ಮುಂಗಳೂರಿನ ಗಾಂಧಿ ಶಾಂತಿ ಪ್ರತಿಷ್ಠಾನದವರು ನಡೆಸಿದ ಕಾರ್ಯಕ್ರಮದಲ್ಲಿ ಮಾಡಿದ ಉಪನ್ಯಾಸ.

[ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ]

– ಅರವಿಂದ ಚೊಕ್ಕಾಡಿ.

ಸಭೆಯ ಅಧ್ಯಕ್ಷರೆ ಮತ್ತು ಎಲ್ಲ ಸ್ನೇಹಿತರೆ,

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ ಎಂಬ ವಿಚಾರದಲ್ಲಿ ಪ್ರಜಾಪ್ರಭುತ್ವ ಎಂದರೇನು ಮತ್ತು ಗಾಂಧಿ ಮಾರ್ಗ ಎಂದರೇನು ಎನ್ನುವುದು ಬಹಳ ಮುಖ್ಯ ವಿಚಾರಗಳಾಗಿವೆ.

ನಿಜವಾದ ಪ್ರಜಾಪ್ರಭುತ್ವ ಎಂದರೆ ಪ್ರತ್ಯಕ್ಷ ಪ್ರಜಾಪ್ರಭುತ್ವ.‌ ಪುರಾತನ ಭಾರತದ ಗಣರಾಜ್ಯಗಳ ಹಾಗೆ. ಎಲ್ಲ ತೀರ್ಮಾನಗಳನ್ನೂ ಜನರೆಲ್ಲ ಒಂದೇ ಕಡೆ ಸೇರಿ ತೆಗೆದುಕೊಳ್ಳುವುದಾಗಿದೆ. ಸ್ವಾರಸ್ಯವೆಂದರೆ ಬದಲಾದ ಸ್ವರೂಪದಲ್ಲಿ ಗಾಂಧಿ ಮಾರ್ಗದ ಅತ್ಯಂತಿಕ ಗುರಿಯೂ ಕೂಡ ಅದೇ.‌ ಗಾಂಧೀಜಿಯವರ ಗ್ರಾಮ ಸ್ವರಾಜ್ಯದಲ್ಲಿ ಪ್ರತಿಯೊಂದು ಗ್ರಾಮವೂ ಸ್ವಾಯತ್ತ ಆಗುತ್ತದೆ. ಗ್ರಾಮದ ಜನರೆಲ್ಲ ಸೇರಿದ ಗ್ರಾಮ ಸಭೆಯೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಸ್ವರಾಜ್ಯದಲ್ಲಿ ಪೊಲೀಸರ ಅಥವಾ ನ್ಯಾಯಾಲಯದ ಅಥವಾ ಆಡಳಿತದ ಭಯದಿಂದ ಕಾನೂನು ಪಾಲನೆ ಆಗುವುದಿಲ್ಲ. ಸ್ವಯಂ ಶಿಸ್ತಿನಿಂದ ನೈತಿಕತೆಯ ಅರಿವಿನಿಂದ ಕಾನೂನು ಪಾಲನೆ ಆಗುತ್ತದೆ. ಆದರೆ ಈ ಗ್ರಾಮ ಸ್ವರಾಜ್ಯವಿನ್ನೂ ಬಹುದೂರದಲ್ಲಿದೆ, ನನ್ನ ಜೀವಿತಾವಧಿಯಲ್ಲಿ ನಾನು ಅದನ್ನು ಕಾಣಲು ಆಗುವುದಿಲ್ಲ ಎಂಬ ಯಾತನಾಮಯವಾದ ಅರಿವು ನನಗಿದೆ ಎಂದು ಸ್ವತಃ ಗಾಂಧೀಜಿಯವರೇ ಹೇಳಿದ್ದಾರೆ.

ಇವತ್ತು ನಾವಿರುವುದು ಪ್ರತ್ಯಕ್ಷ ಪ್ರಜಾಪ್ರಭುತ್ವದಲ್ಲಲ್ಲ.‌ ಜನರೇ ನಡೆಸುವ ಆಡಳಿತದಲ್ಲೂ ಅಲ್ಲ.‌ ಸಂವಿಧಾನದ ಆಡಳಿತವನ್ನು ಜನರ ಪ್ರತಿನಿಧಿಗಳು ನಡೆಸುವ ಪರೋಕ್ಷ ಪ್ರಜಾಪ್ರಭುತ್ವದಲ್ಲಿ.‌ ಸಂವಿಧಾನದ ಮೂಲ ತತ್ವಗಳನ್ನು ಬದಲಿಸುವಂತಿಲ್ಲ. ಇದರ ಬಗ್ಗೆ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ” ನಾವು ಯಾವುದನ್ನು ರಾಷ್ಟ್ರೀಯತೆ ಎಂದುಕೊಂಡಿದ್ದೇವೆಯೋ ಅದನ್ನೆ ಮುಂದಿನ ಎಲ್ಲ ತಲೆಮಾರುಗಳೂ ಒಪ್ಪುತ್ತವೆಯೆ?” ಎಂಬ ಪ್ರಶ್ನೆ ಎತ್ತಿದ್ದರು. ಸಂವಿಧಾನ ರಚನಾ ಸಭೆ ಫೈನಲಿ ಡಿಸೈಡೆಡ್ ಎಂಬ ತೀರ್ಮಾನ ತೆಗೆದುಕೊಳ್ಳದಿದ್ದರೆ ವಿವೇಕ ತೀರಾ ದುರ್ಬಲವಾಗಿರುವ ಈ ದಿನಗಳ ಪರಿಸ್ಥಿತಿ ವಿಪರೀತ ಬಿಗಡಾಯಿಸುತ್ತಿತ್ತು. ಆ ವಿಚಾರ ಬೇರೆ.

ಬ್ರಿಟಿಷ್ ಪ್ರಜಾಪ್ರಭುತ್ವ ನಮಗಿಂತ ತುಸು ಜಾಸ್ತಿ ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವ.‌ ಅಲ್ಲಿ ಅಲಿಖಿತ ಸಂವಿಧಾನವಿದೆ. ಜನಪ್ರತಿನಿಧಿಗಳು ಸ್ವಯಂ ಶಿಸ್ತಿನಿಂದ ತಾವು ರೂಪಿಸಿಕೊಂಡ ನಂಬಿಕೆಯ ಸಂವಿಧಾನಕ್ಕೆ ಬದ್ಧರು. ಯಾವ ವಿಧಿನಿಯಮ ಏನನ್ನು ಹೇಳುತ್ತದೆ ಎಂದು ಕೂದಲು ಸೀಳುವ ವಾದಗಳು ಅಲ್ಲಿ ಅಗತ್ಯ ಬರುವುದಿಲ್ಲ. ಮತ್ತು ಅಲ್ಲಿನ ಅತ್ಯುನ್ನತ ನ್ಯಾಯಾಂಗವಾದ ಹೌಸ್ ಆಫ್ ಲಾರ್ಡ್ಸ್ ಒಂದು ಪ್ರತಿನಿಧಿ ಸಭೆಯಾಗಿದೆ.‌

