ಎಪ್ರಿಲ್ 2 – 2023 : ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ

ಮೂಡುಬಿದಿರೆ, ಎ.೨: ಮಾಡುವ ಕಾರ್ಯ ಆಡುವ ನುಡಿಯಲ್ಲಿ ತಾದ್ಯಾತ್ಮ ಭಾವ ಹೊಂದಿರುವ ಅಪರೂಪದ ಬೌದ್ಧಿಕ ಕ್ರಾಂತಿಕಾರಿ, ಪ್ರಬುದ್ಧ ಚಿಂತಕ ಅರವಿಂದ ಚೊಕ್ಕಾಡಿ ಅವರ ಜೀವನ ಕ್ರಮ ಹಾಡುತ್ತ ನೇಜಿ ನೆಡುವಂತೆ, ಮೊಸರು ಕಡೆಯುವಂತೆ ಇದೆ. ಈ ಬಗೆಯ ಚಿಂತನೆಗಳಿಂದ ಸಶಕ್ತ ಕೃತಿಗಳು ಹೊರಬರಲು ಸಾಧ್ಯ ಎಂದು ಸಾಹಿತಿ, ಸಂಘಟಕ ಡಾ. ನಾ. ಮೊಗಸಾಲೆ ಅಭಿಪ್ರಾಯಪಟ್ಟರು.
ಸಮಾಜ ಮಂದಿರ ಸಭಾ (ರಿ.) ವತಿಯಿಂದ ಸಮಾಜ ಮಂದಿರದಲ್ಲಿ ಶನಿವಾರ ಸಂಜೆ ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ಅವರು ಬರೆದ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಕೃತಿಯ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ಇತಿಹಾಸ ಸಂಶೋಧಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಕೃತಿ ಪರಿಚಯ ನಡೆಸಿಕೊಟ್ಟರು. ಆಗರ್ಭಶ್ರೀಮಂತರಾಗಿ ಜನಿಸಿ, ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ತೊಡಗಿಸಿಕೊಂಡು, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕಾರ್ನಾಡ್ ಸದಾಶಿವ ರಾವ್ ಜಾತಿ ತಾರತಮ್ಯ, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ಸಮಸ್ಯೆ, ಅನಕ್ಷರತೆಯೇ ಮೊದಲಾದ ವಿಷಯಗಳ ಬಗ್ಗೆ ಚಿಂತಿಸಿ, ನಿವಾರಣೆಗಾಗಿ ಪರಿಶ್ರಮಿಸಿದವರು. ಕೊನೆಗೆ ಮುಂಬೈಯ ಬೀದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಾರುಣ ಚಿತ್ರಣ ಈ ಕೃತಿಯಲ್ಲಿದೆ, ಸಮಾಜ ಹಿತಕ್ಕಾಗಿ ವೈಯಕ್ತಿಕ ಸುಖವನ್ನು ಬದಿಗಿಟ್ಟವರು ಸದಾಶಿವ ರಾವ್ ಎಂದು ಅವರು ವಿವರಿಸಿದರು.ಇಲ್ಲಿನ ವಿಷಯ ಮಂಡನೆಯಲ್ಲಿ ಭಾವತೀವ್ರತೆ ಮೀರಿದ, ಮುಕ್ತ, ನಿರ್ಲಿಪ್ತ ಭಾವ ಕಂಡುಬಂದಿದೆ ಎಂದವರು ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ ಜೆ. ಅವರು ತಮ್ಮ ಆಶಯದ ನುಡಿಯಲ್ಲಿ ಸ್ವಾತಂತ್ರ‍್ಯ ಹೋರಾಟಗಾರರು
ತಮ್ಮ ಪತ್ರ ವ್ಯವಹಾರಕ್ಕಾಗಿ ಮಾತೃಭಾಷೆಯಲ್ಲದ ಹಿಂದಿಯನ್ನು ಬಳಸುತ್ತಿದ್ದುದನ್ನು ಉಲ್ಲೇಖಿಸಿದರು.

ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ “ನಮಗಿಂದು ಬೇಕಾಗಿರುವುದು ಯಾವುದೋ ರಾಜಕೀಯ ಸಿದ್ಧಾಂತದ ಬೆಳಕಲ್ಲ, ಸಮಾಜಕ್ಕೆ ಆದರ್ಶದ ಪಥ ತೋರಬಲ್ಲವರ ಜೀವನ ಕ್ರಮದ ತಿಳಿವಳಿಕೆ ಎಂದು `ಕಾರ್ನಾಡ್’ ಕೃತಿ ರಚನೆಯ ಹಿನ್ನೆಲೆ ತಿಳಿಸಿ, ಇಂಥ ಹಲವು ವ್ಯಕ್ತಿತ್ವಗಳನ್ನು ಕೃತಿರೂಪದಲ್ಲಿ ಹೊರತರುವ ತಮ್ಮ ಇಂಗಿತ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅವರು ಲೇಖಕ ಅರವಿಂದ ಚೊಕ್ಕಾಡಿಯವರನ್ನು ಗೌರವಿಸಿದರು.

ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿದರು
ಸಮಾಜ ಮಂದಿರ ಸಭಾದ ಜತೆಕಾರ್ಯದರ್ಶಿ ಎಂ. ಗಣೇಶ್ ಕಾಮತ್ ನಿರೂಪಿಸಿ ವಂದಿಸಿದರು.
ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಚುನಾವಣ ಆಚಾರ ಸಂಹಿತೆಯನ್ವಯ ಸಭೆಯಲ್ಲಿ ಉಪಸ್ಥಿತರಿದ್ದರು.

ಉಳಿದಂತೆ ಗಣ್ಯರಾದ ಕವಿ ಸುಬ್ರಾಯ ಚೊಕ್ಕಾಡಿ, ವಿಮರ್ಶಕ ಬಿ. ಜನಾರ್ದನ ಭಟ್, ಡಾ.ಕೆ. ಚಿನ್ನಪ್ಪ ಗೌಡ, ಕೃತಿಗೆ ಮುನ್ನುಡಿ ಬರೆದ ಡಾ. ಯೋಗೀಶ ಕೈರೋಡಿ, ಮನೋವೈದ್ಯ ಡಾ. ಪಿ.ವಿ. ಭಂಡಾರಿ ಉಡುಪಿ, ಅಣ್ಣಾ ವಿನಯಚಂದ್ರ, ಕ್ಯಾ. ಗಣೇಶ ಕಾರ್ಣಿಕ್, ವಸಂತ ಬಂಗೇರ, ಶ್ರೀಧರ ಭಿಡೆ,
ಪ್ರೊ. ಪದ್ಮನಾಭ ಗೌಡ ಬಿಳಿಮಲೆ, ದ.ಕ., ಉಡುಪಿ ಜಿಲ್ಲೆಗಳ ಕ.ಸಾ.ಪ. ಅಧ್ಯಕ್ಷರುಗಳಾದ ಡಾ. ಶ್ರೀನಾಥ ಎಂ.ಪಿ., ನೀಲಾವರ ಸುರೇಂದ್ರ ಅಡಿಗ, , ಜಿಲ್ಲೆಯ ವಿವಿಧ ಮೊರಾರ್ಜಿ ದೇಸಾಯಿ ಶಾಲೆಗಳ ಪ್ರಾಂಶುಪಾಲರು, ಗಾಂಧೀ ವಿಚಾರ ವೇದಿಕೆಯ ಪ್ರಮುಖರು, ಕಾರ್ಟೂನಿಸ್ಟ್ ದಿನೇಶ್ ಕುಕ್ಕುಜಡ್ಕ, ಮಂ.ವಿ.ವಿ.ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎನ್.ಎಂ. ಜೋಸೆಫ್, ಬಿ.ಎಂ. ರೋಹಿಣಿ, ಜಯಂತಿ ಎಸ್. ಬಂಗೇರ, ಆತ್ರಾಡಿ ಅಮೃತಾ ಶೆಟ್ಟಿ, ನಾರಾಯಣ ಶರ್ಮ ಅರಸೀಕೆರೆ, ನರೇಂದ್ರ ರೈ ದೇರ್ಲ, ಸೋಮನಾಥ ನಾಯಕ್, ಪೂವಪ್ಪ ಕಣಿಯೂರು, ಸಂಜೀವ ಕುದ್ಪಾಜೆ, ಪ್ರಮೋದ್ ಕುಮಾರ್ ರೈ,
ವಿವಿಧೆಡೆಗಳ, ವಿವಿಧ ರಂಗಗಳ ಗಣ್ಯರನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಮಾಜ ಮಂದಿರ ತುಂಬಿದ್ದು ಇದೇ ಮೊದಲ ಬಾರಿ ಎಂಬತಿತ್ತು.

ಮಹತ್ವ

ಎಪ್ರಿಲ್ 2 – 2023 ರಂದು ಸಂಜೆ 4.30 ಕ್ಕೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ಕಾರ್ನಾಡ್ ಸದಾಶಿವ ರಾಯರ ಕುರಿತ ಅರವಿಂದ ಚೊಕ್ಕಾಡಿಯವರು ಬರೆದ ಪುಸ್ತಕದ ಬಿಡುಗಡೆ.

