31- 1- 2023 ರಂದು ಶಿವಮೊಗ್ಗದ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸ

ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು

  • ಅರವಿಂದ ಚೊಕ್ಕಾಡಿ

ಈ ಸಭೆಯ ಅಧ್ಯಕ್ಷರೇ ಮತ್ತು ಎಲ್ಲ ಸ್ನೇಹಿತರೇ.

ನಾನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಂದಿದ್ದೇನೆ. ಇದೊಂಥರಾ ಚೆನ್ನಾಗಿದೆ. ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ನಾನು ಕಮಲಾ ನೆಹರೂ ಮೆಮೋರಿಯಲ್ ಕಾಲೇಜಿಗೆ ಬಂದು ಮಹಾತ್ಮಾ ಗಾಂಧಿಯವರ ಬಗ್ಗೆ ಮಾತನಾಡಲು ನಿಂತಿದ್ದೇನೆ. ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡ ಅರಡಿ ಮಲ್ಲಯ್ಯ ಕಟ್ಟೇರ ಅವರು ನನಗೆ ಬಹು ಪ್ರಿಯರಾದ ಮಿತ್ರರು. ಅವರು ಅಂಬೇಡ್ಕರ್‌ವಾದಿ. ಗಾಂಧಿಯಿಂದಲೇ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂದು ನಾನನ್ನುವುದಿಲ್ಲ. ಆದರೆ ನನ್ನ ಚಿಂತನೆಗಳಲ್ಲಿ ಗಾಂಧೀಜಿಯವರ ವೈಚಾರಿಕತೆಗೇ ಮಹತ್ವದ ಸ್ಥಾನವಿರುವುದು ನಿಜ.‌ ಆದರೆ ಈ ವೈಚಾರಿಕ ಭಿನ್ನತೆಗಳು ನನ್ನ ಮತ್ತು ಅರಡಿ ಮಲ್ಲಯ್ಯ ಅವರ ಮಿತ್ರತ್ವಕ್ಕೆ ಯಾವ ತೊಂದರೆಯನ್ನೂ ಮಾಡಿಲ್ಲ.‌ ಇದನ್ನೆ ಮಿತ್ರ ಧರ್ಮ ಎನ್ನುವುದು.

ಧರ್ಮ ಎನ್ನುವ ಪದಕ್ಕೆ ವ್ಯಾಪಕ ಅರ್ಥವಿದೆ. ಮಿತ್ರ ಧರ್ಮ. ಪುತ್ರ ಧರ್ಮ. ಪತಿ ಧರ್ಮ. ಸತಿ ಧರ್ಮ. ಗುರು ಧರ್ಮ. ಶಿಷ್ಯ ಧರ್ಮ.‌ ಹೀಗೆ ಧರ್ಮ ಎನ್ನುವುದಕ್ಕೆ ಸಂಸ್ಥಾ ರೂಪಿಯಾದ ಅರ್ಥಕ್ಕಿಂತ ಭಿನ್ನವಾದ ವೈಯಕ್ತಿಕ ನೆಲೆಯ ವ್ಯಾಪಕ ಅರ್ಥವಿದೆ. ಜವಾಹರ ಲಾಲ್ ನೆಹರೂ ಅವರು ಡಿಸ್ಕವರಿ ಆಫ್ ಇಂಡಿಯಾದಲ್ಲಿ ಧರ್ಮ‌ ಎನ್ನುವುದು ಕರ್ತವ್ಯ ಬದ್ಧತೆಯನ್ನು ಸೂಚಿಸುತ್ತದೆ ಎನ್ನುತ್ತಾರೆ.‌

ಮಹಾತ್ಮಾ ಗಾಂಧಿಯವರು ಧರ್ಮವನ್ನು ಸಾಂಸ್ಥಿಕ ನೆಲೆಯಲ್ಲೂ ಗ್ರಹಿಸಿದ್ದಾರೆ. ವೈಯಕ್ತಿಕ ನೆಲೆಯಲ್ಲೂ ಗ್ರಹಿಸಿದ್ದಾರೆ.‌ ತನ್ನನ್ನು ತಾನು ಸನಾತನಿ ಹಿಂದೂ ಎಂದೇ ಕರೆದುಕೊಂಡ ಮಹಾತ್ಮಾ ಗಾಂಧಿ ಕೆಲವು ಸಂದರ್ಭಗಳಲ್ಲಿ ಧರ್ಮದ ಸಾಂಸ್ಥಿಕ ರೂಪಕ್ಕೇ ಕಠೋರವಾದ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಕಸ್ತೂರ್ಬಾ ಅವರಿಗೆ ತೀವ್ರ ರಕ್ತಸ್ರಾವವಾಗಿ ಬೀಫ್ ಟೀ ಕೊಡದೆ ಬದುಕಲಿಕ್ಕೇ ಸಾಧ್ಯ ಇಲ್ಲ ಎನ್ನುವ ಸ್ಥಿತಿ ಬಂದಿತ್ತು. ಆಗ ಕಸ್ತೂರ್ಬಾ ಅವರು ತಾನು ಸತ್ತರೂ ಸರಿಯೇ ಬೀಫ್ ಟೀ ಕುಡಿಯುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಗಾಂಧೀಜಿ ” ಆಪತ್ಕಾಲದಲ್ಲಿ ದೋಷ ಇಲ್ಲ ಎಂದು ಧರ್ಮ‌ಶಾಸ್ತ್ರವೂ ಹೇಳುತ್ತದೆ. ಯೋಚಿಸು” ಎನ್ನುತ್ತಾರೆ‌ ಆಗಲೂ ಕಸ್ತೂರ್ಬಾ ತಾನು ಬೀಫ್ ಟೀ ಕುಡಿಯಲಾರೆ ಎಂಬ ನಿರ್ಧಾರವನ್ನೆ ಪ್ರಕಟಿಸುತ್ತಾರೆ.‌ ಗಾಂಧಿಯೂ ಅದನ್ನು ಒಪ್ಪಿದರು. ಗಾಂಧೀಜಿಯ ಮಗ ಮಣಿಲಾಲ್ ಕೂಡ ಒಪ್ಪಿದರು. ವೈದ್ಯರು ಬೈದರೂ ಲೆಕ್ಕಿಸದೆ ಕಸ್ತೂರ್ಬಾ ಅವರನ್ನು ಎತ್ತಿ ರೈಲ್ವೇ ನಿಲ್ದಾಣದ ವರೆಗೆ ತೆಗೆದುಕೊಂಡು ಬಂದರು.‌ ನಂತರ ನಿಸರ್ಗ ಚಿಕಿತ್ಸೆಯಲ್ಲೆ ಕಸ್ತೂರ್ಬಾ ಗುಣಮುಖರಾದರು.

ಇಲ್ಲಿ ಕಾಣಿಸುವುದು ಇಡೀ ಗಾಂಧಿ‌ ಕುಟುಂಬ ಸಂಸ್ಥಾ ರೂಪಿ ಧರ್ಮಕ್ಕೆ ಹೇಗೆ ಬದ್ಧವಾಗಿತ್ತು ಎನ್ನುವುದೇ ಆಗಿದೆ.‌ ಮನುಷ್ಯ, ಕುದುರೆ ಮತ್ತು ದನವನ್ನು ಕೊಲ್ಲಬಾರದು ಎಂದು ಋಗ್ವೇದ ಹೇಳುತ್ತದೆ. ಗಾಂಧೀಜಿಯೂ ಗೋಹತ್ಯಾ ನಿಷೇಧಕ್ಕೆ ಬದ್ಧರಾಗಿದ್ದರು. ” ನಾನೊಬ್ಬ ಗೋಪೂಜಕ ಮತ್ತು ಇಡೀ ವಿಶ್ವದ ಮುಂದೆ ಗೋಪೂಜೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ” ಎಂದವರು ಗಾಂಧಿ.‌ ಆದರೆ, ಯಾರಿಗೋ ಅದು ಆಹಾರ ಎಂಬ ವಿಚಾರ ಬಂದಾಗ ಗೋಹತ್ಯಾ ನಿಷೇಧವನ್ನು ಕಾನೂನಿನ ಮೂಲಕ ಜಾರಿಗೊಳಿಸುವುದನ್ನು ತಾನು ಒಪ್ಪುವುದಿಲ್ಲ ಎನ್ನುತ್ತಾರೆ.‌ ಇದು ಗಾಂಧೀಜಿಯವರು ಸಂಸ್ಥಾರೂಪಿ ಧರ್ಮವನ್ನು ಸ್ವೀಕರಿಸಿದ ಎರಡನೆಯ ನೆಲೆಯಾಗಿದೆ.

ಸನಾತನ ಹಿಂದೂ ಧರ್ಮದಲ್ಲಿ ಮೌಲ್ಯಗಳ ಸಾಪೇಕ್ಷತಾ ತತ್ವಕ್ಕೆ ಬಹಳ ಮಹತ್ವವಿದೆ. ಎರಡು ಮೌಲ್ಯಗಳ ನಡುವೆ ಸಂಘರ್ಷ ಬಂದಾಗ ಉನ್ನತ ಮೌಲ್ಯವನ್ನು ಸ್ವೀಕರಿಸಬೇಕು ಎಂದು ಸಂಸ್ಥಾ ರೂಪಿ ಧರ್ಮವೇ ಹೇಳುತ್ತದೆ. ಅದಕ್ಕೆ ಆಧಾರವಾಗುವ ಕಥನಗಳೂ ಇವೆ.‌ ಉದಾಹರಣೆಗೆ ಯಮಧರ್ಮರಾಜ ಸಾವಿತ್ರಿಗೆ ಸಾವಿರ ಮಕ್ಕಳಾಗಲಿ ಎಂದು ವರ ನೀಡಿದಾಗ ಸಾವಿತ್ರಿ,” ಧರ್ಮ ರಾಜನಾದ ನೀನು ಕೊಟ್ಟ ವರ ಧರ್ಮ ಮಾರ್ಗದಲ್ಲೆ ಫಲಿಸಬೇಕಲ್ಲವೆ?” ಎಂದು ಕೇಳುತ್ತಾಳೆ.‌ ಆಗ ಯಮ ಸತ್ಯವಾನನ ಪ್ರಾಣವನ್ನು ಕಳಿಸಿಕೊಡುತ್ತಾನೆ.‌ ಈ ಕಥೆಯು ಮೌಲ್ಯಗಳ ಸಂಘರ್ಷ ಬಂದಾಗ ಉನ್ನತ ಮೌಲ್ಯವನ್ನು ಸ್ವೀಕರಿಸಬೇಕು ಎಂದು ಹೇಳುತ್ತದೆ.‌ ಗೋಹತ್ಯಾ ನಿಷೇಧ ಒಂದು ಮೌಲ್ಯವೇ. ಮನುಷ್ಯನ ಆಹಾರದ ಅವಶ್ಯಕತೆಯ ಪೂರೈಕೆಯೂ ಒಂದು ಮೌಲ್ಯವೇ. ಇವೆರಡರ ನಡುವೆ ಸಂಘರ್ಷ ಬಂದಾಗ ಗಾಂಧೀಜಿ ಉನ್ನತ ಮೌಲ್ಯವಾದ ಮನುಷ್ಯನ ಆಹಾರದ ಅಗತ್ಯವನ್ನು ಪೂರೈಸುವುದರ ಪರವಾಗಿ ನಿಲ್ಲುತ್ತಾರೆ.

