ಎಸ್.ಡಿ.ಎಂ. ಕಾಲೇಜಿನಲ್ಲಿ ಮಾಡಿದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸ- ಸಂವಾದದ ಮುಖ್ಯಾಂಶಗಳು

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ – ಅರವಿಂದ ಚೊಕ್ಕಾಡಿ

  • ಗಾಂಧಿ ಗತಿಸಿದ ನಂತರ ಗಾಂಧಿಯನ್ನು ಪೂಜಿಸುವ ಮತ್ತು ನಂತರ ನಿಂದಿಸುವ ತಲೆಮಾರು ಬಂತು. ಆದರೆ ಗಾಂಧಿ ತತ್ವಗಳನ್ನು ಯುವಕ ಯುವತಿಯರಿಗೆ ವೈಚಾರಿಕವಾಗಿ ಕನೆಕ್ಟ್ ಮಾಡುವ ಕೆಲಸ ನಡೆದಿಲ್ಲ.
  • ಗಾಂಧಿಯವರ ಮೂಲಶಿಕ್ಷಣದಲ್ಲಿ ಓದು, ಬರೆಹ, ಲೆಕ್ಕ ಮಾತ್ರ ಪ್ರಧಾನ. ನಂತರ ವೃತ್ತಿ ಶಿಕ್ಷಣ. ನಿಜವಾಗಿ ಆಗಬೇಕಾದ್ದು ಇದೇ ಅಲ್ಲವೆ. ಓದಲು ಗೊತ್ತಿದ್ದರೆ ಸಾಕು, ಅವರವರ ಆಸಕ್ತಿಗನುಗುಣವಾಗಿ ಯಾವಾಗ ಏನು ಬೇಕಾದರೂ ಓದಿ ತಿಳಿದುಕೊಳ್ಳಬಹುದು. ನಾನು ಮತ್ತು ನಿಮ್ಮ ಉಪನ್ಯಾಸಕರು ನಿಮ್ಮನ್ನು ‘ರೆಡಿ ಫಾರ್ ಯೂಸ್’ ಆಗಿ ಮಾಡಲು ಯಾರ್ಯಾರಿಗೋ ಬೇಕಾದ್ದನ್ನೆಲ್ಲ ಪಾಠದಲ್ಲಿ ತುಂಬಿದ್ದರಿಂದ ಅದನ್ನೆ ಕಲಿಸುತ್ತಿದ್ದೇವೆ. ನಿಮ್ಮನ್ನು ಲಭ್ಯ ಉದ್ಯೋಗವನ್ನು ಪಡೆದು ಇನ್ನೊಬ್ಬನ ಅಧೀನದಲ್ಲಿ ಕೆಲಸದವರನ್ನಾಗಿ ಮಾಡಲು ಕಲಿಸುತ್ತಿದ್ದೇವೆ ಹೊರತು ನೀವೇ ಉದ್ಯೋಗ ಸೃಷ್ಟಿ ಮಾಡಿ ನೀವೇ ಯಜಮಾನರಾಗುವುದನ್ನು ಕಲಿಸುತ್ತಿಲ್ಲ. ಆದರೆ ನಿಮ್ಮದೇ ಅಂಗ ಸಂಸ್ಥೆಯಾಗಿ ಇಲ್ಲಿ ‘ ರುಡ್ ಸೆಟ್’ ಅಂತ ಇದೆ. ರುಡ್ ಸೆಟ್ ನಿಂದ ಎಷ್ಟೊಂದು ಉದ್ಯೋಗಗಳು ಸಿಕ್ಕಿಲ್ಲ. ಅದು ನಿಮ್ಮನ್ನು ಯಜಮಾನರನ್ನಾಗಿಸುವ ಸಂಸ್ಥೆ.‌ ಇದು ಗಾಂಧಿ ತತ್ವದ ಮೇಲೆ ಇದೆ.