03-10-2022 : ಹಾಜಿ ಅಬ್ದುಲ್ಲ ಟ್ರಸ್ಟ್ ಮತ್ತು ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಇವತ್ತು ಉಡುಪಿಯಲ್ಲಿ
‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ ನಡೆಯಿತು.

‘ ಕೋಮು ಸೌಹಾರ್ದತೆ’ ಎಂಬ ವಿಷಯದಲ್ಲಿ ಸಾಮಾನ್ಯವಾಗಿ ನಾನು ಮಾತನಾಡಲು ಒಪ್ಪುವುದಿಲ್ಲ. ಏಕೆಂದರೆ
‘ ಕೋಮು ಸೌಹಾರ್ದತೆ’ ಯ ಹೆಸರಿನಲ್ಲಿ ಮಾತಾಡಿದವರೆಲ್ಲ ಹಿಂದೂಗಳಿಗೆ ಕ್ರೂರವಾಗಿ ಬೈದು, ಕೆಟ್ಟದಾಗಿ ಅವಮಾನಿಸಿ ಯಾವ ಕಾರಣಕ್ಕೂ ಇವರಿಗೆ ಸ್ಪಂದಿಸಬಾರದು ಎಂಬ ಮಟ್ಟಕ್ಕೆ ಹಿಂದೂಗಳನ್ನು ತಂದಿಟ್ಟಿದ್ದಾರೆ. ಟೈಟಲ್ ಅನ್ನು ಬದಲಿಸಲು ಹಲವು ಸಲ ನಾನು ಹೇಳಿದ್ದೆ. ಆದರೆ ಆ ಮೇಲೆ ಹಾಜಿ ಅಬ್ದುಲ್ಲಾ ಅವರ ಬಗ್ಗೆ ಗೊತ್ತಾಯಿತು. ಅವರು ಮಸೀದಿಗೆ ಭೂಮಿ ಕೊಟ್ಟಿದ್ದಾರೆ.‌ ದೇವಸ್ಥಾನಕ್ಕೆ ಕೊಟ್ಟಿದ್ದಾರೆ.‌ ದೈವ ಸ್ಥಾನಕ್ಕೆ ಕೊಟ್ಟಿದ್ದಾರೆ. ಬೆಳಗ್ಗೆ ಕೃಷ್ಣ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿಯೇ ಕೆಲಸಕ್ಕೆ ಹೊರಡುತ್ತಿದ್ದವರವರು. ಮಂಗಳೂರಿನಲ್ಲಿ ಕಾರ್ನಾಡ್ ಸದಾಶಿವರಾಯರ ಹಾಗೆ ಉಡುಪಿಯಲ್ಲಿ ಹಾಜಿ ಅಬ್ದುಲ್ಲಾ. ಇಬ್ಬರೂ ಮಹಾನ್ ಶ್ರೀಮಂತರು. ಸಮಾಜಕ್ಕಾಗಿ ಕೊಟ್ಟೂ ಕೊಟ್ಟೂ ಇಬ್ಬರೂ ದುರಂತದ ರೀತಿಯಲ್ಲಿ ನಿರ್ಗಮಿಸಿದವರು. ಹೀಗಿದ್ದ ಮನುಷ್ಯನ ಹೆಸರಿನಲ್ಲಿ ‘ ಕೋಮು ಸೌಹಾರ್ದತೆ’ ಯ ಬಗ್ಗೆ ಮಾತಾಡದೆ ಇರುವುದು ಸರಿಯಾಗುವುದಿಲ್ಲ ಎಂದು ಅದೇ ಟೈಟಲ್‌ನಲ್ಲಿ ಮಾತಾಡಲು ಒಪ್ಪಿಕೊಂಡೆ.

ಹಾಜಿ ಅಬ್ದುಲ್ಲಾ ಅವರಿಗೂ, ಗಾಂಧೀಜಿಯವರಿಗೂ ಗೌರವ ತರುವ ರೀತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಮೇಲ್ವರ್ಗ, ಕೆಳವರ್ಗ, ಮಹಿಳೆಯರು, ಮಕ್ಕಳು, ಕೆಲವು ಎಡಪಂಥೀಯ ಚಿಂತಕರು ಎಲ್ಲರೂ ಬಂದಿದ್ದರು. ಇದು ಗಾಂಧೀಜಿಯ ಪರಿಕಲ್ಪನೆಯ ಸಮಾಜ. ಪ್ರತೀ ವರ್ಷ ಹಿಮಾಲಯ ಚಾರಣಕ್ಕೆ ಕರೆದೊಯ್ಯುವುದು, ಗಂಗಾ ನದಿ ಬಯಲಲ್ಲಿ ಅಡ್ಡಾಡುವುದು ಎಲ್ಲ ಆದ ನಂತರ ಈಗ ರಾಜಗೋಪಾಲ್ ಅವರು ಮನೆ, ಅವರೇ ಮಾಡಿದ ತೋಟ, ಗಾಯತ್ರಿ ಧ್ಯಾನ ಮಂದಿರ ಇದರ ಆಚೆಗೆ ಹೊರಗೆ ಹೊರಡುವುದು ಕಡಿಮೆ. ಆದರೆ ಅವರೂ ಈ ಜಾಥಾಕ್ಕೆ ಬಂದಿದ್ದರು.‌ ಪ್ರಸನ್ನರು, ಫಣಿರಾಜ್‌ರು, ರಾಜಾರಾಮ್ ತಲ್ಲೂರ್, ನೀಲಾವರ ಅಡಿಗರು, ಸತೀಶ್ ವಡ್ಡರ್ಸೆಯವರು, ಹಯವದನರು ಎಲ್ಲ ಕಾರ್ಯಕ್ರಮಕ್ಕೆ ಸೇರಿಕೊಂಡರು.

