ಪ.ರಾ.ಶಾಸ್ತ್ರಿಯವರ ಅಭಿನಂದನೆಯ ಸಂದರ್ಭದಲ್ಲಿ ಈ ವಾರದ ‘ಜೈ ಕನ್ನಡಮ್ಮ’ ದಲ್ಲಿ ಅವರ ಕುರಿತ ಶ್ರೀ ಅರವಿಂದ ಚೊಕ್ಕಾಡಿ ಯವರ ಲೇಖನ:

ಬದುಕೇ ಸಾಹಿತ್ಯ: ಪ. ರಾ. ಶಾಸ್ತ್ರಿ

  • ಅರವಿಂದ ಚೊಕ್ಕಾಡಿ

ನನ್ನ ಮಗನ‌ ನಾಮಕರಣಕ್ಕೆ ಪ. ರಾ. ಶಾಸ್ತ್ರಿ ಎಂದೇ ಖ್ಯಾತರಾದ ಪ. ರಾಮಕೃಷ್ಣ ಶಾಸ್ತ್ರಿ ಬಂದಿದ್ದರು. ಶಿಶುವನ್ನು ಎತ್ತಿ ಆಡಿಸತೊಡಗಿದರು.‌ ಹಸುಳೆಗಳನ್ನು ಹಿಡಿದುಕೊಳ್ಳುವುದು ಸುಲಭವಿಲ್ಲ; ಅದಕ್ಕೊಂದು ಪರಿಣಿತಿ ಬೇಕು. ಇದೀಗ ಎಪ್ಪತ್ತನೆಯ ವರ್ಷ ವಯಸ್ಸಿನ ವೇಳೆಗೆ ಬೆಳ್ತಂಗಡಿಯಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತಿರುವ ಹಿರಿಯ ಸಾಹಿತಿ ಪ. ರಾ. ಶಾಸ್ತ್ರಿಯವರಿಗೆ ಹಸುಳೆಗಳನ್ನು ಹಿಡಿದುಕೊಳ್ಳುವ ಪರಿಣಿತಿಯೂ ಇದೆ.

ಪ.‌ರಾ. ಶಾಸ್ತ್ರಿಯವರ ಪರಿಣಿತಿ ಹಸುಳೆಗಳನ್ನು ಎತ್ತಿಕೊಳ್ಳುವುದಕ್ಕಷ್ಟೆ ಸೀಮಿತವಲ್ಲ. ಅವರು ಕೃಷಿ ಮಾಡಬಲ್ಲರು. ಮರ ಹತ್ತಬಲ್ಲರು. ಪೂಜೆಯನ್ನೂ ಮಾಡಬಲ್ಲರು.‌ ನಾಯಕನೂ ಆಗಬಲ್ಲರು.‌ ಅನುಯಾಯಿಯೂ ಆಗಬಲ್ಲರು. ಕಸ ಗುಡಿಸಿ ಸ್ವಚ್ಛ ಮಾಡಬಲ್ಲರು. ಬಟ್ಟೆ ತೊಳೆಯಬಲ್ಲರು.‌ ಇಷ್ಟೆಲ್ಲ ಆಗಿಯೂ ಅವರು ಮನದುಂಬಿ ತನ್ಮಯತೆಯಿಂದ ಸಾಹಿತ್ಯ ಸೃಷ್ಟಿ ಮಾಡಬಲ್ಲರು.‌ ಇಡೀ ಜೀವನವನ್ನೆ ಕಲಿಕೆಯಾಗಿ ಅನುಭವಿಸುತ್ತಾ ಬಂದವರು;ಈ ಕ್ಷಣಕ್ಕೂ ಹೊಸದೇನಾದರೂ ಬಂದರೆ ತಕ್ಷಣವೇ ಕಲಿತುಕೊಳ್ಳಬಲ್ಲವರು ಪ. ರಾ. ಶಾಸ್ತ್ರಿ. ಶಾಸ್ತ್ರಿಯವರು ಸುಮಾರು ಹನ್ನೆರಡು ಸಾವಿರ ಪತ್ರಿಕಾ ಲೇಖನಗಳನ್ನು ಬರೆದಿದ್ದಾರೆ. ನೂರಾ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಣ್ಣ ದೇಹ, ಬೃಹತ್ ಪ್ರತಿಭೆಯ ಪ. ರಾ. ಶಾಸ್ತ್ರಿಯವರು ಇಂದಿಗೂ ಎಲ್ಲಿಗೇ ಪ್ರಯಾಣ ಮಾಡುವುದಿದ್ದರೂ ಕಾಲಿಗೆ ಚಪ್ಪಲಿ ಧರಿಸುವುದಿಲ್ಲ. ಬಾಲ್ಯದ ಬಡತನ. ಚಪ್ಪಲಿ ಇಲ್ಲ. ಒಮ್ಮೆ ಶಾಸ್ತ್ರಿಯವರ ತಂದೆ ತೆಗೆದುಕೊಟ್ಟ ಚಪ್ಪಲಿ ಕಾಲಿಗಿಂತ ದೊಡ್ಡದಾಗಿತ್ತು. ಹಾಗೆ ಚಪ್ಪಲಿ ಬಿಟ್ಟವರು ಮತ್ತೆ ಧರಿಸಲಿಲ್ಲ.