ಭಾರತದ ಪ್ರಜಾಪ್ರಭುತ್ವ ಲಿಖಿತ ಸಂವಿಧಾನದಿಂದ ನಡೆಯುತ್ತದೆ. ವರ್ತಮಾನದ ಸನ್ನಿವೇಶವನ್ನು ನೀವೇ ನೋಡುತ್ತಿದ್ದೀರಿ; ಪರಸ್ಪರ ವಿರುದ್ಧ ಅಭಿಪ್ರಾಯ ಉಳ್ಳವರೆಲ್ಲರೂ ತಮ್ಮ ಅಭಿಪ್ರಾಯವೇ ಸಂವಿಧಾನದ ಆಶಯ ಎಂದು ಸಂವಿಧಾನವನ್ನು ವ್ಯಾಖ್ಯಾನಿಸುತ್ತಿದ್ದಾರೆ.‌ ಉದಾಹರಣೆಗೆ ಹೇಳುವುದಾದರೆ ಯಾವುದೇ ಜಾತಿ, ಧರ್ಮ, ವರ್ಗ, ವರ್ಣಗಳನ್ನು ನಿಂದಿಸಬಾರದು ಎಂದು ಸಂವಿಧಾನವು ಹೇಳಿದೆ ಎಂದರೆ ನಮ್ಮ ಪ್ರಾಜ್ಞರು, ಬುದ್ಧಿಜೀವಿಗಳು, ವಿದ್ವಾಂಸರುಗಳ ಪ್ರಕಾರ ಅವರಿಗೆ ಆಗದ ಸಮುದಾಯವನ್ನು ನಿಂದಿಸಬಹುದು ಮತ್ತು ಅವರಿಗೆ ಬೇಕಾದ ಸಮುದಾಯವನ್ನು ನಿಂದಿಸತಕ್ಕದ್ದಲ್ಲ ಎಂದು ಅರ್ಥ ವಿವರಣೆ ಸಿಗುತ್ತದೆ. ಅಂದರೆ ನಮ್ಮಲ್ಲಿ ವಿದ್ವಾಂಸರಲ್ಲೆ ಬೇಸಿಕ್ ಸ್ವಯಂ ಶಿಸ್ತು ಕಳೆದುಹೋಗಿರುವುದರ ಸೂಚನೆ ಇದು. ಕಟ್ಟ ಕಡೆಗೆ ಸಂವಿಧಾನವನ್ನು ಅರ್ಥೈಸಬೇಕಾಗಿರುವ ಮತ್ತು ಸಂವಿಧಾನದ ಮಹಾನ್ ಸಂರಕ್ಷಕನಾಗಿರುವ ಸರ್ವೋಚ್ಛ ನ್ಯಾಯಾಲಯವು ಪ್ರತಿನಿಧಿ ಸಭೆ ಅಲ್ಲ.‌ ನೇಮಕಾತಿಗೊಂಡ ನ್ಯಾಯಾಂಗೀಯ ತಜ್ಞರ ಸಭೆಯಾಗಿದೆ.

ಇಷ್ಟಾಗಿಯೂ ನಮ್ಮಲ್ಲಿನ ಪರೋಕ್ಷ ಪ್ರಜಾಪ್ರಭುತ್ವವು ಚುನಾವಣೆಗಳ ಮೂಲಕ ಉಳಿದಿದೆ. ಇದನ್ನು ನಿರಾಶೆಯಿಂದ ಹೇಳುತ್ತಿಲ್ಲ.‌ ಚುನಾವಣೆಯು ಪರೋಕ್ಷ ಪ್ರಜಾಪ್ರಭುತ್ವದ ಪ್ರಬಲ ಆಧಾರ ಸ್ತಂಭವೇ ಆಗಿದೆ.

ರಾಜಕೀಯ ಪ್ರಜಾಪ್ರಭುತ್ವವು ಬಲಗೊಳ್ಳುವುದು ಸಾಮಾಜಿಕ ಪ್ರಜಾಪ್ರಭುತ್ವದ ಮೂಲಕ.‌ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಪ್ರಜಾಸತ್ತಾತ್ಮಕ ಮನೋಧರ್ಮ‌ ಇದೆ ಎನ್ನುವುದು ಮುಖ್ಯವಾಗಿದೆ. ಈ ವಿಚಾರಕ್ಕೆ ಬಂದಾಗ ಗಾಂಧಿ ಮಾರ್ಗ ಮಹತ್ವ ಪಡೆಯುತ್ತದೆ.

ಅಹಿಂಸೆಯನ್ನು ಪ್ರಾಯೋಗಿಕವಾಗಿಯೇ ಅನುಷ್ಠಾನಕ್ಕೆ ತಂದವರು ಗಾಂಧೀಜಿ.‌ ಅದರಿಂದ ಕೆಲವೊಂದು ನಷ್ಟಗಳೂ ಆಗಿವೆ ನಿಜ.‌ ಆದರೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅತೀ ಮಹತ್ವದ ತತ್ವ ಅಹಿಂಸೆ. ಪ್ರಜಾಪ್ರಭುತ್ವವು ಉಳಿದೆಲ್ಲ‌ ಪ್ರಭುತ್ವಕ್ಕಿಂತ ಭಿನ್ನವಾಗಿ ಉಳಿಯುವುದು ಅಹಿಂಸೆಯ ತತ್ವದಲ್ಲಿ.‌ ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಮಾತಿನ ಶಕ್ತಿಗೆ ಅಪಾರ ಮಹತ್ವವಿದೆ.‌ ಕೋಟಿಗಳ ಲೆಕ್ಕದಲ್ಲಿ ಖರ್ಚಾದರೂ ಸರಿಯೇ ಎಂದು ಸಂಸತ್ತು ಮತ್ತು ವಿಧಾನ ಮಂಡಲಗಳೆಂಬ ಮಾತಿನ ಸಭೆಗಳಿವೆ. ಸಮಸ್ಯೆಗಳು ಮಾತಿನ ಮೂಲಕವೇ ಪರಿಹಾರವಾಗಬೇಕೆಂಬುದು ಅದರ ಆಶಯವಾಗಿದೆ.‌ ಯಾಕೆ ಮಾತಿನ ಮೂಲಕ ಪರಿಹಾರವಾಗಬೇಕು? ಮಾತಿನ ಮೂಲಕ ಪರಿಹಾರವಾದಾಗ ಅಲ್ಲಿ ದೈಹಿಕ ಹಲ್ಲೆಗೆ ಅವಕಾಶ ಇರುವುದಿಲ್ಲ; ಅಂದರೆ ಅಹಿಂಸಾತ್ಮಕ ವಿಧಾನದ ಮೂಲಕ ಸಮಸ್ಯೆ ಬಗೆಹರಿಯಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ನಿಜವಾಗಿ ಗಾಂಧೀಜಿ ಈ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಬಹಳ ಒಲವಿರಿಸಿಕೊಂಡಿದ್ದವರಲ್ಲ. ಬ್ರಿಟಿಷ್ ಸಂಸತ್ತಿನ ಬಗ್ಗೆ ಒಮ್ಮೆ ಅವರು,” ಮಾತಾಡಿಕೊಂಡು ಸುಮ್ಮನೇ ಕಾಲಹರಣ ಮಾಡುವ ಜಾಗ” ಎಂದಿದ್ದರು.‌ ಗಾಂಧೀಜಿಗೆ ಕ್ರಿಯೆ ಬಹಳ ಮುಖ್ಯ. ಗಾಂಧೀಜಿಯ ಒಲವಿಗೆ ಸರಿಹೊಂದುವುದು ಅಧ್ಯಕ್ಷೀಯ ಪ್ರಜಾಪ್ರಭುತ್ವ. ನಿಜವಾಗಿ ಮಾತಿನ ಸಭೆಯ ಬಗ್ಗೆ ಬಹಳ ಕಾಳಜಿ ಇದ್ದವರು ಜವಾಹರ ಲಾಲ್ ನೆಹರೂ. ಆದರೆ ಗಾಂಧೀಜಿಯ ಅಹಿಂಸಾ ತತ್ವಕ್ಕೆ ಹೆಚ್ಚು ಪರವಾಗಿರುವುದು ಸಂಸದೀಯ ಪ್ರಜಾಪ್ರಭುತ್ವವೇ ಆಗಿದೆ. ಇದು ಗಾಂಧೀಜಿಯ ವೈಯಕ್ತಿಕ ಒಲವು ಮತ್ತು ತತ್ವಗಳ ನಡುವೆ ಏರ್ಪಡುವ ವಿರೋಧಾಭಾಸದ ಸಂಗತಿಯೂ ಆಗಿದೆ. ಇನ್ನೊಂದು ವಿರೋಧಾಭಾಸವಿದೆ. ಅದನ್ನು ಆಮೇಲೆ ಹೇಳುತ್ತೇನೆ.