ಈಗ ಮ್ಯೂಸಿಯಂ ಆಗಿರುವ ಹಾಜಿ ಅಬ್ದುಲ್ಲಾ ಅವರ ಮನೆಯಲ್ಲಿ ಅವರ ಮೂರ್ತಿಗೆ ಹಾರಾರ್ಪಣೆ ಮಾಡುವ ಮೂಲಕ ಹಾಜಿ ಅಬ್ದುಲ್ಲಾ ಅವರ ಸಂಬಂಧಿ ಸಿರಾಜ್ ಅಹಮದ್ ಜಾಥಾ ವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಹೆಚ್ಚು ನಿರರ್ಗಳತೆ ಇಲ್ಲದ ಮನ್ನಾ ಸಾಹೇಬ್ ಅವರು ಕನ್ನಡ ಮತ್ತು ಇಂಗ್ಲಿಷ್ ಅನ್ನು ಮಿಶ್ರ ಮಾಡಿ ಹಾಜಿ ಅಬ್ದುಲ್ಲಾ ಅವರ ಬಗ್ಗೆ ಮಾತನಾಡಿದರು. ಯೂನಿಯನ್ ಬ್ಯಾಂಕಿನ ಡಿಜಿಎಂ ವಾಸಪ್ಪ ಅವರು ಹಾಜಿ ಅಬ್ದುಲ್ಲಾ ಅವರ ಬಗ್ಗೆ ಮಾತನಾಡಿದರು. ನಂತರ ಜಾಥಾ ಅಜ್ಜರ ಕಾಡಿಗೆ ಹೋಗಿ ಅಲ್ಲಿ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ನಂತರ ಗ್ರಂಥಾಲಯದಲ್ಲಿ ಸಭೆ. ಮುರಳೀಧರ ಉಪಾಧ್ಯರು, ಡಾ.‌ಪಿ. ವಿ. ಭಂಡಾರಿಯವರು, ಹುಸೇನ್ ಕೋಡಿಬೆಂಗ್ರೆಯವರು ಮಾತನಾಡಿದರು.‌ ನನ್ನ ಮಾತಿನ ನಂತರ ಸಂವಾದವೂ ಆಯಿತು.‌ ಜಾಥಾದ ಜೊತೆ ನಮ್ಮೊಂದಿಗೆ ಬಂದಿದ್ದ ಮೂವರು ಪೊಲೀಸರು ಬಹಳ ಆರಾಮದಾಯಕವಾಗಿ ನಮ್ಮ ಜೊತೆ ಬರುತ್ತಿದ್ದುದು ಒಂದು ಆಪ್ತ ದೃಶ್ಯವಾಗಿತ್ತು.‌ ಉಡುಪಿ ಘಟಕದ ಅಧ್ಯಕ್ಷೆ ಸೌಜನ್ಯಾ ಶೆಟ್ಟಿಯವರು, ಸುಳ್ಯ ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬಲಡ್ಕರು ಮಾತಾಡಿದ್ದರೆ ಚೆನ್ನಾಗಿತ್ತು ಎಂದು ಅನಿಸಿತು.

ಮುರಳೀಧರ ಉಪಾಧ್ಯ ಹಿರಿಯಡಕ ಅವರು ಗಾಂಧಿ ವಿಚಾರ ವೇದಿಕೆಗೆ ಎಲ್ಲ ಬೆಂಬಲವನ್ನೂ ಮುಕ್ತವಾಗಿಯೇ ಘೋಷಿಸಿ ಉಡುಪಿ ಘಟಕದ ಮೂಲಕ ಸದಸ್ಯನಾಗುತ್ತೇನೆ ಎಂದು ತಿಳಿಸಿದರು. ಅಲ್ಲದೆ ಓದಲು ಆಸಕ್ತಿ ಇದ್ದು ಕೊಂಡುಕೊಳ್ಳುವ ಸಾಮರ್ಥ್ಯ ಇಲ್ಲದ ಐದು ಜನರನ್ನು ಹುಡುಕಿ ಡಿ.‌ಎಸ್.‌ನಾಗಭೂಷಣ ಅವರ ‘ ಗಾಂಧಿ ಕಥನ’ ಪುಸ್ತಕ ಕೊಡಲು ನನ್ನ ಬಳಿ ಎರಡು ಸಾವಿರ ರೂಪಾಯಿ ಕೊಟ್ಟಿದ್ದಾರೆ.

ಎ. ಕೆ.‌ಕುಕ್ಕಿಲ ಅವರು ಕಾರ್ಯಕ್ರಮದ ವರದಿಗಾಗಿ ಮಂಗಳೂರಿನಿಂದ ಅವರ ಸಿಬ್ಬಂದಿಯನ್ನು ಕಳಿಸಿದ್ದರು.

ಒಂದು ಅಪೂರ್ವ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಉಡುಪಿಯಲ್ಲಿ ‘ ಗಾಂಧಿ ಜಯಂತಿ’ ಯ ಪ್ರಯುಕ್ತ ‘ಗಾಂಧಿ ನಡಿಗೆ’ – Report

Leave a Reply

Your email address will not be published. Required fields are marked *