ಶಾಸ್ತ್ರಿಯವರ ಒಳಗೂ ಒಂದು ಸಾಂಸ್ಕೃತಿಕ ಲೋಕವಿದೆ;ಸುತ್ತಮುತ್ತಲೂ ಒಂದು ಸಾಂಸ್ಕೃತಿಕ ಲೋಕವಿದೆ. ಆ ಲೋಕದಲ್ಲಿ ಕೇವಲ ಮನುಷ್ಯರು ಮಾತ್ರ ಇರುವುದಲ್ಲ;ಮೃಗಗಳಿವೆ, ಪಕ್ಷಿಗಳಿವೆ, ಕಾಡು, ಮರ, ಬೆಟ್ಟ, ಬಯಲು, ನದಿ, ಜಲಪಾತ ಎಲ್ಲವೂ ಇಲ್ಲ. ಶಾಸ್ತ್ರಿಯವರ ವೈಯಕ್ತಿಕ ಬದುಕು ಸಮಗ್ರತೆಯಿಂದ ಸಂಪನ್ನವಾಗಿದೆ. ಅವರ ಸಾಹಿತ್ಯವೂ ಸಮಗ್ರತೆಯಿಂದ ಸಂಪನ್ನವಾಗಿದೆ. ಪತ್ರಿಕಾ ವರದಿಗಳನ್ನೂ ಮಾಡಿದ ಶಾಸ್ತ್ರಿಯವರು ಮಕ್ಕಳ‌ ಸಾಹಿತ್ಯ, ಕಥೆ, ಕಾದಂಬರಿ, ಕೃಷಿ ಸಾಹಿತ್ಯ, ವಿಜ್ಞಾನ ಲೋಕ, ವಿಸ್ಮಯಗಳು…ಹೀಗೆ ಏನೆಲ್ಲವನ್ನೂ ಬರೆದಿದ್ದಾರೆ. ಬರೆದದ್ದು ಪ್ರಕಟವೂ ಆಗಿದೆ. ಸಾಹಿತ್ಯದ ಇತರ ಪ್ರಕಾರಗಳನ್ನು ಬರೆಯುವವರಿಗೆ ಮಕ್ಕಳ ಸಾಹಿತ್ಯ ರಚನೆ ತುಸು ಕಷ್ಟ. ಏಕೆಂದರೆ ಮಕ್ಕಳ ಮನೋಲೋಕಕ್ಕೆ ಹೊಂದಿಕೊಳ್ಳುವುದು ಅಸಾಧಾರಣವಾದ ಆಂತರಂಗಿಕ ಪರಿಶ್ರಮವನ್ನು ಬಯಸುತ್ತದೆ. ಮಕ್ಕಳ ಮನೋಲೋಕವನ್ನು ಪ್ರವೇಶಿಸಿದವರಿಗೆ ಇತರ ಸಾಹಿತ್ಯಕ್ಕೆ ಬೇಕಾದ ವಿಚಾರ ಲೋಕ ಯಾವಾಗಲೂ ಕಷ್ಟವೇ. ಇವರೆಡನ್ನೂ ಸಾಧಿಸಿದವರು ಪ.ರಾ.ಶಾಸ್ತ್ರಿಯವರು. ಶಾಸ್ತ್ರಿಯವರು ಬರೆದಷ್ಟು ವೈವಿಧ್ಯಮಯವಾದ ವಿಷಯಗಳ ಬಗ್ಗೆ ಬರೆದವರು ವಿರಳ.‌