ಪ್ರಜಾಪ್ರಭುತ್ವ ಫಂಕ್ಷನಿಂಗ್ ಆಗುವ ವಿಧಾನಗಳನ್ನು ಗಮನಿಸಿ. ನಮ್ಮಲ್ಲಿ‌ ‘ಜನ ಸ್ನೇಹಿ ಪೊಲೀಸ್’ ಎಂಬ ಪರಿಕಲ್ಪನೆ ಇದೆ.‌ ಯಾಕೆ ಜನ ಸ್ನೇಹಿ ಪೊಲೀಸ್? ಫಯರಿಂಗ್ ಮಾಡ್ಲಿಕಾವುದಿಲ್ವ ಎಂದು ಕೇಳಿದರೆ ಹೇಗಾದೀತು. ಸಮಸ್ಯೆ ಪರಿಹಾರವಾಗುತ್ತದಲ್ಲ. ಚೀನಾದಲ್ಲಿ ತೈನೆನ್ಮೇನ್ ಚೌಕದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕೊಂದು ಹಾಕಿದರು.‌ ಸಮಸ್ಯೆ ಪರಿಹಾರವಾಯಿತಲ್ಲ. ಸಮಸ್ಯೆ ಹೇಳುವವನೇ ಇಲ್ಲ. ಯು.‌ಎಸ್.‌ಎಸ್.‌ಆರ್. ನಲ್ಲಿ ಸ್ಟಾಲಿನ್ 25 ಲಕ್ಷ ಜನರ ಹತ್ಯೆ ಮಾಡಿದ್ದಾಯಿತು.‌ ಪ್ರಾಬ್ಲಮ್ ಸಾಲ್ವ್ಡ್. ಅಲ್ಲಿನದ್ದು ಕಮ್ಯುನಿಸ್ಟ್ ಪ್ರಭುತ್ವ. ಕಾರ್ಲ್ ಮಾರ್ಕ್ಸ್ ತತ್ವ ಬೇರೆ. ಕಾರ್ಲ್ ಮಾರ್ಕ್ಸ್ ಪ್ರಕಾರ ಪ್ರಾಲಿಟೇರಿಯೇಟ್ ಡಿಕ್ಟೇಟರ್‌ಶಿಪ್ ಬರಬೇಕು.‌ ಇಲ್ಲಿ ಬಂದದ್ದು ಪಾಲಿಟ್ ಬ್ಯೂರೋ ಡಿಕ್ಟೇಟರ್‌ಶಿಪ್.‌ ಹಿಟ್ಲರ್ ಜರ್ಮನಿಯಲ್ಲಿ, ಮುಸಲೋನಿ ಇಟಲಿಯಲ್ಲಿ ಆಗದವರನ್ನೆಲ್ಲ ಕೊಲ್ಲಿಸಿದ್ದೇ. ಏಕೆಂದರೆ ಅಲ್ಲಿ ಸರ್ವಾಧಿಕಾರವಿತ್ತು.‌ ಅಂತಹ ರಾಷ್ಟ್ರಗಳಲ್ಲಿ ಜನ ಸ್ನೇಹಿ ಪೊಲೀಸ್‌ನ ಪರಿಕಲ್ಪನೆ ಬರುವುದಿಲ್ಲ.‌ ಅಮೆರಿಕದಲ್ಲಿ ಒಬ್ಬ ಪೊಲೀಸ್ ನಾಗರಿಕರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಉಳಿದ ಪೊಲೀಸರು ಕ್ಷಮೆ ಕೇಳಿದ ಘಟನೆ ನಾಲ್ಕು ವರ್ಷಗಳ ಹಿಂದೆ ನಡೆಯಿತು. ಅಲ್ಲಿ ಪೊಲೀಸರ ಬಳಿ ಆಯುಧ ಇಲ್ಲದೆ ಅಲ್ಲ. ಆದರೆ ಅದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಮೊದಲ ಆಯ್ಕೆ ಅಹಿಂಸೆಯೇ ಆಗಿರುತ್ತದೆ.‌ ಕಟ್ಟ ಕಡೆಯ ಅನಿವಾರ್ಯವಾದ ಆಯ್ಕೆಯಾಗಿ ಮಾತ್ರ ಆಯುಧ ಪ್ರಯೋಗಕ್ಕೆ ಅಲ್ಲಿ ಮನಸ್ಸಿಲ್ಲದ ಮನಸ್ಸಿನ ಒಪ್ಪಿಗೆ ಇರುತ್ತದೆ.‌ ಒಂದು ಪ್ರಭುತ್ವವಾದಾಗ ಅನಿವಾರ್ಯ ಆಯ್ಕೆಯಾಗಿ ಹಿಂಸೆಯ ಪ್ರಯೋಗ ಆಗುವುದರ ಬಗ್ಗೆ ಗಾಂಧೀಜಿಯೂ ಮೌನಿಯಾಗಿದ್ದರು.‌ ” ಬರೀ ಅಹಿಂಸೆಯೇ ಆದರೆ ನನ್ನ‌ ಸೈನಿಕರಿಗೆ ನಾನು ಯಾವ ಕೆಲಸ ಕೊಡಲಿ?” ಎಂದು ಜನರಲ್ ಕಾರ್ಯಪ್ಪ ಕೇಳಿದಾಗ ಗಾಂಧೀಜಿ,” ಅದು ನನಗೂ ಹೊಳೆಯುತ್ತಿಲ್ಲ.‌ ನಾನು ದೇವರ ದೊಡ್ಡ ಮಗು.‌ ನೀವು ಚಿಕ್ಕ ಮಗು.‌ ಉತ್ತರ ಮೊದಲು ನಿಮಗೆ ಹೊಳೆದರೆ ನೀವು ನನಗೆ ಹೇಳಿ.‌ ನನಗೆ ಹೊಳೆದರೆ ನಾನು ನಿಮಗೆ ಹೇಳುತ್ತೇನೆ. ಆದರೆ ಭಾರತಕ್ಕೊಂದು ಬಲಿಷ್ಠ ಸೇನೆಯಂತೂ ಬೇಕು” ಎಂದು ಗಾಂಧೀಜಿ ಉತ್ತರಿಸಿದ್ದರು.

