕರೆದಿದ್ದು .ಸುಭಾಷ್ ಚಂದ್ರ ಬೋಸ್ ರಾಷ್ಟ್ರಪಿತ ಎಂದಿದ್ದು.

  ಗಾಂಧಿ ಮರಣಿಸಿ ಮುಕ್ಕಾಲು ಶತಮಾನಗಳ ನಂತರವು ಅವರ ಬಗ್ಗೆ ಅವರ ಚಿಂತನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೆ ಅವರ ಚಿಂತನೆಗಳು ಸಮಾಜದ ಮೇಲೆ ಬೀರಿದ ಪ್ರಭಾವ ಮತ್ತು ಪ್ರಸ್ತುತೆಯ ಬಗ್ಗೆ ತಿಳಿಯಬಹುದು.

  ಜಗತ್ತಿಗೆ ಬುದ್ದನ ನಂತರ ಭಾರತದ ICON ಎಂದು ಗಾಂಧಿಯವರನ್ನು ತೋರಿಸಿದರು ಅವರ ಬಗೆಗಿನ ಅಸ್ಪಷ್ಟತೆಯಿಂದ ಜ್ಞಾನದ ಕೊರತೆಯಿಂದ ಅವರ ಅಹಿಂಸಾ ತತ್ವದ ಬಗ್ಗೆ, ಅವರ ಸತ್ಯ ಶೋಧನೆಯ ಬಗ್ಗೆ ಕುಹಕ ,ಅಪಸ್ವರ,ಅಸಹನೆ,ವಿಷ ಕಾರುತ್ತಲೆ ಇದ್ದಾರೆ. ಈ SOCIAL MEDIA ಬಂದ ನಂತರ ಒಂದು ವರ್ಗ ಗಾಂಧಿಯ ಬಗ್ಗೆ ದೇಶ ವಿಭಜನೆ, ದೇಶ ವಿಭಜನೆಯ ನಂತರದ ಕೋಮು ಗಲಭೆಯಲ್ಲಿ ಒಂದು ಸಮುದಾಯದ ಪರ ನಿಂತರು,ಉಪವಾಸ ಸತ್ಯಾಗ್ರಹ ಮಾಡಿ ಪಾಕಿಸ್ತಾನಕ್ಕೆ 50 ಕೋಟಿ ಹಣ ಬಿಡುಗಡೆ ಮಾಡಿಸಿದರು,ದೇಶದ ಇಂದಿನ ಪರಿಸ್ಥಿತಿಗೂ ಸಹ ಗಾಂಧಿಜೀ ಕಾರಣ! ಎಂಬ ಅಪಪ್ರಚಾರ ಮಾಡುತ್ತಿರುತ್ತಾರೆ.
  ಜನ ಸಾಮಾನ್ಯರನ್ನ ಬಿಡಿ,ಅದರಲ್ಲೂ ಶಿಕ್ಷಕರು ಸಹ ಗಾಂಧಿಯ ಬಗ್ಗೆ ಕುಹಕ ವ್ಯಕ್ತಪಡಿಸುವರನ್ನು ಕಂಡಿದ್ದೇನೆ. ಇಂತಹವರ ಎಲ್ಲ ಪ್ರಶ್ನೆಗಳಿಗೆ “ಮಿನುಗು ನೋಟ”ದಲ್ಲಿ ಉತ್ತರಿಸಿದ್ದಾರೆ.

  ಗಾಂಧಿ ವಿಚಾರ ವೇದಿಕೆಯವರು ಸಾರ್ವಜನಿಕವಾಗಿ ಗಾಂಧಿಜೀಯವರ ಕುರಿತು ಪ್ರಶ್ನೆ ಸಂದೇಶಗಳನ್ನು ಕೇಳಿ, ಅವುಗಳಿಗೆ ಉತ್ತರವಾಗಿ ಗಾಂಧಿಯವರ ಆತ್ಮಕಥೆ ,ಅವರು ಬರೆದ ಪತ್ರಗಳು,ಅವರ ಸಮಕಾಲಿನವರು ಬರೆದ ಲೇಖನಗಳು,ಕೃತಿಗಳು,ಕುಟುಂಬದವರು ದಾಖಲಿಸಿದ ಸಂಗತಿಗಳನ್ನು ಪರಿಶೀಲಸಿ,ದಾಖಲೆಗಳ ಮೂಲಕವೇ ಉತ್ತರ ನೀಡಿದ್ದಾರೆ.

  ಪ್ರಸ್ತಾವನೆಯಲ್ಲಿ ಶಿಕ್ಷಕರು, ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಯಾದ ಅರವಿಂದ ಚೊಕ್ಕಾಡಿ ಅವರು
  ಚರಕವು ಹೇಗೆ ಸ್ವತಂತ್ರ ಹೋರಾಟಕ್ಕೆ ಪೂರಕವಾಯಿತು?ಗಾಂಧೀಜಿಯವರ ವೈರುದ್ಯಗಳು,ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸೆಯ ಮಹತ್ವ,ಪೂನ ಒಪ್ಪಂದ,ಪಾಕಿಸ್ತಾನದ 55 ಕೋಟಿ ರೂಪಾಯಿ,ಭಗತ್ ಸಿಂಗ್‌ಗೆ ನೀಡಿದ ಗಲ್ಲು ಶಿಕ್ಷೆ ಗಾಂಧಿ ತಪ್ಪಿಸಬಹುದಿತ್ತು,ನೆಹರು ಅವರನ್ನ ಪ್ರಧಾನಿ ಮಾಡಿದ್ದರ ಕುರಿತು,ದೇಶ ವಿಭಜನೆಯನ್ನು ಗಾಂಧಿ ತಡೆಯಬಹುದಿತ್ತು ಮುಂತಾದ ವಿಚಾರಗಳಿಗೆ ಮತ್ತು ಸಂಶಯಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  ಈ ಪುಸ್ತಕದಲ್ಲಿ 20 ಲೇಖನಗಳಿವೆ.
  ಗಾಂಧಿಜಿ ಹಿಂದು ವಿರೋಧಿ/ದೇಶ ವಿಭಜನೆ ಮಾಡಿದರು ಎಂಬುವುದು ಅವರ ಮೇಲಿನ ಪ್ರಮುಖ ಆರೋಪ .ಅದಕ್ಕಾಗಿ ಗೂಡ್ಸೆ ಗಾಂಧಿ ಅವರನ್ನು ಕೊಂದಿದ್ದು ಎನ್ನುವ ಸಮರ್ಥಕರಿದ್ದಾರೆ.ಆ ಸಮರ್ಥನೆಗೆ ಬಳಸುವುದು ಗೋಪಾಲ ಗೂಡ್ಸೆ ಬರೆದ ನಾನೇಕೆ ಗಾಂಧಿ ಹತ್ಯೆ ಮಾಡಿದೆ ಎಂಬ ಪುಸ್ತಕ.ಮೊದಲ ಲೇಖನದಲ್ಲಿ ಆ ಪ್ರಶ್ನೆಗೆ ಉತ್ತರ ದಾಖಲೆಯ ಸಮೇತ ನೀಡಿದ್ದಾರೆ.ಪುಸ್ತಕ ಮೂಲ ಎಂದು ಹೇಳಲಾದ ಗೂಡ್ಸೆ ಹೇಳಿಕೆ 8 ಪುಟಗಳದ್ದು, ಆದರೆ ಪುಸ್ತಕ 150 ಪುಟಗಳದ್ದು.! ಗೂಡ್ಸೆ ನ್ಯಾಯಲಯದಲ್ಲಿ ನೀಡಿದ English ಅನುವಾದ ಪುಸ್ತಕದಲ್ಲಿದೆ.

  ರಾಷ್ಟಪಿತ/ ಮಹಾತ್ಮ..

