ಪ್ರಧಾನ ಪರಿಕಲ್ಪನೆ: ದೂಷಣೆಯಲ್ಲ,ರಚನೆ
(ಕಾರ್ಯಕ್ರಮ ಏನು ತಪ್ಪು ಮತ್ತು ಯಾರು ತಪ್ಪಿತಸ್ಥರು ಎಂದು ಗುರುತಿಸಿ ಹೈಲೈಟ್ ಮಾಡುವುದಾಗಿರದೆ, ಏನಾಗಬೇಕಾಗಿದೆ, ಹೇಗೆ ಅದನ್ನು ರೂಪಿಸಬೇಕು ಎಂಬುದನ್ನು ಗುರುತಿಸಿ ಹೈಲೈಟ್ ಮಾಡುವ ಮಾದರಿಯದ್ದಾಗಿದೆ)

ಉದ್ದೇಶ: ಕನ್ನಡದ ಮೂಲಕ ಶಿಕ್ಷಣದ ಸಬಲೀಕರಣ ಮತ್ತು ಶಿಕ್ಷಣದ ಮೂಲಕ ಕನ್ನಡದ ಸಬಲೀಕರಣವನ್ನು ಸಾಧಿಸುವುದು.

ಪರಿಗಣನೆ:

  • ಸಮಾವೇಶಕ್ಕೆ ಕೊಪ್ಪಳ, ಬಿಜಾಪುರ, ತುಮಕೂರು,ಬೆಂಗಳೂರು,ಮೈಸೂರುಗಳಿಂದೆಲ್ಲ ಕೇಳುಗರು ಭಾಗವಹಿಸುವುದರಿಂದ ಸಂವಾದವು ದಕ್ಷಿಣ ಕನ್ನಡಕ್ಕೆ ಸೀಮಿತವಾಗದೆ ಸಮಗ್ರ ಕರ್ನಾಟಕವನ್ನು ಪರಿಗಣಿಸುವಂತಿರುತ್ತದೆ.
  • ಸರಕಾರಿ ಶಾಲೆಗಳ ಅಧ್ಯಾಪಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಾರೆ ಎಂಬ ಭಾವನೆಯ ಹಿನ್ನೆಲೆಯಲ್ಲಿ, ಸರಕಾರಿ/ಕನ್ನಡ ಮಾಧ್ಯಮ ಶಾಲೆಯಲ್ಲೆ ತಮ್ಮ ಮಕ್ಕಳನ್ನು ಓದಿಸುತ್ತಿರುವ ಶಿಕ್ಷಕರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು ಅವರು ಪೋಷಕರ ನೆಲೆಯಲ್ಲಿ(ಶಿಕ್ಷಕರಾಗಿಯಲ್ಲ) ಸಂವಾದದಲ್ಲಿ ತೊಡಗಿಕೊಳ್ಳುತ್ತಾರೆ.
  • ಅನುದಾನ ರಹಿತ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಇರುವಿಕೆಯೂ ಗಮನಾರ್ಹ.
  • ಪ್ರತೀ ಗೋಷ್ಠಿ 90 ನಿಮಿಷಗಳದ್ದಾಗಿದ್ದು ವಿಚಾರ ಮಂಡಿಸುವವರಿಗೆ ತಲಾ 20 ನಿಮಿಷದಂತೆ 40 ನಿಮಿಷ ಮತ್ತು ಸಂವಾದಕ್ಕೆ ಜಾಸ್ತಿ ಸಮಯ ಅಂದರೆ 40 ನಿಮಿಷ, ಉಳಿದ 10 ನಿಮಿಷ ಇತರೇ ಕಾರ್ಯಗಳಿಗೆ ಸಿಗುವಂತೆ ಗರಿಷ್ಠ ಪ್ರಯತ್ನಿಸಲು ಕೋರಲಾಗಿದೆ.
  • ಕೇಳಲಾಗುವ ಪ್ರಶ್ನೆಗಳು, ಕೊಡುವ ಉತ್ತರಗಳು ಸಂಕ್ಷಿಪ್ತವಾಗಿದ್ದು ನಿರ್ದಿಷ್ಠವಾಗಿರಬೇಕು,ಭಾಷಣದ ರೂಪದಲ್ಲಿರಬಾರದು. ಆದರೆ ವೇದಿಕೆಯಲ್ಲಿರುವವರು ಮಾತ್ರ ಉತ್ತರಿಸಬೇಕಾಗಿಲ್ಲ. ಸಭಾಸದರಲ್ಲಿಯೂ ಉತ್ತರ ಬಲ್ಲವರು ಉತ್ತರಿಸಬಹುದು. ವೇದಿಕೆಯಲ್ಲಿರುವವರೂ ಪ್ರಶ್ನೆಯನ್ನು ಕೇಳಬಹುದು.

ಗೋಷ್ಠಿ 1: ಆಡಳಿತಾತ್ಮಕ ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು.