ಪ್ರಜಾಪ್ರಭುತ್ವದ ಮೊದಲ ಆಯ್ಕೆ ಅಹಿಂಸೆಯೇ ಎಂಬ ನಿಟ್ಟಿನಲ್ಲಿ ಗಾಂಧೀಜಿ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಪ್ರಸ್ತುತರಾಗಿದ್ದಾರೆ.‌ ಹಾಗಿದ್ದರೆ ಕೊನೆಯ ಅನಿವಾರ್ಯ ಆಯ್ಕೆಯಾದ ಆಯುಧ ಪ್ರಯೋಗದ ಅವಶ್ಯಕತೆ ಪ್ರಜಾಪ್ರಭುತ್ವದ ಒಳಗೆ ಯಾಕೆ ಬರುತ್ತದೆ? ಮಾತಿನ ಶಕ್ತಿ ದುರ್ಬಲವಾದಾಗ ಬರುತ್ತದೆ.‌ ಮಾತಿನ ಶಕ್ತಿ ದುರ್ಬಲವಾಗುವುದು ನೈತಿಕತೆಯ ಕುಸಿತ ಉಂಟಾದಾಗ. ” ನೀನು ಒಳ್ಳೆಯವನಲ್ಲ” ಎಂದು ಒಬ್ಬ ಹೇಳಿದಾಗ ಇವನು ಯಾಕೆ ನನಗೆ ಹೀಗೆ ಹೇಳಿದ ಎಂದು ಯೋಚಿಸಿ ತಿದ್ದಿಕೊಳ್ಳಬೇಕಾದ್ದು ಸಾರ್ವಜನಿಕ ನೈತಿಕತೆ.‌ ” ನೀನು ಒಳ್ಳೆಯವನಲ್ಲ” ಎಂದಾಗ ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಆಮೇಲೆ ಅವನು ಹೊಡೆಯಲು ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.‌ ಅದೇ ರೀತಿ ಒಬ್ಬ ಮನುಷ್ಯನನ್ನು ” ನೀನು ಒಳ್ಳೆಯವನಲ್ಲ” ಎಂದು ಹೇಳುವವನಿಗೂ ಖಚಿತ ಆಧಾರ ಇಲ್ಲದೆ, ತನ್ನ ಮನಸ್ಸಿಗೆ ತೀವ್ರವಾದ ಹಿಂಸೆಯಾಗದೆ ಯಾರಿಗೂ ಆ ರೀತಿ ತಾನು ಹೇಳಬಾರದು ಎಂಬ ಜವಾಬ್ದಾರಿ ಬೇಕು. ಆ ಜವಾಬ್ದಾರಿಯೇ ಪ್ರಜಾಪ್ರಭುತ್ವ.‌ ಪ್ರಜಾಪ್ರಭುತ್ವ ಎಂದರೆ ಜವಾಬ್ದಾರಿ; ಕೇವಲ ಹಕ್ಕಲ್ಲ. ಈ ಕಾರಣಕ್ಕಾಗಿಯೇ ನನ್ನ ಹಿಂದೂ ಸಹೋದರರಲ್ಲಿ, ಮುಸ್ಲಿಂ ಸಹೋದರರಲ್ಲಿ ಹುಡುಗರು ಏನಾದರೂ ದ್ವೇಷ ಪೂರಿತ ಮಾತಾಡಿದಾಗ ನನಗೆ ಆಗುವ ಆತಂಕಕ್ಕಿಂತ ಜ್ಞಾನಿಗಳು ಎಂದು ನಾವು ಭಾವಿಸಿದವರು ದ್ವೇಷ ಪೂರಿತವಾಗಿ ಮಾತನಾಡಿದಾಗ ಜಾಸ್ತಿ ಆತಂಕವಾಗುತ್ತದೆ.‌ ಹುಡುಗರ ಸಂಖ್ಯೆ ಅದೆಷ್ಟೇ ದೊಡ್ಡದಿದ್ದರೂ ತಿಳಿಸಿ ಹೇಳಬಹುದು.‌ ಆದರೆ ತಿಳಿವಳಿಕೆ ಇರುವ ಜ್ಞಾನಿಗಳಿಗೆ ತಿಳಿಸಿ ಹೇಳಬಹುದಾದ್ದೇನೂ ಇರುವುದಿಲ್ಲ. ಇವರಿಗೇ ಮಾತಿನ ಶಕ್ತಿಯ ಅರಿವಿಲ್ಲದಿದ್ದರೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಹೇಗೆ? ಸಮಾಜದ ಮೊದಲ ಆಯ್ಕೆಯೇ ಆಯುಧ ಪ್ರಯೋಗ ಎಂದು ಆದ ದಿವಸ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಆದ್ದರಿಂದ ಅಹಿಂಸಾ ತತ್ವದ ರಕ್ಷಣೆಯ ಮೂಲಕವೇ ಪ್ರಜಾಪ್ರಭುತ್ವದ ರಕ್ಷಣೆಯೂ ಸಾಧ್ಯ.