‌ ಇವತ್ತು ಕರಾವಳಿಯ ಹುಡುಗರೇ ಗಾಂಧಿಯ ನಿಂದಕರಲ್ಲಿ ಮೊದಲಿಗರು. ಆದರೆ ಕರಾವಳಿಯವನು ದುಡ್ಡು ಕೊಟ್ಟು ಉದ್ಯೋಗ ಪಡೆಯಲು ಹೋಗುವುದಿಲ್ಲ. ಬದಲು ಒಂದು ಹೊಟೇಲ್ ಮಾಡುತ್ತಾನೆ.‌ ಬೀಡದಂಗಡಿ ಹಾಕುತ್ತಾನೆ. ಮರ ಹತ್ತುವ ಯಂತ್ರ ಕಂಡು ಹಿಡಿಯುತ್ತಾನೆ. ಇದು ಕಾರ್ನಾಡ್ ಸದಾಶಿವ ರಾಯರಂಥ ಗಾಂಧಿ ವಾದಿಗಳು ರೂಪಿಸಿಕೊಟ್ಟ ಪ್ರಜ್ಞೆಯಿಂದ ಸಾಧ್ಯ ಆಗಿದೆ ಎನ್ನುವುದು ಮಾತ್ರ ನಮ್ಮ‌ ಅರಿವಿನಲ್ಲಿ ಇಲ್ಲ ಅಷ್ಟೆ. ಕಾರ್ನಾಡ್ ಸದಾಶಿವ ರಾಯರು ಸತ್ಯಾಗ್ರಹಕ್ಕೆ ಸಹಿ ಮಾಡಿದ ಮೊದಲ ದಕ್ಷಿಣ ಭಾರತೀಯರು. ಇಂಥವರು ಇಲ್ಲದಿದ್ದರೆ ಕರಾವಳಿಯಲ್ಲಿ ಕೂಲಿಯಾಳುಗಳನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುವಂಥ ಪರಿಸ್ಥಿತಿ ಇತ್ತು. ತನ್ನ ಉದ್ಯೋಗವನ್ನು ತಾನೇ ಕಂಡುಕೊಳ್ಳುವ ಶಕ್ತಿಯನ್ನು ಪಡೆದ ಮೇಲೆ ಈ ಟ್ರೆಂಡ್ ಹೊರಟುಹೋಯಿತು. ಅದಕ್ಕೆ ಕಾರಣ ಒಂದು ಕಾಲಮಾನದ ಗಾಂಧಿವಾದಿಗಳು ಹಾಕಿಕೊಟ್ಟ ಮಾರ್ಗದರ್ಶನ. ಗಾಂಧಿ ಸಹಕಾರಿ ಸಂಘ ಆಧಾರಿತ ಅಭಿವೃದ್ದಿಯನ್ನು ಪ್ರತಿಪಾದಿಸಿದರು. ನೆನಪಿಡಿ, ಭಾರತದ ಪ್ರಥಮ ಸಹಕಾರಿ ಪ್ರಿಂಟಿಂಗ್ ಪ್ರೆಸ್ ಮೊಳಹಳ್ಳಿ ಶಿವರಾಯರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಾರಂಭವಾಯಿತು. ಕರಾವಳಿಯಲ್ಲಿರುವಷ್ಟು ಹಣಕಾಸು ಸಂಸ್ಥೆಗಳು ಕರ್ನಾಟಕದ ಯಾವ ಭಾಗದಲ್ಲೂ ಇಲ್ಲ. ತತ್ಪರಿಣಾಮ ಇಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳಿಲ್ಲ. ಶಿಕ್ಷಣ ಮತ್ತು ಆರ್ಥಿಕತೆಯ ನಡುವೆ ಸಂಬಂಧ ಕಲ್ಪಿಸುವ ಗಾಂಧಿ ತತ್ವಗಳು ಕರಾವಳಿಯವರನ್ನು ಹೆಚ್ಚು ಸ್ವಾವಲಂಬಿಗಳಾಗಿ ಮಾಡಿದೆ.
