“ಕೌಶಲಾಧಾರಿತ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು”- ಡಾ.ಮಂಜುನಾಥ್ ಆರ್.ಕೆ.
ಬಳ್ಳಾರಿ: ಜನವರಿ 30 ಗಾಂಧೀಜಿಯವರು 7ರಿಂದ 14ನೇ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಶಿಕ್ಷಣ ಮಗು ಕೇಂದ್ರಿತವಾಗಬೇಕು. ಆಗ ಮಾತ್ರ ಮಗುವಿನ ಸಂಪೂರ್ಣ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಕೌಶಲಪೂರ್ಣ ಶಿಕ್ಷಣ ಗಾಂಧೀಜಿಯವರ ಕನಸಾಗಿತ್ತು. ಇದಕ್ಕಾಗಿ ಶಿಕ್ಷಣದಲ್ಲಿ ಕರಕುಶಲ ವಿಷಯಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಗಾಂಧಿ ವಿಚಾರ ವೇದಿಕೆಯ ಸದಸ್ಯರು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕರು ಆದ ಡಾ.ಮಂಜುನಾಥ ಆರ್.ಕೆ. ಅವರು ನಗರದ ಹೊರವಲಯದ ಅಲ್ಲಿಪುರ ಹತ್ತಿರವಿರುವ ಅಲ್ಪಸಂಖ್ಯಾತರ ಇಲಾಖೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಗಾಂಧಿ ವಿಚಾರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕ ಜಂಟಿಯಾಗಿ ಆಯೋಜಿಸಿದ್ದ ‘ಹುತಾತ್ಮರ ದಿನಾಚರಣೆ’ಯಲ್ಲಿ ‘ಸಮಕಾಲೀನ ಸಮಸ್ಯೆಗಳಿಗೆ ಗಾಂಧೀಜಿ ವಿಚಾರಗಳ ಪ್ರಸ್ತುತತೆ’ ವಿಷಯದ ಕುರಿತು ಮಾತಾನಾಡಿದರು.
ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತರಾದ ಶ್ರೀ ಅಹಿರಾಜ್ ಮತ್ತಿಕಟ್ಟೆ ಯವರು ಗಾಂಧೀಜಿಯವರು ಸ್ವಯಂ ಶಿಸ್ತನ್ನು ಪಾಲಿಸಿ ಇಡೀ ದೇಶದ ಜನರಿಗೆ ಶಿಸ್ತನ್ನು ಮೂಡಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ನಾಗರಾಜ ಅವರು ವಿದಾರ್ಥಿಗಳು ಗಾಂಧೀಜಿಯವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆಕೊಟ್ಟರು.
ಕುಮಾರಿ ಭಾಗೀರಥಿ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ದೈಹಿಕ ಶಿಕ್ಷಕರಾದ ಶ್ರೀ ರಂಗಪ್ಪ ಅವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಪ್ರಿಯದರ್ಶಿನಿ ವಂದಿಸಿದರೆ, ಶಿಕ್ಷಕರು ಮತ್ತು ಗಾಂಧಿ ವಿಚಾರ ವೇದಿಕೆ ಸಂಘಟಕರಾದ ಡಾ.ಬಸರಕೋಡು ನಾಗರಾಜ ನಿರೂಪಿಸಿದರು. ಶಾಲೆಯ ಶಿಕ್ಷಕರು, ನಿಲಯಪಾಲಕರು ಉಪಸ್ಥಿತರಿದ್ದರು.