ಮೂರನೆಯದು ಧರ್ಮವನ್ನು ವ್ಯಕ್ತಿಯಾಗಿ ಕಂಡುಕೊಳ್ಳುವ ಕ್ರಮ.‌ ಮೂಲತಃ ಈ ಸನಾತನ ಹಿಂದೂ ಧರ್ಮ ಎನ್ನುವುದು ಸಂಘಟನಾ ರೂಪದ ಸಂಸ್ಥೆಯಲ್ಲ.‌ ಸಮುದಾಯಗಳು ಅವವುಗಳದೇ ಆದ ನಿಯಮಗಳ‌ ಅನುಸಾರ ಸಾಮಾಜಿಕ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಿದ್ದವು.‌ ಈಗಲೂ ನಮ್ಮ‌ ಸಮುದಾಯಗಳಲ್ಲಿ ಅವವುಗಳದೇ ನಿಯಮಗಳಿವೆ. ಸನಾತನ ಧರ್ಮ ಸಮುದಾಯದ ನಿಯಮಗಳನ್ನೆ ರೂಪಿಸಲು ಹೆಚ್ಚು ಆಸಕ್ತಿ ವಹಿಸಿದ್ದಲ್ಲ.‌ ವ್ಯಕ್ತಿಯ ಉನ್ನತಿಯ ಕುರಿತಾಗಿಯೇ ಅದರ ಆಸಕ್ತಿ ಜಾಸ್ತಿ. ಭಗವದ್ಗೀತೆಯಲ್ಲೂ,” ಜೀವಿಯು ತನ್ನ ಉನ್ನತಿಯ ಸಾಧನೆಯಲ್ಲಿ ಒಂಟಿಯಾಗಿಯೇ ಪಯಣಿಸಬೇಕು” ಎಂದು ಬರುತ್ತದೆ. ಕಾಲಾನುಕ್ರಮದಲ್ಲಿ ಸಮುದಾಯಗಳಿಗೆ ಬಾಹ್ಯ ಕಿರುಕುಳಗಳು ಎದುರಾದಾಗ ಅಂತಹ ಸನ್ನಿವೇಶಗಳನ್ನು ನಿಭಾಯಿಸಲಿಕ್ಕಾಗಿ ಧರ್ಮಕ್ಕೆ ಸಂಘಟನಾತ್ಮಕವಾದ ಸಾಂಸ್ಥಿಕ ರೂಪವನ್ನು ಕೊಡಲಾಯಿತು ಅಷ್ಟೆ. ಇದೊಂದು ವ್ಯಾವಹಾರಿಕ ಅಗತ್ಯವಾಗಿ ಬಂದದ್ದೇ ಹೊರತು ಧರ್ಮದ ಸ್ವರೂಪವೇ ಹಾಗಲ್ಲ. ಇರಲಿ; ಈ ವಿಚಾರ ಇಲ್ಲಿನ ಚರ್ಚೆಗೆ ಸಂಬಂಧಿಸಿಲ್ಲ.

ಗಾಂಧೀಜಿ ಭಗವದ್ಗೀತೆಗೆ ವಿಶಿಷ್ಠವಾದ ವ್ಯಾಖ್ಯಾನವನ್ನು ಕೊಡುತ್ತಾರೆ. ಅದು ಅವರದೇ ವ್ಯಾಖ್ಯಾನ.‌ ವೇದವನ್ನು ಅರ್ಥ ಮಾಡಿಕೊಳ್ಳಲಿಕ್ಕೂ ವೇದಾಂತ ಸೂತ್ರಗಳಿವೆ.‌ ಗಾಂಧೀಜಿ ಈ ರೀತಿಯ ಸಾಂಪ್ರದಾಯಿಕ ಸೂತ್ರವನ್ನೆಲ್ಲ ಮುರಿದು ವೈಯಕ್ತಿಕವಾದ ಸ್ವತಂತ್ರ ವ್ಯಾಖ್ಯಾನವನ್ನು ನೀಡುತ್ತಾರೆ. ” ಅಹಿಂಸಾವಾದಿಯಾದ ನೀವು ಹಿಂಸೆಯನ್ನು ಬೋಧಿಸುವ ಭಗವದ್ಗೀತೆಯನ್ನು ಹೇಗೆ ತಾಯಿ ಎಂದು ಒಪ್ಪಿಕೊಳ್ಳುತ್ತೀರಿ?” ಎಂದು ಆಚಾರ್ಯ ರಜನೀಶ್ ಕೇಳಿದರೆ, ಗಾಂಧೀಜಿ,” ಭಗವದ್ಗೀತೆಯು ಭೌತಿಕ ಯುದ್ಧಕ್ಕಿಂತ ಮುಖ್ಯವಾಗಿ ಮಾನಸಿಕ ತಾಕಲಾಟವನ್ನು ವಿವರಿಸುತ್ತದೆ.‌ ಅರ್ಜುನ ಅಲ್ಲಿ ಮೋಹ ಪರವಶನಾಗಿದ್ದ. ಭೀಷ್ಮ, ದ್ರೋಣ, ದುರ್ಯೋಧನಾದಿಗಳೆಲ್ಲ ತನ್ನವರು. ಇವರ ಮೇಲೆ ಹೇಗೆ ಯುದ್ಧ ಮಾಡಲಿ ಎಂದು ಅರ್ಜುನನ ಪ್ರಶ್ನೆಯಾಗಿತ್ತು.‌ ಸಾಯಲಿದ್ದ ಲಕ್ಷಾಂತರ ಸೈನಿಕರನ್ನು ಹೇಗೆ ಕೊಲ್ಲಲಿ ಎಂದು ಅವನಿಗನಿಸಲೇ ಇಲ್ಲ. ಅಹಿಂಸಾ ವ್ರತಧಾರಿಗೆ ನನ್ನವರು ನನ್ನವರಲ್ಲದವರು ಎಂಬ ಭೇದ ಇರಕೂಡದು. ಅವನು ನಿರ್ಮೋಹಿಯಾಗಿರಬೇಕು.‌ ಒಂದು ವೇಳೆ ಅರ್ಜುನ ಮೋಹವನ್ನು ತೊರೆದು ಲಕ್ಷಾಂತರ ಸೈನಿಕರನ್ನು ಹೇಗೆ ಕೊಲ್ಲಲಿ ಎಂದು ಕೇಳಿದ್ದರೆ ಆಗ ಕೃಷ್ಣ ಕೊಡುವ ಉತ್ತರವೂ ಬೇರೆಯಾಗಿರುತ್ತಿತ್ತು” ಎಂದು ಗಾಂಧೀಜಿ ಉತ್ತರಿಸುತ್ತಾರೆ.‌ ಇದು ಗಾಂಧಿಯದ್ದೇ ವ್ಯಾಖ್ಯಾನ. ಬೇರೆಲ್ಲೂ ಈ ವ್ಯಾಖ್ಯಾನವಿಲ್ಲ. ಭಗವದ್ಗೀತೆ ಎಂದರೆ ಶ್ರೀ ಭಗವಾನುವಾಚ ಅಲ್ಲವೆ? ದೇವರೇ ಹೇಳಿದ್ದನ್ನು ಪ್ರಶ್ನಿಸಬಾರದು ಎಂಬ ನಿಯಮವನ್ನು ಲೆಕ್ಕಿಸದೆ ಗಾಂಧಿ ಭಗವದ್ಗೀತೆಯನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ. ಆದರೆ ಗಾಂಧೀಜಿಯ ಈ ವ್ಯಾಖ್ಯಾನವನ್ನು ನಿರಾಕರಿಸಲು ಆಗುವುದಿಲ್ಲ. ಏಕೆಂದರೆ ಮಹಾಭಾರತದಲ್ಲಿ ಅದಕ್ಕೆ ಸಮರ್ಥನೆ ಇದೆ.‌ ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಉಪಪ್ಲವ್ಯದಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಕೌರವರ ಬಗ್ಗೆ ಮಾತನಾಡಿದರೆ ಕೃಷ್ಣ ಮಾತ್ರ,” ಯುದ್ಧ ನಡೆದರೆ ಲಕ್ಷ ಲಕ್ಷ ಸಂಖ್ಯೆಯ ಸಾವು ನಡೆಯುತ್ತದೆ. ಅದರ ಬಗ್ಗೆ ನಾನು ಚಿಂತಿತನಾಗಿದ್ದೇನೆ” ಎನ್ನುತ್ತಾನೆ. ಅಂದರೆ ಕೃಷ್ಣನಿಗೆ ಮಾತ್ರ ಸಾಯಲಿರುವ ಸಾಮಾನ್ಯ ಸೈನಿಕರೂ‌ ಪರಿಗಣನೆಯಲ್ಲಿದ್ದರು. ಈ ಅಂಶವು ಗಾಂಧೀಜಿಯ ವ್ಯಾಖ್ಯಾನಕ್ಕೆ ಪೂರಕವಾಗಿಯೇ ಇದೆ.

ಗಾಂಧೀಜಿಯವರು ಅಸ್ಪೃಶ್ಯತಾ ನಿಷೇಧಕ್ಕೆ ಪೂರಕವಾಗಿ ಧರ್ಮವನ್ನೆ ಆಧರಿಸುತ್ತಾರೆ.‌ ರಾಮಾಯಣದಲ್ಲಿ ರಾಮ ಶೋಷಿತ ಸಮುದಾಯಕ್ಕೆ ಸೇರಿದ ಗುಹನನ್ನು ತನ್ನ ಸಹೋದರನೆಂದು ಅಪ್ಪಿಕೊಳ್ಳುತ್ತಾನೆ.‌ ರಾಮನಿಗೆ ಅಸ್ಪೃಶ್ಯ ಎಂಬ ಸಮಸ್ಯೆ ಇಲ್ಲ.‌ ಹಾಗಿದ್ದ ಮೇಲೆ ನಮಗೆ ಅಸ್ಪೃಶ್ಯತೆ ಯಾಕೆ ಎನ್ನುವುದು ಗಾಂಧೀಜಿಯ ಪ್ರಶ್ನೆ.‌ ಗಾಂಧಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭೇಟಿಯಾದಾಗ,” ಅಸ್ಪೃಶ್ಯತೆಗೆ ಧರ್ಮದಲ್ಲಿ ಸಮರ್ಥನೆ ಇದೆಯೆ?” ಎಂದು ಕೇಳುತ್ತಾರೆ.‌ ನಾರಾಯಣ ಗುರುಗಳು ಅಸ್ಪೃಶ್ಯತೆಗೆ ಧರ್ಮದಲ್ಲಿ ಸಮರ್ಥನೆ ಇಲ್ಲ ಎಂದು ಉತ್ತರಿಸುತ್ತಾರೆ.‌ಮತ್ತು ನಾರಾಯಣ ಗುರುಗಳ ಆಶ್ರಮದಲ್ಲಿ ಅಡುಗೆಯವರು ಅಸ್ಪೃಶ್ಯರು. ಇದನ್ನು ನೋಡಿ ಸಾಬರ್ಮತಿ ಆಶ್ರಮಕ್ಕೆ ಬಂದು ಗಾಂಧೀಜಿಯೂ ಅಸ್ಪೃಶ್ಯರನ್ನೆ ಅಡುಗೆಗೆ ನೇಮಿಸುತ್ತಾರೆ.