  • ಅಹಿಂಸೆ ನಿಷ್ಪ್ರಯೋಜಕ ಎಂದು ಬಹಳ ಆರ್ಭಟಗಳಿವೆ. ಅಫ್ಕೋರ್ಸ್ ಪರಿಪೂರ್ಣ ಅಹಿಂಸೆ ಅಸಾಧ್ಯ. ಆದರೆ ಎಲ್ಲಿ? ಅಪರಾಧ ನಿಯಂತ್ರಣದಲ್ಲಿ ಮಾತ್ರ. ಉಳಿದಂತೆ ಎಲ್ಲರಿಗೂ ಅಹಿಂಸೆಯೇ ಬೇಕು. ನೀವೀಗ ಪಾಠವನ್ನು ಚೆನ್ನಾಗಿ ಓದದೆ ಇದ್ದಾಗ ನಿಮ್ಮ ಉಪನ್ಯಾಸಕರು ತಿಳಿ ಹೇಳುವ ಬದಲು ‘ ಅಹಿಂಸೆ ನಿಷ್ಪ್ರಯೋಜಕ’ ನಿಮ್ಮ‌ ಕೈಕಾಲು ಮುರಿದು ಹಾಕಿದರೆ ಹೇಗಾದೀತು? ಅಂದರೆ ಅಹಿಂಸೆ ನಮ್ಮೆಲ್ಲರ ಅಗತ್ಯವೂ ಹೌದು.‌ ‘ಶಾಂತಿಯ ತತ್ವ’ ನಿಷ್ಪ್ರಯೋಜಕ ಎಂದು ನೀವು ಕಾಲೇಜು ಬಿಟ್ಟು ಮನೆಗೆ ಹೋಗುವಾಗ ನಿಮ್ಮ‌ ತಂದೆ, ತಾಯಿ, ಅಜ್ಜ, ಅಜ್ಜಿಯೆಲ್ಲ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡಿಕೊಂಡು ಪರಸ್ಪರ ಹೊಡೆದಾಡುತ್ತಾ ಚೀರಾಡುತ್ತಾ ಇದ್ದರೆ ನಿಮಗೆ ನೆಮ್ಮದಿಯಲ್ಲಿ ಓದಲು ಆಗುತ್ತದಾ? ಇಲ್ಲ. ಅಂದರೆ ಶಾಂತಿಯ ಅಗತ್ಯವೂ ಇದ್ದೇ ಇದೆ. ಗಾಂಧಿ ಹೇಳಿದ್ದೂ ಇದನ್ನೆ. ಗಾಂಧಿ ಮನುಷ್ಯನ ಮೂಲಭೂತ ಅಗತ್ಯಗಳ ಆಧಾರದಲ್ಲಿ ತಮ್ಮ ವಿಚಾರಗಳನ್ನು ಹೇಳಿದರು.
  • ಗಾಂಧಿಯವರ ಪ್ರತಿಯೊಂದು ಚಿಂತನೆಯೂ ಧರ್ಮದ ತಳಹದಿಯಲ್ಲಿದ್ದವು. ತಂದೆ ತಾಯಿ ಎಷ್ಟೇ ಹೊಡೆದರೂ ತಿರುಗೇಟು ಹೊಡೆಯದೆ ತನಗಾಗಬೇಕಾದ್ದನ್ನು ಸಾಧಿಸುವ ವರೆಗೆ ಪಟ್ಟು ಬಿಡದೆ ರಚ್ಚೆ ಹಿಡಿಯುವ ಮಕ್ಕಳು ಇಲ್ಲವೆ, ಅದನ್ನೆ ದೊಡ್ಡ ವ್ಯಾಪ್ತಿಯಲ್ಲಿ ಮಾಡಿದರೆ ಸತ್ಯಾಗ್ರಹವಾಗುತ್ತದೆ.‌ ಅದಕ್ಕೆ ಆಧಾರ ಉಪವಾಸ. ಹಿಂದೂ, ಇಸ್ಲಾಂ ಮತ್ತು ಜೈನ ಧರ್ಮಗಳಲ್ಲಿ ಉಪವಾಸಕ್ಕೆ ಧಾರ್ಮಿಕ ಮಹತ್ವವಿದೆ. ಧಾರ್ಮಿಕವಾಗಿ ಉಪವಾಸದ ಉದ್ದೇಶ ಆತ್ಮಶುದ್ಧಿ.