[5-9-2023 ರಂದು ಮೂಡುಬಿದಿರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಶಿಕ್ಷಕರು ಹಾಗೂ ಸಾಹಿತಿ – ಶ್ರೀ ಅರವಿಂದ ಚೊಕ್ಕಾಡಿ ಯವರು ಮಾಡಿದ ಉಪನ್ಯಾಸ:]

ಸಮಾರಂಭದ ಅಧ್ಯಕ್ಷರೆ, ಉದ್ಘಾಟನೆಯನ್ನು ಮಾಡಿದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರೆ, ಸಮಿತಿಯ ಕೋಶಾಧಿಕಾರಿಯವರಾದ ಶ್ರೀ ಶ್ರೀಪತಿ ಭಟ್ ಅವರೆ, ವೇದಿಕೆಯ ಮೇಲೆ ಮತ್ತು ಮುಂಭಾಗದಲ್ಲಿರುವ ಗಣ್ಯರೆ,

ಎಲ್ಲರ ಹೆಸರನ್ನೂ ಹೇಳಬೇಕು, ಆದರೆ ಸಮಯದ ಉಳಿತಾಯಕ್ಕಾಗಿ ಹೇಳುತ್ತಿಲ್ಲ. ಈ ಸಭಾ ಕಂಪ ಅಂದರೆ ಸ್ಟೇಜ್ ಫಿಯರ್ ಎರಡು ರೀತಿ ಇರುತ್ತದೆ. ಒಂದು, ಇಷ್ಟು ದೊಡ್ಡ ಸಭೆ ನೋಡಿದಾಗ ನನಗೆ ಭಾಷಣ ಮಾಡಲು ಭಯವಾಗುವುದು. ಎರಡನೆಯದು ನಾನು ಭಾಷಣಕ್ಕೆ ನಿಂತಾಗ ನಿಮಗೆ ಭಯವಾಗುವುದು,” ಇವನು ಭಾಷಣ ನಿಲ್ಲಿಸಿಯಾನೋ ಇಲ್ಲವೊ” ಅಂತ. ಆ ಭಯ ಆಗದ ಹಾಗೆ ಭಾಷಣ ನಿಲ್ಲಿಸಲಿಕ್ಕಾಗಿ ಸಮಯವನ್ನು ಉಳಿಸಿದ್ದು.

ಡಾ.‌ರಾಧಾಕೃಷ್ಣನ್ ಅವರ ಜನ್ಮದಿನವನ್ನು ನಾವು ಶಿಕ್ಷಕರ ದಿನವಾಗಿ ಆಚರಿಸುತ್ತೇವೆ. ಇಲ್ಲಿ ಎಲ್ಲರೂ ಶಿಕ್ಷಕರೇ ಇರುವುದರಿಂದ “ಗೊತ್ತಿರಲಿ” ಎನ್ನುವ ಕಾರಣಕ್ಕಾಗಿ ಜಯಂತಿ ಮತ್ತು ಜನ್ಮ ದಿನಾಚರಣೆಯ ಪರಿಕಲ್ಪನೆಗಳ ವ್ಯತ್ಯಾಸವನ್ನು ಹೇಳುತ್ತೇನೆ. ಇದನ್ನು ನನಗೆ ಕನ್ನಡದ ಪ್ರಮುಖ ವಿಮರ್ಶಕರಲ್ಲೊಬ್ಬರಾದ ಡಾ.‌ಶಾಮಸುಂದರ ಬಿದಿರಕುಂದಿ ಅವರು ತಿಳಿಸಿಕೊಟ್ಟಿದ್ದರು. ಜನ್ಮ ದಿನಾಚರಣೆಯು ವ್ಯಾವಹಾರಿಕವಾದ ಲೌಕಿಕ ಪರಿಕಲ್ಪನೆ. ಎಲ್ಲರಿಗೂ ಅನ್ವಯವಾಗುತ್ತದೆ. ಹುಟ್ಟಿದ ದಿನದ ಆಚರಣೆ. ನಾನು, ನೀವು ಎಲ್ಲರೂ ಆಚರಿಸಬಹುದು. ಆದರೆ ‘ಜಯಂತಿ’ ಎನ್ನುವುದು ಧಾರ್ಮಿಕ ಹಿನ್ನೆಲೆಯ ಪರಿಕಲ್ಪನೆ. ಜಯವನ್ನು ಅಂತಿಸಿದವನು ಯಾವನೋ ಅವನು ಜಯಂತ. ಅಂದರೆ ನಾನು ಗೆಲ್ಲಬೇಕು ಎನ್ನುವ ಮಾನವ ಸಹಜ ಆಸೆ, ಮೋಹಗಳ ಮೇಲೆಯೇ ಜಯವನ್ನು ಸಾಧಿಸಿದ ಸಂತನಂತಹ ವ್ಯಕ್ತಿತ್ವಗಳ ನೆನಪಿನಲ್ಲಿ ಇತರರು ಆಚರಿಸುವುದು ಜಯಂತಿ. ರಾಮ ಕೃಷ್ಣರದ್ದನ್ನೂ ನಾವು ಜಯಂತಿ ಎನ್ನುವುದಿಲ್ಲ. ರಾಮ ನವಮಿ, ಕೃಷ್ಣ ಅಷ್ಟಮಿ.‌ ಆದರೆ ವ್ಯಾಸ ಜಯಂತಿ. ವಾಲ್ಮೀಕಿ ಜಯಂತಿ. ಮಹಾವೀರ ಜಯಂತಿ. ಬುದ್ಧ ಜಯಂತಿ. ನಾರಾಯಣ ಗುರು ಜಯಂತಿ. ಆಧುನಿಕ ಸಂದರ್ಭದಲ್ಲಿ ಸಂತನ ರೀತಿ ಬದುಕಿದ ಮಹಾತ್ಮಾ ಗಾಂಧಿ ಜಯಂತಿ. ಅದಕ್ಕೇ ನೆಹರು ಅವರ ಜನ್ಮದಿನ ಆಚರಣೆ ಮಾಡಬೇಕು ಎಂದು ಅಭಿಮಾನಿಗಳು ಹೇಳಿದಾಗ ನೆಹರೂ,” ನನ್ನ ಜನ್ಮ ದಿನವನ್ನು ಮಕ್ಕಳ ದಿನ ಎಂದು ಆಚರಿಸಬಹುದು” ಎಂದರು. ರಾಧಾಕೃಷ್ಣನ್ ಅವರ ಬಳಿ ” ನಿಮ್ಮ ಜನ್ಮದಿನವನ್ನು ಆಚರಿಸುವ” ಎಂದು ಕೆಲವರು ಕೇಳಿದಾಗ,” ನನ್ನ ಜನ್ಮದಿನ ಎಂದು ಬೇಡ. ಅದನ್ನು ಶಿಕ್ಷಕರ ದಿನ ಎಂದು ಬೇಕಾದರೆ ಆಚರಿಸಬಹುದು” ಎಂದರು. ಇವೆಲ್ಲ ಜನ್ಮ ದಿನಾಚರಣೆಗಳು, ಜಯಂತಿಗಳಲ್ಲ. ಆದರೆ ರೂಢಿಯಲ್ಲಿ ಜನ್ಮ ದಿನವನ್ನೆ ಜಯಂತಿ ಎನ್ನುವ ಪದ್ಧತಿ ಬಂದಿದೆ. ಹಾಗೆ ಹೇಳಿದರೆ ತಪ್ಪೇನಿಲ್ಲ. ಆದರೆ ಇಲ್ಲಿರುವವರು ಶಿಕ್ಷಕರಾದ್ದರಿಂದ ಗೊತ್ತಿರಲಿ ಎಂದು ಹೇಳಿದೆ, ಅಷ್ಟೆ.

ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಹೇಳಲು ಹೋಗುವುದಿಲ್ಲ‌‌. ಬಹಳ ಬಡತನದ ಕುಟುಂಬ ಅವರದು‌. ನೆಲವನ್ನು ತೊಳೆದು ನೆಲದಲ್ಲಿ ಊಟ ಮಾಡಿದ ಬಾಲ್ಯದ ಬಡತನದ ಅನುಭವ ಇದ್ದವರು. ಅವರ ತಂದೆ ಅವರನ್ನು ಪುರೋಹಿತರನ್ನಾಗಿ ಮಾಡಲು ಬಯಸಿದ್ದರು. ಆದರೆ ಅವರು ಶಿಕ್ಷಣ ಚಿಂತಕ, ತತ್ವಜ್ಞಾನಿ, ರಾಷ್ಟ್ರಪತಿಯಾದರು. ರಾಧಾಕೃಷ್ಣನ್ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟದ್ದು ಅವರು ಸ್ನಾತಕೋತ್ತರ ಪದವಿಯಲ್ಲಿದ್ದಾಗ ಬರೆದ ‘ ಎಥಿಕ್ಸ್ ಆಫ್ ವೇದಾಂತ’ ಎನ್ನುವ ಪ್ರಬಂಧ. ವೇದಾಂತ ಎಂದರೆ ಉಪನಿಷತ್ತುಗಳು.‌ ಉಪನಿಷತ್ತುಗಳ ಅಧ್ಯಯನವು ರಾಧಾಕೃಷ್ಣನ್ ಅವರ ಆಲೋಚನಾಕ್ರಮವನ್ನು ಬದಲಿಸಿದವು. ನಂತರ ಅವರು ಭಾರತೀಯ ಮತ್ತು ಪಾಶ್ಚಿಮಾತ್ಯ ತತ್ವಜ್ಞಾನವನ್ನು ಅಭ್ಯಾಸ ಮಾಡಿದರು. ಭಾರತೀಯ ತತ್ವಜ್ಞಾನವನ್ನು ವಿದೇಶಗಳಲ್ಲಿಯೂ ವ್ಯಾಪಕವಾಗಿ ಪ್ರಚುರಪಡಿಸಿದರು.

ರಾಧಾಕೃಷ್ಣನ್ ಅವರ ವಿಸ್ತಾರವಾದ ಚರ್ಚೆಗಳನ್ನು ನೋಡಿದರೆ ಅಲ್ಲಿ’ ಸತ್ಯ ಮತ್ತು ಸೌಂದರ್ಯ’ ದ ಪರಿಕಲ್ಪನೆಗಳು ವಿಶೇಷವಾಗಿ ಪರಿಗಣಿಸಲ್ಪಡುವುದನ್ನು ಕಾಣಬಹುದು.‌ ” ಸತ್ಯಂ ಶಿವಂ ಸುಂದರಂ” ಪರಿಕಲ್ಪನೆ ಬಹಳ ಜಿಜ್ಞಾಸೆಗೆ ಒಳಗಾಗಿದೆ. “ಸತ್ಯಂ ಭ್ರೂಯಾತ್, ಪ್ರಿಯಂ ಭ್ರೂಯಾತ್, ನಭ್ರೂಯಾತ್ ಸತ್ಯಮಪ್ರಿಯಂ” ಎಂದು ಏನೇ ಹೇಳಿದರೂ ಕಠೋರವಾದ ಸತ್ಯಕ್ಕೆ ಬೇರಾವುದಕ್ಕೂ ಇಲ್ಲದ ಪ್ರಖರ ಶಕ್ತಿ ಇದೆ. ತಾತ್ವಿಕವಾಗಿ ‘ ಸತ್ಯ’ ಎನ್ನುವುದು ‘ನಿಜ’ ಎನ್ನುವ ಅರ್ಥದಲ್ಲಿ ಮಾತ್ರವಿಲ್ಲ.‌’ಓಂ ತತ್ ಸತ್’ ನಲ್ಲಿ ಬರುವ ‘ಸತ್’ ಅದು.‌ ‘ಈಶಾವಾಸಮಿದಂ ಸರ್ವಂ’ ನಲ್ಲಿ ಬರುವ ಈಶ, ‘ಸರ್ವಂ ಖಿಲ್ವಿದಂ ಬ್ರಹ್ಮ’ ದಲ್ಲಿ ಬರುವ ‘ಬ್ರಹ್ಮ’, ‘ತತ್ ಸತ್’ ನಲ್ಲಿ ಬರುವ ‘ಸತ್’ ಎಲ್ಲವೂ ಒಂದೇ. ಸಂವಿಧಾನದಲ್ಲಿ “ಸತ್ಯಮೇವ ಜಯತೇ” ಎನ್ನುವುದು ಲೌಕಿಕ ಅರ್ಥದಲ್ಲಿದೆ. ‘ಮುಂಡಕ ಉಪನಿಷತ್’ ನಲ್ಲಿ ಅದು,” ಸತ್ಯಮೇವ ಜಯತೇ ನನೃತಂ ಸತ್ಯೇನ ಪಂಥಾ ವಿತತೋ ದೇವ ಯಾನಃ”. ಅಲ್ಲಿ ಅಧ್ಯಾತ್ಮದ ಅರ್ಥದಲ್ಲಿ ಬರುವುದು.‌ ರಾಧಾಕೃಷ್ಣನ್ ಅವರ ತಾತ್ವಿಕ ವಿಶ್ಲೇಷಣೆಗಳಲ್ಲಿ ‘ಸತ್’ ನ ಈ ಬಹುಮುಖತೆಯ ವಿಶ್ಲೇಷಣೆಯನ್ನು ಕಾಣಬಹುದು.