ಇದಕ್ಕೊಂದು ಮಹತ್ವ ಇದೆ.‌ ಬೆಂಗಳೂರು, ಬಿಜಾಪುರ, ಧಾರವಾಡ, ಬೆಳ್ತಂಗಡಿ, ಮೈಸೂರು, ಡೆಲ್ಲಿಯಲ್ಲೆಲ್ಲ ಅರವಿಂದ ಚೊಕ್ಕಾಡಿಯವರ ಪುಸ್ತಕ ಬಿಡುಗಡೆಯಾಗಿದೆ. ಆದರೆ ಅವರು ವಾಸವಾಗಿರುವ ಮೂಡುಬಿದಿರೆಯಲ್ಲಿ ಈವರೆಗೆ (March 2023) ಒಂದು ಪುಸ್ತಕವೂ ಬಿಡುಗಡೆಯಾಗಿಲ್ಲ.

ಬರೆವಣಿಗೆಯನ್ನು ಪ್ರಾರಂಭಿಸುವ ಕಾಲಕ್ಕೆ ಅವರ ಜೀವನದ ಅತೀ ಹೆಚ್ಚಿನ ಅವಧಿ ಅಂದರೆ ಹನ್ನೊಂದು ವರ್ಷ ಒಂದೇ ಊರಲ್ಲಿ ಬಾಳಿದ್ದೆಂದರೆ ಚೊಕ್ಕಾಡಿಯಲ್ಲಿ.‌ ಮತ್ತೆ ಸುಬ್ರಾಯ ಚೊಕ್ಕಾಡಿಯವರ ಹೆಸರೂ ಇತ್ತು.‌ ಇನಿಷಿಯಲ್ ಹಾಕಿಕೊಂಡರೂ ಅದರಲ್ಲಿ ತಂದೆಯ ಹೆಸರಿನೊಂದಿಗೆ ಜಾತಿ ಬರುತ್ತದೆ. ಆದ್ದರಿಂದ ಹೆಸರಿನ ಜೊತೆ ‘ ಚೊಕ್ಕಾಡಿ’ ಸೇರಿಕೊಂಡಿತು. ಈಗ ಚೊಕ್ಕಾಡಿಗಿಂತಲೂ ಜಾಸ್ತಿ ಕಾಲ ಅಂದರೆ 20 ವರ್ಷಗಳಿಂದ ಮೂಡುಬಿದಿರೆಯ ಖಾಯಂ ನಿವಾಸಿ. ಇದು ಮೂಡುಬಿದಿರೆಯಲ್ಲೆ ಬಿಡುಗಡೆಯಾಗುತ್ತಿರುವ ಮೊದಲ ಪುಸ್ತಕ.

ಎಲ್ಲ‌ ಪುಸ್ತಕಗಳೂ ಬಿಡುಗಡೆಯಾಗುವುದಿಲ್ಲ.‌ ಇದೂ ಆಗುತ್ತಿರಲಿಲ್ಲ. ಆದರೆ ದಸರಾ ಉತ್ಸವಕ್ಕೆ ಸಮಾಜ ಮಂದಿರಕ್ಕೆ ಹೋಗಿದ್ದಾಗ ಏನೋ ಮಾತಾಡುತ್ತಿದ್ದಾಗ ಕಾರ್ನಾಡ್ ಸದಾಶಿವ ರಾಯರ ಬಗ್ಗೆ ಪುಸ್ತಕ ಬರೆಯುತ್ತಿದ್ದೇನೆ ಎಂದಿದ್ದರು. ಆಗ ಸಮಾಜ ಮಂದಿರದ ಅಧ್ಯಕ್ಷರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರು ಅದನ್ನು ನಾವೇ ಬಿಡುಗಡೆ ಮಾಡುವ ಎಂದರು. ಅಭಯ ಚಂದ್ರರು ಈ ಪ್ರಸ್ತಾವನೆಯನ್ನು ಇಡದಿದ್ದರೆ ಈ ಬಿಡುಗಡೆ ಕಾರ್ಯಕ್ರಮ‌ ಇರುತ್ತಿರಲಿಲ್ಲ. ನಂತರ ಇದರ ಪೂರ್ತಿ ಜವಾಬ್ದಾರಿ ನಿರ್ವಹಿಸುತ್ತಿರುವುದು ಡಾ. ಪುಂಡಿಕಾಯ್ ಗಣಪಯ್ಯ ಭಟ್ ಅವರು.

https://youtu.be/stGdbQZEwyc
https://youtu.be/uVwf9ap_d_o
https://youtu.be/SbSspEHXUD8
https://youtu.be/96zEKFTb92s
https://youtu.be/DvEHkEI8_2Q

ಅರವಿಂದ ಚೊಕ್ಕಾಡಿಯವರ ಕೃತಿ `ಕಬೀರನಾದ ಕುಬೇರ ಕಾರ್ನಾಡ್ ಸದಾಶಿವ ರಾವ್’ ಲೋಕಾರ್ಪಣೆ.

Leave a Reply

Your email address will not be published. Required fields are marked *