‌ ಅದೇ ಉಪವಾಸ ಸತ್ಯಾಗ್ರಹವಾದಾಗ ಆತ್ಮಶುದ್ಧಿಯ ಜೊತೆಗೆ ಹೋರಾಟದ ಅಸ್ತ್ರವೂ ಆಗುತ್ತದೆ. ಇವತ್ತು ಉಪವಾಸ ಸತ್ಯಾಗ್ರಹದ ಬಗ್ಗೆ ಗಾಂಧಿ ನಿಂದಕರ ಬಹಳ ಆಕ್ಷೇಪಗಳಿವೆ. ಸರಿಯಪ್ಪಾ ಉಪವಾಸ ಸತ್ಯಾಗ್ರಹದಿಂದ ಉಪಯೋಗವಿಲ್ಲ ಎಂದು ಹೇಳುವ ಎಲ್ಲರೂ ಹೋರಾಟಕ್ಕಿಳಿದಾಗ ಉಪವಾಸ ಸತ್ಯಾಗ್ರಹವನ್ನೆ ಮಾಡುತ್ತೀರಿ ಹೊರತು ಯಾರೂ ಬಂದೂಕು ತೆಗೆದುಕೊಂಡು ಹೋಗುವುದಿಲ್ಲ, ಹೋಗಲೂ ಬಾರದು.‌ ಯಾಕೆ? ಅಂದರೆ ಉಪವಾಸ ಸತ್ಯಾಗ್ರಹ ಉಪಯೋಗ ಇಲ್ಲ ಎನ್ನುವವರೂ ನಂಬಿರುವುದು ಉಪವಾಸ ಸತ್ಯಾಗ್ರಹಗಳನ್ನೆ. ಹಿಂಸಾತ್ಮಕ ಹೋರಾಟ ಎದುರಾಳಿಯನ್ನು ನಾಶ ಮಾಡುತ್ತದಾದರೆ ಸತ್ಯಾಗ್ರಹ ಎದುರಾಳಿಯ ದುಷ್ಪ್ರವೃತ್ತಿಯನ್ನು ಮಾತ್ರ ನಾಶ ಮಾಡುತ್ತದೆ.‌ ಹಸಿದವನ ಮುಂದೆ ನಾವು ಊಟ ಮಾಡ್ಲಿಕಾಗ್ತದಾ? ಆಗುವುದಿಲ್ಲ. ಆತ್ಮಸಾಕ್ಷಿ ಚುಚ್ಚುತ್ತದೆ.‌ ಯಾವಾಗ ಆತ್ಮಸಾಕ್ಷಿ ಚುಚ್ಚಲ್ಪಡುತ್ತದೊ ಆಗ ಸತ್ಯಾಗ್ರಹ ಯಶಸ್ಸನ್ನು ಪಡೆಯುತ್ತದೆ.‌ ಸತ್ಯಾಗ್ರಹಿಗೆ ಬೇಕಾದ್ದು ಅದಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುವ ಮನಸ್ಥಿತಿ.‌ ಯುವ ಜನತೆ ಹಿಂಸೆಗೆ ಮಣಿಯಬಾರದು. ಒಂದು ವೇಳೆ ಗಾಂಧಿ ಹಿಂಸೆಗೆ ಮಣಿದರೆ ಏನಾಗುತ್ತಿತ್ತು? ಬ್ರಿಟಿಷ್ ಸೈನ್ಯದಲ್ಲಿ ಸೈನಿಕರಾಗಿ ಇದ್ದವರು ಯಾರು ಯೋಚಿಸಿ. ಭಾರತೀಯರೇ. ಬ್ರಿಟಿಷರ ಪೊಲೀಸರು ಯಾರು? ಅವರೂ ಭಾರತೀಯರೇ. ಆಗ ಸ್ವಾತಂತ್ರ್ಯ ಹೋರಾಟಗಾರರು ಹಿಂಸೆಗಿಳಿದಿದ್ದರೆ ಆಕ್ರಮಣ ಮಾಡಬೇಕಾಗಿದ್ದದ್ದು ಯಾರ ಮೇಲೆ? ಭಾರತೀಯರ ಮೇಲೆಯೇ. ಭಾರತೀಯರು ಭಾರತೀಯರನ್ನೆ ಕೊಂದುಕೊಳ್ಳುವುದನ್ನು ಗಾಂಧಿ ತಪ್ಪಿಸಿದರು. ಗಾಂಧಿ ಬರುವುದಕ್ಕೆ ಮೊದಲು ಸಾಕಷ್ಟು ಬಂಡಾಯಗಳು ನಡೆದಿವೆ. ಈ ಬಂಡಾಯಗಳಲ್ಲೆಲ್ಲ ಬ್ರಿಟಿಷ್ ವಿರೋಧಿ ಬಂಡಾಯಗಾರರು ಬಹುತೇಕ ಅಟ್ಯಾಕ್ ಮಾಡಿದ್ದು ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯರ ಮೇಲೆಯೆ.‌ ಅದನ್ನು ನಾವು ಬ್ರಿಟಿಷ್ ಸೇನೆ ಎಂದು ನೋಡುವುದರಿಂದಾಗಿ ಸತ್ತದ್ದು ಭಾರತೀಯರೇ ಎಂಬುದನ್ನು ಗಮನಿಸಲು ಹೋಗುವುದಿಲ್ಲ ಅಷ್ಟೆ.
  • ಹೋರಾಟವನ್ನು ಗೆಲ್ಲುವುದು ಹೇಗೆ ಎಂದರೆ ಎದುರಾಳಿಯನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದು. ತೆರಿಗೆ ನಿರಾಕರಣಾ ಚಳವಳಿ.‌ ಸರಕಾರದ ಆದಾಯ ಕಮ್ಮಿಯಾಯಿತಾ. ಇನ್ನು ಆ ಕಾಲಕ್ಕೆ ಜವುಳಿ ಉದ್ಯಮ ಬ್ರಿಟಿಷರ ಅತಿದೊಡ್ಡ ಆದಾಯದ ಮೂಲವಾಗಿತ್ತು. ಚರಕ ಚಳವಳಿ. ನಮ್ಮ ಬಟ್ಟೆಯನ್ನು ನಾವೇ ಮಾಡಿಕೊಳ್ಳುವುದು. ಬ್ರಿಟಿಷರ ಬಟ್ಟೆಯನ್ನು ಕೊಂಡುಕೊಳ್ಳುವವರಿಲ್ಲ. ಅದರಿಂದಾಗಿ ಸರಕಾರದ ಆದಾಯದ ಕೊರತೆಯಾಗಿ ಗಾಂಧಿ ದುಂಡುಮೇಜಿನ ಪರಿಷತ್ತಿಗೆ ಇಂಗ್ಲೆಂಡಿಗೆ ಹೋದಾಗ ಮ್ಯಾಂಚೆಸ್ಟರ್‌ನ ಬಟ್ಟೆ ಗಿರಣಿ ಕಾರ್ಮಿಕರು,” ನಮ್ಮ ಉದ್ಯೋಗವನ್ನು ತೆಗೆದವನು ಇವನು” ಎಂದು ಪ್ರತಿಭಟನೆ ಮಾಡಿದ್ದರು. ವೈಸರಾಯ್ ವವೆಲ್,” ಭಾರತವನ್ನು ಇನ್ನು ನಮ್ಮ ನಿಯಂತ್ರಣದಲ್ಲಿಡಬೇಕಾದರೆ ಆಡಳಿತ ಮಾಡಲು ಇಂಗ್ಲೆಂಡಿನಿಂದ ಹಣ ತರಬೇಕಷ್ಟೆ” ಎಂದು ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆಯುತ್ತಾರೆ. ಹೋರಾಟ ಎಂದರೆ ಬುದ್ಧಿ ಶಕ್ತಿಯಿಂದ ಎದುರಿಸುವುದು.‌ ಅಬ್ಬರಿಸಿ ಬೊಬ್ಬಿರಿಯುವುದೂ ಅಲ್ಲ, ಪ್ರಾಣ ಕೊಡುತ್ತೇನೆ ಎಂದು ಸಾಯುವುದೂ ಅಲ್ಲ. ನಾವು ಬದುಕಲಿಕ್ಕೆ ಹುಟ್ಟಿದವರು.