ಈಗ ಅತಾರ್ಕಿಕವಾಗಿ ಹಿಂದೂ ಧರ್ಮದ ಉದಾತ್ತತೆಯನ್ನು ಹೇಳುವವರು ಬಳಸುವುದು ಈಶಾವಾಸ್ಯ ಉಪನಿಷತ್ತಿನ,” ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನುಪಶ್ಯತಿಃ ಸರ್ವಭೂತೇಶು ಚಾತ್ಮಾನಾಂ ತಥೋನ ವಿಜುಗುಪ್ಸತೇ” ಎಂಬ ಮಂತ್ರವನ್ನು. ಅಂದರೆ ಯಾರು ತನ್ನಲ್ಲಿ ಸಕಲ ಜೀವಿಗಳ ಆತ್ಮವನ್ನೂ, ಸಕಲ ಜೀವಿಗಳಲ್ಲಿ ತನ್ನ ಆತ್ಮವನ್ನೂ ಕಾಣಬಲ್ಲನೋ ಅವನಿಗೆ ಜಿಗುಪ್ಸೆ ಇರುವುದಿಲ್ಲ ಎಂದು ಅರ್ಥ.‌ ಈಶಾವಾಸ್ಯ ಉಪನಿಷತ್ತು ಇದನ್ನು ಆಧ್ಯಾತ್ಮಿಕ ಸಾಧಕನಿಗೆ ಹೇಳುವುದು.‌ ಸಕಲ ಚರಾಚರ ವಸ್ತುಗಳೂ ಬ್ರಹ್ಮದ ವಿವಿಧ ಸಗುಣ ರೂಪಗಳೇ ಆಗಿದ್ದು ಅವುಗಳಲ್ಲಿರುವ ಬ್ರಹ್ಮವನ್ನು ಕಾಣುವ ಒಳಗಣ್ಣನ್ನು ತೆರಸುವ ರೂಪದಲ್ಲಿ ಅದಿರುವುದು. ಇದರರ್ಥ ಲೌಕಿಕ ವ್ಯವಹಾರದ ಅರ್ಥದಲ್ಲೆ ಭೇದಗಳನ್ನು‌ ನಿವಾರಿಸಲಾಗಿದೆ ಎಂದಲ್ಲ.‌ ಗಾಂಧೀಜಿಯಂತಹವರು, ರಾಮಕೃಷ್ಣ ಪರಮ ಹಂಸರಂತಹವರು ಇದನ್ನು ಲೌಕಿಕ ಅರ್ಥಕ್ಕೆ ಒಳಪಡಿಸಲು ಪ್ರಯತ್ನಿಸಿದ್ದಾರೆ ನಿಜ.‌ ಅಂದ ಮಾತ್ರಕ್ಕೆ ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ನಡೆದ ತಾರತಮ್ಯ, ಜಾತಿ ಆಧಾರಿತ ದೌರ್ಜನ್ಯಗಳಿಗಾಗಿ ಹಿಂದೂಗಳನ್ನು ಕ್ಷಮಿಸಿಕೊಳ್ಳಲು ಆಗುವುದಿಲ್ಲ.‌ ಹಾಗೆ, ಅಸ್ಪೃಶ್ಯತೆ ಧರ್ಮದ ಭಾಗ ಅಲ್ಲ.‌ ಯುಗಗಳು ನಾಲ್ಕು.‌ ಧರ್ಮ‌ ನಿಲ್ಲುವುದು ನಾಲ್ಕು ಕಾಲಿನಲ್ಲಿ. ಆಶ್ರಮಗಳು ನಾಲ್ಕು. ಆವಾಗ ವರ್ಣಗಳು ಮಾತ್ರ ಐದಾಗುವುದು ಹೇಗೆ? ನಾನು ವರ್ಣಗಳ ಬಗ್ಗೆ ಹೇಳುತ್ತಿದ್ದೇನೆ.‌ ಜಾತಿಗಳ ಬಗ್ಗೆ ಅಲ್ಲ. ಜಾತಿಗಳು ಆರು ಸಾವಿರಕ್ಕಿಂತ ಜಾಸ್ತಿ ಇವೆ. ಅವು ಧರ್ಮದ ಸೃಷ್ಟಿ ಅಲ್ಲ.‌ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭದ ಸೃಷ್ಟಿಗಳು. ನಿಜವಾಗಿ ವರ್ಣಗಳೂ ನಾಲ್ಕೇ. ಪಂಚಮರು ಎನ್ನುವ ಪಂಗಡವೇ ಕೃತಕ ಸೃಷ್ಟಿ. ಹೇಗೆ ಇದು ಸೃಷ್ಟಿಯಾಯಿತು ಎನ್ನಬೇಕಾದರೆ ನಾನು ಬೇರೆಯೇ ಇತಿಹಾಸವನ್ನು ಹೇಳಬೇಕು.‌ ಅದು ಇಲ್ಲಿಗೆ ಅಪ್ರಸ್ತುತ. ಹಾಗಾದರೆ ಅದರಿಂದ ಆದ ಹಾನಿ? ಆ ಹಾನಿಯ ಹೊಣೆಯನ್ನು ಹಿಂದೂಗಳು ಹೊರಲೇ ಬೇಕಾಗುತ್ತದೆ. ಅದಕ್ಕೇ ಗಾಂಧೀಜಿಯವರು ಅಸ್ಪೃಶ್ಯತೆ ಇರುತ್ತದೆ ಎಂದಾದರೆ ಹಿಂದೂ ಧರ್ಮ‌ನಾಶವಾಗುವುದೇ ಸೂಕ್ತ ಎಂದದ್ದು.‌ ಆತ್ಮಸಾಕ್ಷಿ ಇರುವ ಯಾವ ಮನುಷ್ಯನೂ ಅಸ್ಪೃಶ್ಯತೆಯ ಹೊಣೆ ಹಿಂದೂಗಳಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.‌ ಇದನ್ನು ಮಹಾತ್ಮಾ ಗಾಂಧಿಯವರು ಚೆನ್ನಾಗಿ ಅರಿತಿದ್ದರು.‌ ಅದಕ್ಕೇ ಅಸ್ಪೃಶ್ಯತೆಯ ನಿರ್ಮೂಲನೆಗೆ ಅವರು ವಿಶೇಷವಾದ ಕಾಳಜಿ ವಹಿಸಿದ್ದರು. ಅಸ್ಪೃಶ್ಯ ಸಮುದಾಯದ ಹುಡುಗಿಯನ್ನೆ ತನ್ನ ಮಗಳು ಎಂದು ದತ್ತು ತೆಗೆದುಕೊಂಡಿದ್ದರು. ದೂದಾ ಬಾಯಿ ಪ್ರಕರಣ ಬಹಳ ಪ್ರಸಿದ್ಧವೇ ಆಗಿದ್ದು ಎಲ್ಲರಿಗೂ ಗೊತ್ತಿದೆ.‌ ಅಸ್ಪೃಶ್ಯರಿಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಗಾಂಧೀಜಿಯವರು ಹೋಗುತ್ತಿರಲಿಲ್ಲ. ಒಮ್ಮೆ ಕಸ್ತೂರ್ಬಾ ಮತ್ತು ಮಹಾದೇವ ದೇಸಾಯಿ ಅಸ್ಪೃಶ್ಯರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ಹೋದದ್ದಕ್ಕಾಗಿ ಸಿಟ್ಟಿಗೆದ್ದು ಕೂಗಾಡಿದ ಗಾಂಧೀಜಿಗೆ ಕೊನೇಗೆ ಮಹಾದೇವ ದೇಸಾಯಿ,” ಕೆಟ್ಟವರ ಸಾವಾಸ ಬಲು ಕಷ್ಟ. ಒಳ್ಳೆಯವರ ಸಾವಾಸ ಅದಕ್ಕಿಂತಲೂ ಕಷ್ಟ” ಎಂದಿದ್ದರು. ಅಸ್ಪೃಶ್ಯತಾ ನಿವಾರಣೆಯ ವಿಷಯದಲ್ಲಿ ಗಾಂಧೀಜಿ ಬಹಳ‌ ಮಂದಿಯನ್ನು ಪ್ರಭಾವಿಸಿದ್ದರು. ಅಸ್ಪೃಶ್ಯತೆಯಾಗಲಿ, ಇತರ ವಿಷಯಗಳೇ ಆಗಲಿ ಅವು ರೂಪುಗೊಂಡು ವ್ಯವಸ್ಥೆಯಾಗಿ ಬೆಳೆದ ನಂತರ ಅವುಗಳನ್ನು ಸಂವೇದನಾಶೀಲ ದೃಷ್ಟಿಯಿಂದ ನೋಡುವ ಕ್ರಮ ಹೊರಟು ಹೋಗುತ್ತದೆ. ಸಮಾಜ ದುರ್ಬಲ ವರ್ಗದ ಬಗ್ಗೆ ಸಾಮಾನ್ಯವಾಗಿ ಸಂವೇದನಾಶೀಲವಾಗಿರುವುದಿಲ್ಲ. ದ್ರೌಪದಿ ವಸ್ತ್ರಾಪಹಾರದ ಬಗ್ಗೆ ಸಮಾಜ ಸಂವೇದನಾಶೀಲವಾಗಿತ್ತು. ಮಹಾಭಾರತವೂ ಬಂತು. ಏಕೆಂದರೆ ದ್ರೌಪದಿ ರಾಣಿ. ರಾಣಿಯ ವಸ್ತ್ರಾಪಹಾರ ನಡೆಯುವ ಸಮಾಜದಲ್ಲಿ ದುರ್ಬಲ ಮಹಿಳೆಯರ ವಸ್ತ್ರಾಪಹಾರ ಇನ್ನೆಷ್ಟಾಗಿರಬಹುದು. ಆದರೆ ಅದೆಲ್ಲ ಸಾಹಿತ್ಯವಾಗಲಿಲ್ಲ. ಏಕೆಂದರೆ ಅವರ ಬಗ್ಗೆ ಸಂವೇದನಾಶೀಲತೆ ಇರಲಿಲ್ಲ. ಇವತ್ತಿಗೂ ವಿಮಾನ ಅಪಘಾತದಲ್ಲಿ ಮಡಿದವರ ಬಗ್ಗೆ ಹೇಳುವಾಗ ಅದರಲ್ಲಿದ್ದ ದೊಡ್ಡ ಮನುಷ್ಯರ ಬಗ್ಗೆ ಸಂವೇದನಾಶೀಲ ಪ್ರತಿಕ್ರಿಯೆಗಳಿವೆ. ಸಾಮಾನ್ಯ ಪ್ರಯಾಣಿಕರನ್ನು,” ಅವರು ಇವರು ಮತ್ತು ಇತರ ಪ್ರಯಾಣಿಕರು” ಎಂದು ಗುರುತಿಸುವುದು.‌” ಇತರ” ಎನ್ನುವುದರ ಬಗ್ಗೆ ಸಂವೇದನಾಶೀಲತೆ ಇಲ್ಲ.‌ ಇದೇ ರೀತಿ ಸಂವಾದನಾಶೀಲ ಸ್ಪಂದನೆಯೇ ಇರದ ಅಸ್ಪೃಶ್ಯರನ್ನು ಸಂವೇದನಾಶೀಲವಾಗಿ ನೋಡುವ ಪರಿಪಾಠವನ್ನು ಗಾಂಧಿ ದೊಡ್ಡ ಪ್ರಮಾಣದಲ್ಲಿ ಹುಟ್ಟು ಹಾಕಿದರು.‌ ಗಾಂಧಿ ಪುತ್ತೂರಿಗೆ ಬಂದಿದ್ದಾಗ ಒಂದು ಘಟನೆ ನಡೆಯುತ್ತದೆ.‌ ಅಸ್ಪೃಶ್ಯ ವರ್ಗದ ಚೀಂಕ್ರ ಮೇರ ಎಂಬವರನ್ನು ಗಾಂಧೀಜಿಗೆ ಹಾರ ಹಾಕಲು ಗೊತ್ತು ಮಾಡಲಾಗುತ್ತದೆ.‌ ಗಾಂಧೀಜಿಯ ಬಳಿಗೆ ಹೋದಾಗ ಚೀಂಕ್ರ ಮೇರರ ಕೈ ನಡುಗಲು ಶುರುವಾಯಿತು. ಆಗ ಗಾಂಧೀಜಿಯೇ ಚೀಂಕ್ರ ಮೇರರ ಕೈಹಿಡಿದು ತನ್ನ ತಲೆಯನ್ನು ಹಾರದೊಳಗೆ ನುಗ್ಗಿಸಿ ಹಾಕಿಸಿಕೊಳ್ಳುತ್ತಾರೆ. ಇದನ್ನೆಲ್ಲ ನೋಡಿದ ಕಾರ್ನಾಡ್ ಸದಾಶಿವ ರಾಯರು,” ಇನ್ನು ಮುಂದೆ ಅಸ್ಪೃಶ್ಯರು ನನ್ನ ಮನೆಯ ದೇವರ ಕೋಣೆಗೂ ಪ್ರವೇಶಿಸುವುದನ್ನು ಆ ಶ್ರೀಹರಿಯೂ ತಡೆಯಲಾರ” ಎಂದು ಘೋಷಿಸುತ್ತಾರೆ. ನಂತರ ಕಾರ್ನಾಡ್ ಸದಾಶಿವ ರಾಯರೂ ಇದೇ ಕೆಲಸಕ್ಕೆ ಇಳಿಯುತ್ತಾರೆ. ಅಸ್ಪೃಶ್ಯತೆ ಧರ್ಮ ಬಾಹಿರ, ಅಸ್ಪೃಶ್ಯತೆ ‘ ಪಾಪ’ ಎಂಬ ಪ್ರಜ್ಞೆಯನ್ನು ವ್ಯಾಪಕವಾಗಿ ಹಿಂದೂಗಳಲ್ಲಿ ಹುಟ್ಟು ಹಾಕಿದವರು ಗಾಂಧೀಜಿಯೇ. ಮತ್ತು ಸನಾತನಿ ಹಿಂದೂ ಆಗಿದ್ದೇ ಅವರು ಅದನ್ನು ಮಾಡಿದ್ದಾರೆ ಎನ್ನುವುದು ಮಹತ್ವದ ವಿಷಯ. ಒಂದು ವೇಳೆ ನೆಹರೂ ಅವರ ಶೈಲಿಯಲ್ಲಿ ಸಾಗಿದ್ದರೆ ಇದು ಕಷ್ಟವಿತ್ತು. ನೆಹರೂ ಹಿಂದೂ ಎನ್ನುವುದು ಟೆಕ್ನಿಕಲಿ ಹಿಂದೂ ಎಂದಷ್ಟೆ; ಅವರ ಜೀವನ ವಿಧಾನಗಳಲ್ಲಿ ಧರ್ಮದ ಇರುವಿಕೆ ತೀರಾ ಕಡಿಮೆ. ಕಾನೂನಿನ ಮೂಲಕ ತರುವ ಸುಧಾರಣೆಗಳು ಕಾನೂನಿನ ಭಯ ಇರುವ ವರೆಗೆ ನಡೆಯುತ್ತದೆ.‌ ನಂತರ ಮೊದಲಿನಂತಾಗುತ್ತದೆ.‌ ವ್ಯಕ್ತಿಯ ಚಿಂತನಾ ಕ್ರಮದಲ್ಲೆ ತರುವ ಸುಧಾರಣೆಗಳು ತಲೆಮಾರುಗಳ ನಂತರವೂ ಶಾಶ್ವತವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಗಾಂಧೀಜಿ ಹಿಂದೂ ಧರ್ಮದ ಬಹಳ ದೊಡ್ಡ ಧಾರ್ಮಿಕ ಸುಧಾರಕರೂ ಹೌದು.