ಪ್ರಜಾಸತ್ತಾತ್ಮಕ ಮನೋಭಾವದಲ್ಲಿ ಸಮ್ಮತಿ ಮತ್ತು ನಿರಾಕರಣೆ ಎರಡೂ ಇರುವುದು ವಿಚಾರಕ್ಕೆ.‌ ವ್ಯಕ್ತಿಗೆ ನಿರಾಕರಣೆ ಇರುವುದಿಲ್ಲ. ಗಾಂಧೀಜಿಯ ಇಡೀ ಬದುಕು ಇದನ್ನೆ ಮಾಡುತ್ತಾ ಹೋಯಿತು.‌ ” ನಾನೊಬ್ಬ ಸನಾತನಿ ಹಿಂದೂ” ಎಂದೇ ಗಾಂಧೀಜಿ ತನ್ನನ್ನು ತಾನು ಗುರುತಿಸಿಕೊಂಡರು.‌ ಆದರೆ ಅಸ್ಪೃಶ್ಯರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ಹೋಗಲಿಲ್ಲ.‌ ಬ್ರಾಹ್ಮಣರು ನಿಯೋಗ ಕೊಂಡೊಯ್ದು ಮೀಸಲಾತಿಯಿಂದ ನಮ್ಮ ಹುದ್ದೆಗಳು ಹೋಗುತ್ತಿವೆ ಎಂದಾಗ ಅವರ ಬೇಡಿಕೆಯನ್ನು ಗಾಂಧೀಜಿ ಪುರಸ್ಕರಿಸಲಿಲ್ಲ. ಆದರೆ ಬ್ರಾಹ್ಮಣರ ಮೇಲೆ ಸೇಡಿನ ಪ್ರತಿಪಾದನೆ ಕೇಳಿದಾಗ,” ಸೇಡಿನಿಂದ ನೀವು ಏನನ್ನೂ ಸಾಧಿಸಲಾರಿರಿ.‌ ಬ್ರಾಹ್ಮಣರು ಉನ್ನತ ಮೌಲ್ಯಗಳನ್ನು ನಮಗೆ ಬೋಧಿಸಿದ್ದಾರೆ. ದೇಶಕ್ಕಾಗಿ ತ್ಯಾಗವನ್ನೂ ಮಾಡಿದ್ದಾರೆ” ಎಂದರು. ಕೆಲವು ಮುಸ್ಲಿಮರು,” ನೀವು ರಾಮ್ ರಹೀಂ ಎನ್ನಬಾರದು.‌ರಾಮ ಸಣ್ಣ ರಾಜ” ಎಂದಾಗ,” ರಾಮ ಎಷ್ಟೇ ಸಣ್ಣ ರಾಜನಾದರೂ ಅವನು ಬಾಳಿದ ಮೌಲ್ಯಗಳು ದೊಡ್ಡದು.‌ ರಾಮ್ ರಹೀಂ ಎಂದು ಹೇಳಿಯೇ ಹೇಳುತ್ತೇನೆ” ಎಂದರು. ವೈಸರಾಯ್ ವವೆಲ್,” ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾದ ನಿರ್ಣಯವನ್ನು ಒಂದು ವಿಟೋದಿಂದ ರದ್ದು ಪಡಿಸುವ ಅಧಿಕಾರವನ್ನು ಮುಸ್ಲಿಂ ಲೀಗಿಗೆ ಕೊಡುವುದಾದರೆ ದೇಶ ವಿಭಜನೆ ಆಗದ ಹಾಗೆ ಜಿನ್ನಾ ಬಳಿ ಮಾತಾಡುತ್ತೇನೆ” ಎಂದಾಗ ಅದೇ ದಿವಸ ಬ್ರಿಟಿಷ್ ಪ್ರಧಾನ ಮಂತ್ರಿ ಕ್ಲೈಮೆಂಟ್ ಅಟ್ಲಿಯವರಿಗೆ,” ನಮ್ಮ ವೈಸರಾಯರ ಬುದ್ಧಿ ಸರಿಯಾಗಿಲ್ಲ.‌ ಅವರಿಗಿಂತ ಯೋಗ್ಯರಾದ ಸಲಹೆಗಾರರೊಬ್ಬರ ಅಗತ್ಯ ಅವರಿಗಿದೆ” ಎಂದು ಗಾಂಧೀಜಿ ಟೆಲಿಗ್ರಾಂ ಕಳಿಸಿದರು. ಆಮೇಲೆ ಜವಾಹರ ಲಾಲ್ ನೆಹರೂ ಇಂಗ್ಲೆಂಡಿಗೆ ಹೋಗಿ ವವೆಲ್‌ರನ್ನು ವರ್ಗಾವಣೆ ಮಾಡಿಸಿ ಮೌಂಟ್ ಬ್ಯಾಟನ್ ಅವರನ್ನು ಹಾಕಿಸಿಕೊಂಡು ಬಂದದ್ದು.‌ ಆದರೆ ಮುಸ್ಲಿಮರ ಹತ್ಯೆ ನಡೆಯತೊಡಗಿದೆ ಎಂದಾಗ ‘ ಗೋ ಬ್ಯಾಕ್ ಗಾಂಧಿ’ ಎಂಬ ಬೋರ್ಡನ್ನು ಕಿತ್ತೆಸೆದು ಮುಸ್ಲಿಮರ ರಕ್ಷಣೆಗೆ ದೃಢವಾಗಿ ನಿಂತುಕೊಂಡರು. ” ಸಾವರ್ಕರ್ ಪ್ರತಿಭಾವಂತ. ಅವರ ಅರ್ಹತೆಗೆ ತಕ್ಕ ಸ್ಥಾನ ಕೊಡಬೇಕು” ಎಂದು ಯಂಗ್ ಇಂಡಿಯಾದಲ್ಲಿ ಬರೆದರು.‌ ಆದರೆ ಸಾವರ್ಕರ್ ಅವರ ಹಿಂದುತ್ವದ ಐಡಿಯಾಲಜಿಯನ್ನು ಒಪ್ಪಲಿಲ್ಲ. ರಕ್ತ ಕ್ರಾಂತಿಯನ್ನು ಎಂದೂ ಒಪ್ಪಲಿಲ್ಲ. ಆದರೆ ” ಕಮ್ಯುನಿಸ್ಟರು ಭಾರತದ ಕಮ್ಯುನಿಸ್ಟರವರು.‌ ನಮ್ಮವರೇ” ಎಂದರು. ಆರ್.‌ಎಸ್.‌ಎಸ್.‌ಕಛೇರಿಗೂ ಹೋಗಿ ಆಶೀರ್ವಾದ ಮಾಡಿ,” ನೀವು ದೇಶ ಭಕ್ತರೇ. ಆದರೆ ಎಲ್ಲರನ್ನೂ ಒಳಗೊಳ್ಳಿ” ಎಂದು ಬಂದರು. ಇದೆಲ್ಲ ಏನನ್ನು ಸೂಚಿಸುತ್ತದೆ? ಗಾಂಧೀಜಿ ಯಾರನ್ನೂ ನಿರಾಕರಣೆ ಮಾಡಲಿಲ್ಲ.‌ ಯಾರ ಮೇಲೂ ದ್ವೇಷದ ಮಾತಾಡಲಿಲ್ಲ. ಆದರೆ ತನ್ನ ವಿಚಾರದಲ್ಲಿ ಸ್ಥಿರವಾಗಿದ್ದರು.‌ ಸರಿಯಾದ ವಿಚಾರವನ್ನು ಸ್ವೀಕರಿಸಿದರು. ಸರಿಯಲ್ಲ ಎನಿಸಿದ ವಿಚಾರವನ್ನು ನಿರಾಕರಿಸಿದರು.‌ ಇದೇ ಪ್ರಜಾಪ್ರಭುತ್ವದ ಮೂಲ ತತ್ವ.‌ ವೈಚಾರಿಕ ಸ್ಥಿರತೆಯ ಬಗ್ಗೆ ಗಾಂಧೀಜಿ ಎಷ್ಟು ಚಂದ ಮಾಡಿ ಹೇಳುತ್ತಾರೆಂದರೆ,” ದುಷ್ಟರ ಮೇಲೂ ಹಿಂಸೆ ಮಾಡಬೇಡಿ. ಆದರೆ ದುಷ್ಟತನಕ್ಕೆ ಯಾವ ಕಾರಣಕ್ಕೂ ಶರಣಾಗಬೇಡಿ” ಎನ್ನುತ್ತಾರೆ.