‌ ಸಾಯಲಿಕ್ಕಲ್ಲ. ಈ ಆತ್ಮಹತ್ಯೆ ಮಾಡಿಕೊಳ್ಳುವವರ ಬಳಿ ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಥಿಯರಿ ಇರುತ್ತದೆ. ಇವನೇ ಇಲ್ಲದ ಮೇಲೆ ಸಮಸ್ಯೆ ಪರಿಹಾರ ಆಗುವುದು ಹೇಗೆ? ಹುತಾತ್ಮರಾಗುವುದು ದೊಡ್ಡ ವಿಷಯವೇ. ಹುತಾತ್ಮರೆಲ್ಲರೂ ಆದರಣೀಯರೇ.‌ ಆದರೆ ಹುತಾತ್ಮರಾಗಬೇಕಾದ ಅಗತ್ಯ ಉಂಟೊ? ಹುತಾತ್ಮರನ್ನು ವೈಭವೀಕರಿಸುವ ಯಾರೂ ಕೂಡ ತನ್ನ ಮಕ್ಕಳೇ ಹುತಾತ್ಮರಾಗಬೇಕೆಂದು ಬಯಸುವುದಿಲ್ಲ;ಆಚೆಯವನ ಮಕ್ಕಳು ಹುತಾತ್ಮರಾಗಬೇಕಾದ್ದು. ಹೋರಾಟದಿಂದ ಸಿಗುವ ಫಲ ಮರಣವೇ ಎಂದಾದರೆ ಅದಕ್ಕೆ ಜನ ಬರುವುದಿಲ್ಲ. ಗಾಂಧಿಯ ಜೊತೆ ಹೋದರೆ ಹೆಚ್ಚೆಂದರೆ ಆರು ತಿಂಗಳು ಜೈಲಾಗಬಹುದು.‌ ಮರಣದಂಡನೆಯಂತೂ ಆಗುವುದಿಲ್ಲ ಎಂದು ಗ್ಯಾರಂಟಿ ಸಿಕ್ಕಿದ್ದರಿಂದ ಜಾಸ್ತಿ ಜನ ಗಾಂಧಿಯೊಂದಿಗೆ ಹೋದರು.‌ ಹೋರಾಟಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕಾದರೆ ಹೋರಾಟದಿಂದ ಪ್ರಾಣವನ್ನೆ ಕಳೆದುಕೊಳ್ಳುವುದನ್ನು ತಪ್ಪಿಸಬೇಕು ಎಂಬುದನ್ನು ಗಾಂಧಿ ಮಾಡಿ ತೋರಿಸಿದರು.
  • ಒಂದು ಸಂಗತಿಯನ್ನು ನಾವು ಹೇಗೆ ಯೋಚಿಸಬೇಕು ಎಂದು ಗಾಂಧಿ ಕಲಿಸುತ್ತಾರೆ. ಒಮ್ಮೆ ಗಾಂಧಿಯ ಬಳಿ ಯಾರೊ ಹೂಗಳಲ್ಲಿ ಚಂದದ ಹೂವು ಯಾವುದು ಎಂದು ಕೇಳಿದರಂತೆ. ಗಾಂಧಿ ಹತ್ತಿಯ ಹೂವು ಎಂದು ಉತ್ತರಿಸಿದರು. ಹತ್ತಿಯಿಂದ ಮಾತ್ರ ಬಟ್ಟೆ ಮಾಡಲು ಆಗುವುದು. ಮಲ್ಲಿಗೆ ಸಂಪಿಗೆಯಿಂದೆಲ್ಲ ಬಟ್ಟೆ ಮಾಡ್ಲಿಕಾಗುವುದಿಲ್ಲ. ಯುವಕ ಯುವತಿಯರು ಸಕ್ಸಸ್ ಆಗಬೇಕಾದರೆ ಇರುವ ಸಂಗತಿಗಳನ್ನೆ ಹೊಸ ರೀತಿಯಲ್ಲಿ ಯೋಚಿಸುವುದನ್ನು ಕಲಿಯಬೇಕು.