ಧಾರ್ಮಿಕ ವಿಚಾರದಲ್ಲಿ ಗಾಂಧೀಜಿಯನ್ನು ನಾಲ್ಕನೆಯ ನೆಲೆಯಲ್ಲಿಯೂ ಗ್ರಹಿಸಬೇಕು. ” ಅನೌ ಭದ್ರಾ ಕೃತವೋ ಯಂತು ವಿಶ್ವತಃ” ಎನ್ನುವುದು ಋಗ್ವೇದದ ಮಾತು.‌ ಅಂದರೆ ಎಲ್ಲ ಕಡೆಯಿಂದಲೂ ಸ್ವೀಕರಿಸಲು ಯೋಗ್ಯವಾದದ್ದನ್ನು ಸ್ವೀಕರಿಸಬೇಕು ಎಂದು. ಜೀಸಸ್ ಬೆಟ್ಟದ ಉಪದೇಶಗಳ ತತ್ವಗಳನ್ನು ಗಾಂಧೀಜಿ ತಮ್ಮ ವಿಚಾರ ಮತ್ತು ವರ್ತನೆಗೆ ಅಳವಡಿಸಿಕೊಂಡಿದ್ದರು. ಅವರು ಸತ್ಯಾಗ್ರಹದ ಪರಿಕಲ್ಪನೆಯನ್ನು ರೂಪಿಸುವ ಮೊದಲು ಒಬ್ಬರು ಇಮಾಮರೊಂದಿಗೆ ಬಹಳ ದಿನಗಳ ಕಾಲ ಸಂವಾದ ನಡೆಸಿದ್ದರು. ಇವತ್ತು ತೀರಾ ಕೆಟ್ಟ ಅರ್ಥವನ್ನು ಪಡೆದಿರುವ ಜೆಹಾದ್ ಪರಿಕಲ್ಪನೆಯ ಮೂಲ ಅರ್ಥ ಮನುಷ್ಯ ತನ್ನ ಅಂತರಂಗದ ಕೆಡುಕುಗಳ ವಿರುದ್ಧ ಹೋರಾಡಬೇಕು ಎಂದು.‌ ಸತ್ಯಾಗ್ರಹದಲ್ಲಿ ಎದುರಾಳಿಗಿಂತ ಮೊದಲು ತನ್ನ ದೋಷವನ್ನು ತಾನು ಕಳೆದುಕೊಳ್ಳಬೇಕು ಎಂಬ ಪರಿಕಲ್ಪನೆ ಇದೆ. ಇಸ್ಲಾಮಿನಿಂದಲೂ ಗಾಂಧೀಜಿ ಸ್ವೀಕರಿಸಿದರು.‌ ಇನ್ನೊಂದು ಪ್ರಕರಣ ಬರುತ್ತದೆ.‌ ಸಾಬರ್ಮತಿ ಆಶ್ರಮದಲ್ಲಿ ಗಾಂಧಿ ಒಮ್ಮೆ ಕುಡಿಯಲು ನೀರು ಕೇಳಿದಾಗ ಒಬ್ಬ ಹುಡುಗಿ ಬಿಸಿ ನೀರು ತಂದು ಕೊಡುತ್ತಾಳೆ. ಗಾಂಧಿ ಸ್ವಲ್ಪ ನೀರು ಕುಡಿದು ಲೋಟ ಅಲ್ಲೇ ಇಟ್ಟರು.‌ ನೀರಿನ್ನೂ ಇತ್ತು.‌ ಸ್ವಲ್ಪ ತಡೆದು ನೋಡಿದಾಗ ಲೋಟ ಹಾಗೆಯೇ ಇದೆ.‌ ಆಗ ಗಾಂಧೀಜಿ ಹುಡುಗಿಯನ್ನು ಕರೆದು,” ಲೋಟಕ್ಕೆ ಮುಚ್ಚಬೇಕು. ಇಲ್ಲದಿದ್ದರೆ ಲೋಟದಿಂದ ಮೇಲೇಳುವ ಹಬೆಯಿಂದ ಪರಿಸರದಲ್ಲಿರುವ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಅವುಗಳನ್ನು ಕೊಲ್ಲುವ ಹಕ್ಕು ನಮಗಿಲ್ಲ” ಎನ್ನುತ್ತಾರೆ. ಅಹಿಂಸೆಯ ಕುರಿತ ಈ ಕಠೋರ ಬದ್ಧತೆ ಜೈನ ಧರ್ಮದ್ದು. ಹಿಂದೂ ಧರ್ಮದ್ದಲ್ಲ.‌ ಹಿಂದೂ ಧರ್ಮವೂ ಅಹಿಂಸೆಯನ್ನು ಹೇಳುತ್ತದೆ. ” ಅಹಿಂಸಾ ಪರಮೋಧರ್ಮಃ” ಹೌದು, ಆದರೆ ಆ ನಂತರ ” ಧರ್ಮ‌ಹಿಂಸಾ ತತೈವಚಃ” ಎಂದೂ ಇದೆ. ಧರ್ಮದ ಅಗತ್ಯಕ್ಕಾಗಿ ಹಿಂಸೆ ಮಾಡಬಹುದು.‌ ಶ್ರೀಮದ್ಭಾಗವತವು ಪ್ರಭುತ್ವದ ವಿರುದ್ಧ ಪ್ರಜೆ ಹಿಂಸೆಗೆ ಇಳಿಯಬಾರದು ಎನ್ನುತ್ತದೆ.‌ ಅಂದರೆ ಒಟ್ಟಾರೆಯಾಗಿ ಅನಿವಾರ್ಯ ಹಿಂಸೆಯನ್ನು ಹಿಂದೂ ಧರ್ಮ‌ ಒಪ್ಪುತ್ತದೆ. ಅಹಿಂಸೆಯ ವಿಚಾರದಲ್ಲಿ ರಾಜಿಯೇ ಇಲ್ಲದಿರುವುದು ಜೈನ ಧರ್ಮದಲ್ಲಿ. ಗಾಂಧಿಯ ಒಲವು ಈ ವಿಚಾರದಲ್ಲಿ ಹೆಚ್ಚಾಗಿ ಜೈನ ಧರ್ಮದ ಕಡೆಗೆ ಇದೆ.