ರಾಧಾಕೃಷ್ಣನ್ ಅವರನ್ನು ನೆನಪಿಸಿಕೊಂಡ ನಂತರ ಇವತ್ತು ಶಿಕ್ಷಕರ ದಿನವಾದ್ದರಿಂದ ಶಿಕ್ಷಕರನ್ನು ಕೇಂದ್ರೀಕರಿಸಿಯೇ ಮಾತನಾಡುತ್ತೇನೆ. ಈ ಮಾತುಗಳಿಂದ ಉಪಯೋಗ ಇಲ್ಲ ಎಂದು ನನಗೂ ಗೊತ್ತಿದೆ, ಇಲ್ಲಿರುವ ಎಲ್ಲ ಶಿಕ್ಷಕರಿಗೂ ಗೊತ್ತಿದೆ. ಆದರೆ ಈ ಒಂದು ದಿನದ ಮಟ್ಟಿಗಾದರೂ ಶಿಕ್ಷಕರ ಸಂಕಷ್ಟಗಳಿಗೆ ಸ್ಪಂದಿಸುವ ಧ್ವನಿ ಕೇಳಿಸುತ್ತಿದೆ ಎನ್ನುವಷ್ಟಾದರೂ ಶಿಕ್ಷಕರಲ್ಲಿ ಭರವಸೆ ಉಳಿಸಲಿಕ್ಕಾಗಿ ಮಾತನಾಡುತ್ತೇನಷ್ಟೆ. ಶಿಕ್ಷಕರ ಅಗತ್ಯಗಳಿಗೆ ಸಮಾಜ ಸ್ಪಂದಿಸುತ್ತದೆ, ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಬಹಳ ಒಳ್ಳೆಯವರು. ಶಿಕ್ಷಕರನ್ನು ಬೆಂಬಲಿಸುತ್ತಾರೆ. ಈ
‘ ಸಂಭ್ರಮ’ ದ ಭಾಗದ ಆಚೆಗೂ ಕೆಲವು ಜ್ವಲಂತ ವಾಸ್ತವಗಳಿವೆ. ಇವು ಹೊರಗಿನಿಂದ ನೋಡುವವರಿಗೆ ಪಕ್ಕನೆ ಗೊತ್ತಾಗುವುದಿಲ್ಲ.

ನಾವು ಕಂಡಕ್ಟರ್ ದಿನ, ಡ್ರೈವರ್ ದಿನ, ರಾಜಕಾರಣಿಗಳ ದಿನ ಎಂದೆಲ್ಲ ಆಚರಿಸುವುದಿಲ್ಲ.‌ ಶಿಕ್ಷಕರ ದಿನ ಆಚರಿಸುತ್ತೇವೆ. ಯಾಕೆ? ಉದ್ಯೋಗದ ಕಾರಣಕ್ಕಾಗಿಯೇ ಆಚರಿಸುವುದಾದರೆ ಎಲ್ಲರ ದಿನವನ್ನೂ ಆಚರಿಸಬೇಕು. ಆದರೆ ಅದಲ್ಲ.‌ ಮನುಷ್ಯ ಇತರ ಜೀವಿಗಳಿಗಿಂತ ಭಿನ್ನವಾಗಿರುವುದು ಕಲಿಕೆಯ ಮೂಲಕ. ಎಲ್ಲ ಜ್ಞಾನ ಕ್ಷೇತ್ರಗಳ ತಾಯಿ ಶಿಕ್ಷಣ. ಆದ್ದರಿಂದ ಶಿಕ್ಷಣವನ್ನು ಪ್ರತಿನಿಧಿಸುವ ರೀತಿಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ತನ್ಮೂಲಕ ಅದು ಮಾನವ ನಾಗರಿಕತೆಯ ಎಲ್ಲ ಕ್ಷೇತ್ರಗಳನ್ನೂ ಪ್ರತಿನಿಧಿಸುತ್ತದೆ.

ಶಿಕ್ಷಕರು ಎಂದ ಕೂಡಲೇ ‘ಗುರು’ ಎಂದು ಭಾವಿಸಬಾರದು. “ಗುಕಾರೊ ಅಂಧಕಾರತ್ವಾತ್ ರುಕಾರೊ ತನ್ನಿವಾರಕಃ”. ಅಂತರಂಗದ ಅಂಧಕಾರತ್ವವನ್ನು ತೊಡೆಯುವವನು ಗುರು.‌ ನಾವು ಮಕ್ಕಳಿಗೆ ಉದ್ಯೋಗ ಗಳಿಸಿಕೊಳ್ಳಲು ಸಹಾಯಕವಾಗುವ ಪಾಠ ಮಾಡುವವರು. ‘ದೇವಲ ಸ್ಮೃತಿ’ ಯು ಹನ್ನೊಂದು ವಿಧದ ಗುರುಗಳನ್ನು ಹೇಳುತ್ತದೆ.‌ ಆದರೆ ನಾವು ಶಿಕ್ಷಕರು.‌ ನಾನು ಯಾಕೆ ಇದನ್ನು ಹೇಳಿದ್ದೆಂದರೆ ಶಿಕ್ಷಕರನ್ನು ಗುರು, ಆಚಾರ್ಯ ಎಂದೆಲ್ಲ ಇವತ್ತು ಹೊಗಳಲಾಗುತ್ತದೆ.‌ ಹೊಗಳಿಕೆಗಳು ಹಿತಕಾರಿಯೂ ಹೌದು, ಪ್ರೇರಣಾ ದಾಯಿಯೂ ಹೌದು. ಆದರೆ ಭಾವನಾತ್ಮಕವಾಗಿ ತೃಪ್ತಿಯನ್ನು ಕೊಡುವ ಹೊಗಳಿಕೆಗಳು ವಾಸ್ತವ ಸತ್ಯವನ್ನು ಬದಲಿಸಲಾರವು. ಯಾರನ್ನು ಜಾಸ್ತಿ ಹೊಗಳಲಾಗುತ್ತದೆಯೋ ಅವರ ಶೋಷಣೆಯೇ ಆದದ್ದಕ್ಕೆ ದೊಡ್ಡ ಇತಿಹಾಸವಿದೆ. ಹೆಣ್ಣನ್ನು ತಾಯಿ, ದೇವತೆ ಎಂದೆಲ್ಲ ಹೊಗಳಿ ಕಡೆಗೆ ಮಾಡುವುದು ಶೋಷಣೆಯನ್ನೆ.‌ ಶಿಕ್ಷಕರನ್ನು ‘ಆಚಾರ್ಯ ದೇವೋ ಭವ’ ಎಂದು ಹೊಗಳಲಾಗುತ್ತದೆ. ಈ ದೇವರುಗಳ ಪರಿಸ್ಥಿತಿ ಹೇಗಿದೆ ಹೇಳುತ್ತೇನೆ. ಕೆಲವರು ಖಾಯಂ, ಕೆಲವರು ಅರೆಕಾಲಿಕ, ಕೆಲವರು ಅತಿಥಿ , ಕೆಲವರು ಅನುದಾನಿತ, ಕೆಲವರು ಅನುದಾನ ರಹಿತ, ಕೆಲವರು ಗುತ್ತಿಗೆ, ಇನ್ನು ಕೆಲವರು ಹೊರ ಗುತ್ತಿಗೆ, ಅವರ ನಡುವಿನ ವೇತನ ತಾರತಮ್ಯ, ಸೌಲಭ್ಯ ತಾರತಮ್ಯ……ಇವೆಲ್ಲವೂ ವೈಚಾರಿಕ ಪ್ರಪಂಚದ ವಾಸ್ತವಗಳು.‌ ಎಲ್ಲ ಉದ್ಯೋಗದ ಹಾಗೆ ಶಿಕ್ಷಕರದ್ದೂ ಉದ್ಯೋಗ ಅಷ್ಟೆ.‌ ಶಿಕ್ಷಕರನ್ನು ದೇವರನ್ನಾಗಿ ಮಾಡುವುದು ಬೇಡ.‌ ಬದಲು ಮನುಷ್ಯರ ಹಾಗೆ ನಡೆಸಿಕೊಳ್ಳಬೇಕು. ಯಾವ ಉದ್ಯೋಗಿಯ ಬಳಿ ಕೆಲಸ ಕೇಳುವಾಗಲಾದರೂ ಕಾನೂನಿನ ವ್ಯಾಪ್ತಿಯಲ್ಲಿ ಅವನು ತಾನು ಹೇಳಿದ್ದನ್ನು ಒಪ್ಪದಿದ್ದರೆ ಎಂಬ ಅನುಮಾನ ಕೆಲಸ ಹೇಳುವವನಿಗೆ ಇರುತ್ತದೆ.‌ ಆದರೆ ಶಿಕ್ಷಕರ ಬಳಿ ಆ ಅನುಮಾನ, ಸಂಕೋಚ ಯಾವುದೂ ಇಲ್ಲ. ಹೇಳಿದ್ದನ್ನು ಮಾಡಬೇಕು ಅವರು ಅಷ್ಟೆ, ಕಾನೂನಿನ ವ್ಯಾಪ್ತಿಯಲ್ಲಿ ಅವರು ಮಾಡಬೇಕಾಗಿದೆಯೆ? ಎಂದು ಯೋಚಿಸಬೇಕಾದ ಅಗತ್ಯವೆ ಹೊಳೆಯುವುದಿಲ್ಲ.