ಶಾಸ್ತ್ರಿಯವರ ಸಾಹಿತ್ಯದಲ್ಲಿ ಗುರುತಿಸಲೇ ಬೇಕಾದ ಬಹಳ ಮುಖ್ಯವಾದ ಅಂಶ ಯಾವುದೂ ಸಣ್ಣ ಸಂಗತಿ ಎಂಬುದು ಇಲ್ಲ ಎನ್ನುವುದು. ತರಕಾರಿ ಬೆಳೆಯುವುದರ ಬಗ್ಗೆಯೂ ಅವರು ಬರೆಯುತ್ತಾರೆ. ಅವರ ಸಾಹಿತ್ಯದಲ್ಲಿ ನಾಯಿಯೂ ಪ್ರಧಾನ ಪಾತ್ರಧಾರಿಯಾಗಿ ಬರುತ್ತದೆ.‌ ರಸ್ತೆ, ಮೋರಿ, ಸಂಕಗಳೂ ಸಾಹಿತ್ಯದಲ್ಲಿ ಸೇರಿಕೊಳ್ಳುತ್ತವೆ. ಇವೆಲ್ಲವೂ ಬದುಕಿನ ಸುತ್ತ ಕೇಂದ್ರೀಕೃತವಾಗಿರುವ ಸಂಗತಿಗಳೇ ಆಗಿದ್ದು ಎಲ್ಲರ ಅನುಭವಕ್ಕೂ ಬರುವ ಸಾಮಾನ್ಯ ಸಂಗತಿಗಳೇ ಶಾಸ್ತ್ರಿಯವರಿಂದ ಸಾಹಿತ್ಯವಾಗಿ ರೂಪುತಳೆಯುತ್ತದೆ.‌ ಆದರೆ ಸಾಮಾನ್ಯ ಅನುಭವಗಳು ಸಾಹಿತ್ಯವಾಗಿ ರೂಪ ಪಡೆಯುವಾಗ ಅದರಲ್ಲಿ ಕಾಣಿಸಿಕೊಳ್ಳುವ ಕಲಾತ್ಮಕ ವಿನ್ಯಾಸ, ಕಥನ ಕ್ರಮ, ನಿರೂಪಣಾ ತಂತ್ರಗಳು ಮನಸಿನಲ್ಲಿ ಮಾರ್ದವತೆಯನ್ನು ಹುಟ್ಟು ಹಾಕುತ್ತದೆ. ಸಾಮಾನ್ಯ ಅನುಭವಗಳನ್ನೆ ವಿಶಿಷ್ಠ ಅನುಭವವಾಗಿ ಗ್ರಹಿಸುವ ದೃಷ್ಟಿಕೋನವನ್ನು ನೀಡುತ್ತವೆ. ಸಾಹಿತ್ಯವನ್ನು ಖುಷಿಯಿಂದ ಓದಿಸಿಕೊಳ್ಳುವ ಹಾಗೆ ಮಾಡುತ್ತದೆ. ಆದ್ದರಿಂದಲೇ ಶಾಸ್ತ್ರಿಯವರು ವಿಶೇಷವಾಗಿ ಪರಿಗಣಿಸಬೇಕಾದ ಸಾಹಿತಿಯೂ ಹೌದು.