ಕಾಲಹರಣದ ಚರ್ಚೆಯನ್ನು ನಿರಾಕರಿಸಿದ ಗಾಂಧೀಜಿ ಮಾತಿನ ಶಕ್ತಿಯನ್ನು ನಿರಾಕರಿಸಲಿಲ್ಲ. ದೇಶ ವಿಭಜನೆಯನ್ನು ತಡೆಯಲು ಜಿನ್ನಾ ಜೊತೆ ಮಾತನಾಡಲು ಯಾವ ನಾಯಕರೂ ತಯಾರಿಲ್ಲದಾಗ ಗಾಂಧೀಜಿ ಒಂಟಿಯಾಗಿ ಜಿನ್ನಾ ಬಳಿಗೆ ಹೋದರು. ಆ ಘಟನೆಯನ್ನು ದೃಶ್ಯೀಕರಣ ಮಾಡಿಕೊಂಡು ಯೋಚಿಸಿದರೆ ಬಹಳ ಸ್ವಾರಸ್ಯವಿದೆ.‌ ಆ ದಿವಸ ಗಾಂಧೀಜಿಗೆ ಹೊಟ್ಟೆ ನೋವು. ಹೊಟ್ಟೆಗೆ ಮಣ್ಣಿನ ಪಟ್ಟಿ ಹಾಕಿಕೊಂಡು ಜಿನ್ನಾ ನಿವಾಸಕ್ಕೆ ಹೋಗುತ್ತಾರೆ. ಜಿನ್ನಾ ಅವರು ಪರ್ಶಿಯಾದಿಂದ ತರಿಸಿ ಹಾಸಿದ ಹಾಸಿನ‌ ಮೇಲೆ ಗಾಂಧೀಜಿಯ ಮಣ್ಣಿನ ಪಟ್ಟಿಯಿಂದ ಮಣ್ಣು ಸ್ವಲ್ಪ ಸ್ವಲ್ಪ ಬೀಳುತ್ತಿರುತ್ತದೆ.‌ ಜಿನ್ನಾ ಸಿಟ್ಟಿನಲ್ಲಿ‌ ಮುಷ್ಠಿ ಬಿಗಿಯುತ್ತಾರೆ, ಬಿಡುತ್ತಾರೆ.‌ ಗಾಂಧೀಜಿ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ಮಾತಾಡುತ್ತಾರೆ. ” ಬ್ರಿಟಿಷರು ಹೋಗಲಿ. ಆಮೇಲೆ ಕುಳಿತು ಮಾತನಾಡುವ.‌ ಎಷ್ಟು ಮಾತ್ರಕ್ಕೂ ಒಮ್ಮತ ಸಾಧ್ಯವಾಗದಿದ್ದರೆ ಅಣ್ಣ- ತಮ್ಮಂದಿರು ಆಸ್ಥಿ ಪಾಲು ಮಾಡಿಕೊಂಡ ಹಾಗೆ ನಾವೇ ದೇಶ ವಿಭಜನೆ ಮಾಡಿಕೊಳ್ಳುವ” ಎನ್ನುತ್ತಾರೆ.‌ ಜಿನ್ನಾ ಒಪ್ಪಲಿಲ್ಲ. ಆ ವಿಷಯ ಬೇರೆ. ಆದರೆ ಗಾಂಧೀಜಿ ಮಾತಿನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ.‌ ಮಾತಿನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದಿರುವುದು ಪ್ರಜಾಪ್ರಭುತ್ವದ ಮೂಲ ಅವಶ್ಯಕತೆಗಳಲ್ಲೊಂದು.