  • ಒಬ್ಬ ಹೆಣ್ಣು ಮಧ್ಯ ರಾತ್ರಿಯಲ್ಲಿ ಓಡಾಡಬಲ್ಲ ಭಾರತದ ನಿರ್ಮಾಣ ಗಾಂಧಿಯ ಕಲ್ಪನೆ. ಆದರೆ ಇದು ಪೊಲೀಸರಿಂದ ನಿಯಂತ್ರಿತವಾದ ಭಾರತದಲ್ಲಿ ಆಗುವುದಿಲ್ಲ.‌ ಯುವಕ ಯುವತಿಯರು ಸ್ವಯಂ ಶಿಸ್ತಿನಿಂದ ವರ್ತಿಸುವ ಗಾಂಧಿಯ ಸ್ವರಾಜ್ಯದಲ್ಲಿ ಮಾತ್ರ ಆಗುತ್ತದೆ. ಕೆಲವು ವರ್ಷಗಳ ಹಿಂದೆ ಕರಾವಳಿಯ ಒಂದು ಕಾಲೇಜಿನಲ್ಲಿ ಹುಡುಗಿ ತಾನು ಬಯಸಿದ್ದಕ್ಕೆ ಒಪ್ಪಲಿಲ್ಲ ಎಂದು ಹುಡುಗ ಕೊಲೆ ಮಾಡಿದ ಪ್ರಕರಣ ನಡೆಯಿತು.‌ ಕೊಂದದ್ದು ಯಾರನ್ನು? ತಾನು ರಕ್ಷಿಸಬೇಕಾದ ತನ್ನ ಸಹಪಾಠಿಯನ್ನೆ! ಇಷ್ಟ ಆಗುವುದು ಬೇರೆ. ಯುವಕ ಯುವತಿಯರಲ್ಲಿ ಸ್ವಯಂ ಶಿಸ್ತು ಇಲ್ಲದಾಗ ಇಂತಾದ್ದು ನಡೆಯುತ್ತದೆ. ಅಪರಾಧದಲ್ಲಿ ಪ್ರಮುಖ ಪಾತ್ರ ಕರಾವಳಿಯಲ್ಲಿ ತುಂಬಿ ತುಳುಕಾಡುತ್ತಿರುವ ಮಾದಕ ದ್ರವ್ಯ ವ್ಯಸನ.‌ ಮಾದಕ ದ್ರವ್ಯ ನಿಷೇಧ ಮತ್ತು ಸ್ವಯಂ ಶಿಸ್ತು ಗಾಂಧಿ ತತ್ವಗಳಾಗಿದ್ದವು.‌ ನೈತಿಕತೆಯ ಎಚ್ಚರ ಮತ್ತು ಸಚ್ಚಾರಿತ್ರ್ಯದ ಪ್ರಜ್ಞೆ ಇಲ್ಲದೆ ವ್ಯಕ್ತಿತ್ವ ನಿರ್ಮಾಣ ಆಗುವುದಿಲ್ಲ. ಇದನ್ನೆ ವಿವೇಕಾನಂದರೂ ಹೇಳಿದ್ದು.‌ ಏಕೆಂದರೆ ಇದರಿಂದ ವಿದ್ಯಾರ್ಥಿಗಳ ಅಭ್ಯುದಯವಾಗುತ್ತದೆ.

[ಇಷ್ಟು ಸಾಕು.‌ ಇನ್ನು ಸಂವಾದ. ಕೇಳಿ ಪ್ರಶ್ನೆ ಕೇಳಿ]

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗಾಂಧಿ ತತ್ವಗಳ ಪಾತ್ರ

Leave a Reply

Your email address will not be published. Required fields are marked *