ಇದು ಇತರ ಧರ್ಮಗಳಿಂದ ಸ್ವೀಕರಿಸಿದ ವಿಷಯವಾಯಿತು.‌ ಗಾಂಧೀಜಿಯ ಬಳಿ ರಾಜಿಯಾಗದ ಧಾರ್ಮಿಕ ನಿಲುವುಗಳೂ ಇದ್ದವು. ಗಾಂಧೀಜಿಯ ಬಗ್ಗೆ ಧಾರ್ಮಿಕ ರಾಜಿ ಮಾಡಿಕೊಂಡ ಆರೋಪವಿದೆ. ವ್ಯಾವಹಾರಿಕವಾಗಿ ಅವರು ಹೊಂದಾಣಿಕೆ ಮಾಡಿಕೊಂಡ ಕೆಲವು ಘಟನೆಗಳು ಇವೆ. ಆದರೆ ಅದು ಧಾರ್ಮಿಕ ರಾಜಿ ಅಲ್ಲ.‌ ಅಲ್ಲಾಹು ಜಗತ್ತಿನ ಒಡೆಯ, ರಾಮ‌ ತುಂಡರಸ; ಆದ್ದರಿಂದ ನೀವು ರಾಮ್ ರಹೀಂ ಎಂದು ಹೇಳಬಾರದು ಎಂದಾಗ, ” ಅದಾಗುವುದಿಲ್ಲ.‌ ರಾಮ‌ನ ಮೌಲ್ಯಗಳು ಜಾಗತಿಕವಾದವುಗಳು. ನಾನು ರಾಮ್ ರಹೀಂ‌ ಎಂದೇ ಹೇಳುತ್ತೇನೆ” ಎಂದು ಉತ್ತರಿಸಿದ್ದರು. ” ಸರಕಾರ ಕೊಡುವ ಭದ್ರತೆಯಲ್ಲಿ ಧರ್ಮ ಪ್ರಚಾರ ಆಗುವ ಪರಿಸ್ಥಿತಿ ಯಾವುದಾದರೂ ಧರ್ಮಕ್ಕೆ ಇದ್ದರೆ ನೀವು ಧರ್ಮ ಪ್ರಚಾರ ಮಾಡಬೇಡಿ” ಎಂದು ಕ್ರೈಸ್ತ ಮಿಷನರಿಗಳಿಗೂ ಹೇಳಿದ್ದರು. ” ನಾನೊಬ್ಬ ಸನಾತನಿ ಹಿಂದೂ” ಎನ್ನುವ ಗಾಂಧೀಜಿಯ ಮಾತನ್ನು ” ಆದ್ದರಿಂದಲೇ ನಾನು ಮುಸ್ಲಿಂ, ಕ್ರೈಸ್ತ, ಸಿಖ್ಖನೂ ಆಗಬಲ್ಲೆ” ಎಂಬ ಮಾತಿನ ಹಿನ್ನೆಲೆಯಲ್ಲೆ ಅರ್ಥ ಮಾಡಿಕೊಳ್ಳಬೇಕು.

ಗಾಂಧೀಜಿಯವರ ಒಟ್ಟೂ ಚಿಂತನೆಗಳು ಒಂದಕ್ಕೊಂದು ಪೂರಕವಾಗಿ ಚರ್ಮ ಮಾಂಸಗಳು ಹೊಂದಿಕೊಂಡಂತೆ ಇರುವಂತಹವು. ಅವರ ನಿಸರ್ಗ ತತ್ವಗಳನ್ನು ಕೂಡ ಧಾರ್ಮಿಕ ಚಿಂತನೆಗಳೊಂದಿಗೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. “ಸತ್ಯ ಮತ್ತು ಅಹಿಂಸೆ ಈ ಪರ್ವತಗಳಷ್ಟೇ ಪುರಾತನವಾದದ್ದು. ಸತ್ಯ ಮತ್ತು ಅಹಿಂಸೆ ದೇವರ ನಿಯಮ” ಎನ್ನುವ ಮಾತಿನಲ್ಲಿ ನಿಸರ್ಗ ಮತ್ತು ದೇವರ ನಡುವೆ ಸಂಬಂಧವನ್ನು ಗಾಂಧೀಜಿ ಏರ್ಪಡಿಸುತ್ತಾರೆ. ಋಗ್ವೇದದಲ್ಲಿ ‘ಋತ’ ಎಂಬ ಪರಿಕಲ್ಪನೆ ಬರುತ್ತದೆ.‌ ಸಹಜವಾಗಿರುವುದನ್ನು ಸಹಜವಾಗಿಯೇ ಬಿಡಬೇಕು ಎನ್ನುವುದು ಋತದ ಪರಿಕಲ್ಪನೆಯಾಗಿದೆ. ನದಿ ಹರಿಯುತ್ತದೆ. ಅದರಿಂದ ನೀರನ್ನು ತೆಗೆದುಕೊಳ್ಳಬಹುದು. ಆದರೆ ಅದನ್ನು ಅಡ್ಡ ಹಾಕಿ ಅದರ ದಿಕ್ಕನ್ನು ಬದಲಿಸಲು ಮನುಷ್ಯ ಹೋಗಬಾರದು…ಹೀಗೆ. ಹಿಂದೂ ಧರ್ಮದ ಅನೇಕ ಸಂಗತಿಗಳು ನಿಸರ್ಗ ತತ್ವಗಳಿಂದಲೇ ಬಂದಿದೆ. ಉದಾಹರಣೆಗೆ ” ಶತಮಾನಂ ಭವತಿ” ಎಂದು ಆಶೀರ್ವಾದ ಮಾಡುವುದು. ಸಾರ್ವಕಾಲಿಕವಾಗಿ ಬದುಕಿರು ಎಂದಲ್ಲ. ಸಾರ್ವಕಾಲಿಕ ಬದುಕು ನಿಸರ್ಗ ತತ್ವ ಅಲ್ಲ.‌ ಅರಣ್ಯಕಗಳು ಮತ್ತು ಉಪನಿಷತ್ತುಗಳನ್ನು ನೋಡಿದರೆ ‘ಸತ್’ ಅನ್ನು ಅನೇಕ ರೀತಿಯಲ್ಲಿ ಶೋಧಿಸುವ ಪ್ರಕ್ರಿಯೆಯನ್ನು ಕಾಣಬಹುದು. ಇವುಗಳಲ್ಲಿ ಅರಣ್ಯಕಗಳು ನಿಸರ್ಗ ತತ್ವಗಳನ್ನೆ ಆಧರಿಸಿವೆ. ಗಾಂಧೀಜಿಯೂ ತಮ್ಮ ಆತ್ಮಕಥೆಯನ್ನು ಸತ್ ನ ಶೋಧನೆಯೇ ನನ್ನ‌ ಜೀವನದ ಗುರಿ ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ವನವಾಸಿಗಳಾದ ಪಾಂಡವರ ಘಟನೆಯೊಂದು ಬರುತ್ತದೆ. ಸಿಟ್ಟಿನಲ್ಲಿದ್ದ ನಕುಲ ಕಟ್ಟಿಗೆಗಳನ್ನು ರಾಶಿ ರಾಶಿಯಾಗಿ ಒಡೆದು ಹಾಕುತ್ತಾನೆ. ಅದನ್ನು ನೋಡಿದ ಯುಧಿಷ್ಠಿರ,” ನಮ್ಮ‌ಅಗತ್ಯಕ್ಕಿಂತ ಜಾಸ್ತಿ ಒಂದು ಹುಲ್ಲು ಕಡ್ಡಿಯನ್ನು ಬಳಸುವುದೂ ಅಧರ್ಮ” ಎನ್ನುತ್ತಾನೆ. ಗಾಂಧೀಜಿಯೂ ಪ್ರಕೃತಿಯು ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸಬಲ್ಲುದು; ದುರಾಸೆಗಳನ್ನಲ್ಲ ಎನ್ನುತ್ತಾರೆ.

1947 ರಲ್ಲಿ ಭಾರತದಲ್ಲಿ‌ ಮತೀಯ ಗಲಭೆಗಳು ಆದಾಗ ವಿನ್‌ಸ್ಟನ್ ಚರ್ಚಿಲ್,” ಭಾರತದಲ್ಲಿ ಇನ್ನು ಸದಾ ಕಾಲ ರಕ್ತಪಾತವೇ ಆಗಲಿದೆ” ಎಂದಿದ್ದರು.‌ ಚರ್ಚಿಲ್‌ಗೆ ಉತ್ತರಿಸಿದ ಗಾಂಧೀಜಿ,” ಭಾರತದಲ್ಲಿ ರಕ್ತಪಾತವೇ ಆದರೆ ಇಂಗ್ಲೆಂಡ್ ಹೇಗೆ ನೆಮ್ಮದಿಯಲ್ಲಿರುತ್ತದೆ?” ಎಂದು ಪ್ರಶ್ನಿಸುತ್ತಾರೆ.‌ ಗಾಂಧಿ ಯಾಕೆ ಹೀಗೆ ಹೇಳುತ್ತಾರೆ ಎಂದು ಥಟ್ಟನೆ ನಮಗೆ ಹೊಳೆಯಲು ಸಾಧ್ಯವಿಲ್ಲ.‌ ಆದರೆ ಕೊರೋನಾ ಬಂದಾಗ ಗಾಂಧಿ ಹೇಳಿದ್ದು ಏನು ಎಂದು ಅರ್ಥವಾಯಿತು. ರಾಷ್ಟ್ರಗಳು ಕೇವಲ ರಾಜಕೀಯ ಗಡಿರೇಖೆಗಳು. ಭೂಗೋಳಕ್ಕೆ ರಾಜಕೀಯ ಗಡಿರೇಖೆಗಳಿಲ್ಲ. ಚೀನಾವನ್ನು ದಾಟಿ ಕೊರೋನಾ ಇಡೀ ಜಗತ್ತಿಗೆ ಹೋಯಿತು. ಜಗತ್ತಿನ ಯಾವ ಮೂಲೆಯಲ್ಲಿ ಏನೇ ಆದರೂ ಅದರ ಪರಿಣಾಮಗಳು ಎಲ್ಲ ಕಡೆಗಳಲ್ಲೂ ಆಗುತ್ತವೆ ಎನ್ನುವುದು ನಿಸರ್ಗ ತತ್ವ.‌ ಈ ನಿಸರ್ಗ ತತ್ವದ ಮೂಲಕ ಗಾಂಧಿ ಜಗತ್ತನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಆದ್ದರಿಂದಲೇ ಅವರಿಗೆ ಬ್ರಿಟಿಷರನ್ನು ಕೂಡ ದ್ವೇಷಿಸದೆ ಬ್ರಿಟಿಷರನ್ನು ವಿರೋಧಿಸಲು ಸಾಧ್ಯವಾಯಿತು.