ಶಿಕ್ಷಕರು ಏನಾದರೂ ಹೇಳಿದ ತಕ್ಷಣ ತಮ್ಮ ವೇತನ, ಸೌಲಭ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂಬ ಪ್ರತಿಕ್ರಿಯೆ ಬರುತ್ತದೆ. ಆದ್ದರಿಂದ ಸೌಲಭ್ಯದ ಬಗ್ಗೆ ನಾನು “ಶಿಕ್ಷಕರ ಹುದ್ದೆಯನ್ನು ರಜೆ ರಹಿತ ಹುದ್ದೆ” ಯಾಗಿ ಮಾಡಬೇಕು ಎನ್ನುವ ಒಂದಂಶವನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವುದಿಲ್ಲ. ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ವೇತನ ತೃಪ್ತಿಕರವೇ ಇದೆ.

ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ “ಶಿಕ್ಷಕರು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಲಿಲ್ಲ” ಎಂದು ಹೇಳಲಾಗುತ್ತದೆ.‌ ಶಿಕ್ಷಕರ ಬಳಿ ನೂರು ಶೇಕಡಾ ಫಲಿತಾಂಶ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಲಾಗುತ್ತದೆಯೆ ಹೊರತು ಮಕ್ಕಳಿಗೆ ಎಷ್ಟು ನೈತಿಕತೆಯನ್ನು ಕಲಿಸಿದ್ದೀರಿ? ಎಂದು ಕೇಳುವ ಪದ್ಧತಿ ಇಲ್ಲ. ವ್ಯವಸ್ಥೆಗೆ ಬೇಕಾದ್ದು ರಿಸಲ್ಟು‌. ಪೋಷಕರಿಗೆ ಅವರ ಮಗು ಅಮೆರಿಕದಲ್ಲಿ ಕೆಲಸ ಹಿಡಿಯಬೇಕು. ಜೀವನ ಮೌಲ್ಯಗಳನ್ನು, ನೈತಿಕತೆಯನ್ನು ಕಲಿಯುವುದು ಕಡ್ಡಾಯವಲ್ಲ. ನೈತಿಕ ಮೌಲ್ಯಗಳ ಬಗ್ಗೆ ನೂರು ಮಾರ್ಕಿನ ಪರೀಕ್ಷೆ ಇಟ್ಟು ಆರೂ ಸಬ್ಜೆಕ್ಟ್‌ನಲ್ಲಿ ಪಾಸಾಗಿ ನೈತಿಕ ಮೌಲ್ಯಗಳ ಪರೀಕ್ಷೆಯಲ್ಲಿ ಫೇಲಾದರೆ ಫಲಿತಾಂಶವನ್ನು ಫೆಯಿಲ್ ಎಂದು ಘೋಷಿಸುವ ವ್ಯವಸ್ಥೆ ಉಂಟಾ? ಇಲ್ಲ. ಅಪರಾಧ ನಡೆದಾಗ ವ್ಯಕ್ತಿ ನೀತಿವಂತನಲ್ಲ ಎನಿಸುವುದು ಮತ್ತು ಅದಕ್ಕೆ ಶಿಕ್ಷಕರು ನೈತಿಕತೆಯನ್ನು ಕಲಿಸದಿರುವುದು ಕಾರಣ ಎನಿಸುವುದು‌ ಅಷ್ಟೆ. ಆಯ್ತು, ಶಿಕ್ಷಕರಿಗೆ ಅವರೇ ನಿರ್ಧಾರ ತೆಗೆದುಕೊಂಡು ಕಲಿಸಲು ಅಧಿಕಾರವಾದರೂ ಏನಿದೆ? ಕಾನೂನು ಯಾವಾಗಲೂ ವಿಶಾಲ ವ್ಯಾಪ್ತಿಯ ನಿರ್ದೇಶನವನ್ನು ನೀಡಬೇಕೆ ಹೊರತು ಯಾವ ಕೆಲಸವನ್ನೂ ಮಾಡಲಾಗದಷ್ಟು ಮೈನ್ಯೂಟ್ ನಿರ್ದೇಶನಗಳನ್ನು ಕೊಡಬಾರದು. ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ವ್ಯತ್ಯಾಸವಿರುತ್ತದೆ.‌ ವ್ಯತ್ಯಾಸಕ್ಕನುಗುಣವಾಗಿ ಕಲಿಕೆ ನಡೆಸಬೇಕಾಗುತ್ತದೆ. ಎಲ್ಲವನ್ನೂ ‘ಯೂನಿಫಾರ್ಮ್’ ಮಾಡಿಬಿಟ್ಟರೆ ವ್ಯಕ್ತಿ ಭಿನ್ನತೆಗನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಮೊದಲೆಲ್ಲ ಕನಿಷ್ಠ ಪಕ್ಷ ಆದೇಶಗಳು ಕಾಗದದಲ್ಲಿ ಬರುತ್ತಿದ್ದವು. ಫೈಲಿಗೆ ಹಾಕಿ ಇರಿಸಿದರೆ ಇರ್ತಾ ಇತ್ತು.‌ ಈಗ ವಾಟ್ಸಪ್‌ನಲ್ಲಿ ಬರುವ ಆದೇಶಗಳು ಡಿಲೀಟಾಗಿ ಹೋಗುತ್ತವೆ, ಅಷ್ಟೊತ್ತಿಗೆ ಮತ್ತೊಂದು ಆದೇಶ ಬಂತು, ಏನು ಎತ್ತ ಎಂಬ ಸ್ಪಷ್ಟತೆ ಸಿಗುವ ಮೊದಲೇ ಎಲ್ಲವೂ ಮುಗಿದಾಗಿರುತ್ತದೆ. ಈ ಕೊರೋನಾದ ಸಮಯದಲ್ಲಿ ನಾವು ಪಾಠ ಮಾಡಿದ್ದು ಹೇಗೆ ಎಂದು ಗೊತ್ತುಂಟಲ್ಲ;10 ತಿಂಗಳಿಗೆ ಮಾಡಿದ ಪಾಠ ಪುಸ್ತಕದ ಪಾಠಗಳನ್ನು 6 ತಿಂಗಳಿಗೆ ಸರಾಸರಿ ಮಾಡಿ ಹಂಚಿಕೆ ಮಾಡಿ ಪಾಠ ಮಾಡಿದ್ದು ನೆನಪಿದೆಯಲ್ಲ. ಇದು ಹೇಗೆ ಸಾಧ್ಯ? ದಿನಕ್ಕೆ ಒಂದು ಕೆ.ಜಿ. ಅಕ್ಕಿಯ ಹಾಗೆ ಹತ್ತು ದಿನದಲ್ಲಿ ಹತ್ತು ಕೆ.ಜಿ. ಅಕ್ಕಿಯನ್ನು ಒಂದು ಕುಟುಂಬ ಊಟ ಮಾಡಿ ಮುಗಿಸುತ್ತದೆ ಎಂದುಕೊಳ್ಳಿ.‌ ಅದನ್ನು ದಿನಕ್ಕೆ ಎರಡು ಕೆ.ಜಿ.ಅಕ್ಕಿಯ ಹಾಗೆ ಊಟ ಮಾಡಿ ಐದೇ ದಿನದಲ್ಲಿ ಮುಗಿಸಬೇಕು ಎನ್ನಲು ಬರ್ತದಾ? ಹಾಗೇ ಅಲ್ವ ಇದು. ಆದರೆ ಶಿಕ್ಷಕರಾಗಲಿ, ಶಿಕ್ಷಕ ಸಂಘದವರಾಗಲಿ ಇದನ್ನು ಒಂದು ಸಮಸ್ಯೆಯಾಗಿ ಪರಿಗಣಿಸಿದ ಹಾಗಿಲ್ಲ.