ಶಾಸ್ತ್ರಿಯವರ ಹಲವು ರಚನೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ವಿಶ್ವ ವಿದ್ಯಾನಿಲಯಗಳಲ್ಲಿ ಪಠ್ಯಗಳಾಗಿವೆ. ಆದರೆ ಅವರು ವಿಶ್ವವಿದ್ಯಾನಿಲಯದಲ್ಲಿ ರೂಪುಗೊಂಡವರಲ್ಲ. ಬದುಕನ್ನೆ ವಿಶ್ವ ವಿದ್ಯಾನಿಲಯವಾಗಿ ಅನುಭವಿಸಿದವರು. ಶಾಸ್ತ್ರಿಯವರಿಗೆ ಒಂದರಿಂದ ಮೂರನೆಯ ತರಗತಿ ವರೆಗೆ ಮನೆ ಪಾಠ. ನಾಲ್ಕರಿಂದ ಏಳನೆ ತರಗತಿಯ ವರೆಗೆ ಶಾಲೆಯಲ್ಲಿ ಓದಿದ್ದರು. ಅಲ್ಲಿಗೆ ಅಧಿಕೃತ ವ್ಯಾಸಂಗ ಮುಗಿದಿತ್ತು.

ಸಾಮಾನ್ಯವಾಗಿ ಸಾಹಿತಿಗಳು ಸಂಸ್ಕೃತಿ ಕಥನಗಳ ನಿರೂಪಕರಾಗಿರುತ್ತಾರೆ. ಆದರೆ ಶಾಸ್ತ್ರಿಯವರು ಸಂಸ್ಕೃತಿ ಕಥನಗಳ ನಿರೂಪಕರೂ ಹೌದು, ನಿರ್ಮಾಪಕರೂ ಹೌದು. ಶಿವರಾಮ ಕಾರಂತರು ಒಮ್ಮೆ ಚರಂಡಿಯ ಸಮಸ್ಯೆಯ ಬಗ್ಗೆ ಬರೆದಿದ್ದಾಗ ಯಾರೋ ಪರಿಚಿತರು,”ಜ್ಞಾನ ಪೀಠ ಪ್ರಶಸ್ತಿ ಪಡೆದ ನಿಮ್ಮಂತಹವರು ಚರಂಡಿಯ ಬಗ್ಗೆಯೆಲ್ಲ ಬರೆಯುವುದು ಸಮಂಜಸವಲ್ಲ” ಎಂದಿದ್ದರಂತೆ. ಅದಕ್ಕೆ ಕಾರಂತರು,”ಆದರೆ ನನ್ನ ಮನೆ ಪಕ್ಕ ಚರಂಡಿ ಇರುವುದು ಸತ್ಯವಲ್ಲವೆ. ಅದರ ಸಮಸ್ಯೆಯನ್ನು ನಾನು ತಡೆದುಕೊಳ್ಳುವುದು ಹೇಗೆ. ನಾನು ಜ್ಞಾನಪೀಠಿ ಎಂದು ಚರಂಡಿಗೆ ಗೊತ್ತಿಲ್ವಲ್ಲ” ಎಂದರಂತೆ. ಇದು ಇಲ್ಲಿ ಯಾಕೆ ಮಹತ್ವವನ್ನು ಪಡೆಯುತ್ತದೆ ಎಂದರೆ ಶಾಸ್ತ್ರಿಗಳೂ ಚರಂಡಿ ಸಮಸ್ಯೆ, ರಸ್ತೆ ಸಮಸ್ಯೆಗಳನ್ನೆಲ್ಲ ಬರೆದವರು.‌ಮಾತ್ರವಲ್ಲ ಇಂತಹ ಸಮಸ್ಯೆಗಳ ನಿವಾರಣೆಗಾಗಿ ಮನವಿ ಕೊಡುತ್ತಾ, ಹೋರಾಟ ಮಾಡುತ್ತಾ ತನ್ನ ಊರಿನ ಜನರೊಂದಿಗೆ ನಿಂತವರು.‌ ಊರಿನ ಸಮಸ್ಯೆಗಳನ್ನು ತನ್ನ ಸಮಸ್ಯೆಗಳಾಗಿಯೂ ಅನುಭವಿಸಿ ನಿರ್ವಹಿಸಿದವರು.‌ ಆದ್ದರಿಂದ ಶಾಸ್ತ್ರಿಯವರಿಗೆ ವಿವಿಧ ಪತ್ರಿಕೆಗಳ ಸಂಪಾದಕರುಗಳು, ಹಿರಿಯ ಸಾಹಿತಿಗಳು, ವಿದ್ವಾಂಸರುಗಳಲ್ಲೆಲ್ಲ‌ ಹೇಗೆ ಸ್ನೇಹಿತರಿದ್ದಾರೊ ಅದೇ ರೀತಿ ಗಾರೆ ಕೆಲಸದವರು, ಕೂಲಿ ಕಾರ್ಮಿಕರು, ಪೆಟ್ರೋಲ್ ಪಂಪಿನಲ್ಲಿ ಕೆಲಸ ಮಾಡುವಂತಹವರಲ್ಲೂ ಸ್ನೇಹಿತರಿದ್ದಾರೆ.‌ ಎಲ್ಲರನ್ನೂ ಒಳಗೊಳ್ಳಬಲ್ಲವರು ಶಾಸ್ತ್ರಿಯವರು.