ಗಾಂಧೀಜಿ ವಕೀಲ ವೃತ್ತಿ ಮತ್ತು ಆಧುನಿಕ ವೈದ್ಯಕೀಯವನ್ನು ವಿರೋಧಿಸಿದ್ದರು. ವಕೀಲರು ಸುಳ್ಳು ಹೇಳುವುದನ್ನು ಕಲಿಸುತ್ತಾರೆ, ವೈದ್ಯರು ನಮ್ಮ‌ ದೇಹದ ಮೇಲೆ ನಾವು ಕಾಳಜಿ ಇಡದಂತೆ ಮಾಡುತ್ತಾರೆ ಎಂದು ಅವರ ವಾದ.‌ ಗಾಂಧೀಜಿಯವರ ಚಿಕಿತ್ಸಾ ಪದ್ಧತಿಗಳು ಮಣ್ಣಿನ ಚಿಕಿತ್ಸೆ ಮತ್ತು ಜಲ ಚಿಕಿತ್ಸೆಗಳೆರಡೇ ಆಗಿದ್ದವು.‌ ಇಲ್ಲಿಯೂ ಅವರು ನಿಸರ್ಗ ತತ್ವವನ್ನೆ ಅಳವಡಿಸಿಕೊಂಡಿದ್ದಾರೆ.

ಗಾಂಧೀಜಿಯವರ ನಿಸರ್ಗ ತತ್ವಗಳ ಬಹುದೊಡ್ಡ ಕಾಣ್ಕೆ ಇರುವುದು ಅವರ ಗ್ರಾಮ ಸ್ವರಾಜ್ಯ ಕಲ್ಪನೆಯಲ್ಲಿ.‌ ಮನುಷ್ಯ ಮೂಲತಃ ಒಳ್ಳೆಯವನು. ಅವನ ಒಳ್ಳೆಯತನವು ಪ್ರಕಟವಾಗುವ ಹಾಗೆ ಮಾಡುವುದು ಶಿಕ್ಷಣದ ಕೆಲಸ ಎನ್ನುವ ಗಾಂಧೀಜಿಯವರ ಚಿಂತನೆಯಲ್ಲಿ ತಾತ್ವಿಕವಾಗಿ ಜಾನ್ ಲಾಕ್ ಅವರ ‘ ನಿಸರ್ಗ ರಾಜ್ಯ’ ದ ಪರಿಕಲ್ಪನೆಯ ಇರುವಿಕೆಯನ್ನು ಕಾಣಬಹುದು.

ಮನುಷ್ಯನ ವಿಚಾರಕ್ಕೆ ಬಂದಾಗ ನಿಸರ್ಗ ತತ್ವಗಳೂ ಅವುಗಳ ಸಹಜತೆಗಿಂತ ಭಿನ್ನವಾದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.‌ ಉದಾಹರಣೆಗೆ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಹಿಡಿದು ತಿನ್ನುವುದು ನಿಸರ್ಗ ತತ್ವ.‌ ಆದರೆ ಹೊಟ್ಟೆ ತುಂಬಿದ ಹುಲಿ ಪಕ್ಕದಲ್ಲೆ ಜಿಂಕೆ ಇದ್ದರೂ ಅದನ್ನು ಕೊಂದು ಮಾಂಸ ಮಾಡಿ ಡಬ್ಬದಲ್ಲಿ ಹಾಕಿ ಮಾರುಕಟ್ಟೆಯಲ್ಲಿ ಮಾರುವುದಿಲ್ಲ. ಆದ್ದರಿಂದಲೇ ಜಿಂಕೆಯ ಸಂತತಿ ನಾಶವಾಗಲಿಲ್ಲ. ಆದರೆ ಮನುಷ್ಯನಿಗೆ ಬಂದಾಗ ಈ ಸ್ಥಿತಿ ಹೀಗೆಯೇ ಕಚ್ಛಾ ರೂಪದಲ್ಲಿ ಇರುವುದಿಲ್ಲ. ತಿನ್ನಲು ಬಳಸಿದರೆ ಧರ್ಮ. ಮಾರಾಟ ಮಾಡಿ ಹಣದ ದಂಧೆ ಮಾಡಲು ಬಳಸಿದರೆ ಅಧರ್ಮ ಎಂಬ ಅರ್ಥವನ್ನು ಪಡೆಯುತ್ತದೆ. ಇಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಎರಡು ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಋಗ್ವೇದದಲ್ಲಿ ಅಣಿ ಮಾಂಡವ್ಯನ ಕಥೆ ಬರುತ್ತದೆ. ” ನಮೋ ಅರ್ಭಕೇಭ್ಯಃ” ಎಂದು ಬರುವುದು ಅಲ್ಲಿಯೇ. ಬಾಲ್ಯದಲ್ಲಿ ಪ್ರಾಣಿ ಹಿಂಸೆ ಮಾಡಿದ್ದಕ್ಕಾಗಿ ಮಾಂಡವ್ಯನಿಗೆ ಯಮ ಶಿಕ್ಷೆ ಕೊಟ್ಟಾಗ,” ಆಗ ನಾನು ಬಾಲಕನಾಗಿದ್ದೆ. ನನಗೆ ಸರಿ ತಪ್ಪುಗಳ ಅರಿವಿರಲಿಲ್ಲ” ಎಂದು ಮಾಂಡವ್ಯ ಉತ್ತರಿಸುತ್ತಾನೆ. ಸಂಸ್ಕೃತಿಯು ಬಾಲ್ಯವನ್ನು ವಿಸ್ತರಿಸಲು ಬಯಸುತ್ತದೆ. ನಾಗರಿಕತೆಯು ಬಾಲ್ಯವನ್ನು ಕಡಿಮೆಗೊಳಿಸಿ ಬೌದ್ಧಿಕ ಮಾನವನನ್ನು ವಿಸ್ತರಿಸಲು ಬಯಸುತ್ತದೆ. ಪ್ರಾಮಾಣಿಕ ಮುಗ್ಧತೆಯು ಸಂಸ್ಕೃತಿಯಾಗಿ ನಿಂತರೆ, ಲೆಕ್ಕಚಾರದ ಬುದ್ಧಿವಂತಿಕೆಯು ನಾಗರಿಕತೆಯಾಗಿ ನಿಲ್ಲುತ್ತದೆ. ಸಂಸ್ಕೃತಿಯು ನಿಸರ್ಗದ ಪ್ರತಿನಿಧಿತ್ವವನ್ನು ಹೊಂದಿದೆ.

ಗಾಂಧೀಜಿಯವರ ‘ ಹಿಂದ ಸ್ವರಾಜ್’ ಅನ್ನು ನೋಡಿದರೆ ಅಥವಾ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡರೆ ಅವರ ನಿಸರ್ಗ ತತ್ವಗಳೂ ಅರ್ಥವಾಗುತ್ತವೆ. ಇದನ್ನು ಅರ್ಥ ಮಾಡಿಸುವುದು ತುಸು ಕಷ್ಟ; ಗೊತ್ತಾಗದಿದ್ದರೆ ಆಮೇಲೆ ಕೇಳಿ. ನಿಮಗೊಂದು ಉದಾಹರಣೆ ಕೊಡುತ್ತೇನೆ. ಗ್ರೀಕ್ ಸಾಹಿತ್ಯದಲ್ಲಿ ಡಯೋಜನಿಸ್ ಎಂದು ಒಬ್ಬ ಸಂತ ಬರುತ್ತಾನೆ. ಅವನ ಬಳಿ ಯಾವ ಆಸ್ತಿ, ಹಣ ಎಂತದೂ ಇಲ್ಲ. ಸಹಜವಾಗಿ ಬದುಕುವವನು. ನೀರು ಕುಡಿಯಲು ನೀರಿನ ಪಾತ್ರೆಯೊಂದು ಮಾತ್ರ ಅವನ ಬಳಿ ಇತ್ತು.

ಒಂದು ದಿನ ಡಯೋಜನಿಸ್ ನಡೆದು ಹೋಗುವಾಗ ಒಂದು ನಾಯಿ ಕೊಳದಿಂದ ನೀರು ಕುಡಿಯುವುದನ್ನು ನೋಡಿದ.‌ ಅದನ್ನು ನೋಡಿ ಡಯೋಜನಿಸ್,” ಈ ನಾಯಿ ಎಂಥ ವಿವೇಕಿ.‌ ನೀರು ಕುಡಿಯಬೇಕಾದರೆ ಪಾತ್ರೆಯ ಅಗತ್ಯ ಇಲ್ಲ ಎಂದು ಅದಕ್ಕೆ ಗೊತ್ತಿದೆ” ಎಂದುಕೊಂಡವನೇ ಅವನ ಬಳಿ ಇದ್ದ ನೀರಿನ ಪಾತ್ರೆಯನ್ನು ಎಸೆದ.