ಶಿಕ್ಷಣ ಕ್ಷೇತ್ರದ ದೊಡ್ಡ ಸಮಸ್ಯೆ ಇತಿಹಾಸ ಮತ್ತು ಕನ್ನಡ ಪಾಠ ಪುಸ್ತಕಗಳು. ಸಿದ್ಧಾಂತ ಯಾವುದಾದರೂ ಇರಲಿ ಇಲಾಖೆಯ ಒಳಗಿರುವವರಿಗೇ ಪಾಠ ಪುಸ್ತಕ ಬರೆಯಲು ಕೊಟ್ಟರೆ ಅವರಿಗೆ ಸಾರ್ವಜನಿಕ ಉತ್ತರ ದಾಯಿತ್ವ ಇರುತ್ತದೆ.‌ ಹೆಚ್ಚು ಸಮಸ್ಯೆಯಾಗುವ ಹಾಗೆ ಮಾಡುವುದಿಲ್ಲ. ಪಾಠ ಪುಸ್ತಕ ರಚನೆ ಮಾಡುವವರು ಇಲಾಖೆಯ ಹೊರಗಿನವರು ಮತ್ತು ಬಿ‌ಎಡ್, ಡಿಎಡ್, ಎಂಎಡ್ ಯಾವುದೇ ಬೋಧನಾ ಶಾಸ್ತ್ರವನ್ನು ಅಭ್ಯಾಸ ಮಾಡದವರು, ಕ್ಲಾಸ್ ರೂಂ ಟೀಚಿಂಗಿನ ಅನುಭವ ಇಲ್ಲದವರು. ಬಿಎಡ್, ಡಿಎಡ್ ಮಾಡದವರಿಗೆ ತಿಳಿವಳಿಕೆ ಇರುವುದಿಲ್ಲವೆಂದಲ್ಲ. ಜ್ಞಾನ ಇರುತ್ತದೆ.‌ ಪಠ್ಯ ಪುಸ್ತಕ ವಿಷಯ ಸಂಪತ್ತಿನಿಂದ ಕೂಡಿರುತ್ತದೆ. ಆದರೆ ಅದನ್ನು ಹೇಗೆ ಹೇಳಬೇಕು ಎಂಬ ಮೆಥಡಾಲಜಿ ಗೊತ್ತಿಲ್ಲದೆ ನಿರೂಪಿಸಲ್ಪಟ್ಟಿರುವುದರಿಂದ ಶಿಕ್ಷಕರಿಗೆ ಅದನ್ನು ಮೆಥಡಾಲಜಿಗೆ ಒಗ್ಗಿಸಿಕೊಳ್ಳಲು ಕಷ್ಟವಾಗುತ್ತದೆ. 8 ನೆಯ ತರಗತಿಯ ಈಗಿನ ಸಮಾಜ ವಿಜ್ಞಾನ ಪಾಠವನ್ನು ಬೋಧನಾ ಶಾಸ್ತ್ರದ ಪ್ರಕಾರವೇ ಮಾಡಿ ಮುಗಿಸಬೇಕಾದರೆ ಎಷ್ಟು ಸಮಯ ಬೇಕು ನೀವು ಹೇಳಿ. ನನಗೆ ನಾನು ಅಂದಾಜಿಸಿದ ಪ್ರಕಾರ 16 ತಿಂಗಳು ಬೇಕು. ಆದರೆ 16 ತಿಂಗಳಿನ ಪಾಠ ಪುಸ್ತಕವನ್ನು ಕ್ರೀಡೆ, ಪ್ರತಿಭಾ ಕಾರಂಜಿ ಅದೂ ಇದು ಎಂದು ಎಲ್ಲ ಕಾರ್ಯಕ್ರಮಗಳನ್ನೂ ಸೇರಿಸಿಕೊಂಡಿರುವ 9 ತಿಂಗಳಿನಲ್ಲಿ‌ ಮಾಡಿ ಮುಗಿಸಿ ರಿಸಲ್ಟ್ ಕೊಡಬೇಕು! ವಾರಕ್ಕೊಂದು ದಿವಸ ಬ್ಯಾಗ್ ರಹಿತ ದಿನ ಎನ್ನುವುದು ಒಳ್ಳೆಯ ವಿಷಯವೇ.‌ ಆದರೆ ಇದು ಮಕ್ಕಳ ಭೌತಿಕ ಹೊರೆಯನ್ನು ಕಡಿಮೆ ಮಾಡುವುದಕ್ಕಾಯಿತು. ಬೌದ್ಧಿಕ ಹೊರೆ? ಸಾಮಾನುಗಳನ್ನು ಗೋಣಿ ಚೀಲಕ್ಕೆ ಕಾಲಿನಲ್ಲಿ ಮೆಟ್ಟಿ ಮೆಟ್ಟಿ ಮೆಟ್ಟಿ ತುಂಬಿಸಿ ಹಿಡಿಸಿದ ಹಾಗೆ ಪಾಠ ಪುಸ್ತಕಕ್ಕೆ ರಾಶಿ ರಾಶಿ ತುಂಬಿ ಹಾಕಿದರೆ ಆ ಬೌದ್ಧಿಕ ಹೊರೆಯಿಂದ ಮಕ್ಕಳನ್ನು ಬಚಾವ್ ಮಾಡುವುದು ಹೇಗೆ? ಮತ್ತು ಈ ಓವರ್ ಲೋಡನ್ನು ಶಿಕ್ಷಕರು ಮಕ್ಕಳಿಗೆ ವರ್ಗಾಯಿಸುವುದಾದರೂ ಹೇಗೆ? ಈಗ NEP 2020 ರಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿವೆ. ಆದರೆ 3 ವರ್ಷಕ್ಕೇ ಮಕ್ಕಳನ್ನು ಅಂಗನವಾಡಿಗೆ ಕಳಿಸುವ ಪ್ರಸ್ತಾವನೆಯಿಂದ ತಾಯಿ,ತಂದೆ,ಕುಟುಂಬದೊಳಗೆ ಮಗುವಿನ ವಿಕಾಸಕ್ಕೆ ಧಕ್ಕೆಯಾಗುವುದಿಲ್ಲವೆ? ಜೀನ್ ಪಿಯಾಜೆ ಸಿದ್ಧಾಂತ, ಕೊಹಲ್‌ಬರ್ಗ್ ಸಂಶೋಧನೆಗಳ ಬೆಳಕಿನಲ್ಲಿ ಇದನ್ನು ಅಭ್ಯಸಿಸಿ ನಿರ್ಧರಿಸಬೇಡವೆ?