ಶಾಸ್ತ್ರಿಯವರ ಸಾಹಿತ್ಯ ಕಡುಬಡತನದ ಬೇಗೆಯಲ್ಲಿಯೇ ಹುಟ್ಟಿದ್ದು. ಅವರ ಬಡತನದ ದಾರುಣತೆಯ ಬಗ್ಗೆ ಒಮ್ಮೆ ನನಗೆ ಹೇಳಿದ್ದರು.‌ ಬಾಲ್ಯದಲ್ಲಿ ಹಸಿವನ್ನು ನೀಗಿಸಿಕೊಳ್ಳಲು ಸುತ್ತಮುತ್ತಲಿನ ಪರಿಸರದಲ್ಲಿ ದೊರಕುವ ಚೂರಿ ಕಾಯಿ, ಕಾರೆ ಹಣ್ಣು, ಕೇಪಳ ಹಣ್ಣು, ಸರೋಳಿ ಹಣ್ಣುಗಳನ್ನು ಆಯ್ದು ತಿನ್ನುವುದು, ಮರಗೆಣಸಿನ ಸೊಪ್ಪನ್ನು ಬೇಯಿಸಿ ತಿನ್ನುವುದು….ಈ ರೀತಿಯ ಬದುಕು ಅವರದಾಗಿತ್ತು. ಸಾಲ ಮರುಪಾವತಿ ಮಾಡುವ ಶಕ್ತಿ ಇಲ್ಲದವರಿಗೆ ಸಾಲವೂ ಸಿಗುವುದಿಲ್ಲ. ಒಂದು ದಿನ ಶಾಸ್ತ್ರಿಯವರ ತಾಯಿ ಯಾರಾದರೂ ಅಕ್ಕಿ ಸಾಲ ಕೊಟ್ಟಾರೇನೊ ಎಂದು ಅಕ್ಕಿ ಕೇಳುತ್ತಾ ಹೋದರು. ಮನೆಯಲ್ಲಿ ಮಕ್ಕಳು ಅಮ್ಮ‌ ತರಲಿರುವ ಅಕ್ಕಿಯನ್ನು‌ ಕಾದುಕೊಂಡು ಕೂತಿದ್ದರು.‌ ನಸುಗತ್ತಲಾಗುವ ವೇಳೆಗೆ ಅಮ್ಮ ಬಂದರು. ಆದರೆ ಅಕ್ಕಿ ಇರಲಿಲ್ಲ.‌ಬದಲಿಗೆ ರಂಗು ಪೂಜಾರಿ ಕೊಟ್ಟ ಹಲಸಿನ ಕಾಯಿಯೊಂದನ್ನು ಹೊತ್ತು ತಂದಿದ್ದರು. ಹಲಸಿನ ಕಾಯಿ ಸಿಕ್ಕಿದ ಕೂಡಲೇ ಅದರ ಮೇಲ್ಭಾಗದ ಸಿಪ್ಪೆಯನ್ನು ಮಾತ್ರ ತೆಗೆದು ಇಡೀ ಹಲಸಿನ ಕಾಯಿಯನ್ನು ಕತ್ತರಿಸಿ ಬೇಯಿಸಿದರು. ಬೇಯಿಸುವಾಗ ರುಚಿಗೆ ಹಾಕಲು ಉಪ್ಪೂ ಇರಲಿಲ್ಲ. ಬೆಂದ ಹಲಸಿನ ಕಾಯಿಯ ಗೂಂಜನ್ನೂ ಬಿಡದಂತೆ ತಿಂದರು. ಮರುದಿನ ಬೆಳಗ್ಗೆ ಹಸನೆ ಬ್ಯಾರಿ ಎರಡು ಸೇರು ಅಕ್ಕಿ ತೆಗೆದುಕೊಂಡು ಬಂದರು. “ನಿನ್ನೆ ನಿಮ್ಮ‌ ತಾಯಿ ಬಂದು ಅಕ್ಕಿ ಕೇಳಿದ್ದರಂತೆ. ನಾನು ಕೆಲಸಕ್ಕೆ ಹೋಗಿದ್ದೆ. ನನಗೆ ಸಿಕ್ಕಿದ ನಾಲ್ಕು ಸೇರು ಅಕ್ಕಿಯ ಸಂಬಳದಲ್ಲಿ ಎರಡು ಸೇರು ತಂದಿದ್ದೇನೆ. ಇದನ್ನು ನೀವು ವಾಪಾಸು ಕೊಡುವುದು ಬೇಡ” ಎಂದು ಹೇಳಿ ಹೋದರಂತೆ.‌ ಈ ಪರಿಸ್ಥಿತಿಯನ್ನೆ ಸವಾಲಾಗಿ ಸ್ವೀಕರಿಸುವ ಹಠಕ್ಕೆ ಬಿದ್ದ ಶಾಸ್ತ್ರಿಯವರು ಬೇಸಾಯಕ್ಕೆ ಇಳಿದರು. ಅದೆಂಥಾ ಶ್ರಮಿಕನಾದರು ಎಂದರೆ ಬೇಸಾಯ ಮಾಡಿ ಅಕ್ಕಿ ಬೆಳೆದು ಮನೆಗಾಗುವಷ್ಟು ಉಳಿಸಿ ಉಳಿದದ್ದನ್ನು ಮಾರಾಟ ಮಾಡುವಷ್ಟು ಬೆಳೆದರು.