ಪ್ರಜಾಪ್ರಭುತ್ವದ ಬಹುಮುಖ್ಯವಾದ ಮತ್ತೊಂದು ಲಕ್ಷಣವೆಂದರೆ ವಿಮರ್ಶಾತ್ಮಕ ಮನೋಧರ್ಮ. ವಿಮರ್ಶೆಗೂ ಬೈಗುಳ ಮತ್ತು ತಿರಸ್ಕಾರಗಳಿಗೂ ವ್ಯತ್ಯಾಸ ಹೊರಟು ಹೋಗಿರುವ ಕಾಲಮಾನದಲ್ಲಿ ನಾವಿದ್ದೇವೆ.‌ ವಿಮರ್ಶೆಯು ಯಾವಾಗಲೂ ವಿಚಾರ ಕೇಂದ್ರಿತವಾದದ್ದು. ವ್ಯಕ್ತಿ ಕೇಂದ್ರಿತ ಅಲ್ಲ. ವಿಮರ್ಶೆಯಲ್ಲಿ ವ್ಯಕ್ತಿಯ ಮೇಲೆ ಅಗೌರವ ಇರುವುದಿಲ್ಲ. ವ್ಯಕ್ತಿ ನಿಂದನೆ ಇರುವುದಿಲ್ಲ. ಗಾಂಧೀಜಿ ಜೀವನದುದ್ದಕ್ಕೂ ಇದನ್ನು ಪ್ರತಿನಿಧಿಸುತ್ತಾ ಹೋದರು. ಗಾಂಧೀಜಿ ತಮ್ಮ ಮೇಲಿನ ಟೀಕೆಗಳನ್ನು ಸ್ವಾಗತಿಸುತ್ತಾ ಇದ್ದರು. ಅವರನ್ನು ಪ್ರಶ್ನಿಸಿದವರಿಗೆ ಉತ್ತರ ಕೊಡುತ್ತಿದ್ದರು. ಆ ಉತ್ತರವನ್ನು ಅವರು ಸ್ವೀಕರಿಸುತ್ತಾರೋ ಇಲ್ಲವೋ ಬೇರೆ ವಿಚಾರ.‌ ಆದರೆ ಉತ್ತರವನ್ನಂತೂ ಗಾಂಧೀಜಿ ಕೊಡುತ್ತಿದ್ದರು. ” ಗ್ರಾಮಗಳಲ್ಲಿಯೇ ಜಾತೀಯತೆ ಇರುವುದು, ಗ್ರಾಮ ಸ್ವರಾಜ್ಯ ಜಾತೀಯತೆಯನ್ನು ಬಲಪಡಿಸುತ್ತದೆ” ಎಂದು ಅಂಬೇಡ್ಕರರು ಮಾಡಿದ ಟೀಕೆಗಳಿಗೆ ಪದೇ ಪದೇ ಗಾಂಧಿ,” ನಾನು ಹೇಳುತ್ತಿರುವ ಗ್ರಾಮ ಹಳೆಯ ಗ್ರಾಮಗಳಲ್ಲ” ಎಂದು ಅವರ ಗ್ರಾಮದ ಪರಿಕಲ್ಪನೆಯನ್ನು ಮತ್ತೆ ಮತ್ತೆ ವಿವರಿಸಿದರು. ಗಾಂಧೀಜಿಗೆ ಯಾವ ಅಧಿಕಾರವೂ ಇರಲಿಲ್ಲ. ಆದರೆ ಅಧಿಕಾರದಲ್ಲಿದ್ದ ಬ್ರಿಟಿಷರು ಕೂಡ ಗಾಂಧೀಜಿಯನ್ನು ಪ್ರಶ್ನೆ ಮಾಡುತ್ತಿದ್ದರು. ಅಧಿಕಾರದಲ್ಲಿ ಇಲ್ಲದವನನ್ನು ಪ್ರಶ್ನಿಸಲು ಅಧಿಕಾರ ಇರುವವನಿಗೆ ನಾಚಿಕೆ ಆಗಬೇಕು. ನಾಚಿಕೆ ಬಿಟ್ಟು ಅಧಿಕಾರದಲ್ಲಿ ಇದ್ದವರು ಗಾಂಧೀಜಿಯನ್ನು ಪ್ರಶ್ನೆ ಮಾಡಿದರು. ಆದರೆ ಇಡೀ ಬ್ರಿಟಿಷ್ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾದ ವಿನ್‌ಸ್ಟನ್ ಚರ್ಚಿಲ್ ಕೇಳಿದ ಪ್ರಶ್ನೆಗಳಿಗೂ ಗಾಂಧೀಜಿ ಉತ್ತರಿಸಿದರು.‌ ಚೌರಿ ಚೌರ ಹತ್ಯೆಗಳನ್ನಿರಿಸಿಕೊಂಡು ಗಾಂದೀಜಿಯ ಅಹಿಂಸಾ ತತ್ವ ಡೋಂಗಿ ಎಂದು ಬೇರೆ ಬೇರೆ ದೇಶದವರು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದರು. ಭಗತ್ ಸಿಂಗ್ ಮತ್ತು ಸಹಚರರನ್ನು ಬಿಡಿಸಲು ಗಾಂಧೀಜಿ ಬರೆದ ಪತ್ರಗಳು, ನಡೆಸಿದ ಪ್ರಯತ್ನಗಳನ್ನು ಕಂಡು ” ಇವರು ಅಹಿಂಸಾವಾದಿ ಎನ್ನುವುದೇ ಅನುಮಾನ ಬರ್ತಾ ಇದೆ” ಎಂದು ಎದ್ದ ಪ್ರಶ್ನೆಗಳಿಗೂ ಉತ್ತರಿಸಿದರು.‌ ಈ ಉತ್ತರಿಸುವಿಕೆ ಮತ್ತು ಉತ್ತರದಾಯಿತ್ವ ಎನ್ನುವುದು ಪ್ರಜಾಪ್ರಭುತ್ವದ ಮೂಲಭೂತ ಅಗತ್ಯವಾಗಿರುತ್ತದೆ.‌ ನಾನು ಈ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಶ್ನೆಗಳಿಗೆಲ್ಲ ಉತ್ತರಿಸುವಾಗ ನನ್ನ ಹಲವು ಸ್ನೇಹಿತರು ” ಇವರಿಗೆಲ್ಲ ಯಾಕೆ ಉತ್ತರ ಕೊಡುತ್ತೀರಿ?” ಎಂದು ಕೇಳುವುದಿದೆ.
ನಾನೊಬ್ಬ ಸಾಮಾನ್ಯ ಅಧ್ಯಾಪಕ. ಹೆಚ್ಚೆಂದರೆ ಒಂದು ಪಾಠವನ್ನು ಚಂದದಲ್ಲಿ ಮಾಡಲು ನನಗೆ ಶಕ್ತಿ ಇದೆ. ಹಣ ಬಲವಿಲ್ಲ. ಜನ ಬಲವಿಲ್ಲ. ಅಧಿಕಾರ ಬಲವಿಲ್ಲ. ಹೀಗಿದ್ದೂ ದೇಶವನ್ನು ಆಳಿದವರ ಕಡೆಯಲ್ಲಿರುವವರು, ಆಳುತ್ತಿರುವವರ ಕಡೆಯಲ್ಲಿರುವವರು ರಾಷ್ಟ್ರೀಯ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಿಯೆ? ನೀನು ಸಮಾಜಕ್ಕೆ ಏನು ಕೊಟ್ಟಿದ್ದಿಯೆ? ಎಂದು ನನ್ನ ಬಳಿ ಕೇಳಲು ಅವರಿಗೆ ಮುಜುಗರವಾಗಬೇಕು. ಅವರು ಪ್ರಶ್ನಿಸಬೇಕಾದ್ದು ನನ್ನನ್ನಲ್ಲ ಎಂದು ಅವರಿಗೆ ಗೊತ್ತಿರಬೇಕು.‌ ಅಷ್ಟಾಗಿಯೂ ನನ್ನನ್ನು ಪ್ರಶ್ನಿಸುತ್ತಾರಾದರೆ ಉತ್ತರ ಕೊಡಲು ನನಗೆ ಯಾವ ಮುಜುಗರವೂ ಇಲ್ಲ. ತೀರ್ಮಾನವನ್ನೆ ಇರಿಸಿಕೊಂಡು
ಪ್ರಶ್ನಿಸುವವರು ನನ್ನ ಉತ್ತರವನ್ನು ಒಪ್ಪುವುದಿಲ್ಲ ಎಂದು ನನಗೆ ಗೊತ್ತಿದೆ. ಆದರೂ ನನ್ನ ಬಳಿ ಉತ್ತರವಿದೆ. ಹೇಳುತ್ತೇನೆ. ಇದನ್ನು ನಾವು ಗಾಂಧೀಜಿಯಿಂದ ಕಲಿಯಬೇಕು. ತೀರಾ ಉತ್ತರವನ್ನು ಕೇಳಿಸಿಕೊಳ್ಳಲಿಕ್ಕೇ ತಯಾರಿಲ್ಲದವನಿಗೆ ಮಾತ್ರ ಉತ್ತರವನ್ನು ನಿರಾಕರಿಸಬೇಕು. ಪ್ರಶ್ನಿಸುವುದು ಮತ್ತು ಉತ್ತರಿಸುವುದನ್ನೆ ನಿಲ್ಲಿಸಿ ಎಲ್ಲರೂ ಅವರವರ ನಿಲುವಿಗೆ ಜೈ ಎನ್ನುವವರ ಗುಂಪು ಕಟ್ಟಿಕೊಂಡು ದ್ವೀಪಗಳಾದರೆ ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಯುವುದು ಹೇಗೆ? ಆದ್ದರಿಂದಲೇ ನಮ್ಮ ಗಾಂಧಿ ವಿಚಾರ ವೇದಿಕೆ ಸಂವಾದಕ್ಕೇ ಪ್ರಥಮ ಆದ್ಯತೆಯನ್ನು ಕೊಟ್ಟಿದೆ. ಸಂವಾದ- ವಾಗ್ವಾದಗಳು ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಕೃತಿಯಾಗಿದೆ. ಭಾರತ ದೇಶದ ಸಾವಿರಾರು ವರ್ಷಗಳ ಪರಂಪರೆಯೂ ಆಗಿದೆ. ಪ್ರಜಾಪ್ರಭುತ್ವವು ಅದರೊಳಗೆ ಅನೇಕ ಪರಸ್ಪರ ವಿರೋಧಗಳನ್ನು ಜೊತೆಯಾಗಿಯೇ ಇರಿಸಿಕೊಂಡು ಬೆಳೆಯುವ ವ್ಯವಸ್ಥೆಯಾಗಿದೆ. ಇವತ್ತು ನೋಡಿ, ತುಳುನಾಡು ಎಂದರೆ ಗಾಂಧಿ ವಿರೋಧಿಗಳ ತಾಣ ಎಂಬ ಅಭಿಪ್ರಾಯ ತುಳುನಾಡಿನ ಹೊರಗೆ ಇದೆ. ಆದರೆ ಮಹಾತ್ಮಾ ಗಾಂಧಿಯವರ ಮೂರ್ತಿಗೆ ಪೂಜೆ ನಡೆಯುವ ಗುಡಿಯೂ ಇದೇ ಮಂಗಳೂರಿನಲ್ಲಿ ಇಲ್ಲಿಂದ ಎರಡು ಕಿ.‌ಮೀ. ಹೋದರೆ ಸಿಗುವ ಕಂಕನಾಡಿಯ ಬ್ರಹ್ಮ ಬೈದರ್ಕಳ ಗುಡಿಯಲ್ಲಿದೆ. 15 ಡಿಸೆಂಬರ್ 1948 ರಂದು ನರ್ಸಪ್ಪ ಸಾಲಿಯಾನ್ ಅವರು ಸ್ಥಾಪಿಸಿದ ಗಾಂಧಿ ಮೂರ್ತಿಗೆ ಇಂದೂ ತ್ರಿಕಾಲ ಪೂಜೆ ನಡೆಯುತ್ತಲೇ ಇದೆ. ಪ್ರಜಾಪ್ರಭುತ್ವದ ಯಶಸ್ಸು ಪರಸ್ಪರ ವಿರೋಧಗಳೊಂದಿಗೇ ವ್ಯವಸ್ಥೆಯನ್ನು ಉತ್ತಮೀಕರಿಸುವುದರಲ್ಲಿದೆ.