ಶಾಲೆಗಳಲ್ಲಿ ಒಳ್ಳೆಯ ಶಿಕ್ಷಕರು ಬೇಕು ಎಂದು ಎಲ್ಲರಿಗೂ ಗೊತ್ತಿದೆ.‌ ಅದಕ್ಕೇ ನೋಡಿ ಡಿ.ಎಡ್, ಬಿಎಡ್ ಸಾಲದು ಎಂದು ಸ್ಪರ್ಧಾತ್ಮಕ ಪರೀಕ್ಷೆ ಬಂತು.‌ ಅದೂ ಸಾಕಾಗುವುದಿಲ್ಲ ಎಂದು ಈಗ ಟಿಇಟಿ ಬಂದಿದೆ. ಆದರೂ ಒಳ್ಳೆಯ ಶಿಕ್ಷಕರು ಸಿಗುವುದಿಲ್ಲ ಎಂದರೆ ಕಾರಣವೇನು? ಶೈಕ್ಷಣಿಕ ಸನ್ನಿವೇಶವನ್ನು ಬದಲಿಸದಿದ್ದರೆ ಇನ್ನು ಹತ್ತು ಪರೀಕ್ಷೆ ಮಾಡಿ ಶಿಕ್ಷಕರ ಆಯ್ಕೆ ಮಾಡಿದರೂ ಒಳ್ಳೆಯ ಶಿಕ್ಷಕರು ಸಿಗುವುದಿಲ್ಲ.‌ ಏಕೆಂದರೆ ಎಷ್ಟೇ ಒಳ್ಳೆಯ ಶಿಕ್ಷಕ ಬಂದರೂ ಶಿಕ್ಷಕರು ಬಂದ ಕೂಡಲೇ ಅವರಿಗೆ ಆಡಳಿತಾತ್ಮಕ ಕೆಲಸಗಳ ಹೊರೆ ಹಾಕಿ ಆಯಿತು. ಮತ್ತೆ ಅವನು ಜ್ಞಾನದ ಕಾರ್ಯ ಮಾಡುವುದೆಲ್ಲಿಂದ? ಅಧಿಕೃತವಾಗಿ ಬರುವ ಜನಗಣತಿಯಂಥ ಕೆಲಸಗಳ ಬಗ್ಗೆ ನನ್ನ ತಕರಾರೇ ಇಲ್ಲ. ಬೇಕಾದರೆ ಅಧಿಕೃತವಾಗಿ ಇನ್ನೊಂದಷ್ಟು ಜಾಸ್ತಿ ಕೆಲಸ ಕೊಡಿ, ಸಮಸ್ಯೆ ಇಲ್ಲ. ಆದರೆ ಶಾಲೆಯಲ್ಲಿ ಸಹಿ ಹಾಕಿದ ಮೇಲೆ ಚಲನ ವಲನ ವಹಿಯಲ್ಲಿ ಬರೆದಿಟ್ಟು ಶೂ ತರುವ, ಸಾಕ್ಸ್ ತರುವ, ಮೆಯಿಲ್ ಮಾಡಲು ಹೋಗುವ, ಸೈಕಲ್ ತರಲು ಹೋಗುವ ಕೆಲಸಗಳೆಲ್ಲ ಇರಬಾರದು. ಈ ಅನಧಿಕೃತ ಆಡಳಿತಾತ್ಮಕ ಕೆಲಸಗಳು ಶಿಕ್ಷಕರನ್ನು ಹಿಂಡಿ ಹಾಕಿಬಿಡುತ್ತವೆ.‌ ಒಂದು ಸಲ ಶಿಕ್ಷಕರು ತರಗತಿಯಲ್ಲಿ ಮೊಬೈಲ್ ಬಳಸಬಾರದು ಎಂದು ಆಯಿತು ನೋಡಿ. ಆಮೇಲೆ ಅದರ ಸದ್ದೇ ಇಲ್ಲ. ಯಾಕೆ? ಶಿಕ್ಷಕರು ತರಗತಿಯಲ್ಲಿ ಫೋನ್ ಬಳಸಬಾರದು ಎಂಬುದನ್ನು ಕಡ್ಡಾಯ ಮಾಡಿದರೆ ಶಿಕ್ಷಕರಿಗೆ ಪರಮ ಸುಖ, ಆದರೆ ವಾಟ್ಸಪ್‌ಗೆ ಮೆಸೇಜ್ ಹಾಕಿ ಈ ಕ್ಷಣವೇ ದಾಖಲೆ ಕಳಿಸಿ ಎನ್ನುವುದು ಹೇಗೆ? ವಿಷಯ ಇರುವುದು ಇಲ್ಲಿ.‌ ಆದ್ದರಿಂದ ಶಿಕ್ಷಕರು ಮೊಬೈಲ್ ಬಳಸಬಾರದು ಎಂಬ ವಿಷಯ ಸದ್ದಿಲ್ಲದೆ ಮರೆಯಾಯಿತು. ಶಾಲೆಗಳಲ್ಲಿ ಆಡಳಿತಾತ್ಮಕ ವಿಭಾಗ ಮತ್ತು ಅಕಾಡೆಮಿಕ್ ವಿಭಾಗವನ್ನು ಪ್ರತ್ಯೇಕ ಮಾಡದೆ ಇದ್ದರೆ ಇನ್ನು ಹತ್ತು ಪರೀಕ್ಷೆ ಮಾಡಿ ಶಿಕ್ಷಕರ ಆಯ್ಕೆ ಮಾಡಿದರೂ ಒಳ್ಳೆಯ ಶಿಕ್ಷಕರು ಸಿಗಲಿಕ್ಕಿಲ್ಲ.‌ ಆಡಳಿತಾತ್ಮಕ ಮತ್ತು ಅಕಡೆಮಿಕ್ ವಿಭಾಗಗಳನ್ನು ಪ್ರತ್ಯೇಕ‌ಮಾಡಿದರೆ ಈಗಿರುವ ಶಿಕ್ಷಕರೇ ಬೆಸ್ಟ್ ಇದ್ದಾರೆ ಎಂದು ಗೊತ್ತಾಗಲಿದೆ. ಮತ್ತು ಶಿಕ್ಷಕರಾಗುವವರ ವಿಷಯ ಜ್ಞಾನ, ಬುದ್ಧಿಶಕ್ತಿಯನ್ನು ಪರೀಕ್ಷಿಸುವ ಪರೀಕ್ಷೆಗಳಿಗಿಂತ ವಿದ್ಯಾರ್ಥಿಗಳ ಕುರಿತ ಮನೋಭಾವವನ್ನು ಪರೀಕ್ಷಿಸುವ ಪ್ರಶ್ನೆಗಳನ್ನಿಟ್ಟು ಶಿಕ್ಷಕರ ಆಯ್ಕೆ ಮಾಡಿದರೆ ಉತ್ತಮವಾದೀತು.