ಸಹಕಾರಿ ಸಂಘ ಅದೂ ಇದು ಎಂದು ಸಹಕಾರಿ ಚಳವಳಿಯಲ್ಲೂ ತೊಡಗಿಕೊಂಡ ಶಾಸ್ತ್ರಿಯವರು ರಾಜಕೀಯಕ್ಕೂ ಸಂದರ್ಶಕ ಪ್ರಾಧ್ಯಾಪಕನ ರೀತಿಯಲ್ಲಿ ಪ್ರವೇಶಿಸಿ ಅಷ್ಟೇ ಬೇಗನೆ ಮರಳಿದ್ದರು.

ಶಾಸ್ತ್ರಿಯವರು ಎಲ್ಲರೊಂದಿಗೂ ಊಟ ಮಾಡಬಲ್ಲ, ಎಲ್ಲರಿಗೂ ಒಟ್ಟಿಗೇ ಊಟ ಹಾಕಬಲ್ಲ ಜಾತ್ಯತೀತರು.‌ ಆದರೆ ಪ್ರತಿದಿನ ಪೂಜೆ ಮಾಡಿ ಮುಗಿಸದೆ ಆಹಾರ ಸೇವಿಸುವುದಿಲ್ಲ. ಈ ಮೂಲಕ ಧಾರ್ಮಿಕತೆಗೂ ರೂಢಿಗತ ಸಂಪ್ರದಾಯಶರಣತೆಗೂ ಯಾವುದೇ ಸಂಬಂಧವಿಲ್ಲ ಎಂದು ಬದುಕಿನಲ್ಲಿ ಸಾಧಿಸಿ ತೋರಿಸಿದವರು;ಮೇಲಾಗಿ ಹೀಗೆ ಬದುಕುವುದೇ ನಿಜವಾದ ಧರ್ಮವಾಗಿದೆ ಎಂದು ನಡೆದುಕೊಳ್ಳುವವರು. ಶಾಸ್ತ್ರಿಯವರ ಹಿರಿಯ ಮಗ ವೆಂಕಟೇಶ ಶಾಸ್ತ್ರಿ ವೇದ ವಿದ್ವಾಂಸರು ಮತ್ತು ಪುರೋಹಿತರೇ ಆಗಿದ್ದಾರೆ.‌ ಧರ್ಮವನ್ನು ಜಾತಿಯ ನಿರ್ಬಂಧದಿಂದ ಮೇಲೆತ್ತಬಲ್ಲ ಚೈತನ್ಯ ಶಾಸ್ತ್ರಿಯವರ ಕುಟುಂಬದಲ್ಲಿರುವುದಕ್ಕೆ ಶಾಸ್ತ್ರಿಯವರು ಕಂಡುಕೊಂಡ ಧಾರ್ಮಿಕತೆಯೇ ಪ್ರೇರಣೆಯಾಗಿದೆ.