  ಗಾಂಧಿ ತನ್ನನ್ನ ಎಲ್ಲಿಯೂ ಮಹಾತ್ಮ ಎಂದು ಹೇಳಿಕೊಂಡಿಲ್ಲ,ಸರಕಾರದ ಅಧಿಕೃತ ಘೋಷಣೆಯು ಅಲ್ಲ. ಗಾಂಧಿಯನ್ನ ಮಹಾತ್ಮ ಎಂದು ಕರೆದಿದ್ದು ಮಹಾನ್ ಕವಿ ರವೀಂದ್ರನಾಥ ಟಾಗೋರ್. ಸಮಾಜ ಗಾಂಧಿಯನ್ನ ಮಹಾತ್ಮನನ್ನಾಗಿ ಸ್ವೀಕರಿಸಿದೆ ಇಲ್ಲದಿದ್ದರೆ ಗಾಂಧಿ ಕೇವಲ ಎಂ.ಕೆ ಗಾಂಧಿ ಅಷ್ಟೇ…! ಗಾಂಧಿ ಮಹಾತ್ಮ ಎನ್ನಿಸಿಕೊಂಡಿದ್ದು ಬದುಕಿನ ರೀತಿಯಿಂದ.

  ಗಾಂಧೀ ಸರ್ದಾರ್ ಪಟೇಲರಿಗೆ ದ್ರೋಹ ಬಗೆದರೆ? ಕಾಂಗ್ರೆಸ್ ಮತ್ತು ಗಾಂಧಿ,RSS ಮತ್ತು ಗಾಂಧಿ,ರಾಷ್ಟ್ರಪಿತನ ವಿಶೇಷಗಳು ಮುಂತಾದ ಲೇಖನಗಳಿವೆ.

  ಕೊನೆಯದಾಗಿ..
  ಜಗತ್ತಿನಲ್ಲಿ ಯಾರು ಪ್ರಶ್ನಾತೀತರಲ್ಲ.ಗಾಂಧೀಯನ್ನು ಪ್ರಶ್ನಿಸುವುದು ಸಹ ತಪ್ಪಲ್ಲ.ಆದರೆ ಗಾಂಧಿಜಿ ಕುರಿತು ಜಗತ್ತಿನಾದ್ಯಂತ ಲಕ್ಷಕ್ಕೂ ಮೀರಿದ ಪುಸ್ತಕಗಳಿವೆ,ಅವರೆ ಬರೆದ 50 ಸಾವಿರಕ್ಕೂ ಮಿಕ್ಕಿ ಪತ್ರಗಳಿವೆ,ಕೆಲವು ಪುಟಗಳನ್ನು ಓದದೆ ಗಾಂಧಿಯ ವ್ಯಕ್ತಿತ್ವವನ್ನು ಲೇವಡಿ ಮಾಡುವ,ಚಾರಿತ್ರ್ಯಹೀನರಂತೆ ಬಿಂಬಿಸುವ ,ಗಾಂಧಿಯ ಚಿಂತನೆಗಳನ್ನು ತುಚ್ಚೀಕರಿಸುವ ದಾವಂತದಲ್ಲಿದ್ದಾರೆ.

  ಗಾಂಧೀಜಿಯವರನ್ನ ಪ್ರಶ್ನಿಸಿ/ಟೀಕಿಸಿ/ನಿಂದಿಸಿ ಮುಗಿದ ಮೇಲು ಅವರನ್ನ ಪ್ರೀತಿಸಲು ಕಾರಣಗಳು ಉಳಿಯುತ್ತವೆ.ಗಾಂಧಿಯವರ ಬಗೆಗಿನ ಚಿಂತನ -ಮಂಥನ ಅವರ ತತ್ವಾದರ್ಶಗಳು ನಿರಂತರ ಹರಿವಿಗೆ ಪೂರಕವಾಗಿರುತ್ತವೆ. ಗಾಂಧಿ ಬಗೆಗಿನ ಸಭ್ಯ ಸಂವಾದ ನಡೆಯುತ್ತಲೆ ಇರಲಿ.

  120 ಪುಟಗಳ ಮಿನುಗುನೋಟವನ್ನ ರೂಪ ಪ್ರಕಾಶನದವರು ಹೊರತಂದಿದ್ದರೆ.
  ಲೇಖಕರು:M G ಹೆಗಡೆ
  ಪರಿಕಲ್ಪನೆ ಮತ್ತು ಪ್ರಸ್ತುತಿ: ಗಾಂಧಿ ವಿಚಾರ ವೇದಿಕೆ

  Reply

Leave a Reply

Your email address will not be published. Required fields are marked *