ವಿಚಾರ ಮಂಡನೆ 1: ಕಲಿಕಾ ಸಂದರ್ಭವನ್ನು ಉತ್ತಮೀಕರಿಸಲು ಆಗಬೇಕಾದ ಆಡಳಿತಾತ್ಮಕ ಸುಧಾರಣೆಗಳು(ಉದಾ: ಆಡಳಿತ ವಿಭಾಗ, ಅಕಡೆಮಿಕ್ ವಿಭಾಗಗಳನ್ನು ಪ್ರತ್ಯೇಕಿಸುವುದು), ಸಿಬ್ಬಂದಿ ಒದಗಣೆಯ ಅಗತ್ಯ, ಆಡಳಿತಾತ್ಮಕ ಮತ್ತು ಶೈಕ್ಷಣಿಕ ಆಡಳಿತಗಾರರ ಒತ್ತಡಗಳ ನಿರ್ವಹಣೆ, ಕಲಿಕೆಗೆ ಪೂರಕ ಆಡಳಿತಾತ್ಮಕ ರಚನೆ( ಉದಾ: ಕನ್ನಡ ಮಾಧ್ಯಮ ಶಾಲೆಗಿಂತ ಹತ್ತಿರದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಇದ್ದು ಕನ್ನಡ ಮಾಧ್ಯಮ ಶಾಲೆಗೆ ಬಸ್ ಸೌಲಭ್ಯ ಇಲ್ಲದೆ ಇರುವುದು)ಮುಂತಾದ ಹಿನ್ನೆಲೆ.

ವಿಚಾರ ಮಂಡಿಸುವವರು: ಶ್ರೀಮತಿ ಫಿಲೋಮೀನಾ ಲೋಬೋ, ನಿವೃತ್ತ ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ.

ವಿಚಾರ ಮಂಡನೆ 2: ಕನ್ನಡವನ್ನು ಸಬಲೀಕರಿಸುವ ನೆಲೆಯಲ್ಲಿ ಶೈಕ್ಷಣಿಕ ಆಡಳಿತ ಹೇಗಿರಬೇಕೆಂಬ ನಿರೀಕ್ಷೆ, ಈ ನಿಟ್ಟಿನಲ್ಲಿ ಶೈಕ್ಷಣಿಕ ಆಡಳಿತವನ್ನು ಜನ ಸ್ನೇಹಿಯಾಗಿಸುವ ನೆಲೆ, ಶೈಕ್ಷಣಿಕ ಆಡಳಿತ ಮತ್ತು ಪೋಷಕರ ನಡುವಿನ ಸಂಬಂಧಗಳು ಮುಂತಾದ ಹಿನ್ನೆಲೆ.

ವಿಚಾರ ಮಂಡಿಸುವವರು: ಶ್ರೀ ಜಿ. ಆನಂದ್, ಅಧ್ಯಕ್ಷರು, ಬನವಾಸಿ ಕನ್ನಡ ಬಳಗ

ಗೋಷ್ಠಿ 2: ರಾಜಕೀಯಾತ್ಮಕ ನೆಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ.

ವಿಚಾರ ಮಂಡನೆ 1: ರಾಷ್ಟ್ರೀಯ ನೀತಿಗಳನ್ನು ರಾಜ್ಯಕ್ಕೆ ಒಗ್ಗಿಸಿಕೊಳ್ಳುವುದು(ಉದಾ: ಸಿಇಟಿ ಬಂದ ನಂತರ ಕನ್ನಡ ಮಾಧ್ಯಮಕ್ಕಾದ ಹಿನ್ನಡೆ), ಕನ್ನಡ ಮಾಧ್ಯಮಕ್ಕೆ ಉತ್ತೇಜನಾ ನೀತಿಗಳು(ಉದಾ: ಕೋಲಾರದ ಗಡಿ ಭಾಗದಲ್ಲಿ ತಮಿಳು ಮಾಧ್ಯಮದಲ್ಲಿ ಕಲಿತವರಿಗೆ ಸರಕಾರಿ ಉದ್ಯೋಗವನ್ನು ತಮಿಳು ನಾಡು ಸರಕಾರ ಘೋಷಿಸಿದ ನಂತರ ಕನ್ನಡ ಮಾಧ್ಯಮ ಶಾಲೆಗಳು ತಮಿಳು ಮಾಧ್ಯಮಕ್ಕೆ ಪರಿವರ್ತನೆಯಾದದ್ದು), ಸರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ವಹಿಸಬೇಕಾದ ರೀತಿಗಳು ಮುಂತಾದ ಹಿನ್ನೆಲೆ.

ವಿಚಾರ ಮಂಡಿಸುವವರು: ಶ್ರೀ ಕಿಮ್ಮನೆ ರತ್ನಾಕರ, ಮಾಜಿ ಶಿಕ್ಷಣ ಸಚಿವರು.