ಶಾಸ್ತ್ರಿಯವರು ಯಾವ ದೊಡ್ಡ ಹುದ್ದೆಯಲ್ಲೂ ಇದ್ದವರಲ್ಲ.‌ ಕೃಷಿಕನಾಗಿ, ಬರೆಹಗಾರನಾಗಿ ಬದುಕನ್ನು ಕಟ್ಟಿಕೊಂಡವರು. ಸಾಹಿತ್ಯಕವಾಗಿ ಅವರು ಸಾಕಷ್ಟು ಎತ್ತರದಲ್ಲಿದ್ದಾರೆ.‌ ಆದರೆ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ಅವರಿಗೆ ಬಹಳ ತಡವಾಗಿಯೇ ಬಂತು. ಹಾಗೆಂದು‌ ಪುರಸ್ಕಾರ, ಪ್ರಶಸ್ತಿ, ಸ್ಥಾನಮಾನಗಳಿಗಾಗಿ ಓಡಾಡಿದವರಲ್ಲ. ಕೇವಲ ಓಡಾಡದೆ ಇದ್ದದ್ದು ಮಾತ್ರವಲ್ಲ;ತನಗೆ ಲಭ್ಯವಾಗಬೇಕಾದ್ದು, ಲಭ್ಯವಾಗಬಹುದಾದ್ದರ ಬಗ್ಗೆ ನೊಂದುಕೊಂಡವರಲ್ಲ. ಈ ಬಗ್ಗೆ ಅವರಲ್ಲಿ ಹಳಹಳಿಕೆಗಳಿಲ್ಲ. ತಾನಿರುವುದು ಹೀಗೆಯೇ ಎಂಬ ಒಂದು ನಿಷ್ಠುರ ಹಠವಾದಿ ನಿಲುವು ಅವರಲ್ಲಿದೆ. ತನ್ನ ಮೇಲೆ ತಾನೇ ಬಹಳ‌ ಕಠಿಣವಾದ ನಿಲುವನ್ನು ಜಾರಿಗೊಳಿಸಿಕೊಳ್ಳಬಲ್ಲ ಶಾಸ್ತ್ರಿಯವರ ಅಂತಃಶಕ್ತಿಯಿಂದಾಗಿಯೇ ಅವರು ನನಗೆ ಬಹಳ ಪ್ರಿಯರಾಗಿದ್ದಾರೆ.

ಪ.ರಾ.ಶಾಸ್ತ್ರಿಯವರ ಬಗ್ಗೆ ಲೇಖನ – ಶ್ರೀ ಅರವಿಂದ ಚೊಕ್ಕಾಡಿ ಯವರಿಂದ.

Leave a Reply

Your email address will not be published. Required fields are marked *