ನಾನು ಏಕಮುಖಿಯಾಗಿ ಶಿಕ್ಷಕರ ಪರ ಇದ್ದೇನೆಂದು ಭಾವಿಸಬಾರದು.‌ ಅಧ್ಯಯನ, ಸಂವಾದ, ಜಿಜ್ಞಾಸೆ, ಉಪನ್ಯಾಸ, ವಿಚಾರ ಗೋಷ್ಠಿ, ಶೈಕ್ಷಣಿಕ ಪ್ರವಾಸ ಇಂತಾದ್ದರಲ್ಲಿ ನಿರತರಾಗಬೇಕಾದ ಶಿಕ್ಷಕರು ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡಿರುವುದೂ ಇದೆ. ನನ್ನ ಮಗಳು ಓದಿದ್ದು, ಮಗ ಓದುತ್ತಿರುವುದು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ.‌ ಇಲ್ಲಿ ಮಹೇಶ್ ಕರ್ಕೇರಾ ಇದ್ದಾರೆ. ಅವರ ಮಗನೂ ಸರ್ಕಾರಿ ಶಾಲೆ. ಇನ್ನೂ ಕೆಲವರಿರಬಹುದು, ನನಗೆ ಗೊತ್ತಿಲ್ಲ ಅಷ್ಟೆ. ನಮ್ಮ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಝ್ ಅವರ ಮಕ್ಕಳೂ ಸರ್ಕಾರಿ ಶಾಲೆ. ಆದರೆ ಬಹುತೇಕ ಸರಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರಿಗೆ ತಮ್ಮ ಸಹೋದ್ಯೋಗಿಗಳ ಮೇಲೆಯೇ ನಂಬಿಕೆ ಇಲ್ಲ;ಅವರ ಮಕ್ಕಳು ಖಾಸಗಿ ಶಾಲೆ! ನಮ್ಮ‌ ಶಾಲೆಯನ್ನು ನಮಗೇ ಜನಿಸಿದ ಮಕ್ಕಳು ವ್ಯಾಸಂಗ ಮಾಡಲು ಯೋಗ್ಯವಾಗಿ ಇರಿಸಿದ್ದೇವೆ ಎನ್ನುವ ವಿಶ್ವಾಸ ನಮಗೇ ಇಲ್ಲದಿದ್ದರೆ ಮತ್ತೆ ಯಾವ ಮುಖ ಹೊತ್ತುಕೊಂಡು ಆಚೆಯವನ ಮಕ್ಕಳನ್ನು ನಮ್ಮ‌ ಶಾಲೆಗೆ ಕಳಿಸಿ ಎಂದು ಹೇಳುವುದು? ಇದರರ್ಥ ಕಂಡುಕೊಂಡ ಸಕಾರಣವಿದ್ದು ಬೇರೆ ಶಾಲೆಗೆ ಕಳಿಸುವುದಕ್ಕೆ ಆಕ್ಷೇಪ ಅಲ್ಲ. ಉದಾಹರಣೆಗೆ ನಾನು ಪಾಠ ಮಾಡುವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ, ಶಿಕ್ಷಕರು ಇದ್ದರೂ ತರಗತಿಗೆ ಹೋಗಲು ಸಾಕಷ್ಟು ಸಮಯವಿರುವುದಿಲ್ಲ ಎಂಬೆಲ್ಲ ಕಾರಣ ಇದ್ದಾಗ ಖಾಸಗಿ ಶಾಲೆಗೆ ಕಳಿಸಿದರೆ ಸರಿ;ತಪ್ಪಲ್ಲ. ಆದರೆ ನಮ್ಮ ಮಕ್ಕಳನ್ನು ಕಳಿಸುವ ಶಾಲೆ ನಾವು ಪಾಠ ಮಾಡುವ ಶಾಲೆಗಿಂತ ಉತ್ತಮವಾಗಿದೆ ಎನ್ನಲು ನಮ್ಮ ಬಳಿ ಸಾಕ್ಷಿ ಇರಬೇಕು.‌ ಉಂಟಾ? ಇದರರ್ಥ ಖಾಸಗಿ ಶಾಲೆಗೆ ನಾನು ವಿರೋಧಿಯಲ್ಲ. ಸರಕಾರಿ ಮತ್ತು ಅನುದಾನಿತ ಶಾಲೆಗಳು ಅನುದಾನ ರಹಿತ ಖಾಸಗಿ ಶಾಲೆಗಳು ವಿರೋಧಿಗಳೇ ಆಗಬೇಕಾಗಿಲ್ಲ. ಪೂರಕವೂ ಆಗಬಹುದು.‌ ಖಾಸಗಿ ಆಡಳಿತ ಮಂಡಳಿಗಳು ಶಾಲೆಯ ಅಗತ್ಯಕ್ಕೆ ಸ್ಪಂದಿಸುವಷ್ಟೇ ಕ್ಷಿಪ್ರವಾಗಿ ಸರಕಾರಿ ಮತ್ತು ಅನುದಾನಿತ ಶಾಲೆಗಳ ಆಡಳಿತ ವ್ಯವಸ್ಥೆ ಸ್ಪಂದಿಸಬೇಕು.‌ ಸರಕಾರಿ ಮತ್ತು ಅನುದಾನಿತ ವ್ಯವಸ್ಥೆ ತನ್ನ ಉದ್ಯೋಗಿಗಳಿಗೆ ಕೊಡುವ ವೇತನದಷ್ಟೆ ವೇತನವನ್ನು ಖಾಸಗಿ ಶಾಲೆಗಳು ಅವರ ಶಿಕ್ಷಕರಿಗೂ ಕೊಡಬೇಕು. ಪಾಲಕರಿಗೆ ಆಯ್ಕೆ ಮುಕ್ತವಾಗಿದ್ದು ಯಾವ ಶಾಲೆಗಾದರೂ ಮಕ್ಕಳನ್ನು ಕಳಿಸಿಕೊಳ್ಳಲಿ. ಆದರೆ ನಾವು ಬೋಧಿಸುವ ಶಾಲೆಯನ್ನು ನಮ್ಮ ಮಕ್ಕಳಿಗೆ ಓದಲು ಯೋಗ್ಯವಾಗಿಡುವಷ್ಟು ಶಕ್ತಿ ನಮಗಿಲ್ಲ ಎಂಬ ತಪ್ಪು ಸಂದೇಶ ಹೋಗಬಾರದು.