ವ್ಯವಸ್ಥೆಯ ಉತ್ತಮೀಕರಣಕ್ಕೆ ಗಾಂಧೀಜಿಯವರ ಮೌಲ್ಯಗಳು, ನಂಬಿಕೆಗಳು, ದಿಟ್ಟತನ, ಸಂಯಮ ಇವೆಲ್ಲವೂ ಆಧಾರ ಸ್ತಂಭಗಳಾಗಿವೆ. ತನ್ನ ನಂಬಿಕೆಗೆ ನಿಷ್ಠನಾಗಿ ಬಾಳಿದ ಮನುಷ್ಯ ಅವರು. ತನ್ನ ನಂಬಿಕೆಗೆ ನಿಷ್ಠನಾಗಿಯೇ ಉಳಿಯುವವನನ್ನು ಋಗ್ವೇದ ‘ ಋಷಿ’ ಎಂದು ಪರಿಗಣಿಸುತ್ತದೆ. ಆ ಸತ್ವ ಗಾಂಧೀಜಿಯಲ್ಲಿರುವುದರಿಂದ ಗಾಂಧೀಜಿಯವರ ಸತ್ಯ, ಅಹಿಂಸೆಗಳ ಟೀಕಾಕಾರರೂ ತಮ್ಮ ಅಗತ್ಯ ಬಂದಾಗ ಗಾಂಧಿ ಮಾಡಿದ ಉಪವಾಸ ಸತ್ಯಾಗ್ರಹ, ಧರಣಿ, ಜಾಥಾಗಳಂತಾದ್ದನ್ನೆ ಮಾಡುತ್ತಾರೆ ಹೊರತು ಹಿಂಸೆಗಿಳಿಯುವುದಿಲ್ಲ. ಹೀಗೆ ವಿರೋಧಿಯನ್ನೂ ಗಾಂಧಿ ಮಾರ್ಗದಲ್ಲಿ ಸಾಗುವ ಹಾಗೆ ಮಾಡುವ ಮೂಲಕವೇ ಪ್ರಜಾಪ್ರಭುತ್ವದ ರಕ್ಷಣೆಯೂ ಆಗುತ್ತದೆ. ಪ್ರಕಾಪ್ರಭುತ್ವದಲ್ಲಿ ಜಾತಿ ಬಲ, ಹಣಬಲ ಎಲ್ಲ ಎಷ್ಟೇ ಇದ್ದರೂ ಯೋಗ್ಯ ನಾಯಕನೊಬ್ಬ ಇದ್ದಾಗ ಇದೆಲ್ಲವನ್ನೂ ಮೀರಿ ಜನ ಆತನನ್ನು ಆರಿಸಿಕೊಳ್ಳುತ್ತಾರೆ. 0.3% ಇರುವ ಸಮುದಾಯದಿಂದ ಬಂದ ದೇವರಾಜ ಅರಸ್ ಮುಖ್ಯಮಂತ್ರಿಯಾಗಲು ಸಾಧ್ಯ ಆಗಿದೆ.‌ ಸ್ವತಃ ಗಾಂಧೀಜಿಯವರ ಮೋಢ ಬನಿಯಾ ಜಾತಿಯವರು ಒಬ್ಬ ಎಂ. ಎಲ್. ಎ ಯನ್ನು ಗೆಲ್ಲಿಸಬಲ್ಲಷ್ಟು ಸಂಖ್ಯೆಯಲ್ಲಿ ಇಲ್ಲ. ಆದರೆ 154 ದೇಶಗಳಲ್ಲಿ ಗಾಂಧೀಜಿಯ ಸ್ಮಾರಕಗಳು, ಅಧ್ಯಯನ ಕೇಂದ್ರಗಳು ಇವೆ. ಕ್ರೈಸ್ತ ಬಹುಸಂಖ್ಯಾತ ರಾಷ್ಟ್ರಗಳೇ ಜಾಸ್ತಿ ಇರುವ ವಿಶ್ವ ಸಂಸ್ಥೆಯಲ್ಲೂ ಗಾಂಧೀಜಿಯ ಪ್ರತಿಮೆ ಸ್ಥಾಪನೆಯಾಯಿತು.‌ ಅಂದರೆ ನಾಯಕತ್ವ ಯೋಗ್ಯವಾಗಿದ್ದರೆ ಜಾತಿ ಧರ್ಮ ಹಣ ಯಾವುದೂ ಬೇಕಾಗುವುದಿಲ್ಲ. ಇದು ಪ್ರಜಾಪ್ರಭುತ್ವದ ಶಕ್ತಿ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಾಧ್ಯವಾಗುವುದು ನೈತಿಕ ಶಕ್ತಿಗೆ. ಆ ಶಕ್ತಿಯ ಮೂಲ ಗಾಂಧೀಜಿಯವರೇ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಕೇಳಿದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ. ನಮಸ್ಕಾರ.

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಗಾಂಧಿ ಮಾರ್ಗದ ಮಹತ್ವ

Leave a Reply

Your email address will not be published. Required fields are marked *