ಈ ಕಥೆಯನ್ನು ಹೇಳಿದ ಉದ್ದೇಶ ಏನೆಂದರೆ ನಾಯಿ, ಬೆಕ್ಕು, ದನ ಅವೆಲ್ಲಕ್ಕೂ ಅವುಗಳದೇ ಆದ ಜೀವನ ಪದ್ಧತಿ ಇದೆ. ಪ್ರಕೃತಿಗೂ ನಿಯಮವಿದೆ. ನೀರು ಕೆಳಕ್ಕೇ ಹರಿಯುತ್ತದೆ. ಬೆಂಕಿಯ ಜ್ವಾಲೆ ಮೇಲಕ್ಕೇ ಹೋಗುತ್ತದೆ. ಆದರೆ ಈ ನಿಯಮಗಳನ್ನು ಪಾಲಿಸಬೇಕು ಎಂದು ನಿರ್ದೇಶಿಸಲು ಅಲ್ಲಿ ಪೊಲೀಸರೊ, ನ್ಯಾಯಾಧೀಶರೋ, ಸರಕಾರದವರೊ ಇದ್ದಾರಾ? ಇಲ್ಲ. ಅಂದರೆ ನಿಸರ್ಗ ಸ್ವಯಂ ಶಿಸ್ತಿನಿಂದ ನಡೆಯುತ್ತಾ ಅದರದೆ ನಿಯಮದಂತೆ ಸಾಗುತ್ತದೆ. ಹಾಗಾದರೆ ಕಳ್ಳತನ ಮಾಡಬೇಡ, ಅತ್ಯಾಚಾರ ಮಾಡಬೇಡ, ಮೋಸ ಮಾಡಬೇಡ ಎಂದು ಹೇಳಲು ಮನುಷ್ಯನಿಗೆ ಮಾತ್ರ ಪೊಲೀಸು, ನ್ಯಾಯಾಂಗ, ಸರಕಾರ ಎಲ್ಲ ಯಾಕೆ; ಇವನಿಗೇ ಗೊತ್ತಿಲ್ವ ಇದನ್ನೆಲ್ಲ ಮಾಡಬಾರದೆಂದು. ಅಂದರೆ ಮನುಷ್ಯರು ಸ್ವಯಂ ಶಿಸ್ತನ್ನು ಹೊಂದಿಲ್ಲ. ಆದ್ದರಿಂದ ಪೊಲೀಸರ ಭಯಕ್ಕಾಗಿ ಮನುಷ್ಯರು ನಿಯಮಗಳನ್ನು ಪಾಲಿಸುತ್ತಾರೆ.‌ ಪ್ರಭುತ್ವದ ಭಯದಿಂದ ನಿಯಮವನ್ನು ಪಾಲಿಸುವಂತಾಗಬಾರದು, ಸ್ವಯಂ ಶಿಸ್ತಿನಿಂದಲೇ ಜನ ನಿಯಮಗಳನ್ನು ಪಾಲಿಸುವಂತಾಗಬೇಕು ಎನ್ನುವುದು ಗಾಂಧೀಜಿಯವರ ತತ್ವ. ಇದು ನಿಸರ್ಗ ತತ್ವವೇ. ” ಒಬ್ಬ ಮಹಿಳೆ ನಡು ರಾತ್ರಿಯಲ್ಲಿ ಒಂಟಿಯಾಗಿ ಓಡಾಡಲು ಸಾಧ್ಯವಾಗಬೇಕು” ಎನ್ನುವ ಗಾಂಧೀಜಿಯವರ ಆಶಯ ಈಡೇರುವುದು ಸ್ವಯಂ ಶಿಸ್ತಿನ ಸಮಾಜದಲ್ಲಿ.‌ ಪೊಲೀಸರ ಕಾವಲಿನಲ್ಲಿ‌ ನಡೆಯುವ ಸಮಾಜದಲ್ಲಿ ಇದು ಸಾಧ್ಯವಾಗುವುದಿಲ್ಲ. ಪೊಲೀಸರ ಕಣ್ಣು ತಪ್ಪಿಸಿಯಾದರೂ ಕೆಟ್ಟ ಕೆಲಸಗಳು ನಡೆಯುತ್ತವೆ.‌ ಆದರೆ ಸ್ವಯಂ ಶಿಸ್ತಿಗೆ ಬದ್ಧವಾದ ಸಮಾಜದಲ್ಲಿ ಕೆಟ್ಟದ್ದು ನಡೆಯುವುದಿಲ್ಲ.‌

ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕೇವಲ ಆರ್ಥಿಕ ಪರಿಕಲ್ಪನೆ ಅಲ್ಲ.‌ ಆಡಳಿತಾಧಿಕಾರವನ್ನು ಗಾಂಧೀಜಿ ಪ್ರಬುತ್ವದ ಕೈಯಿಂದ ಜನರ ಕೈಗೆ ಕೊಡುತ್ತಾರೆ.‌ ಗ್ರಾಮದ ಜನರು ತಮ್ಮನ್ನು ತಾವೇ ಆಳಿಕೊಳ್ಳುವುದೇ ಗ್ರಾಮ ಸ್ವರಾಜ್ಯ.‌ ಪುರಾತನ ಭಾರತದ ಗಣರಾಜ್ಯಗಳ ಹಾಗೆ, ಅಲ್ಲಿ ತಮಗೆ ಬೇಕಾದ ನಿಯಮವನ್ನು ಜನರೇ ಮಾಡಿಕೊಂಡು ಅವರೇ ಪಾಲಿಸುತ್ತಾರೆ.‌ ಗ್ರಾಮ ಸ್ವರಾಜ್ಯ ಕೇವಲ ಆರ್ಥಿಕ ಪರಿಕಲ್ಪನೆಯಲ್ಲ.‌ ಅದಕ್ಕಿಂತ ಹೆಚ್ಚಾಗಿ ಅದು ಸ್ವಯಂ ಶಿಸ್ತಿನ ಪರಿಕಲ್ಪನೆ.‌ ಈ ಸ್ವಯಂ‌ ಶಿಸ್ತು ಎನ್ನುವುದು ನಿಸರ್ಗ ತತ್ವವೇ ಆಗಿದೆ.

ಗಾಂಧೀಜಿಯವರ ಚಿಂತನೆಯಲ್ಲಿ ಸ್ವಯಂ ಶಿಸ್ತು ಉಳಿದೆಲ್ಲ ಕ್ರಿಯೆಗಳ ಆಧಾರ. ಸ್ವಯಂ ಶಿಸ್ತಿನ ಸಾಧನೆಯ ಮಾರ್ಗ ಸ್ವಯಂ ನಿಯಂತ್ರಣ. ಈ ಸ್ವಯಂ ನಿಯಂತ್ರಣದ ಪರಿಕಲ್ಪನೆಯು ಬ್ರಹ್ಮಚರ್ಯಕ್ಕೆ ಮಾತ್ರ ಸೀಮಿತವಾದುದಾಗಿರಲಿಲ್ಲ.‌ ಆದರೆ ಬ್ರಹ್ಮಚರ್ಯವು ಸ್ವಯಂ ನಿಯಂತ್ರಣಕ್ಕೆ ಬಲಿಷ್ಠ ಶಕ್ತಿಯನ್ನು ಒದಗಿಸುತ್ತದೆ.

ಈ ಸ್ವಯಂ ನಿಯಂತ್ರಣದ ಉಪಯೋಗ, ಆಸೆಗಳ ನಿಯಂತ್ರಣವಾಗಿರುತ್ತದೆ. ಆಸೆಗಳ ನಿಯಂತ್ರಣ ಆಗುತ್ತಾ ಹೋದ ಹಾಗೆ ನಿಸರ್ಗದ ಬಳಕೆ ಕಡಿಮೆಯಾಗುತ್ತದೆ. ನಿಸರ್ಗದ ಬಳಕೆ ಕಡಿಮೆಯಾದಾಗ ನಿಸರ್ಗದ ಸಂರಕ್ಷಣೆ ಜಾಸ್ತಿಯಾಗುತ್ತದೆ. ಅಂತಿಮವಾಗಿ ನಿಸರ್ಗದಿಂದ ಮನುಷ್ಯ ಪ್ರತ್ಯೇಕವಾಗದೆ ನಿಸರ್ಗದೊಂದಿಗೆ ಬದುಕಲು ಸಾಧ್ಯವಾಗುತ್ತದೆ.