ವಿಚಾರ ಮಂಡನೆ 2: ಶಿಕ್ಷಣ ನೀತಿಗಳು ಮಕ್ಕಳ-ಶಿಕ್ಷಕರ-ಪೋಷಕರ ಪರವಾಗಿ ಹೇಗಿರಬೇಕು(ಉದಾ: ಕೆಲಸ ಮಾಡದವನಿಗೆ ಇನ್ಕ್ರಿಮೆಂಟ್ ಕಟ್ ಆಗುವ ವ್ಯವಸ್ಥೆ ಇದೆ. ಆದರೆ ಜಾಸ್ತಿ ಕೆಲಸ ಮಾಡಿದವನಿಗೆ ಒಂದು ಇನ್ಕ್ರಿಮೆಂಟ್ ಜಾಸ್ತಿ ಕೊಡುವ ವ್ಯವಸ್ಥೆ ಇಲ್ಲ), ಸಾಮಾಜಿಕ ಅಪರಾಧಗಳು ಹೆಚ್ಚುತ್ತಿರುವ ನೆಲೆಯಲ್ಲಿ ನೀತಿ ಶಿಕ್ಷಣದ ಪಾಲಿಸಿ, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಪರಿಣಾಮಕಾರಿ ಯೋಜನೆಗಳು, ಮೂಲ ಸೌಕರ್ಯಗಳ ಒದಗಣೆ, ನೇಮಕಾತಿ ನೀತಿಯಲ್ಲಿ ತರಬೇಕಾದ ಬದಲಾವಣೆ ಮುಂತಾದ ಹಿನ್ನೆಲೆ.

ವಿಚಾರ ಮಂಡಿಸುವವರು:
ಶ್ರೀ ಮಹೇಶಚಂದ್ರ, ವಸತಿ ಶಾಲೆಗಳ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷರು

ಗೋಷ್ಠಿ 3: ಕಲಿಕೆಯ ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು.

ವಿಚಾರ ಮಂಡನೆ 1: ಕನ್ನಡದ ಮೂಲಕ ಹೆಚ್ಚು ಕಲಿಕಾನುಭವಗಳ ಪ್ರಕಟಣೆ, ಸಾಮಾಜಿಕ ವಿಕಾಸ, ಕಲಿಕೆಯಲ್ಲಿ ಸಂಸ್ಕೃತಿ ಮತ್ತು ಕಲೆಗಳ ಬಳಕೆ, ಕನ್ನಡ ಮಾಧ್ಯಮವನ್ನು ವಿದ್ಯಾರ್ಥಿಗಳಿಗೆ ಪ್ರಿಯವಾಗುವಂತೆ ರೂಪಿಸುವುದು ಮುಂತಾದ ಹಿನ್ನೆಲೆ.

ವಿಚಾರ ಮಂಡನೆ: ಡಾ. ಎಮ್. ಪ್ರಭಾಕರ ಜೋಷಿ, ಹಿರಿಯ ವಿದ್ವಾಂಸರು.

ವಿಚಾರ ಮಂಡನೆ 2: ಕೇವಲ ಆಸಕ್ತ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲರನ್ನೂ ಶಾಲೆಗೆ ಕರೆತಂದ ನಂತರ ಕನ್ನಡ ವಾಕ್ಯ ರಚನೆಯ ಕಲಿಕೆಯೇ ಕಷ್ಟವಾಗಿರುವ ಪರಿಸ್ಥಿತಿಯ ನಿರ್ವಹಣೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕಲಿಕಾ ಸಂಕಷ್ಟಗಳು ಮತ್ತು ಅವುಗಳ ನಿವಾರಣೆ, ಕುಟುಂಬದಲ್ಲಿ ಕನ್ನಡ ಕಲಿಕೆಗೆ ನೀಡಬೇಕಾದ ಉತ್ತೇಜನ ಮುಂತಾದ ಹಿನ್ನೆಲೆ.

ವಿಚಾರ ಮಂಡನೆ: ಡಾ. ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಪೀಠ, ಜವಾಹರ ಲಾಲ್ ನೆಹರೂ ವಿಶ್ವ ವಿದ್ಯಾನಿಲಯ, ನವದೆಹಲಿ.

ವಿ. ಸೂ: ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಫಿ/ಚಹಾ+ ಸ್ನ್ಯಾಕ್ಸ್, ಮಧ್ಯಾಹ್ನ 1.30 ರ ಸುಮಾರಿಗೆ ಸರಳ ಊಟ, ಸಂಜೆ 4 ರ ಸುಮಾರಿಗೆ ಕಾಫಿ/ಚಹಾ+ ಸ್ನ್ಯಾಕ್ಸ್ ವ್ಯವಸ್ಥೆ ಇರುತ್ತದೆ.

GVV – ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪೋಷಕರ ಸಮಾವೇಶ – 2023

Leave a Reply

Your email address will not be published. Required fields are marked *