ಸಮಸ್ಯೆ ಇದೆ.‌ ಮತ್ತು ಸದಾ ಇರುತ್ತದೆ. ಆದರೆ ಅದನ್ನು ನೋಡಿಕೊಂಡು ಸುಮ್ಮನೇ ಕೂತುಕೊಳ್ಳುವುದಲ್ಲ. ನನಗೇಕೆ ಬೇಕು ಎಂದುಕೊಳ್ಳುವುದಲ್ಲ. ಮಾತಾಡಬೇಕು.‌ ಹೇಳಬೇಕು. ಸರಿಯಾಗುವ ವರೆಗೂ ಹೇಳುವುದನ್ನು ನಿಲ್ಲಿಸಬಾರದು. ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬಬೇಕಾದವರಲ್ಲೆ ಸತ್ಯವನ್ನು ಹೇಳುವ ಆತ್ಮವಿಶ್ವಾಸ ಇಲ್ಲದಿದ್ದರೆ ಹೇಗೆ? ನಾನಾಡಿದ ಮಾತು ತೀಕ್ಷ್ಣವೆನಿಸಿದರೆ ಅದರ ಉದ್ದೇಶ ಟೀಕೆಯಲ್ಲ.‌ ಸುಧಾರಣೆಯಾಗಬೇಕು ಎಂಬ ಆಶಯವಷ್ಟೆ.

ಇವತ್ತು ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆ.‌ ರಾಧಾಕೃಷ್ಣನ್ ಪ್ರೊಫೆಸರ್ ಆಗಿ ಇದ್ದವರು. ಆದರೆ ನಮ್ಮೊಂದಿಗೆ ಪ್ರೊಫೆಸರ್‌ಗಳೇ ಇಲ್ಲ! ಕನಿಷ್ಠ ಪಕ್ಷ ಶಿಕ್ಷಕರ ದಿನದಂದು ಅಂಗನವಾಡಿಯಿಂದ ವಿಶ್ವ ವಿದ್ಯಾನಿಲಯದ ವರೆಗಿನ ಎಲ್ಲ ಬೋಧಕರೂ ಒಂದೆಡೆ ಸೇರಲು ಸಾಧ್ಯವಾಗುವಂತಾಗಬೇಕು.‌ ಆಗ ಪರಸ್ಪರ ಜ್ಞಾನ ಮತ್ತು ಬಾಂಧವ್ಯದ ವಿನಿಮಯವಾಗಲು ಸಾಧ್ಯವಿದೆ.

ಇವತ್ತು ಸಂಭ್ರಮದ ದಿನವೂ ಹೌದು. ನೋಡಿ ನಮ್ಮ ಮೇಷ್ಟ್ರುಗಳು ಎಷ್ಟು ಖಡಕ್ ಇಸ್ತ್ರಿ ಹಾಕಿ ಟಿಪ್ ಟಾಪ್ ಆಗಿ ಬಂದಿದ್ದಾರೆ! ಮೇಡಂಗಳೆಲ್ಲ ಚಂದಚಂದದ ಸೀರೆ ಉಟ್ಟುಕೊಂಡು ಬಂದಿದ್ದಾರೆ.‌ ಇನ್ನೀಗ ಸನ್ಮಾನ, ಊಟ ಎಲ್ಲ‌ ಇದೆ. ಆ ಸಂಭ್ರಮದೊಂದಿದೆ ಕೆಲವು ವಿಚಾರಗಳೂ ಇರಲಿ ಎಂದು ತೇಲಿ ಬಿಟ್ಟಿದ್ದೇನೆ. ನನ್ನ ಮಾತುಗಳನ್ನು ಕೇಳಿದ ನಿಮಗೆಲ್ಲರಿಗೂ ವಂದಿಸಿ ಮಾತುಗಳನ್ನು ಮುಗಿಸುತ್ತಿದ್ದೇನೆ.‌ ನಮಸ್ಕಾರ.

5-9-2023 ರಂದು ಮೂಡುಬಿದಿರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಶಿಕ್ಷಕರು ಹಾಗೂ ಸಾಹಿತಿ – ಶ್ರೀ ಅರವಿಂದ ಚೊಕ್ಕಾಡಿ ಯವರು ಮಾಡಿದ ಉಪನ್ಯಾಸ

Leave a Reply

Your email address will not be published. Required fields are marked *