ಈ ನಿಸರ್ಗ ತತ್ವಕ್ಕೆ ಆಧಾರವಾಗಿ ಧಾರ್ಮಿಕ ತತ್ವಗಳ‌ ಇರುವಿಕೆಯನ್ನು ಗುರುತಿಸಬಹುದು. ಜೈನ ಧರ್ಮದಲ್ಲಿ
‘ ಸಮವಸರಣ’ ಎಂಬ ಪರಿಕಲ್ಪನೆ ಬರುತ್ತದೆ. ಸಮವಸರಣದಲ್ಲಿ ಮನುಷ್ಯನೂ ಸೇರಿದ ಹಾಗೆ ಸೃಷ್ಟಿಯ ಎಲ್ಲ ಜೀವಿಗಳೂ ‘ ಇಂದ್ರ’ ಸಭೆಯಲ್ಲಿ ಸೇರುತ್ತವೆ. ಅಂದರೆ ಈ ತತ್ವದ ಪ್ರಕಾರ ಮನುಷ್ಯನಿಗೆ ಉಳಿದೆಲ್ಲ ಜೀವಿಗಳೊಂದಿಗೆ ಅಸ್ತಿತ್ವ ಇರುವುದೇ ಹೊರತು ಪ್ರತ್ಯೇಕ ಸ್ವತಂತ್ರ ಅಸ್ತಿತ್ವ ಇಲ್ಲ. ಆದರೆ ವಾಸ್ತವದಲ್ಲಿ ಮನುಷ್ಯನಿಗೆ ಎರಡು ರೀತಿಯ ಅಸ್ತಿತ್ವಗಳಿವೆ. ಮಾನವ ಸಮಾಜದಲ್ಲಿ ಸಮಾಜ ಜೀವಿಯಾಗಿ ಒಂದು ಅಸ್ತಿತ್ವ.‌ ನಿಸರ್ಗದ ಒಂದು ಜೀವಿಯಾಗಿ ನಿಸರ್ಗದೊಂದಿಗೆ ಒಂದು ಅಸ್ತಿತ್ವ. ಇದರಲ್ಲಿ ಮಾನವ ಸಮಾಜ ಎಂಬ ರೇಖೆಯನ್ನು ಅಳಿಸಿ ಹಾಕಿದಾಗ ಅಥವಾ ಮಬ್ಬಾಗಿಸಿದಾಗ ಮನುಷ್ಯನಿಗೆ ನೈಸರ್ಗಿಕ ಅಸ್ತಿತ್ವ ಒಂದೇ ಉಳಿಯುತ್ತದೆ.‌ ಈ ನಿಟ್ಟಿನಲ್ಲಿ ಜೈನ ಧರ್ಮ ಬಹಳ ಶೋಧನೆಯನ್ನು ನಡೆಸಿದೆ. ಬೌದ್ಧ ಧರ್ಮದಲ್ಲೂ ಇದೇ ತಾತ್ವಿಕ ನಿಲುವನ್ನು ಕಾಣಬಹುದು.‌ ಸನಾತನ ಧರ್ಮದಲ್ಲೂ ಇದೇ ನಿಲುವು ಇದೆ. ಅದು ‘ ಏಕ ಅಸ್ತಿತ್ವ’ ವನ್ನು ಬಹಳ ದೊಡ್ಡ ಮಟ್ಟಕ್ಕೆ ಒಯ್ಯುತ್ತದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಯಾಜ್ಞವಲ್ಕ್ಯ- ಮೈತ್ರೇಯಿ ಸಂವಾದದಲ್ಲಿ,” ನಾನು ನಿನ್ನನ್ನು ಪ್ರೀತಿಸುವುದು ನಿನ್ನ ಮೇಲೆ ನನಗೆ ಪ್ರೀತಿ ಇರುವುದರಿಂದ ಅಲ್ಲ. ಬದಲು ನನಗೆ ನನ್ನ ಮೇಲೆ ಪ್ರೀತಿ ಇರುವುದರಿಂದ ನೀನು ನನಗೆ ಬೇಕಾದವಳಿರುವುದರಿಂದ ನಿನ್ನನ್ನು ನಾನು ಪ್ರೀತಿಸುತ್ತೇನೆ. ಭಕ್ತ ಭಗವಂತನನ್ನು ಪ್ರೀತಿಸುವುದು ಭಗವಂತನ‌ ಮೇಲಿನ ಪ್ರೀತಿಯಿಂದಲ್ಲ. ಭಕ್ತನಿಗೆ ತನ್ನ ಮೇಲೆ ಪ್ರೀತಿ ಇರುವುದರಿಂದ ಭಕ್ತನಿಗೆ ಭಗವಂತನ ಅಗತ್ಯವಿರುವುದರಿಂದ ಭಗವಂತನನ್ನು ಪ್ರೀತಿಸುತ್ತಾನೆ. ಹಾಗೆಯೇ ನಾವು ವಿಶ್ವವನ್ನು ಪ್ರೀತಿಸಬೇಕಾದ್ದು ವಿಶ್ವದ ಮೆರಲಿನ ಪ್ರೀತಿಗಾಗಿ ಅಲ್ಲ. ನಮ್ಮ‌ ಮೇಲೆ ಪ್ರೀತಿ ಇರುವುದರಿಂದ, ವಿಶ್ವದ ಇರುವಿಕೆಯಿಂದಲೇ ನಾವೂ ಇರುವುದರಿಂದ ವಿಶ್ವವನ್ನು ಪ್ರೀತಿಸಬೇಕು” ಎನ್ನುತ್ತಾರೆ. ಅಂದರೆ ಇಡೀ ವಿಶ್ವದ ಒಂದಂಶವಾಗಿ ಮನುಷ್ಯ ತನ್ನನ್ನು ತಾನು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಇಲ್ಲಿನ ತತ್ವವಾಗಿದೆ. ಉದಾಹರಣೆಗೆ ಮನುಷ್ಯ ಮತ್ತು ನಿಸರ್ಗವನ್ನು ಪ್ರತ್ಯೇಕವಾಗಿ ಅರ್ಥ ಮಾಡಿಕೊಂಡಾಗ, ಸಸ್ಯಗಳ ಆಹಾರ ತಯಾರಿಕೆಗೆ ಇಂಗಾಲದ ಡೈ ಆಕ್ಸೈಡ್ ಬೇಕು. ಪ್ರಾಣಿಗಳ ಉಸಿರಾಟದ ಉತ್ಪನ್ನವಾಗಿ ಅದು ದೊರೆಯುತ್ತದೆ ಹಾಗೂ ಸಸ್ಯಗಳು ತ್ಯಜಿಸುವ ಆಮ್ಲಜನಕವು ಪ್ರಾಣಿಗಳ ಉಸಿರಾಟಕ್ಕೆ ಬೇಕು, ಆದ್ದರಿಂದ ಸಸ್ಯ ಸಂರಕ್ಷಣೆ ಮಾಡಬೇಕು ಇತ್ಯಾದಿ ಇತ್ಯಾದಿಯಾಗಿ ಅನಿಸುತ್ತದೆ. ಬದಲಿಗೆ ಮನುಷ್ಯನೂ ನಿಸರ್ಗದ ಭಾಗವೇ ಎಂದು ಅರ್ಥ ಮಾಡಿಕೊಂಡಾಗ ಸಸ್ಯಗಳ ಅರ್ಧ ಜೀವ ನಮ್ಮ‌ ಬಳಿ ಇದೆ, ನಮ್ಮ ಅರ್ಧ ಜೀವ ಸಸ್ಯಗಳ ಬಳಿ ಇದೆ ಎಂಬ ಅರಿವು ಹುಟ್ಟುತ್ತದೆ. ಆಗ ಸಸ್ಯಗಳನ್ನು ನಮ್ಮ ಜೀವನದ ಭಾಗವಾಗಿಯೇ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ.

ಹೀಗೆ, ಗಾಂಧೀಜಿಯವರ ನಿಸರ್ಗ ತತ್ವಗಳು ಎಲ್ಲವನ್ನೂ ಇಡಿಯಾಗಿಯೆ ಗ್ರಹಿಸುವ ಅವರ ಗ್ರಹಿಕೆಯ ಕ್ರಮದಲ್ಲಿದೆ.‌ ಗಾಂಧೀಜಿ ಯಾವುದನ್ನೂ ಬಿಡಿಬಿಡಿಯಾಗಿ ನೋಡುವುದಿಲ್ಲ.‌ ಸಮಗ್ರವಾಗಿಯೇ ಅರ್ಥ ಮಾಡಿಕೊಳ್ಳುವುದು ಅವರ ಕ್ರಮ.‌ ಆದ್ದರಿಂದ ಗಾಂಧೀಜಿಯವರ ಚಿಂತನೆಗಳು ಎಂದು ಗುರುತಿಸಬಹುದೆ ಹೊರತು ಗಾಂಧೀಜಿಯವರ ಆರ್ಥಿಕ ಚಿಂತನೆಗಳು, ಸಾಮಾಜಿಕ ಚಿಂತನೆಗಳು, ರಾಜಕೀಯ ಚಿಂತನೆಗಳು ಎಂದೆಲ್ಲ ಪ್ರತ್ಯೇಕಿಸಿ ನೋಡಲು ಆಗುವುದಿಲ್ಲ.‌ ಎಲ್ಲವೂ ಪರಸ್ಪರ ಸಂಬಂಧ ಹೊಂದಿದವುಗಳು. ಗಾಂಧೀಜಿಯವರ ಆರ್ಥಿಕತೆ ಸಂಸ್ಕೃತಿಯೊಂದಿಗೆ, ಸಂಸ್ಕೃತಿ ನಿಸರ್ಗದೊಂದಿಗೆ, ನಿಸರ್ಗ ಧರ್ಮದೊಂದಿಗೆ, ಧರ್ಮ‌ ನಿಸರ್ಗದೊಂದಿಗೆ ಹೀಗೆ ಸಂಬಂಧ ಸ್ಥಾಪಿಸಿಕೊಳ್ಳುತ್ತಾ ಹೋಗುತ್ತವೆ. ಅದಕ್ಕೇ ನೋಡಿ ಬ್ರಿಟಿಷರು ” ನಾವು ಬರುವ ವರೆಗೆ ಭಾರತದಲ್ಲಿ ರಾಷ್ಟ್ರೀಯ ಏಕತೆಯೇ ಇರಲಿಲ್ಲ” ಎಂದು ಶುದ್ಧ ರಾಜಕೀಯ ಪರಿಭಾಷೆಯಲ್ಲಿ ಹೇಳಿದಾಗ ಗಾಂಧೀಜಿ,” ಹಾಗೇನಿಲ್ಲ.‌ ನೀವು ಬರುವ ಸಾವಿರಾರು ವರ್ಷಗಳ ಮೊದಲೇ ದೇಶದ ಎಲ್ಲ ಮೂಲೆಗಳಲ್ಲೂ ಇದ್ದ ಧಾರ್ಮಿಕ ಕೇಂದ್ರಗಳು ನಮ್ಮಲ್ಲಿ ಏಕತೆಯನ್ನು ತಂದಿದ್ದವು” ಎಂದು ಧಾರ್ಮಿಕ‌ ಪರಿಭಾಷೆಯಲ್ಲಿ ಉತ್ತರಿಸುತ್ತಾರೆ. ಗಾಂಧೀಜಿ ಬಹಳ ಸಂಕೀರ್ಣ. ಯಾವ ನೆಲೆಯಲ್ಲಿ ನೋಡಿದರೂ ಅವರು ತನಗೆ ವಿರೋಧಿ ಎಂದು ಅನಿಸಿಬಿಡುತ್ತಾರೆ. ಎಲ್ಲ ನೆಲೆಗಳನ್ನು ಬಿಟ್ಟು ಮುಕ್ತವಾಗಿ ನೋಡಿದಾಗ ಮಾತ್ರ ಗಾಂಧಿ ಅರ್ಥವಾಗಲು ಶುರುವಾಗುವುದು. ಅವರು ಶುದ್ಧ ಸಾಂಸ್ಥಿಕ ಧಾರ್ಮಿಕನಾಗಿ ಕಾಣಿಸುತ್ತಾರೆ. ತನ್ನ ಧರ್ಮವನ್ನು ತಾನೇ ಶೋಧಿಸುವ ಶೋಧಕನಾಗಿ ಕಾಣಿಸುತ್ತಾರೆ. ಇತರ ಧರ್ಮಗಳಿಂದ ಪ್ರೇರಿತರಾಗಿಯೂ ಕಾಣಿಸುತ್ತಾರೆ. ಎಲ್ಲ ಮತಧರ್ಮಗಳನ್ನು ತೊರೆದವರಾಗಿಯೂ ಕಾಣಿಸುತ್ತಾರೆ. ಆದರೆ ನಿಸರ್ಗ ತತ್ವಗಳಲ್ಲಿ ಈ ರೀತಿ ಇಲ್ಲ. ನಿಸರ್ಗದೊಂದಿಗೆ ಒಂದು ಭಾಗವಾಗಿಯೇ ಬಾಳಬೇಕು ಎಂಬ ಅವರ ನಿಲುವಿನಲ್ಲಿ ಭಿನ್ನತೆ ಇಲ್ಲ.

ಇದು ವರೆಗೆ ಒಂದಷ್ಟು ವಿಚಾರವನ್ನು ಹರಿಯಬಿಟ್ಟಿದ್ದೇನೆ.‌ ಇನ್ನು ಸಂವಾದದಲ್ಲಿ ಮಾತನ್ನು ಮುಂದುವರಿಸುವ ಎಂದು ಹೇಳಿ ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ.

ಗಾಂಧಿ: ಧರ್ಮ ಮತ್ತು ನೈಸರ್ಗಿಕ ತತ್ವಗಳು

Leave a Reply

Your email address will not be published. Required fields are marked *